ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ಇತ್ತೀಚಿನ ಮಾಹಿತಿ


ಅಕ್ರಮ ವರ್ಗಾವಣೆಯನ್ನು ತಡೆಗಟ್ಟಲು DAC ಆಧಾರಿತ ಸಿಲಿಂಡರ್ ವಿತರಣೆಗಳು ಶೇ. 94.5 ಕ್ಕಿಂತ ಹೆಚ್ಚಿಗೆ ಏರಿಕೆಯಾಗಿವೆ

ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು (PSU OMCs) 5 ಕೆಜಿ ಎಫ್‌ ಟಿ ಎಲ್ (FTL) ಸಿಲಿಂಡರ್‌ ಗಳಿಗಾಗಿ 8770 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿದ್ದು, ಏಪ್ರಿಲ್ 3, 2026 ರಿಂದ ಇದುವರೆಗೆ 1,38,000 ಕ್ಕೂ ಹೆಚ್ಚು ಸಿಲಿಂಡರ್‌ ಗಳು ಮಾರಾಟವಾಗಿವೆ

ಏಪ್ರಿಲ್ 9, 2026 ರಿಂದ ಇದುವರೆಗೆ ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ ಮತ್ತು ಮಥುರಾ ಸಂಸ್ಕರಣಾಗಾರಗಳಿಂದ ರಾಸಾಯನಿಕ ಮತ್ತು ಫಾರ್ಮಾ ಉದ್ಯಮಕ್ಕೆ 7000 ಮೆಟ್ರಿಕ್ ಟನ್‌ ಗಿಂತಲೂ ಹೆಚ್ಚು ಪ್ರೊಪಿಲೀನ್ (Propylene) ಮಾರಾಟ ಮಾಡಲಾಗಿದೆ

ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ

ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ ಮತ್ತು ಈಗಾಗಲೇ ಅಲ್ಲಿರುವವರು ಭಾರತೀಯ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಭೂಗಡಿ ಮಾರ್ಗಗಳ ಮೂಲಕ ಹೊರಬರಲು ಸೂಚಿಸಲಾಗಿದೆ

ಟೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 2,443 ಭಾರತೀಯ ಪ್ರಜೆಗಳು ಭೂಗಡಿ ಮಾರ್ಗಗಳ ಮೂಲಕ ಇರಾನ್‌ ನಿಂದ ಹೊರಬರಲು ನೆರವು ನೀಡಿದೆ

ಪ್ರಕಟಣಾ ದಿನಾಂಕ: 25 APR 2026 6:03PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಮನ್ವಯಿತ ಪ್ರತಿಕ್ರಿಯೆ ಕ್ರಮಗಳ ಮೂಲಕ ಪ್ರಮುಖ ವಲಯಗಳಲ್ಲಿ ಸನ್ನದ್ಧತೆ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಬೆಂಬಲಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ಈ ಕೆಳಗಿನ ಅಪ್‌ ಡೇಟ್ ವಿವರಿಸುತ್ತದೆ:

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಚಿವಾಲಯದ ಪ್ರಕಾರ:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ

•    ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಯನ್ನು ಗಾಬರಿಯಿಂದ ಖರೀದಿಸುವುದನ್ನು (Panic purchase) ತಪ್ಪಿಸಲು ಸಲಹೆ ನೀಡಲಾಗಿದೆ.
•    ವದಂತಿಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
•    ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ ಫಾರ್ಮ್‌ ಗಳನ್ನು ಬಳಸಲು ಮತ್ತು ವಿತರಕರ ಬಳಿಗೆ ಹೋಗುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
•    ಪಿ ಎನ್‌ ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
•    ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನ ಉಳಿತಾಯ ಮಾಡುವಂತೆ ಕೋರಲಾಗಿದೆ.

ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆಯೂ, ಗೃಹ ಬಳಕೆಯ ಎಲ್‌ ಪಿ ಜಿ (LPG), ಗೃಹ ಬಳಕೆಯ ಪಿಎನ್‌ಜಿ (PNG) ಮತ್ತು ಸಿ ಎನ್‌ ಜಿ (ಸಾರಿಗೆ) ವಲಯಗಳಿಗೆ ಶೇ. 100 ರಷ್ಟು ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರವು ಖಚಿತಪಡಿಸಿದೆ.
  • ವಾಣಿಜ್ಯ ಎಲ್‌ ಪಿ ಜಿ ಗಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ, ಫಾರ್ಮಾ (ಔಷಧ), ಸ್ಟೀಲ್, ಆಟೋಮೊಬೈಲ್, ಬೀಜ, ಕೃಷಿ ಮುಂತಾದ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಇದರೊಂದಿಗೆ, ಮಾರ್ಚ್ 2 ಮತ್ತು 3, 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ ಟಿ ಎಲ್ (FTL) ಪೂರೈಕೆಯನ್ನು ದ್ವಿಗುಣಗೊಳಿಸಲಾಗಿದೆ.
  • ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಿವಿಧ ವಲಯಗಳಿಗೆ ಆದ್ಯತೆ ನೀಡುವುದನ್ನು ಒಳಗೊಂಡಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
  • ಗೃಹ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಕಲ್ಪಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಯೋಜಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಅತ್ಯಗತ್ಯ ಸರಕುಗಳ ಕಾಯಿದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಹಾಗೂ ಕಾಳ ಸಂತೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅತ್ಯಗತ್ಯ ಸರಕುಗಳ ಪೂರೈಕೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗಿದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ (VC) ಮೂಲಕ ಇದನ್ನು ಪುನರುಚ್ಚರಿಸಿದೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ರ ದಿನಾಂಕದ ಪತ್ರಗಳ ಮೂಲಕ, ಇಂಧನದ ಸಾಕಷ್ಟು ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 02.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ) ಮತ್ತು 06.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಹಾಗೂ ಮಾಹಿತಿ ಮತ್ತು ಪ್ರಸಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ) ಸಭೆಗಳನ್ನು ಕರೆಯಲಾಯಿತು. ಇದರಲ್ಲಿ ಈ ಕೆಳಗಿನವುಗಳಿಗೆ ಒತ್ತು ನೀಡಲಾಯಿತು:

o    ದೈನಂದಿನ ಪತ್ರಿಕಾ ಪ್ರಕಟಣೆಗಳನ್ನು ನೀಡಲು ಮತ್ತು ನಿಯಮಿತವಾಗಿ ಸಾರ್ವಜನಿಕ ಸಲಹೆಗಳನ್ನು ಹೊರಡಿಸಲು.

o    ಸಾಮಾಜಿಕ ಮಾಧ್ಯಮಗಳಲ್ಲಿನ ನಕಲಿ ಸುದ್ದಿಗಳು/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅವುಗಳನ್ನು ತಡೆಯಲು.

o    ಜಿಲ್ಲಾ ಆಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಮತ್ತು ಓಎಂಸಿಗಳ (OMC) ಸಹಯೋಗದೊಂದಿಗೆ ದಾಳಿ ಮತ್ತು ತಪಾಸಣೆಯನ್ನು ಮುಂದುವರಿಸಲು.

o    ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸಲು.

o    ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಎಸ್‌ಕೆಒ (SKO) ಗಾಗಿ ಎಸ್‌ಕೆಒ ಹಂಚಿಕೆ ಆದೇಶಗಳನ್ನು ಹೊರಡಿಸಲು.

o    ಪಿ ಎನ್‌ ಜಿ (PNG) ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಲು.

o    ಎಲ್‌ ಪಿಜಿ  ಪೂರೈಕೆಗೆ, ವಿಶೇಷವಾಗಿ ದೇಶೀಯ ಅಗತ್ಯಗಳಿಗಾಗಿ ಆದ್ಯತೆ ನೀಡಲು ಮತ್ತು ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್‌ ಟಿ ಎಲ್ (FTL) ಸಿಲಿಂಡರ್‌ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಲು.

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ಕಂಟ್ರೋಲ್ ರೂಮ್‌ಗಳನ್ನು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.

ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾ ಪ್ರಕಟಣೆಗಳನ್ನು ನೀಡುತ್ತಿವೆ/ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

•    ಎಲ್‌ ಪಿ ಜಿ ಸಂಗ್ರಹಣೆ ಮತ್ತು ಕಪ್ಪು ಮಾರಾಟವನ್ನು ತಡೆಗಟ್ಟಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ನಿನ್ನೆ ದೇಶಾದ್ಯಂತ 2400ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.

•    ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು (PSU OMCs) ಹಠಾತ್ ತಪಾಸಣೆಗಳನ್ನು ಬಲಪಡಿಸಿದ್ದು, ನಿನ್ನೆಯವರೆಗೆ 309 ಎಲ್‌ ಪಿ ಜಿ ವಿತರಣಾ ಏಜೆನ್ಸಿಗಳ ಮೇಲೆ ದಂಡ ವಿಧಿಸಿವೆ ಮತ್ತು 70 ಎಲ್‌ ಪಿ ಜಿ ವಿತರಣಾ ಏಜೆನ್ಸಿಗಳನ್ನು ಅಮಾನತುಗೊಳಿಸಿವೆ.

ಎಲ್‌ ಪಿ ಜಿ ಪೂರೈಕೆ

ಗೃಹಬಳಕೆಯ ಎಲ್‌ ಪಿ ಜಿ ಪೂರೈಕೆ ಸ್ಥಿತಿ:

•    ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.

•    ಮನೆಗಳಿಗೆ ಎಲ್‌ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.

•    ಎಲ್‌ ಪಿ ಜಿ ವಿತರಣಾ ಏಜೆನ್ಸಿಗಳಲ್ಲಿ ಎಲ್ಲಿಯೂ ದಾಸ್ತಾನು ಖಾಲಿಯಾದ (Dry-outs) ಬಗ್ಗೆ ವರದಿಯಾಗಿಲ್ಲ.

•    ನಿನ್ನೆ ಉದ್ಯಮದಾದ್ಯಂತ ಆನ್‌ ಲೈನ್ ಎಲ್‌ ಪಿಜಿ  ಸಿಲಿಂಡರ್ ಬುಕಿಂಗ್ ಪ್ರಮಾಣವು ಸುಮಾರು ಶೇ. 99 ಕ್ಕೆ ಏರಿಕೆಯಾಗಿದೆ.

•    ಅಕ್ರಮ ವರ್ಗಾವಣೆಯನ್ನು ತಡೆಗಟ್ಟಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಶೇ. 94.5 ಕ್ಕಿಂತ ಹೆಚ್ಚಿವೆ. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ DAC ಸಂದೇಶವನ್ನು ಕಳುಹಿಸಲಾಗುತ್ತದೆ.

ವಾಣಿಜ್ಯ ಎಲ್‌ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

•    ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಸುಮಾರು ಶೇ. 70ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇ. 10ರಷ್ಟು ಸುಧಾರಣೆ ಆಧಾರಿತ (reform-linked) ಹಂಚಿಕೆಯೂ ಸೇರಿದೆ.

•    ಭಾರತ ಸರ್ಕಾರವು 06.04.2026 ದಿನಾಂಕದ ಪತ್ರದ ಮೂಲಕ, ಪ್ರತಿ ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ವಿತರಿಸಲು ಲಭ್ಯವಿರುವ 5 ಕೆಜಿ ಎಫ್‌ ಟಿ ಎಲ್ (FTL) ಸಿಲಿಂಡರ್‌ ಗಳ ದೈನಂದಿನ ಪ್ರಮಾಣವನ್ನು, 2026ರ ಮಾರ್ಚ್ 2-3 ರ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಮಾಡಲಾದ ಸರಾಸರಿ ದೈನಂದಿನ ಪೂರೈಕೆಯ (ಸಿಲಿಂಡರ್‌ ಗಳ ಸಂಖ್ಯೆ) ಆಧಾರದ ಮೇಲೆ ದ್ವಿಗುಣಗೊಳಿಸಿದೆ. ಇದು 21.03.2026 ರ ಪತ್ರದಲ್ಲಿ ತಿಳಿಸಲಾದ ಶೇ. 20 ರ ಮಿತಿಗಿಂತ ಹೆಚ್ಚಾಗಿದೆ. ಈ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ತೈಲ ಮಾರಾಟ ಕಂಪನಿಗಳ (OMCs) ನೆರವಿನೊಂದಿಗೆ ಆಯಾ ರಾಜ್ಯದ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಸಲು ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುತ್ತವೆ.

•    ಏಪ್ರಿಲ್ 1, 2026 ರಿಂದ ಇದುವರೆಗೆ 18.63 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಮಾರಾಟವಾಗಿವೆ.

•    ನಿನ್ನೆ ದೇಶಾದ್ಯಂತ ಸುಮಾರು 80,000 - 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಮಾರಾಟವಾಗಿವೆ.

•    ಏಪ್ರಿಲ್ 3, 2026 ರಿಂದ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು (PSU OMCs) 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳಿಗಾಗಿ 8770 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 1,38,000 ಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಮಾರಾಟವಾಗಿವೆ.

•    ನಿನ್ನೆ 230 ಕ್ಕೂ ಹೆಚ್ಚು ಶಿಬಿರಗಳ ಮೂಲಕ 5717 - 5 ಕೆಜಿ ಎಫ್‌ ಟಿ ಎಲ್‌ ಗಳು ಮಾರಾಟವಾಗಿವೆ.

•    ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ಪಿಜಿ ವಿತರಣೆಯನ್ನು ಯೋಜಿಸಲು IOCL, HPCL ಮತ್ತು BPCL ನ ಕಾರ್ಯನಿರ್ವಾಹಕ ನಿರ್ದೇಶಕರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.

•    ಏಪ್ರಿಲ್ 2026 ರ ತಿಂಗಳಿನಲ್ಲಿ (24.04.26 ರವರೆಗೆ), ಒಟ್ಟು 1,55,524 ಮೆಟ್ರಿಕ್ ಟನ್ (ಇದು 81.85 ಲಕ್ಷಕ್ಕೂ ಹೆಚ್ಚು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಗಳಿಗೆ ಸಮಾನವಾಗಿದೆ) ವಾಣಿಜ್ಯ ಎಲ್‌ ಪಿ ಜಿಯನ್ನು ಮಾರಾಟ ಮಾಡಲಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್‌ ಜಿ (PNG) ವಿಸ್ತರಣಾ ಉಪಕ್ರಮಗಳು

•    ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಡಿ-ಪಿಎನ್‌ಜಿ (D-PNG) ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇ. 100 ರಷ್ಟು ಪೂರೈಕೆ ಮಾಡಲಾಗುತ್ತಿದೆ.   

•    ರಸಗೊಬ್ಬರ ಕಾರ್ಖಾನೆಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 95 ಕ್ಕ್ಕೆ ಹೆಚ್ಚಿಸಲಾಗಿದೆ.  

•    ಹೆಚ್ಚುವರಿಯಾಗಿ, ಸಿಜಿಡಿ (CGD) ಜಾಲಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇ. 80 ರವರೆಗೆ ಹೆಚ್ಚಿಸಲಾಗಿದೆ.

•    ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಗೆ ಸಂಬಂಧಿಸಿದ ಕಳವಳಗಳನ್ನು ಹೋಗಲಾಡಿಸಲು, ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿನ (GAs) ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

•    IGL, MGL, GAIL Gas ಮತ್ತು BPCL ಸೇರಿದಂತೆ ಸಿಜಿಡಿ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.

•    ಸಿಜಿಡಿ ಜಾಲಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.

•    ಎಲ್‌ ಪಿ ಜಿ ಯಿಂದ ಪಿ ಎನ್‌ ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಿದರೆ, ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇ. 10 ರಷ್ಟು ಹಂಚಿಕೆಯನ್ನು ನೀಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.

•    22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್‌ ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.

•    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲು 3 ತಿಂಗಳ ವಿಶೇಷ ಅವಧಿಯವರೆಗೆ 'ಕಡಿಮೆ ಸಮಯದ ಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ತ್ವರಿತ ಅನುಮೋದನೆ ಚೌಕಟ್ಟು' ಅಳವಡಿಸಿಕೊಂಡಿದೆ.

•    ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯಿದೆ 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ಗಳು ಮತ್ತು ಇತರ ಸೌಲಭ್ಯಗಳ ಹಾಕುವಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯಬದ್ಧ ಚೌಕಟ್ಟನ್ನು ಒದಗಿಸುತ್ತದೆ. ಇದು ಅನುಮೋದನೆಗಳಲ್ಲಿನ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗವಾಗಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಇದು ಪಿಎನ್‌ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳ ಕಡೆಗೆ ಪರಿವರ್ತನೆಯನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.

•    PNGRB ಸಂಸ್ಥೆಯು D-PNG ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿ ಎನ್‌ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು 'ರಾಷ್ಟ್ರೀಯ ಪಿಎನ್‌ಜಿ ಅಭಿಯಾನ 2.0' ಅನ್ನು (National PNG Drive 2.0) 30.06.2026 ರವರೆಗೆ ವಿಸ್ತರಿಸಲಾಗಿದೆ.

•    ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ (CBG) ನೀತಿಯನ್ನು ರೂಪಿಸಿದೆ. ಈ ಮಾದರಿ ನೀತಿಯು ಸಿಬಿಜಿ ಅಭಿವೃದ್ಧಿಗಾಗಿ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ-ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ರಾಜ್ಯಗಳಿಗೆ ಸಮಗ್ರವಾದ ಮತ್ತು ಹೊಂದಿಕೊಳ್ಳುವ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದನ್ನು ಅಳವಡಿಸಿಕೊಳ್ಳುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿ ಯ ಮುಂದಿನ ಹಂತದ ಹೆಚ್ಚುವರಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.

•    ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) 07.04.2026 ರ ಆದೇಶದ ಮೂಲಕ ಸಿಜಿಡಿ ಜಾಲ/ಮೂಲಸೌಕರ್ಯಗಳಿಗೆ 15 ದಿನಗಳೊಳಗೆ ಸ್ಥಾಪನೆಗೆ ಸಮ್ಮತಿ ಅಥವಾ ಕಾರ್ಯನಿರ್ವಹಣೆಗೆ ಸಮ್ಮತಿ ನೀಡಲು SPCB/PCCs ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸಿಪಿಸಿಬಿ (CPCB) ಗೆ ಸೂಚಿಸಿದೆ.

•    ಮಾರ್ಚ್ 2026 ರಿಂದ ಇದುವರೆಗೆ 5.36 ಲಕ್ಷಕ್ಕೂ ಹೆಚ್ಚು ಪಿಎನ್‌ಜಿ ಸಂಪರ್ಕಗಳನ್ನು ಕಾರ್ಯಗತಗೊಳಿಸಲಾಗಿದೆ (gasified) ಮತ್ತು ಹೆಚ್ಚುವರಿ 2.61 ಲಕ್ಷ ಸಂಪರ್ಕಗಳಿಗಾಗಿ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ, ಇದು ಒಟ್ಟು ಸಂಪರ್ಕಗಳ ಸಂಖ್ಯೆಯನ್ನು 7.97 ಲಕ್ಷಕ್ಕೆ ತಂದಿದೆ. ಇದಲ್ಲದೆ, ಸುಮಾರು 6.05 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.

•    24.04.2026 ರವರೆಗೆ 42,280 ಕ್ಕೂ ಹೆಚ್ಚು ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ತ್ಯಜಿಸಿದ್ದಾರೆ.

ಕಚ್ಚಾ ತೈಲ ಪರಿಸ್ಥಿತಿ ಮತ್ತು ಸಂಸ್ಕರಣಾಗಾರಗಳ ಕಾರ್ಯಾಚರಣೆ

•    ಎಲ್ಲಾ ಸಂಸ್ಕರಣಾಗಾರಗಳು ಪರ್ಯಾಪ್ತ ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.

•    ಸ್ಥಳೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆಯ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

•    ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ ಸ್ಟಾಕ್ (petrochemical feedstock) ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಸೇರಿದಂತೆ ತೈಲ ಸಂಸ್ಕರಣಾ ಕಂಪನಿಗಳು, ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.

•    ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕಗಳ ಇಲಾಖೆ (DCPC) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (DPIIT) ಯಿಂದ ಬಂದ ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗೆ ಎಲ್‌ಪಿಜಿ ಪೂಲ್‌ನಿಂದ ದಿನಕ್ಕೆ 1000 ಮೆಟ್ರಿಕ್ ಟನ್ (MT) ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.

•    ಏಪ್ರಿಲ್ 9, 2026 ರಿಂದ ಇದುವರೆಗೆ ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ ಮತ್ತು ಮಥುರಾ ಸಂಸ್ಕರಣಾಗಾರಗಳಿಂದ ರಾಸಾಯನಿಕ ಮತ್ತು ಫಾರ್ಮಾ ಉದ್ಯಮಕ್ಕೆ 7000 ಮೆಟ್ರಿಕ್ ಟನ್‌ ಗಿಂತಲೂ ಹೆಚ್ಚು ಪ್ರೊಪಿಲೀನ್ (Propylene) ಮಾರಾಟ ಮಾಡಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ನಿಗದಿ ಕ್ರಮಗಳು

•    ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು (ಪೆಟ್ರೋಲ್ ಬಂಕ್‌ಗಳು) ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

•    ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಏರಿಕೆಗೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರ ಹಿತರಕ್ಷಣೆಗಾಗಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಗೆ ₹10 ರಷ್ಟು ಕಡಿತಗೊಳಿಸಿದೆ.

•    ದೇಶೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹55.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹42 ಕ್ಕೆ ಹೆಚ್ಚಿಸಿದೆ.

•    ವದಂತಿಗಳಿಂದಾಗಿ ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಗಾಬರಿಯಿಂದ ಖರೀದಿಸುತ್ತಿರುವುದು (Panic Buying) ಕಂಡುಬಂದಿದೆ. ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತಿಳಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ (PSU OMCs) ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಬೆಲೆ ಏರಿಕೆ ಮಾಡಲಾಗಿಲ್ಲ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

•    ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕಿಲೋ ಲೀಟರ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.

•    18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮಗೆ ಯಾವುದೇ ಅಗತ್ಯವಿಲ್ಲ ಎಂದು ತಿಳಿಸಿವೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯವು ಹೀಗೆ ತಿಳಿಸಿದೆ:

•    ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.

•    ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ.

•    ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು (DG Shipping Control Room) ಸಕ್ರಿಯಗೊಂಡ ನಂತರ 7,553 ಕರೆಗಳನ್ನು ಮತ್ತು 16,033 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 150 ಕರೆಗಳು ಮತ್ತು 394 ಇಮೇಲ್‌ ಗಳನ್ನು ಸ್ವೀಕರಿಸಲಾಗಿದೆ.

•    ಡಿಜಿ ಶಿಪ್ಪಿಂಗ್ ಇದುವರೆಗೆ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ 2,729 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು (Repatriation) ಅನುವು ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 49 ನಾವಿಕರು ಸೇರಿದ್ದಾರೆ.

•    ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.

ಈ ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಹಾಗೂ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕೆಳಗಿನ ಮಾಹಿತಿಯನ್ನು ತಿಳಿಸಲಾಗಿದೆ:

•    ಭಾರತೀಯ ರಾಯಭಾರ ಕಚೇರಿಗಳು ಮತ್ತು ಕೇಂದ್ರಗಳು ದಿನದ 24 ಗಂಟೆಯೂ ಹೆಲ್ಪ್‌ ಲೈನ್‌ ಗಳನ್ನು ನಿರ್ವಹಿಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವರು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.

•    ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಸನ್ನಿವೇಶಗಳು, ಕಾನ್ಸುಲರ್ ಸೇವೆಗಳು ಮತ್ತು ನಮ್ಮ ಸಮುದಾಯವನ್ನು ಬೆಂಬಲಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಮಾಹಿತಿಯನ್ನು ಒಳಗೊಂಡಂತೆ ನವೀಕರಿಸಿದ ಸಲಹೆಗಳನ್ನು ನಿಯಮಿತವಾಗಿ ಹೊರಡಿಸಲಾಗುತ್ತಿದೆ.

•    ಭಾರತೀಯ ರಾಯಭಾರ ಕಚೇರಿಗಳು ಈ ಪ್ರದೇಶದಲ್ಲಿರುವ ವಿವಿಧ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು, ಭಾರತೀಯ ಕಂಪನಿಗಳು ಮತ್ತು ಇತರ ಮಧ್ಯಸ್ಥಗಾರರು ಸೇರಿದಂತೆ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

•    ಸರ್ಕಾರವು ಈ ಪ್ರದೇಶದಲ್ಲಿನ ಭಾರತೀಯ ನಾವಿಕರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತೀಯ ರಾಯಭಾರ ಕಚೇರಿಗಳು ಈ ಪ್ರದೇಶದಲ್ಲಿನ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಗಳಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ, ಕಾನ್ಸುಲರ್ ಸಹಾಯವನ್ನು ವಿಸ್ತರಿಸುವುದು ಮತ್ತು ಭಾರತಕ್ಕೆ ಮರಳುವ ಮನವಿಗಳನ್ನು ಸುಗಮಗೊಳಿಸುವುದು ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೀಡುತ್ತಿವೆ.

•    ಈ ಪ್ರದೇಶದಿಂದ ಭಾರತದ ವಿವಿಧ ತಾಣಗಳಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಒಟ್ಟಾರೆ ವಿಮಾನಯಾನ ಪರಿಸ್ಥಿತಿಯು ಸುಧಾರಿಸುತ್ತಿದೆ. ಫೆಬ್ರವರಿ 28 ರಿಂದ, ಸುಮಾರು 12,65,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.

•    ಯುಎಇ (UAE) ಯಲ್ಲಿ, ಕಾರ್ಯಾಚರಣೆ ಮತ್ತು ಸುರಕ್ಷತೆಯ ಪರಿಗಣನೆಗಳ ಆಧಾರದ ಮೇಲೆ ವಿಮಾನಯಾನ ಸಂಸ್ಥೆಗಳು ಯುಎಇ ಮತ್ತು ಭಾರತದ ನಡುವೆ ಸೀಮಿತ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ, ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 110 ವಿಮಾನಗಳು ನಿರೀಕ್ಷಿಸಲಾಗಿದೆ.

•    ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ತಾಣಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

•    ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿರುವುದರಿಂದ, ಕತಾರ್ ಏರ್‌ವೇಸ್ ಭಾರತದ ವಿವಿಧ ತಾಣಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ.

•    ಕುವೈತ್ ವಾಯುಪ್ರದೇಶವು ಮುಕ್ತವಾಗಿದೆ. ಜಜೀರಾ ಏರ್‌ವೇಸ್ ಮತ್ತು ಕುವೈತ್ ಏರ್‌ ವೇಸ್ ಶೀಘ್ರದಲ್ಲೇ ಕುವೈತ್‌ನಿಂದ ಭಾರತಕ್ಕೆ ಸೀಮಿತ ವಿಮಾನಯಾನ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ಘೋಷಿಸಿವೆ. ಅವರು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ತಾಣಗಳಿಗೆ ನಿಯಮಿತವಲ್ಲದ (non-scheduled) ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರಿಸಿದ್ದಾರೆ.

•    ಬಹ್ರೇನ್ ವಾಯುಪ್ರದೇಶವು ಮುಕ್ತವಾಗಿದೆ. ಗಲ್ಫ್ ಏರ್ ಬಹ್ರೇನ್‌ ನಿಂದ ಭಾರತದ ವಿವಿಧ ತಾಣಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ.

•    ಇರಾಕ್ ವಾಯುಪ್ರದೇಶವು ತೆರೆದಿದ್ದು, ಈ ಪ್ರದೇಶದ ಇತರ ತಾಣಗಳಿಗೆ ಸೀಮಿತ ವಿಮಾನಯಾನ ಕಾರ್ಯಾಚರಣೆಗಳನ್ನು ಹೊಂದಿದೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಬಹುದು.

•    ಇರಾನ್ ವಾಯುಪ್ರದೇಶವು ಸರಕು ಮತ್ತು ಚಾರ್ಟರ್ ವಿಮಾನಗಳಿಗೆ ಭಾಗಶಃ ತೆರೆದಿದೆ. ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ ಮತ್ತು ಈಗಾಗಲೇ ಇರಾನ್‌ನಲ್ಲಿರುವವರಿಗೆ ನಮ್ಮ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಭೂ ಗಡಿಯ ಮೂಲಕ ನಿರ್ಗಮಿಸಲು ಸೂಚಿಸಲಾಗಿದೆ. ಇಲ್ಲಿಯವರೆಗೆ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 2,443 ಭಾರತೀಯ ಪ್ರಜೆಗಳು ಭೂ ಗಡಿಯ ಮೂಲಕ ಇರಾನ್‌ ನಿಂದ ಹೊರಬರಲು ಅನುಕೂಲ ಮಾಡಿಕೊಟ್ಟಿದೆ.

•    ಇಸ್ರೇಲ್: ಇಸ್ರೇಲ್ ವಾಯುಪ್ರದೇಶವು ತೆರೆದಿದೆ ಮತ್ತು ಈ ಪ್ರದೇಶದ ತಾಣಗಳಿಗೆ ಸೀಮಿತ ವಿಮಾನಯಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ, ಇವುಗಳನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಬಹುದು.

 

*****


(ಪ್ರಕಟಣೆ ಐ.ಡಿ.: 2255561) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , Marathi , हिन्दी , Assamese , Bengali , Gujarati , Tamil , Malayalam