ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
2025–26ರಲ್ಲಿ 6.1 ಗಿಗಾವಾಟ್ ಸೇರ್ಪಡೆಯೊಂದಿಗೆ ಭಾರತದ ಪವನ ಶಕ್ತಿಯಲ್ಲಿ ಐತಿಹಾಸಿಕ ಬೆಳವಣಿಗೆ ದಾಖಲು: ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರು
2030ರ ವೇಳೆಗೆ 100 ಗಿಗಾವಾಟ್ ಮತ್ತು 2036ರ ವೇಳೆಗೆ 156 ಗಿಗಾವಾಟ್ ಪವನ ಶಕ್ತಿ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಸರ್ಕಾರ ಬದ್ಧವಾಗಿದೆ: ಶ್ರೀ ಪ್ರಲ್ಹಾದ್ ಜೋಶಿ
ಜಾಗತಿಕ ಪವನ ಶಕ್ತಿ ಉತ್ಪಾದನಾ ಹಬ್ ಆಗಿ ಭಾರತದ ಸ್ಥಾನವನ್ನು ಬಲಪಡಿಸಲು ನೀತಿ ಸುಧಾರಣೆಗಳು ಮತ್ತು ಉದ್ದಿಮೆಗಳಿಗೆ ಬೆಂಬಲ: ಶ್ರೀ ಜೋಶಿ
ಪ್ರಕಟಣಾ ದಿನಾಂಕ:
22 APR 2026 6:46PM by PIB Bengaluru
ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಸ್ವತಂತ್ರ ಪವನ ವಿದ್ಯುತ್ ಉತ್ಪಾದಕರ ಸಂಘದ (ಡಬ್ಲ್ಯೂಐಪಿಪಿಎ) ಸಂಸ್ಥೆಯ ಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪವನ ಶಕ್ತಿ ವಲಯದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಉಲ್ಲೇಖಿಸಿದರು ಮತ್ತು ದೇಶದ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
2025–26ರ ಅವಧಿಯಲ್ಲಿ ಐತಿಹಾಸಿಕವಾಗಿ 6.1 ಗಿಗಾವಾಟ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಮೂಲಕ ಭಾರತವು ಪವನ ಶಕ್ತಿ ವಲಯದಲ್ಲಿ ಇದುವರೆಗಿನ ಅತ್ಯುತ್ತಮ ವರ್ಷವನ್ನು ದಾಖಲಿಸಿದೆ ಎಂದು ಶ್ರೀ ಜೋಶಿ ತಿಳಿಸಿದರು. ಭಾರತವು ಪ್ರಸ್ತುತ ಪವನ ಶಕ್ತಿಯಲ್ಲಿ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದು, 56.1 ಗಿಗಾವಾಟ್ ಗಿಂತ ಹೆಚ್ಚು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೆಚ್ಚುವರಿ 28 ಗಿಗಾವಾಟ್ ಅನುಷ್ಠಾನದ ಹಂತದಲ್ಲಿದೆ ಎಂದು ಅವರು ಹೇಳಿದರು.
ಈ ವಲಯದಲ್ಲಿರುವ ಅಗಾಧವಾದ ಬಳಕೆಯಾಗದ ಸಾಮರ್ಥ್ಯದ ಕುರಿತು ಹೇಳಿದ ಸಚಿವರು, 150 ಮೀಟರ್ ಎತ್ತರದ ಹಬ್ ಮಟ್ಟದಲ್ಲಿ ಭಾರತದ ಪವನ ಶಕ್ತಿ ಸಾಮರ್ಥ್ಯವು ಸುಮಾರು 1164 ಗಿಗಾವಾಟ್ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ನಿರಂತರ ಪ್ರಯತ್ನಗಳೊಂದಿಗೆ ದೇಶವು 2030 ರ ವೇಳೆಗೆ 100 ಗಿಗಾವಾಟ್ ಮತ್ತು 2036 ರ ವೇಳೆಗೆ 156 ಗಿಗಾವಾಟ್ ಪವನ ಶಕ್ತಿ ಸಾಮರ್ಥ್ಯವನ್ನು ಸಾಧಿಸಲಿದೆ ಮತ್ತು ಇದು 2070 ರ ವೇಳೆಗೆ 'ನೆಟ್-ಜೀರೋ' ಗುರಿಯನ್ನು ತಲುಪಲು ಗಮನಾರ್ಹ ಕೊಡುಗೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಇಂಧನ ವ್ಯವಸ್ಥೆಯನ್ನು ಸ್ಥಿರಗೊಳಿಸುವಲ್ಲಿ ಪವನ ಶಕ್ತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸಚಿವರು ಹೇಳಿದರು. ವಿಶೇಷವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಇದು ಗರಿಷ್ಠ ಉತ್ಪಾದನೆ ನೀಡುವುದರಿಂದ, ಅತಿ ಹೆಚ್ಚು ಬೇಡಿಕೆ ಇರುವ ಸಮಯಕ್ಕೆ ಇದು ಪೂರಕವಾಗಿದೆ. ಸುಮಾರು ಶೇಕಡಾ 45 ರಷ್ಟು ಪವನ ಶಕ್ತಿ ಉತ್ಪಾದನೆಯು ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಸಂಭವಿಸುತ್ತದೆ, ಇದು ಸೌರಶಕ್ತಿಗೆ ಪೂರಕವಾದ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು.
ನೀತಿ ಕ್ರಮಗಳ ಬಗ್ಗೆ ಮಾತನಾಡಿದ ಶ್ರೀ ಜೋಶಿ ಅವರು, ನಿರಂತರ ಬೇಡಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನವೀಕರಿಸಬಹುದಾದ ಖರೀದಿ ಜವಾಬ್ದಾರಿಗಳ ಅಡಿಯಲ್ಲಿ ಮೀಸಲಾದ ಪವನ ಶಕ್ತಿ ಘಟಕವನ್ನು ಪರಿಚಯಿಸಿದೆ ಎಂದು ತಿಳಿಸಿದರು. ವಿಳಂಬ ಪಾವತಿ ಹೆಚ್ಚುವರಿ ಶುಲ್ಕ ನಿಯಮಗಳ ಜಾರಿ, ಪಾರದರ್ಶಕ ಬಿಡ್ಡಿಂಗ್ ಮಾರ್ಗಸೂಚಿಗಳು ಮತ್ತು ಅನುಮೋದಿತ ಮಾದರಿಗಳು ಹಾಗೂ ತಯಾರಕರ ಪಟ್ಟಿಯ (ಎ ಎಲ್ ಎಂ ಎಂ) ಅನುಷ್ಠಾನದಂತಹ ಕ್ರಮಗಳು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುತ್ತಿವೆ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿವೆ ಎಂದು ಅವರು ಹೇಳಿದರು.
ಭಾರತವು ವಾರ್ಷಿಕ 24 ಗಿಗಾವಾಟ್ ಗಿಂತ ಹೆಚ್ಚಿನ ಸಾಮರ್ಥ್ಯ ಮತ್ತು ಶೇಕಡಾ 70-80 ರಷ್ಟು ಸ್ಥಳೀಯ ಉತ್ಪಾದನಾ ಮಟ್ಟದೊಂದಿಗೆ ಬಲಿಷ್ಠ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ತಿಳಿಸಿದರು. ಬ್ಲೇಡ್ ಗಳು, ಟವರ್ ಗಳು, ಗೇರ್‌ಬಾಕ್ಸ್ ಗಳು ಮತ್ತು ಇತರ ನಿರ್ಣಾಯಕ ಘಟಕಗಳ ಪೂರೈಕೆ ಸರಪಳಿಯಲ್ಲಿ ದೇಶವು ಬಲಿಷ್ಠ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವರು ಹೇಳಿದರು.
ಉದ್ಯಮದ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರ್ಕಾರವು ಹೆಚ್ಚುವರಿ ವಿಂಡ್ ಟೆಂಡರ್ ಗಳ ಬಿಡುಗಡೆಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಮತ್ತು ಗ್ರಿಡ್ ದಕ್ಷತೆಯನ್ನು ಹೆಚ್ಚಿಸಲು ಹೈಬ್ರಿಡ್ ಮತ್ತು ದಿನದ 24 ಗಂಟೆಯೂ (ಆರ್ ಟಿ ಸಿ) ಲಭ್ಯವಿರುವ ಯೋಜನೆಗಳನ್ನು ಉತ್ತೇಜಿಸುತ್ತಿದೆ ಎಂದು ಮಾಹಿತಿ ನೀಡಿದರು. ಡಿವಿಯೇಷನ್ ಸೆಟಲ್ಮೆಂಟ್ ಮೆಕ್ಯಾನಿಸಂ (ಡಿ ಎಸ್ ಎಂ) ದಂಡಗಳು, ಪೂರೈಕೆ ಕಡಿತ ಮತ್ತು ಪ್ರಸರಣ ವಿಳಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಕ್ರಿಯ ಪರಿಶೀಲನೆಯಲ್ಲಿದ್ದು, ಸಮತೋಲಿತ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಕೈಗಾರಿಕೆಗಳು ನವೀಕರಿಸಬಹುದಾದ ಇಂಧನವನ್ನು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಗ್ರೀನ್ ಎನರ್ಜಿ ಓಪನ್ ಆಕ್ಸೆಸ್ ನಿಯಮಗಳು, ಹಳೆಯ ವಿಂಡ್ ಟರ್ಬೈನ್ ಗಳ ಮರು-ಶಕ್ತೀಕರಣ ಮತ್ತು ಗ್ರೀನ್ ಎನರ್ಜಿ ಕಾರಿಡಾರ್ ಅಡಿಯಲ್ಲಿ ಪ್ರಸರಣ ಮೂಲಸೌಕರ್ಯದ ವಿಸ್ತರಣೆಯಂತಹ ಉಪಕ್ರಮಗಳನ್ನು ಸಹ ಸಚಿವರು ಉಲ್ಲೇಖಿಸಿದರು.
ಬ್ಲೆಂಡೆಡ್ ಫೈನಾನ್ಸ್ ಮತ್ತು ಕ್ರೆಡಿಟ್ ಎನ್‌ಹಾನ್ಸ್‌ಮೆಂಟ್ ಫ್ರೇಮ್‌ವರ್ಕ್ ಗಳಂತಹ ನವೀನ ಕಾರ್ಯವಿಧಾನಗಳ ಮೂಲಕ ದೀರ್ಘಕಾಲೀನ, ಕಡಿಮೆ-ವೆಚ್ಚದ ಹಣಕಾಸು ಒದಗಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ಪ್ರಾರಂಭಿಸಲಾದ ಕಾಂಟ್ರಾಕ್ಟ್ ಫಾರ್ ಡಿಫರೆನ್ಸ್ (ಸಿ ಎಫ್ ಡಿ) ಮಾದರಿಯ ಅಡಿಯಲ್ಲಿ 500 ಮೆಗಾವಾಟ್ ಪ್ರಾಯೋಗಿಕ ಯೋಜನೆಯು ಆದಾಯದ ನಿಶ್ಚಿತತೆಯನ್ನು ನೀಡುತ್ತದೆ ಮತ್ತು ಮಾರುಕಟ್ಟೆ ಸ್ಥಿರತೆಯನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಜಾಗತಿಕ ರಾಷ್ಟ್ರಗಳು ತಮ್ಮ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿರುವುದರಿಂದ, ಪವನ ಶಕ್ತಿ ವಲಯದಲ್ಲಿ ವಿಶ್ವಾಸಾರ್ಹ ಜಾಗತಿಕ ಉತ್ಪಾದನಾ ಮತ್ತು ಪೂರೈಕೆ ಪಾಲುದಾರನಾಗಿ ಹೊರಹೊಮ್ಮಲು ವಿಕಸನಗೊಳ್ಳುತ್ತಿರುವ ಜಾಗತಿಕ ಸನ್ನಿವೇಶವು ಭಾರತಕ್ಕೆ ಕಾರ್ಯತಂತ್ರದ ಅವಕಾಶವನ್ನು ನೀಡುತ್ತದೆ ಎಂದು ಶ್ರೀ ಜೋಶಿ ಒತ್ತಿಹೇಳಿದರು.
ಪವನ ಶಕ್ತಿ ಉದ್ದಿಮೆಯ ವಿಶ್ವಾಸಾರ್ಹ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಬ್ಲ್ಯುಐಪಿಪಿಎಯನ್ನು ಅಭಿನಂದಿಸಿದ ಸಚಿವರು, ನೀತಿ ರೂಪಿಸುವಲ್ಲಿ, ವಲಯದ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವಲ್ಲಿ ಈ ಸಂಘವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಮುಂದಿನ ದಶಕದಲ್ಲಿ 156 ಗಿಗಾವಾಟ್ ನ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವುದು ಸ್ಪಷ್ಟ ನೀತಿ ನಿರ್ದೇಶನ, ಬಲಿಷ್ಠ ಸಾಂಸ್ಥಿಕ ಬೆಂಬಲ ಮತ್ತು ಉದ್ದಿಮೆಗಳ ಸಹಭಾಗಿತ್ವದೊಂದಿಗೆ ಖಂಡಿತವಾಗಿಯೂ ಸಾಧ್ಯ ಎಂದು ಅವರು ಹೇಳಿದರು. ವಿಶ್ವಾಸಾರ್ಹ ಮತ್ತು ಸುಸ್ಥಿರ ಇಂಧನ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಪವನ, ಸೌರ ಮತ್ತು ಇಂಧನ ಸಂಗ್ರಹಣೆಯನ್ನು ಒಳಗೊಂಡ ಸಂಯೋಜಿತ ಹೈಬ್ರಿಡ್ ವ್ಯವಸ್ಥೆಗಳ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಕರೆ ನೀಡಿದ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಸಾರಂಗಿ ಮತ್ತು ಇತರರು ಉಪಸ್ಥಿತರಿದ್ದರು.
******
(ಪ್ರಕಟಣೆ ಐ.ಡಿ.: 2254663)
ವಿಸಿಟರ್ ಕೌಂಟರ್ : 7