ಉಪರಾಷ್ಟ್ರಪತಿಗಳ ಕಾರ್ಯಾಲಯ
ಕರ್ನಾಟಕದ ಭಾಲ್ಕಿಯಲ್ಲಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಹಾಸ್ವಾಮೀಜಿಗಳ 75ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಉದ್ಘಾಟಿಸಿದ ಉಪ ರಾಷ್ಟ್ರಪತಿ
ಬಸವಲಿಂಗ ಮಹಾಸ್ವಾಮೀಜಿಯವರ 75ನೇ ಸಂಭ್ರಮಾಚರಣೆಯಲ್ಲಿ ‘ವಿಕಾಸ್ ಭಿ, ವಿರಾಸತ್ ಭಿ’ ದೂರದೃಷ್ಟಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಉಪರಾಷ್ಟ್ರಪತಿ
'ರಾಷ್ಟ್ರ ನಿರ್ಮಾಣಕ್ಕೆ ಮಹಿಳಾ ಶಕ್ತಿಯೇ ಮುಖ್ಯ': ಕರ್ನಾಟಕದಲ್ಲಿ ಉಪರಾಷ್ಟ್ರಪತಿ ಹೇಳಿಕೆ
ಸಮಾನತೆ, ಸಹಾನುಭೂತಿ ಮತ್ತು ಧರ್ಮದಲ್ಲಿ ಬೇರೂರಿರುವ ಸಮಾಜ ನಿರ್ಮಾಣಕ್ಕೆ ಉಪರಾಷ್ಟ್ರಪತಿ ಕರೆ
ಪ್ರಕಟಣಾ ದಿನಾಂಕ:
22 APR 2026 3:22PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ.ರಾಧಾಕೃಷ್ಣನ್ ಇಂದು ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಶ್ರೀ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಹಾಸ್ವಾಮೀಜಿಗಳ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಆಚರಣೆಯನ್ನು ಉದ್ಘಾಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಅವರು, ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವ ಬೀದರ್ ಪ್ರದೇಶವು ಕಲಿಕೆ, ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯ ಐತಿಹಾಸಿಕ ಕೇಂದ್ರವಾಗಿದ್ದು, ಇಲ್ಲಿಗೆ ಆಗಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಬಸವಣ್ಣನವರ ಪರಂಪರೆ ಉಲ್ಲೇಖಿಸುತ್ತಾ, ಸಮಾನತೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾಮಾಜಿಕ ತಾರತಮ್ಯವನ್ನು ವಿರೋಧಿಸುವಲ್ಲಿ ಅವರ ಮಹತ್ವದ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ವಿಶ್ವದ ಮೊದಲ ಆಧ್ಯಾತ್ಮಿಕ ವೇದಿಕೆ ಎಂದು ಪರಿಗಣಿಸಲಾದ ಅನುಭವ ಮಂಟಪದ ಆದರ್ಶಗಳು ಹಲವು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಅವರು ಉಲ್ಲೇಖಿಸಿದರು.
ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಮಹಾಸ್ವಾಮೀಜಿ ಅವರ ಕೊಡುಗೆಗಳನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿ, ಅವರನ್ನು ಕರುಣೆ ಮತ್ತು ಸೇವೆಯ ನಿಜವಾದ ಸಾಕಾರಮೂರ್ತಿ ಎಂದು ಬಣ್ಣಿಸಿದರು. 500ಕ್ಕೂ ಅಧಿಕ ಅನಾಥ ಮತ್ತು ಪರಿತ್ಯಕ್ತ ಮಕ್ಕಳಿಗೆ ಆಶ್ರಯ, ಶಿಕ್ಷಣ ಮತ್ತು ಘನತೆಯನ್ನು ಒದಗಿಸುವಲ್ಲಿ ಮತ್ತು 20,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 60 ಕ್ಕೂ ಅಧಿಕ ಸಂಸ್ಥೆಗಳ ವಿಶಾಲವಾದ ಶೈಕ್ಷಣಿಕ ಜಾಲವನ್ನು ನಿರ್ಮಿಸುವಲ್ಲಿ ಅವರ ಪ್ರಯತ್ನಗಳನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ "ವಿಕಾಸ್ ಭಿ, ವಿರಾಸತ್ ಭಿ" ಎಂಬ ದೂರದೃಷ್ಟಿಯನ್ನು ಉಲ್ಲೇಖಿಸಿದ ಅವರು, ಭಾರತದ ಅಭಿವೃದ್ಧಿಯು ಅದರ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಕೈಜೋಡಿಸಬೇಕು ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. ಭಾರತ ಇಂದು ತಾಂತ್ರಿಕವಾಗಿ ಮುಂದುವರಿದ, ಆರ್ಥಿಕವಾಗಿ ಬಲಿಷ್ಠ ಮತ್ತು ಜಾಗತಿಕವಾಗಿ ಪ್ರಭಾವಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದರೂ ನಾಗರಿಕತೆಯ ತತ್ವಗಳಲ್ಲಿ ಆಳವಾಗಿ ಬೇರೂರಿದೆ ಎಂದು ಅವರು ಉಲ್ಲೇಖಿಸಿದರು.
ಪರಂಪರೆ ಸಂರಕ್ಷಣೆ, ಸಾಂಪ್ರದಾಯಿಕ ಆಚರಣೆಗಳು, ಯೋಗ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನಾಗರಿಕರಲ್ಲಿ ಹೆಮ್ಮೆಯ ಭಾವನೆಯನ್ನು ಬೆಳೆಸಿದೆ ಮತ್ತು ನಾಗರಿಕತೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ಅಂತಹ ಪ್ರಯತ್ನಗಳಿಂದ ಕೇವಲ ಕಟ್ಟಡಗಳನ್ನು ಸಂರಕ್ಷಿಸುವುದಷ್ಟೇ ಅಲ್ಲ, ಆದರೆ ಆತ್ಮ ವಿಶ್ವಾಸವನ್ನು ಪುನಃಸ್ಥಾಪಿಸುವುದು ಮತ್ತು ಭಾರತದ ಕಾಲಾತೀತ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ಜನರನ್ನು ಮರುಸಂಪರ್ಕಿಸುವಂತೆ ಮಾಡುವುದಾಗಿದೆ ಎಂದು ಅವರು ಹೇಳಿದರು.
“ನಾರಿ ಶಕ್ರಿ’’ ರಾಷ್ಟ್ರ ನಿರ್ಮಾಣಕ್ಕೆ ಅತಿ ಮುಖ್ಯವಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿ ಅವರು, ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದರು. ಮಹಿಳೆಯರು ನಾಯಕತ್ವದ ಪಾತ್ರಗಳಿಗೆ ದಯೆ ಮತ್ತು ಅನುಕಂಪವನ್ನು ತರುತ್ತಾರೆ ಎಂದು ಅವರು ಉಲ್ಲೇಖಿಸಿದರು ಮತ್ತು ಮಹಿಳೆಯರು ಸಬಲೀಕರಣಗೊಂಡಾಗ ಕುಟುಂಬಗಳು ಅಭಿವೃದ್ಧಿ ಹೊಂದಿದಾಗ, ಸಮುದಾಯಗಳು ಬಲಗೊಳ್ಳುತ್ತವೆ ಮತ್ತು ರಾಷ್ಟ್ರಗಳು ಪ್ರಗತಿ ಹೊಂದುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಪೂಜ್ಯ ಸ್ವಾಮೀಜಿಯವರ ಜೀವನ ಮತ್ತು ಬೋಧನೆಗಳು ಮತ್ತು ಬಸವಣ್ಣನವರ ತತ್ವಶಾಸ್ತ್ರದಿಂದ ಸ್ಫೂರ್ತಿ ಪಡೆಯುವಂತೆ ಮತ್ತು ಸಮಾನತೆ, ಕರುಣೆ ಮತ್ತು ಧರ್ಮದಲ್ಲಿ ಬೇರೂರಿರುವ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಜನತೆಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ, 'ಕಲ್ಯಾಣ ಕಾರುಣ್ಯ' (ಅಭಿನಂದನ ಗ್ರಂಥ) ಎಂಬ ಪುಸ್ತಕ ಮತ್ತು 'ಬಸವ ಕಿರಣ' ಎಂಬ ಫೋಟೋ ಆಲ್ಬಮ್ ಅನ್ನು ಬಿಡುಗಡೆ ಮಾಡಲಾಯಿತು. ಉಪರಾಷ್ಟ್ರಪತಿಯವರು ಚನ್ನಬಸವ ಪಟ್ಟದೇವರು ಅವರ ಸ್ಮಾರಕಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್; ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಎಂ. ಮಲ್ಲಿಕಾರ್ಜುನ ಖರ್ಗೆ; ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ್ ಖಂಡ್ರೆ; ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಾದ ಶ್ರೀ ರಹೀಮ್ ಖಾನ್; ಮತ್ತು ಇತರೆ ಹಲವು ಗಣ್ಯರು, ಆಧ್ಯಾತ್ಮಿಕ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2254522)
ವಿಸಿಟರ್ ಕೌಂಟರ್ : 12