ಉಪರಾಷ್ಟ್ರಪತಿಗಳ ಕಾರ್ಯಾಲಯ
ಸಿಂಧಿ ಭಾಷೆಯಲ್ಲಿ ಭಾರತದ ಸಂವಿಧಾನವನ್ನು ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್
ಸಂವಿಧಾನದ ಸಿಂಧಿ ಭಾಷೆಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತೀಯ ಭಾಷೆಗಳಲ್ಲಿ ಸಂವಿಧಾನ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳಿಗೆ ಉಪರಾಷ್ಟ್ರಪತಿ ಶ್ಲಾಘನೆ
“ಭಾಷೆಗಳು ಸಂಸ್ಕೃತಿ, ಸಂಪ್ರದಾಯ ಮತ್ತು ಆಸ್ಮಿತೆಯ ವಾಹಕಗಳು’’: ಉಪರಾಷ್ಟ್ರಪತಿ
“ಮಾತೃಭಾಷೆಯಲ್ಲಿನ ಸಂವಿಧಾನವು ನಾಗರಿಕರನ್ನು ಸಬಲಗೊಳಿಸುತ್ತದೆ’’: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
10 APR 2026 1:48PM by PIB Bengaluru
ಉಪರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ದೇವನಾಗರಿ ಮತ್ತು ಪರ್ಷಿಯನ್ ಲಿಪಿಗಳಲ್ಲಿ ಸಿಂಧಿ ಭಾಷೆಯಲ್ಲಿ ಭಾರತದ ಸಂವಿಧಾನದ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಸಿಂಧಿ ಭಾಷಾ ದಿವಸ್ ಸಂದರ್ಭದಲ್ಲಿ ಸಿಂಧಿ ಮಾತನಾಡುವ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದರು. ಸಿಂಧಿ ಭಾಷೆ ಅತ್ಯಂತ ಹಳೆಯ ಮತ್ತು ಅತ್ಯಂತ ಮಧುರ ಭಾಷೆಗಳಲ್ಲಿ ಒಂದಾಗಿದ್ದು, ಅದರ ಸಾಹಿತ್ಯಿಕ ಸಂಪ್ರದಾಯವು ವೇದಾಂತಿಕ ತತ್ವಶಾಸ್ತ್ರ ಮತ್ತು ಸೂಫಿ ಚಿಂತನೆಯ ವಿಶಿಷ್ಟ ಸಂಗಮ ಪ್ರತಿಬಿಂಬಿಸುತ್ತದೆ, ಐಕ್ಯತೆ, ಪ್ರೀತಿ ಮತ್ತು ಸಹೋದರತ್ವದ ಸಾರ್ವತ್ರಿಕ ಮೌಲ್ಯಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಸಿಂಧಿ ಭಾಷೆಯಲ್ಲಿ ವಿಶೇಷವಾಗಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದೇವನಾಗರಿ ಲಿಪಿಯಲ್ಲಿ ಸಂವಿಧಾನದ ಬಿಡುಗಡೆಯು ಭಾಷಾ ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಿದರು. ಸಂವಿಧಾನವು ಕೇವಲ ಕಾನೂನು ದಾಖಲೆಯಲ್ಲ, ಬದಲಿಗೆ ರಾಷ್ಟ್ರದ ಜೀವಂತ ಸ್ಫೂರ್ತಿಯಾಗಿದೆ, ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುತ್ತದೆ, ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಪ್ರಜಾಪ್ರಭುತ್ವ ಆಡಳಿತಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಸಂವಿಧಾನವನ್ನು ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು. ಇಂತಹ ಉಪಕ್ರಮಗಳು ನಾಗರಿಕರು ಮತ್ತು ಆಡಳಿತದ ನಡುವಿನ ಅಂತರವನ್ನು ತಗ್ಗಿಸಲು ಸಹಾಯ ಮಾಡುತ್ತದೆ, ಜನರು ತಮ್ಮ ಮಾತೃಭಾಷೆಯಲ್ಲಿ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಹಾಗೂ ಇದರಿಂದಾಗಿ ಪ್ರಜಾಪ್ರಭುತ್ವದಲ್ಲಿ ಜನರ ಭಾಗಿದಾರಿಕೆ ಹೆಚ್ಚಾಗಲಿದೆ ಮತ್ತು ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ಭಾರತವು ತನ್ನ ಸಂವಿಧಾನವನ್ನು ವ್ಯಾಪಕ ಶ್ರೇಣಿಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ವಿಶಿಷ್ಟವಾಗಿದೆ ಎಂದು ಅವರು ಉಲ್ಲೇಖಿಸಿದರು ಮತ್ತು ಬೋಡೋ, ಡೋಗ್ರಿ, ಸಂಥಾಲಿ, ತಮಿಳು, ಗುಜರಾತಿ ಮತ್ತು ನೇಪಾಳಿ ಭಾಷೆಗಳಲ್ಲಿ ಅನುವಾದಗಳನ್ನು ಒಳಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ಇದೇ ರೀತಿಯ ಉಪಕ್ರಮಗಳನ್ನು ಸ್ಮರಿಸಿಕೊಂಡರು. ಈ ಪ್ರಯತ್ನಗಳು ಭಾರತದ ಭಾಷಾ ವೈವಿಧ್ಯತೆಯನ್ನು ಬಿಂಬಿಸುತ್ತವೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.
ಸಿಂಧಿ ಸಮುದಾಯದ ಐತಿಹಾಸಿಕ ಪಯಣದ ಮೇಲೆ ಬೆಳಕು ಚೆಲ್ಲಿದ ಅವರು, ಸಿಂಧಿ ಭಾಷೆ ವಿಭಜನೆಯ ನಂತರದ ಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಏಕತೆಯ ಸಂಕೇತವಾಗಿ ಕಾರ್ಯನಿರ್ವಹಿಸಿತು ಎಂದು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. 1967 ರಲ್ಲಿ 21 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಿಂಧಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇಧದಲ್ಲಿ ಸೇರ್ಪಡೆ ಮಾಡಲಾಯಿತು, ಆ ಮೂಲಕ ಅದರ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿ ಭವಿಷ್ಯದ ಪೀಳಿಗೆಗೆ ಅದರ ಸಂರಕ್ಷಣೆಯನ್ನು ಖಾತ್ರಿಪಡಿಸಲಾಯಿತು ಎಂದು ಅವರು ಸ್ಮರಿಸಿಕೊಂಡರು.
ಎಲ್ಲಾ ಭಾಷೆಗಳನ್ನು ಗೌರವಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತಿದ್ದರೂ, ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡಬೇಕು ಎಂದು ಹೇಳಿದರು. ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ ಮತ್ತು ಭಾಷೆಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ಗುರುತಿನ ಪ್ರಮುಖ ಅಸ್ಮಿತೆಗಳಾಗಿವೆ ಎಂದು ಅವರು ಹೇಳಿದರು.
ಸಂವಿಧಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಕ್ಕಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯದ, ವಿಶೇಷವಾಗಿ ಪ್ರಾದೇಶಿಕ ಭಾಷಾ ಅಧಿಕಾರಿಗಳ ಪ್ರಯತ್ನಗಳನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು. ಇಂತಹ ಉಪಕ್ರಮಗಳು ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು 2047ರ ವೇಳೆಗೆ ವಿಕಸಿತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಕೊಡುಗೆ ನೀಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವೈವಿಧ್ಯತೆಯಲ್ಲಿ ಏಕತೆಯ ಮನೋಭಾವ ಮತ್ತು “ರಾಷ್ಟ್ರ ಮೊದಲು - ರಾಷ್ಟ್ರ ಪ್ರಥಮ’’ ಎಂಬ ಮಾರ್ಗದರ್ಶಿ ತತ್ವವನ್ನು ಅವರು ಪುನರುಚ್ಚರಿಸಿದರು.ನಾಗರಿಕರು ತಮ್ಮ ಮಾತೃಭಾಷೆಗಳನ್ನು ಹಾಗೂ ರಾಷ್ಟ್ರದ ಸಾಮೂಹಿಕ ಭಾಷಾ ಪರಂಪರೆಯನ್ನು ಗೌರವಿಸಬೇಕು ಎಂದು ಕರೆ ನೀಡುವ ಮೂಲಕ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್, ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಶ್ರೀ ವಾಸುದೇವ್ ದೇವ್ನಾನಿ; ಲೋಕಸಭೆಯ ಸಂಸತ್ ಸದಸ್ಯರಾದ ಶ್ರೀ ಶಂಕರ್ ಲಾಲ್ವಾನಿ; ಮತ್ತು ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಮಣಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2250793)
ವಿಸಿಟರ್ ಕೌಂಟರ್ : 17