ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಅಡಿಯಲ್ಲಿ ಅಧಿಸೂಚಿಸಲಾದ ಹರಿಯಾಣದ ಸಿರ್ಸ ಲವಣಯುಕ್ತ ನೀರಿನ ಜಲಚರ ಸಾಕಣೆ ಗುಚ್ಚದ ಸ್ಥಿತಿಯ ಪ್ರಗತಿ ಪರಿಶೀಲನೆ 

ಪ್ರಕಟಣಾ ದಿನಾಂಕ: 08 APR 2026 4:10PM by PIB Bengaluru

ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಾಕ್ಷ್ ಲಿಖಿ ಅವರು 2026ರ ಏಪ್ರಿಲ್ 8 ರಂದು ಹರಿಯಾಣದ ಸಿರ್ಸಾ ಜಿಲ್ಲೆಗೆ ಭೇಟಿ ನೀಡಿ ಪಿಎಂಎಂಎಸ್‌ವೈ ಅಡಿಯಲ್ಲಿ ಅಧಿಸೂಚಿಸಲಾದ ಲವಣಯುಕ್ತ ನೀರಿನ ಜಲಚರ ಸಾಕಣೆ ಗುಚ್ಚದ  ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಈ ಪ್ರದೇಶದಲ್ಲಿ ಉಪ್ಪು ನೀರಿನ ಜಲಚರ ಸಾಕಣೆಯಲ್ಲಿ ತೊಡಗಿರುವ ಸಿಗಡಿ ಕೃಷಿಕರೊಂದಿಗೆ ಸಂವಾದ ನಡೆಸಿದರು. ಭೇಟಿಯ ಸಂದರ್ಭದಲ್ಲಿ ಕೇಂದ್ರ ಕಾರ್ಯದರ್ಶಿ ಮೀನು ಕೃಷಿಕರೊಂದಿಗೆ ಸಂವಾದ ನಡೆಸಿದರು. ತಳಮಟ್ಟದಲ್ಲಿ ಎದುರಿಸುತ್ತಿರುವ ಅಂತರ ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು.

ಮೀನು ಕೃಷಿಕರನ್ನುದ್ದೇಶಿಸಿ ಮಾತನಾಡಿದ ಡಾ. ಲಿಖಿ, ಉತ್ಪಾದಕತೆ, ಉತ್ಪನ್ನದ ಗುಣಮಟ್ಟ ಮತ್ತು ಒಟ್ಟಾರೆ ಲಾಭದಾಯಕತೆಯನ್ನು ಹೆಚ್ಚಿಸಲು ನಿರಂತರ ಸಾಮರ್ಥ್ಯ ವರ್ಧನೆಯ ಜೊತೆಗೆ ತಂತ್ರಜ್ಞಾನ ಚಾಲಿತ ಸೀಗಡಿ ಸಾಕಾಣಿಕೆ ಪದ್ಧತಿಗಳು, ವೈಜ್ಞಾನಿಕ ಕೊಳ ನಿರ್ವಹಣೆ ಮತ್ತು ದೃಢವಾದ ಜೈವಿಕ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಸಿರ್ಸಾದಂತಹ ಲವಣಯುಕ್ತ ಪ್ರದೇಶಗಳು ಸಿಗಡಿ ಜಲಚರ ಸಾಕಣೆಯ ಮೂಲಕ  ಭೂ ಬಳಕೆಗೆ ಸಂಬಂಧಿಸಿ  ಗಮನಾರ್ಹ ಸಾಮರ್ಥ್ಯವನ್ನು ಹೊಂದಿವೆ, ಇದು ಆದಾಯದ ವೈವಿಧ್ಯೀಕರಣ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಫ್ತು ಸಂಪರ್ಕಗಳನ್ನು ಸ್ಥಾಪಿಸಲು ಮತ್ತು ರೈತರ ಸಾಮರ್ಥ್ಯ ವರ್ಧನೆಯನ್ನು ಬೆಂಬಲಿಸಲು ಅಗತ್ಯವಾದ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಲು ಎಂಪಿಇಡಿಎಗೆ ಸಲಹೆ ನೀಡಲಾಗಿದೆ. ಪರೀಕ್ಷಾ ಕಿಟ್ಗಳು ಸುಲಭವಾಗಿ ಲಭ್ಯವಾಗುವುದು ಅತ್ಯಗತ್ಯ ಎಂದು ಒತ್ತಿ ಹೇಳಲಾಯಿತು ಹಾಗು  ಸಿಗಡಿ ಬೆಳೆಗಾರರು ಪರೀಕ್ಷೆಗಾಗಿ ದೂರದ ಪ್ರಯಾಣ ಮಾಡಬೇಕಾಗಿಲ್ಲ ಎಂದು ಸ್ಥಳೀಯವಾಗಿ ಅವುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯವನ್ನು ಒತ್ತಾಯಿಸಲಾಯಿತು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಅಡಿಯಲ್ಲಿ ಗುಚ್ಚ (ಕ್ಲಸ್ಟರ್) ಆಧಾರಿತ ಮೀನುಗಾರಿಕೆ ಅಭಿವೃದ್ಧಿ ಉಪಕ್ರಮಗಳ ಒಟ್ಟಾರೆ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಸಿರ್ಸಾದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದಲ್ಲಿ (ಸಿಡಿಎಲ್ಯು) ಹೈಬ್ರಿಡ್ ಮಾದರಿಯಲ್ಲಿ ಪರಿಶೀಲನಾ ಸಭೆ ನಡೆಯಿತು. ಸಾಧಿಸಿದ ಪ್ರಗತಿ, ಅಂತರ್ ಸಾಂಸ್ಥಿಕ ಸಮನ್ವಯ, ಯೋಜನೆಗಳ ಒಮ್ಮುಖತೆ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಅನುಷ್ಠಾನದ ಅಂತರವನ್ನು ಪರಿಹರಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಸಭೆಯಲ್ಲಿ ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ಹರಿಯಾಣ ಸರ್ಕಾರದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕಾ ಕ್ಲಸ್ಟರ್ ಗಳ ಪ್ರತಿನಿಧಿಗಳು, ಐಸಿಎಆರ್ ಮೀನುಗಾರಿಕೆ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಎನ್‌ಎಫ್‌ಡಿಬಿ, ಐಸಿಎಆರ್-ಸಿಐಎಫ್ಇ, ಎಂಪಿಇಡಿಎ, ನಬಾರ್ಡ್, ಮೀನು ಕೃಷಿಕರು, ಸೀಗಡಿ ಕೃಷಿಕರು, ಮೀನುಗಾರಿಕೆ ಸಹಕಾರಿಗಳು, ಮೀನುಗಾರಿಕೆ ವಿಶ್ವವಿದ್ಯಾಲಯಗಳು ಮತ್ತು ಮೀನುಗಾರಿಕಾ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಸಭೆಯಲ್ಲಿ, ಸಿಗಡಿ ರೈತರು ಹೆಚ್ಚಿನ ವೆಚ್ಚ ಮತ್ತು ಅನಿಯಮಿತ ವಿದ್ಯುತ್ ಲಭ್ಯತೆ, ಗುಣಮಟ್ಟದ ಮರಿಗಳು/  ಬೀಜಕ್ಕಾಗಿ ಇತರ ರಾಜ್ಯಗಳ ಅವಲಂಬನೆ ಮತ್ತು ಅಸಮರ್ಪಕ ನೀರು ಪೂರೈಕೆ ಸೇರಿದಂತೆ ಹಲವಾರು ಸಮಸ್ಯೆ,  ಸವಾಲುಗಳನ್ನು ಉಲ್ಲೇಖಿಸಿದರು. ಸಿಗಡಿ ಸಾಕಾಣಿಕೆ ಚಟುವಟಿಕೆಗಳ ವಿಸ್ತರಣೆಗೆ ಬೆಂಬಲ ನೀಡಲು ಪಂಚಾಯತ್ ಒಡೆತನದ ಭೂಮಿಯನ್ನು ಸ್ವಸಹಾಯ ಗುಂಪುಗಳಿಗೆ  ಗುತ್ತಿಗೆಗೆ ನೀಡುವಂತೆ ಅವರು ವಿನಂತಿಸಿದರು.


ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಾಕ್ಷ್ ಲಿಖಿ ಅವರು ಹರಿಯಾಣದ ಸಿರ್ಸಾ ಜಿಲ್ಲೆಯ ರಘುವಾನಾ ಗ್ರಾಮದಲ್ಲಿರುವ ಶ್ರೀ ಪ್ರೀತ್ಪಾಲ್ ಸಿಂಗ್ ಮತ್ತು ಶ್ರೀಮತಿ ಮನ್ ಪ್ರೀತ್ ಕೌರ್ ಅವರ ಸಿಗಡಿ ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿದರು. ಈ ಫಾರ್ಮ್ ಸುಮಾರು 3 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ 7 ಕೊಳಗಳನ್ನು ಒಳಗೊಂಡಿದ್ದು, ಒಟ್ಟು ಯೋಜನಾ ವೆಚ್ಚ 42 ಲಕ್ಷ ರೂ. ಅವರು ವಾರ್ಷಿಕವಾಗಿ ಸುಮಾರು 28 ಟನ್ ಗಳಷ್ಟು ಸಿಗಡಿ  ಉತ್ಪಾದಿಸುತ್ತಿದ್ದಾರೆ, ಸುಮಾರು 90 ಲಕ್ಷ ರೂ.ಗಳ ವಹಿವಾಟು ನಡೆಸುತ್ತಿದ್ದಾರೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಉಪ್ಪು ನೀರಿನ ಜಲಚರ ಸಾಕಣೆ ಪದ್ಧತಿಗಳ ಕ್ಷೇತ್ರ ಮಟ್ಟದ ಅಳವಡಿಕೆಯನ್ನು ನಿರ್ಣಯಿಸಲು ಸೀಗಡಿ ರೈತರೊಂದಿಗೆ ಸಂವಾದ ನಡೆಸಲಾಯಿತು. ಒಳನಾಡಿನ ಲವಣಯುಕ್ತ ಪ್ರದೇಶಗಳಲ್ಲಿ ಸಿಗಡಿ ಸಾಕಾಣಿಕೆಯ ಸುಸ್ಥಿರ ಪ್ರಮಾಣವನ್ನು ಬೆಂಬಲಿಸಲು ಗುಣಮಟ್ಟದ ಬೀಜ ಮತ್ತು ಆಹಾರದ ಲಭ್ಯತೆ, ಸುಧಾರಿತ ಕೃಷಿ ಮೂಲಸೌಕರ್ಯ ಮತ್ತು ಸಂಘಟಿತ ಮಾರುಕಟ್ಟೆಗಳಿಗೆ ಪ್ರವೇಶ ಸೇರಿದಂತೆ ಸಮಗ್ರ  ಸಂಪರ್ಕಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ ಹರಿಯಾಣವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, 262.17 ಕೋಟಿ ರೂ.ಗಳ ಕೇಂದ್ರ ಪಾಲು ಸೇರಿದಂತೆ 760.88 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ. ಒಳನಾಡಿನ ಜಲಚರ ಸಾಕಣೆ ಸಾಮರ್ಥ್ಯವನ್ನು ಬಳಸಿಕೊಳ್ಳಲು ತಂತ್ರಜ್ಞಾನದ ಅಳವಡಿಕೆಗೆ  ಒಟ್ಟು 79.47 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ, ಇದು 456 ಆರ್.ಎ.ಎಸ್ ಮತ್ತು ಬಯೋಫ್ಲೋಕ್ ವ್ಯವಸ್ಥೆಗಳ ಸ್ಥಾಪನೆಗೆ ಕಾರಣವಾಗಿದೆ. ಇಲ್ಲಿಯವರೆಗೆ, ಒಟ್ಟು 176.32 ಕೋಟಿ ರೂ.ಗಳ ಯೋಜನಾ ಗಾತ್ರದಲ್ಲಿ  3,766 ಹೆಕ್ಟೇರ್ ಕೊಳಗಳು, 2,204 ಹೆಕ್ಟೇರ್ ಲವಣಯುಕ್ತ ಮತ್ತು ಕ್ಷಾರೀಯ ಪ್ರದೇಶವನ್ನು ಮಧ್ಯಪ್ರವೇಶಕ್ಕಾಗಿ ಗುರುತಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ರಾಜ್ಯದ ಜಲಚರ ಸಾಕಣೆಯ ಬೆಳವಣಿಗೆಯನ್ನು ಬೆಂಬಲಿಸಲು ₹98.90 ಕೋಟಿ ವೆಚ್ಚದ ಸಮಗ್ರ ಅಕ್ವಾಪಾರ್ಕ್ ನ್ನು  ಅನುಮೋದಿಸಲಾಗಿದೆ.

ಕೊಯಿಲೋತ್ತರ/ ಸುಗ್ಗಿಯ ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆಯನ್ನು ಬಲಪಡಿಸಲು ಕೋಲ್ಡ್-ಚೈನ್ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಿರ್ಸಾದಲ್ಲಿ 110 ಕೋಟಿ ರೂ.ಗಳ ಇಂಟಿಗ್ರೇಟೆಡ್ ಅಕ್ವಾಪಾರ್ಕ್ ಸ್ಥಾಪಿಸುವುದಾಗಿ ಜಿಲ್ಲಾಧಿಕಾರಿ ಘೋಷಿಸಿದರು. ಮೀನುಗಾರಿಕೆ ಗುಚ್ಚವನ್ನು ಮತ್ತಷ್ಟು ಬಲಪಡಿಸಲು ಮತ್ತು ಧೃಢವಾಗಿ ಬೆಳೆಸಲು ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸಿಗಡಿಗಳು ಭಾರತದ ಪ್ರಮುಖ ಸಮುದ್ರಾಹಾರ ರಫ್ತಾಗಿ ಮುಂದುವರೆದಿವೆ, 2024-25ರ ಅವಧಿಯಲ್ಲಿ ದೇಶದ ಸಮುದ್ರ ಉತ್ಪನ್ನಗಳ ರಫ್ತಿನಲ್ಲಿ ಸುಮಾರು ಶೇ.69 ರಷ್ಟು ಪಾಲನ್ನು  ಶೀತಲೀಕೃತ  ಸೀಗಡಿಗಳು ಹೊಂದಿವೆ. ಭಾರತದ ಸಮುದ್ರ ಉತ್ಪನ್ನಗಳ ರಫ್ತು ಕಳೆದ ದಶಕದಲ್ಲಿ ಸುಮಾರು ದ್ವಿಗುಣಗೊಂಡಿದೆ, ಇದು 2013-14ರಲ್ಲಿ 30,213 ಕೋಟಿ ರೂ.ಗಳಿಂದ 2024-25ರಲ್ಲಿ 62,408 ಕೋಟಿ ರೂ.ಗೆ ಏರಿದೆ, ಇದು ಪ್ರಮುಖವಾಗಿ  ₹43,334 ಕೋಟಿ ಮೌಲ್ಯದ ಸೀಗಡಿ ರಫ್ತಿನಿಂದ ಪ್ರೇರಿತವಾಗಿದೆ. ಗಮನಾರ್ಹವಾಗಿ, ಭಾರತದ ಸಮುದ್ರಾಹಾರ ವಲಯವು ಸುಮಾರು 658 ಸಂಸ್ಕರಣಾ ಘಟಕಗಳು, 532 ಸಂಸ್ಕರಣಾ ಪೂರ್ವ  ಘಟಕಗಳು ಮತ್ತು ತಾಜಾ, ಶೀತಲ, ಜೀವಂತ, ಒಣಗಿದ ಹಾಗು  ಉಪ್ಪು ಹಾಕಿದ ಮೀನುಗಳ ನಿರ್ವಹಣಾ ಕೇಂದ್ರಗಳ ವ್ಯಾಪಕ ಜಾಲದಿಂದ ಬೆಂಬಲಿತವಾಗಿದೆ. ದೇಶಾದ್ಯಂತ 734 ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿವೆ.


ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಪ್ರಮುಖ ಪ್ರದೇಶಗಳಲ್ಲಿ 34 ಮೀನುಗಾರಿಕೆ ಉತ್ಪಾದನೆ ಮತ್ತು ಸಂಸ್ಕರಣಾ ಕ್ಲಸ್ಟರ್ಗಳನ್ನು ಅಧಿಸೂಚಿಸಿದೆ, ಅವುಗಳೆಂದರೆ, ಹಜಾರಿಬಾಗ್ನ ಪರ್ಲ್ ಕ್ಲಸ್ಟರ್, ಲಕ್ಷದ್ವೀಪದಲ್ಲಿ ಸಮುದ್ರದ ಜೊಂಡು, ಮಧುರೈನಲ್ಲಿ ಅಲಂಕಾರಿಕ ಮೀನುಗಾರಿಕೆ, ಜಾರ್ಖಂಡ್ ನಲ್ಲಿ ಪರ್ಲ್ ಕ್ಲಸ್ಟರ್, ಮಧ್ಯಪ್ರದೇಶದ ಜಲಾಶಯ ಮೀನುಗಾರಿಕೆ, ಗುಜರಾತ್ ಮತ್ತು ಪುದುಚೇರಿಯ ಮೀನುಗಾರಿಕಾ ಬಂದರುಗಳು, ಸಿರ್ಸಾ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಲವಣಯುಕ್ತ ನೀರಿನ ಜಲಚರ ಸಾಕಣೆ, ಜಮ್ಮು ಮತ್ತು ಕಾಶ್ಮೀರದಲ್ಲಿ ತಣ್ಣೀರಿನ ಮೀನುಗಾರಿಕೆ.  ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್, ಕರ್ನಾಟಕದಲ್ಲಿ ಸಮುದ್ರ ಪಂಜರ ಕೃಷಿ, ಆಂಧ್ರಪ್ರದೇಶದಲ್ಲಿ ಉಪ್ಪುನೀರಿನ ಮೀನುಗಾರಿಕೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಟ್ಯೂನಾ, ಛತ್ತೀಸ್ಗಢದ ತಿಲಾಪಿಯಾ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಸಾವಯವ ಮೀನುಗಾರಿಕೆ, ಬಿಹಾರದಲ್ಲಿ ಜೌಗು ಭೂಮಿ ಮೀನುಗಾರಿಕೆ, ತೆಲಂಗಾಣದ ಮುರ್ರೆಲ್, ಕೇರಳದ ಪರ್ಲ್ ಸ್ಪಾಟ್, ಒಡಿಶಾದಲ್ಲಿ ಸ್ಕಾಂಪಿ, ಉತ್ತರ ಪ್ರದೇಶದ ಪಂಗಾಸಿಯಸ್, ಪಶ್ಚಿಮ ಬಂಗಾಳದಲ್ಲಿ ಒಣ ಮೀನು ಕ್ಲಸ್ಟರ್, ನಾಗಾಲ್ಯಾಂಡ್ನಲ್ಲಿ ಸಮಗ್ರ ಮೀನು ಸಾಕಾಣಿಕೆ ಕ್ಲಸ್ಟರ್.  ಮಣಿಪುರದಲ್ಲಿ ಪೆಂಗ್ಬಾ ಮೀನು ಕ್ಲಸ್ಟರ್, ಅಸ್ಸಾಂನಲ್ಲಿ ನದಿ ತೀರದ ಮೀನು ಕ್ಲಸ್ಟರ್, ಮಿಜೋರಾಂನಲ್ಲಿ ಭತ್ತ ಮತ್ತು ಮೀನು ಕ್ಲಸ್ಟರ್, ಅರುಣಾಚಲ ಪ್ರದೇಶದ ಜಲಚರ ಪ್ರವಾಸೋದ್ಯಮ ಕ್ಲಸ್ಟರ್,ಗೋವಾದಲ್ಲಿ ಅಳಿವೆ ಪಂಜರ ಕ್ಲಸ್ಟರ್, ತ್ರಿಪುರಾದಲ್ಲಿ ಪಬ್ಡಾ ಮೀನುಗಾರಿಕೆ ಕ್ಲಸ್ಟರ್ ಮತ್ತು ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ಸಹಕಾರ ಕ್ಲಸ್ಟರ್.


ಸಿರ್ಸಾ ಜಿಲ್ಲೆಯ ಲವಣಯುಕ್ತ ನೀರಿನ ಕ್ಲಸ್ಟರ್ ನಲ್ಲಿ ಫತೇಹಾಬಾದ್, ಹಿಸಾರ್ ಮತ್ತು ರೋಹ್ಟಕ್ ಪಾಲುದಾರ ಜಿಲ್ಲೆಗಳಾಗಿದ್ದು, ಪ್ರದೇಶ-ನಿರ್ದಿಷ್ಟ ಜಲಚರ ಸಾಕಣೆ ಅಭಿವೃದ್ಧಿಯು ಲವಣಯುಕ್ತ ಮತ್ತು ಕ್ಷಾರೀಯ ಪ್ರದೇಶಗಳ ಉತ್ಪಾದಕ ಸಾಮರ್ಥ್ಯವನ್ನು ಹೇಗೆ ಅನಾವರಣಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ. ಸಿಗಡಿ, ಸ್ಕ್ಯಾಂಪಿ ಮತ್ತು ಸೀಬಾಸ್ ನಂತಹ ಹೆಚ್ಚಿನ ಮೌಲ್ಯದ ಪ್ರಭೇದಗಳಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವ ಮೂಲಕ, ಕ್ಲಸ್ಟರ್ ರೈತರ ಆದಾಯವನ್ನು ಹೆಚ್ಚಿಸುವಾಗ, ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುವಾಗ ಸಮರ್ಥ ಸಂಪನ್ಮೂಲ ಬಳಕೆಯನ್ನು ಸಕ್ರಿಯಗೊಳಿಸುತ್ತದೆ.

ಹಿನ್ನೆಲೆ:

ಭಾರತದ ಒಳನಾಡು ಮೀನುಗಾರಿಕೆ ಕ್ಷೇತ್ರವು ರಾಷ್ಟ್ರೀಯ ಮೀನು ಉತ್ಪಾದನೆಯ ಮೂಲಾಧಾರವಾಗಿ ಹೊರಹೊಮ್ಮಿದ್ದು, ಒಟ್ಟು ಉತ್ಪಾದನೆಗೆ ಶೇ.75 ರಷ್ಟು ಕೊಡುಗೆ ನೀಡಿದೆ. 2024-25ರ ಆರ್ಥಿಕ ವರ್ಷದಲ್ಲಿ, ಒಳನಾಡಿನ ಮೀನು ಉತ್ಪಾದನೆಯು 153 ಲಕ್ಷ ಮೆಟ್ರಿಕ್ ಟನ್ ಆಗಿತ್ತು. 2013-14 ಮತ್ತು 2024-25ರ ನಡುವೆ, ಒಳನಾಡು ಮೀನುಗಾರಿಕೆ ಉತ್ಪಾದನೆಯು ಶೇ.150 ರಷ್ಟು ಏರಿಕೆಯಾಗಿದ್ದು, 61 ಲಕ್ಷ ಟನ್ಗಳಿಂದ 153 ಲಕ್ಷ ಟನ್ಗಳಿಗೆ ಏರಿದೆ. ಈ ವಿಸ್ತರಣೆಯು ಭಾರತದ ಒಟ್ಟಾರೆ ರಾಷ್ಟ್ರೀಯ ಮೀನು ಉತ್ಪಾದನೆಯನ್ನು 197.75 ಲಕ್ಷ ಟನ್ಗಳಿಗೆ ಹೆಚ್ಚಿಸಿದೆ, ಇದು ಇದೇ ಅವಧಿಯಲ್ಲಿ ಶೇ.105 ರಷ್ಟು ಹೆಚ್ಚಳವಾಗಿದೆ.

ಭಾರತದ ಒಳನಾಡಿನ ಜಲ ಸಂಪನ್ಮೂಲಗಳ ಸಾಮರ್ಥ್ಯವು ವಿಶಾಲವಾಗಿದೆ ಮತ್ತು ಹೆಚ್ಚಾಗಿ ಬಳಕೆಯಾಗಿಲ್ಲ. 1.95 ಲಕ್ಷ ಕಿಲೋಮೀಟರ್ ನದಿಗಳು ಮತ್ತು ಕಾಲುವೆಗಳು, 6.06 ಲಕ್ಷ ಹೆಕ್ಟೇರ್ ಉಪ್ಪುನೀರು, 3.65 ಲಕ್ಷ ಹೆಕ್ಟೇರ್ ಬೀಲ್ಗಳು ಮತ್ತು ಆಕ್ಸ್ಬೋ ಸರೋವರಗಳು, 27.56 ಲಕ್ಷ ಹೆಕ್ಟೇರ್ ಕೆರೆಗಳು ಮತ್ತು ಕೊಳಗಳು ಮತ್ತು 31.53 ಲಕ್ಷ ಹೆಕ್ಟೇರ್ ಜಲಾಶಯಗಳೊಂದಿಗೆ, ಸುಸ್ಥಿರ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಅಪಾರ ಅವಕಾಶವಿದೆ. ಇದನ್ನು ಗುರುತಿಸಿ, ಭಾರತ ಸರ್ಕಾರವು ಒಳನಾಡು ಮೀನುಗಾರಿಕೆಯನ್ನು ಈ ವಲಯಕ್ಕೆ ಸಂಬಂಧಿಸಿದ ತನ್ನ ಕಾರ್ಯತಂತ್ರದ ದೃಷ್ಟಿಕೋನದಲ್ಲಿ  ಹೃದಯಭಾಗದಲ್ಲಿ ಇರಿಸಿದೆ.

 

******


(ಪ್ರಕಟಣೆ ಐ.ಡಿ.: 2250251) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati