ರಕ್ಷಣಾ ಸಚಿವಾಲಯ
2025-26ರ ಆರ್ಥಿಕ ವರ್ಷದಲ್ಲಿ ರಕ್ಷಣಾ ರಫ್ತು ದಾಖಲೆಯ 38,424 ಕೋಟಿ ರೂ.ಗೆ ತಲುಪಿದೆ, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ.62.66 ರಷ್ಟು ಹೆಚ್ಚಳ
ರಕ್ಷಣಾ ವಲಯದ ಸಾರ್ವಜನಿಕ ಉದ್ಯಮಗಳ (ಡಿಪಿಎಸ್‌ಯು) ರಫ್ತು ಶೇ.151 ರಷ್ಟು ಏರಿಕೆ, ಖಾಸಗಿ ವಲಯದ ಕೊಡುಗೆ ಶೇ.14 ರಷ್ಟು ಹೆಚ್ಚಳ
ಭಾರತವು ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗುವತ್ತ ಮುನ್ನಡೆಯುತ್ತಿದೆ: ರಕ್ಷಣಾ ಸಚಿವರು
ಪ್ರಧಾನಮಂತ್ರಿ ಮೋದಿಯವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ಪ್ರಭಾವಶಾಲಿ ರಕ್ಷಣಾ ರಫ್ತು ಯಶೋಗಾಥೆಯನ್ನು ಭಾರತ ಬರೆಯುತ್ತಿದೆ: ರಕ್ಷಣಾ ಸಚಿವರು
ಪ್ರಕಟಣಾ ದಿನಾಂಕ:
02 APR 2026 10:11AM by PIB Bengaluru
2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 38,424 ಕೋಟಿ ರೂ.ಗಳನ್ನು ತಲುಪಿದೆ. ಇದು ಹಿಂದಿನ ಹಣಕಾಸು ವರ್ಷದ ಅಂಕಿ-ಅಂಶವಾದ 23,622 ಕೋಟಿ ರೂ.ಗಿಂತ 14,802 ಕೋಟಿ ರೂ.ಗಳ (62.66%) ಭಾರಿ ಹೆಚ್ಚಳವನ್ನು ಸೂಚಿಸುತ್ತದೆ. ಈ ಹೆಗ್ಗುರುತಿನ ಮೈಲುಗಲ್ಲಿನಲ್ಲಿ, ರಕ್ಷಣಾ ವಲಯದ ಸಾರ್ವಜನಿಕ ಉದ್ಯಮಗಳು (ಡಿಪಿಎಸ್‌ಯು) ಮತ್ತು ಖಾಸಗಿ ವಲಯವು ಕ್ರಮವಾಗಿ ಶೇ.54.84 ಮತ್ತು ಶೇ.45.16 ರಷ್ಟು ಕೊಡುಗೆ ನೀಡಿವೆ. ಭಾರತೀಯ ರಕ್ಷಣಾ ಉದ್ಯಮದ ಈ ಸಾಧನೆಯು ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರ ದೇಶಗಳಲ್ಲಿ ಒಂದಾಗಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ರಕ್ಷಣಾ ಉತ್ಪಾದನಾ ಇಲಾಖೆ, ಭಾರತೀಯ ರಕ್ಷಣಾ ರಫ್ತುದಾರರು ಮತ್ತು ಇತರ ಎಲ್ಲಾ ಮಧ್ಯಸ್ಥಗಾರರ ಈ ಅನುಕರಣೀಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಭಾರತವು ರಕ್ಷಣಾ ಉಪಕರಣಗಳ ಜಾಗತಿಕ ಉತ್ಪಾದನಾ ಕೇಂದ್ರವಾಗುವತ್ತ ಮುನ್ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ಭಾರತವು ಪ್ರಭಾವಶಾಲಿ ರಕ್ಷಣಾ ರಫ್ತು ಯಶೋಗಾಥೆಯನ್ನು ಬರೆಯುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ʻಡಿಪಿಎಸ್‌ಯುʼಗಳ ರಫ್ತು ಶೇ.151 ರಷ್ಟು ಹೆಚ್ಚಾಗಿದೆ. ಖಾಸಗಿ ಸಂಸ್ಥೆಗಳು ಶೇ.14 ರಷ್ಟು ಹೆಚ್ಚಳವನ್ನು ದಾಖಲಿಸುವ ಮೂಲಕ ತಮ್ಮ ದೃಢವಾದ ಉಪಸ್ಥಿತಿಯನ್ನು ಪ್ರದರ್ಶಿಸಿವೆ. ಕೊಡುಗೆ ಮೌಲ್ಯದ ದೃಷ್ಟಿಯಿಂದ, ಖಾಸಗಿ ವಲಯವು 17,353 ಕೋಟಿ ರೂ.ಗಳ ಮೌಲ್ಯದ ರಕ್ಷಣಾ ರಫ್ತುಗಳನ್ನು ಹೊಂದಿದ್ದರೆ, ʻಡಿಪಿಎಸ್‌ಯುʼಗಳು 21,071 ಕೋಟಿ ರೂ.ಗಳ ಕೊಡುಗೆ ನೀಡಿವೆ. ಈ ಪ್ರಮಾಣವು ಕಳೆದ ಹಣಕಾಸು ವರ್ಷದಲ್ಲಿ ಕ್ರಮವಾಗಿ 15,233 ಕೋಟಿ ರೂ. ಮತ್ತು 8,389 ಕೋಟಿ ರೂ.ಗಳಷ್ಟಿತ್ತು.
ಈ ಅತ್ಯಧಿಕ ದಾಖಲೆಯು ಕಳೆದ ಐದು ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಈ ಗಣನೀಯ ಹೆಚ್ಚಳವು ಭಾರತೀಯ ನಿರ್ಮಿತ ರಕ್ಷಣಾ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಜಾಗತಿಕ ಸ್ವೀಕಾರ ಮತ್ತು ಅಂತಾರಾಷ್ಟ್ರೀಯ ಪೂರೈಕೆ ಸರಪಳಿಗಳಲ್ಲಿ ಹೆಚ್ಚುತ್ತಿರುವ ಈ ವಲಯದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಗಳು / ಉಪ-ವ್ಯವಸ್ಥೆಗಳಿಗೆ ಯಶಸ್ವಿ ಜಾಗತಿಕ ಪಾಲುದಾರನಾಗಿರುವುದರ ಜೊತೆಗೆ, ಭಾರತವು 2025-26 ರ ಹಣಕಾಸು ವರ್ಷದ ವೇಳೆಗೆ 80ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ. ರಫ್ತುದಾರರ ಸಂಖ್ಯೆ 128 ರಿಂದ 145 ಕ್ಕೆ ಏರಿದೆ, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 13.3 ರಷ್ಟು ಹೆಚ್ಚಾಗಿದೆ.
ಸುಗಮ ವ್ಯಾಪಾರ ಮತ್ತು ರಕ್ಷಣಾ ರಫ್ತುದಾರರ ಅನುಕೂಲಕ್ಕಾಗಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಇದು ಕಾರ್ಯಕ್ಷಮತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಕ್ಷಣಾ ಉದ್ಯಮಕ್ಕೆ ದಾರಿ ಮಾಡಿಕೊಟ್ಟಿದೆ. ಈ ಬೆಳವಣಿಗೆಯ ಪಥದಲ್ಲಿ ರಕ್ಷಣಾ ರಫ್ತುದಾರರನ್ನು ಬೆಂಬಲಿಸಲು ಸರಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ರಕ್ಷಣಾ ಉತ್ಪಾದನಾ ಇಲಾಖೆಯು ರಕ್ಷಣಾ ರಫ್ತು ನಿಯಂತ್ರಣ ಪ್ರಕ್ರಿಯೆಗಳನ್ನು ಪರಿಷ್ಕೃತ ಆನ್‌ಲೈನ್ ಪೋರ್ಟಲ್ ಮೂಲಕ ಸುಗಮಗೊಳಿಸಿದೆ. ಜೊತೆಗೆ ದೃಢೀಕರಣಗಳಿಗಾಗಿ ಸರಳೀಕೃತ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಜಾರಿಗೊಳಿಸಿದೆ.
*****
(ಪ್ರಕಟಣೆ ಐ.ಡಿ.: 2248195)
ವಿಸಿಟರ್ ಕೌಂಟರ್ : 12