ಪಂಚಾಯತ್ ರಾಜ್ ಸಚಿವಾಲಯ
ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಉತ್ತೇಜನಕ್ಕೆ ಮತ್ತಷ್ಟು ಬಲ: 3 ಲಕ್ಷ ಕೋಟಿ ರೂ.ಗೂ ಅಧಿಕ ಆನ್‌ಲೈನ್ ಪಾವತಿ ದಾಖಲಿಸಿದ ʻಇ-ಗ್ರಾಮ್ ಸ್ವರಾಜ್ʼ; ʻಸಭಾಸಾರʼ ಸಾಧನ 23 ಭಾಷೆಗಳಿಗೆ ವಿಸ್ತರಣೆ
ಪ್ರಕಟಣಾ ದಿನಾಂಕ:
31 MAR 2026 10:05AM by PIB Bengaluru
ಪಂಚಾಯತ್ ರಾಜ್ ಸಚಿವಾಲಯವು ದೇಶಾದ್ಯಂತ ಡಿಜಿಟಲ್ ಮತ್ತು ಎಲ್ಲರನ್ನೂ ಒಳಗೊಂಡ ಗ್ರಾಮೀಣ ಆಡಳಿತವನ್ನು ಮುನ್ನಡೆಸುವಲ್ಲಿ ಎರಡು ಮಹತ್ವದ ಮೈಲುಗಲ್ಲುಗಳನ್ನು ಸಾಧಿಸಿದೆ. ಭಾರತದ ಗ್ರಾಮ ಪಂಚಾಯಿತಿಗಳು ಡಿಜಿಟಲ್ ಆಡಳಿತದಲ್ಲಿ ಪ್ರಮುಖ ಜಿಗಿತಕ್ಕೆ ಸಾಕ್ಷಿಯಾಗುತ್ತಿವೆ, ʻಇ-ಗ್ರಾಮ್‌ಸ್ವರಾಜ್ʼ ವೇದಿಕೆ ಮೂಲಕ 3 ಲಕ್ಷ ಕೋಟಿ ರೂ.ಗಳಿಗೂ ಅಧಿಕ (ಒಟ್ಟಾರೆ) ಪಾವತಿಗಳನ್ನು ಮಾಡಲಾಗಿದೆ. ಇದೇವೇಳೆ, ಕೃತಕ ಬುದ್ಧಿಮತ್ತೆ ಆಧರಿತ ʻಸಭಾಸಾರ್ʼ ಸಾಧನವು ಈಗ 23 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇದು ಆರ್ಥಿಕ ಪಾರದರ್ಶಕತೆ ಮತ್ತು ತಳಮಟ್ಟದಲ್ಲಿ ಸಮಗ್ರ ಭಾಗವಹಿಸುವಿಕೆ ಎರಡನ್ನೂ ಬಲಪಡಿಸುತ್ತದೆ.
ತಂತ್ರಜ್ಞಾನ-ಆಧರಿತ ಆಡಳಿತದತ್ತ ಪ್ರಮುಖ ದಾಪುಗಾಲಾದ ʻಇ-ಗ್ರಾಮ್ ಸ್ವರಾಜ್ʼ ಮೂಲಕ ನೇರವಾಗಿ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರಿಗೆ ನೈಜ ಸಮಯದಲ್ಲಿ ಪಾವತಿಗಳನ್ನು ಮಾಡಲಾಗಿದೆ. ಇದು ಸಂಪೂರ್ಣ ಡಿಜಿಟಲ್ ನಿಗಾ ಖಚಿತಪಡಿಸುತ್ತದೆ. ʻಇ-ಪಂಚಾಯತ್ʼಮಿಷನ್ ಮೋಡ್ʼ ಯೋಜನೆಯ ಅಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಜೊತೆ ಇದನ್ನು ಸಂಯೋಜಿಸಲಾಗಿದೆ. ಈ ವೇದಿಕೆಯು ಪಂಚಾಯತ್ ಮಟ್ಟದಲ್ಲಿ ಯೋಜನೆ, ಲೆಕ್ಕಪತ್ರ ಮತ್ತು ವೆಚ್ಚವನ್ನು ಸುವ್ಯವಸ್ಥಿತಗೊಳಿಸಿದೆ. ಜೊತೆಗೆ, ನಗದು ಆಧಾರಿತ ಮತ್ತು ಕಾಗದ-ಆಧರಿತ ಪ್ರಕ್ರಿಯೆಗಳನ್ನು ವೇಗದ, ಜವಾಬ್ದಾರಿಯುತ ಮತ್ತು ವಂಚನೆ-ನಿರೋಧಕ ವ್ಯವಸ್ಥೆಯಾಗಿ ಬದಲಾಯಿಸಿದೆ. 2025-26ರ ಆರ್ಥಿಕ ವರ್ಷದಲ್ಲಿ, ಪಂಚಾಯತ್ ರಾಜ್ ಸಂಸ್ಥೆಗಳು ʻಇ-ಗ್ರಾಮ್‌ಸ್ವರಾಜ್-ಪಿಎಫ್ಎಂಎಸ್ʼ ವ್ಯವಸ್ಥೆಯ ಮೂಲಕ ಮೂಲಕ 53,342 ಕೋಟಿ ರೂ.ಗಳನ್ನು ವರ್ಗಾಯಿಸಿವೆ. 2,55,254 ಗ್ರಾಮ ಪಂಚಾಯಿತಿಗಳು ತಮ್ಮ ಅಭಿವೃದ್ಧಿ ಯೋಜನೆಗಳನ್ನು ಈ ವೇದಿಕೆಯಲ್ಲಿ ಅಪ್‌ಲೋಡ್ ಮಾಡಿವೆ. ಒಟ್ಟಾರೆಯಾಗಿ, 2,59,798 ಪಂಚಾಯತ್ ರಾಜ್ ಸಂಸ್ಥೆಗಳನ್ನು ಸೇರ್ಪಡೆಗೊಳಿಸಲಾಗಿದೆ. 2025-26ರ ಹಣಕಾಸು ವರ್ಷದಲ್ಲಿ 2,50,807 ಪಂಚಾಯತ್ ರಾಜ್ ಸಂಸ್ಥೆಗಳು ಇ-ಗ್ರಾಮ್ ಸ್ವರಾಜ್ ಮೂಲಕ ಆನ್‌ಲೈನ್ ಪಾವತಿಗಳನ್ನು ಮಾಡಿವೆ. ಈ ವೇದಿಕೆಯಲ್ಲಿ 1,60,79,737 ಮಾರಾಟಗಾರರು ನೋಂದಾಯಿಸಿಕೊಂಡಿದ್ದು, ಇದು ಅದರ ಪ್ರಮಾಣ ಮತ್ತು ವ್ಯಾಪಕ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.
ಈ ಬದಲಾವಣೆಗೆ ಪೂರಕವಾಗಿ, 2025ರ ಆಗಸ್ಟ್ 14ರಂದು ಪ್ರಾರಂಭಿಸಲಾದ ಸಚಿವಾಲಯದ ಕೃತಕ ಬುದ್ಧಿಮತ್ತೆ ಚಾಲಿತ ʻಧ್ವನಿಯಿಂದ ಅಕ್ಷರಕ್ಕೆ ಸಭೆಯ ಸಾರಾಂಶʼ ಸಾಧನವಾದ ʻಸಭಾಸಾರ್ʼ 13 ರಿಂದ 23 ಭಾರತೀಯ ಭಾಷೆಗಳಿಗೆ ವಿಸ್ತರಿಸಿದೆ. ಹೊಸದಾಗಿ ಸೇರಿಸಲಾದ ಭಾಷೆಗಳಲ್ಲಿ ಅಸ್ಸಾಮಿ, ಬೋಡೋ, ಡೋಗ್ರಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಣಿಪುರಿ, ನೇಪಾಳಿ, ಸಂತಾಲಿ ಮತ್ತು ಸಿಂಧಿ ಸೇರಿವೆ. ಇದು ಗ್ರಾಮಸಭೆಯ ಕಲಾಪಗಳನ್ನು ಸ್ಥಳೀಯ ಭಾಷೆಗಳಲ್ಲಿ ದಾಖಲಿಸಲು ಅನುವು ಮಾಡಿಕೊಡುತ್ತದೆ. ʻಸಭಾಸಾರ್ʼ ಸಾಧನವು ನಡಾವಳಿಗಳು, ಹಾಜರಾತಿ, ನಿರ್ಣಯಗಳು ಮತ್ತು ಕಾರ್ಯಸೂಚಿಗಳ ಸ್ವಯಂಚಾಲಿತ ರೆಕಾರ್ಡಿಂಗ್ ಅನ್ನು ಸುಗಮಗೊಳಿಸುತ್ತದೆ. ಇದು ಗ್ರಾಮ ಸಭೆಗಳ ಪ್ರಕ್ರಿಯೆಗಳಿಗೆ ಪ್ರವೇಶಾನುಕೂಲತೆ ಹಾಗೂ ಭಾಗವಹಿಸುವಿಕೆ ಹೆಚ್ಚಳಕ್ಕೆ ಅನುವು ಮಾಡಿಕೊಡುತ್ತದೆ. ಹಿಂದಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಈ ವೇದಿಕೆ ಲಭ್ಯವಿದ್ದು, ಈಗ ಭಾರತದಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳ ಸಂಪೂರ್ಣ ಭಾಷಾ ವೈವಿಧ್ಯತೆಯನ್ನು ಒಳಗೊಂಡಿದೆ. 2026ರ ಜನವರಿ 29ರಂತೆ, 1,11,486 ಗ್ರಾಮ ಪಂಚಾಯಿತಿಗಳು ಈಗಾಗಲೇ ಸಾರಾಂಶವನ್ನು ಪೂರೈಸಲು ವೇದಿಕೆಯನ್ನು ಬಳಸಿವೆ. ಈ ವೇದಿಕೆಯು ರಾಷ್ಟ್ರೀಯ ಮನ್ನಣೆಯನ್ನು ಸಹ ಪಡೆದಿದೆ. ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ʻದಿ ಇಂಡಿಯನ್ ಎಕ್ಸ್‌ಪ್ರೆಸ್ ಸಮೂಹದ ʻಟೆಕ್ನಾಲಜಿ ಸಭಾ ಎಕ್ಸಲೆನ್ಸ್ ಅವಾರ್ಡ್ಸ್-2026ʼ ಗಳಿಸಿದೆ. ಜೊತೆಗೆ, ಸಾಮಾಜಿಕ ಪರಿಣಾಮಕ್ಕಾಗಿ ʻಎಐʼ ವಿಭಾಗದಲ್ಲಿ ʻಎಕನಾಮಿಕ್ ಟೈಮ್ಸ್ ಗೌಟೆಕ್ ಅವಾರ್ಡ್ಸ್-2026ʼನ ಬೆಳ್ಳಿ ಪ್ರಶಸ್ತಿಯನ್ನು ಪಡೆದಿದೆ.
ಈ ಬೆಳವಣಿಗೆಗಳು ಡಿಜಿಟಲ್ ಸಶಕ್ತ, ಪಾರದರ್ಶಕ ಮತ್ತು ಸಮಗ್ರ ಪಂಚಾಯತ್‌ಗಳ ಕಡೆಗೆ ಪಂಚಾಯತ್ ರಾಜ್ ಸಚಿವಾಲಯದ ನಿರಂತರ ಪ್ರಯತ್ನವನ್ನು ಒತ್ತಿಹೇಳುತ್ತವೆ. ಆರ್ಥಿಕ ಆಡಳಿತ ಮತ್ತು ತಳಮಟ್ಟದಲ್ಲಿ ಪ್ರಜಾಪ್ರಭುತ್ವದ ಭಾಗವಹಿಸುವಿಕೆ ಎರಡನ್ನೂ ಬಲಪಡಿಸುತ್ತವೆ.
*****
(ಪ್ರಕಟಣೆ ಐ.ಡಿ.: 2247218)
ವಿಸಿಟರ್ ಕೌಂಟರ್ : 20