ಪ್ರಧಾನ ಮಂತ್ರಿಯವರ ಕಛೇರಿ
ಮಾರ್ಚ್ 28 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಸುಮಾರು 11,200 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಸ್ತೆ, ರೈಲು, ಮೆಟ್ರೋ ಮತ್ತು ಪ್ರಾದೇಶಿಕ ಸಾರಿಗೆ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಮೂಲಕ ಬಹು-ಮಾದರಿ ಸಾರಿಗೆ ಕೇಂದ್ರವಾಗಿ ಯೋಜಿಸಲಾಗಿದೆ
ವಿಮಾನ ನಿಲ್ದಾಣವು ಬಹು-ಮಾದರಿ ಸರಕು ಕೇಂದ್ರವನ್ನು ಸಹ ಒಳಗೊಂಡಿದ್ದು, ಇದು ವಾರ್ಷಿಕವಾಗಿ 2.5 ಲಕ್ಷ ಮೆಟ್ರಿಕ್ ಟನ್ ಸರಕು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸುಮಾರು 18 ಲಕ್ಷ ಮೆಟ್ರಿಕ್ ಟನ್‌ಗಳಿಗೆ ವಿಸ್ತರಿಸಬಹುದಾಗಿದೆ
ವಿಮಾನ ನಿಲ್ದಾಣವು ಆರಂಭದಲ್ಲಿ ವಾರ್ಷಿಕ 12 ದಶಲಕ್ಷ ಪ್ರಯಾಣಿಕರ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು (ಎಂಪಿಪಿಎ) ಹೊಂದಿರುತ್ತದೆ, ಇದನ್ನು 70 ʻಎಂಪಿಪಿಎʼ ವರೆಗೆ ವಿಸ್ತರಿಸಬಹುದಾಗಿದೆ
ಪ್ರಕಟಣಾ ದಿನಾಂಕ:
26 MAR 2026 9:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 28ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30 ರ ಸುಮಾರಿಗೆ ಅವರು ಗೌತಮ್ ಬುದ್ಧ ನಗರದ ಜೇವಾರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲಿ ನಡೆದಾಡಿ ಪರಿಶೀಲಿಸಲಿದ್ದಾರೆ. ನಂತರ, ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿಯವರು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ಜಾಗತಿಕ ವಾಯುಯಾನ ಕೇಂದ್ರವಾಗುವತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಪ್ರಮುಖ ಅಂತರರಾಷ್ಟ್ರೀಯ ಹೆಬ್ಬಾಗಿಲಾಗಿ ರೂಪಿಸಲಾದ ಈ ವಿಮಾನ ನಿಲ್ದಾಣವು, ದೇಶದ ವಿಮಾನ ನಿಲ್ದಾಣ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಹಾಗೂ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದೆಹಲಿ ಎನ್‌ಸಿಆರ್ ಪ್ರದೇಶದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು ʻಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣʼಕ್ಕೆ ಪೂರಕವಾಗಿದೆ. ಒಟ್ಟಾಗಿ, ಈ ಎರಡು ವಿಮಾನ ನಿಲ್ದಾಣಗಳು ಸಮಗ್ರ ವಾಯುಯಾನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ದಟ್ಟಣೆಯನ್ನು ಸರಾಗಗೊಳಿಸುತ್ತವೆ, ಪ್ರಯಾಣಿಕರ ಸಾಮರ್ಥ್ಯವನ್ನು ವಿಸ್ತರಿಸುತ್ತವೆ ಮತ್ತು ಪ್ರಮುಖ ಜಾಗತಿಕ ವಾಯುಯಾನ ಕೇಂದ್ರಗಳಲ್ಲಿ ದೆಹಲಿಗೆ ಸ್ಥಾನ ಕಲ್ಪಿಸಲಿವೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲಿ ಒಂದಾಗಿದೆ. ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸುಮಾರು 11,200 ಕೋಟಿ ರೂ.ಗಳ ಒಟ್ಟು ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣವು ಆರಂಭದಲ್ಲಿ ವರ್ಷಕ್ಕೆ 12 ದಶಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ (ಎಂಪಿಪಿಎ), ಪೂರ್ಣ ಅಭಿವೃದ್ಧಿಯ ನಂತರ 70 ಎಂಪಿಪಿಎ ವರೆಗೆ ಇದನ್ನು ಹೆಚ್ಚಿಸಬಹುದಾಗಿದೆ. ಇದು 3,900 ಮೀಟರ್ ರನ್‌ವೇ ಅನ್ನು ಹೊಂದಿದೆ, ಜೊತೆಗೆ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ಐಎಲ್ಎಸ್) ಮತ್ತು ಸುಧಾರಿತ ಏರ್‌ಫೀಲ್ಡ್ ಲೈಟಿಂಗ್ ಸೇರಿದಂತೆ ಆಧುನಿಕ ಪಥನಿರ್ದೇಶನ ವ್ಯವಸ್ಥೆಗಳನ್ನು ಹೊಂದಿದೆ. ಆ ಮೂಲಕ ದಕ್ಷ, ಸರ್ವಋತು ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.
ಈ ವಿಮಾನ ನಿಲ್ದಾಣವು ಸಮಗ್ರ ಕಾರ್ಗೋ ಟರ್ಮಿನಲ್ ಮತ್ತು ಲಾಜಿಸ್ಟಿಕ್ಸ್ ವಲಯಗಳನ್ನು ಒಳಗೊಂಡಿರುವ ಬಹು-ಮಾದರಿ ಕಾರ್ಗೋ ಹಬ್ ಸೇರಿದಂತೆ ದೃಢವಾದ ಕಾರ್ಗೋ ಪರಿಸರ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇದು ವಾರ್ಷಿಕವಾಗಿ 2.5 ಲಕ್ಷ ಮೆಟ್ರಿಕ್ ಟನ್ ಸರಕು ನಿರ್ವಹಣೆ ಸಾಮರ್ಥ್ಯ ಹೊಂದಿದ್ದು, ಇದನ್ನು ಸುಮಾರು 18 ಲಕ್ಷ ಮೆಟ್ರಿಕ್ ಟನ್‌ಗಳಿಗೆ ವಿಸ್ತರಿಸಬಹುದು. ಜೊತೆಗೆ 40 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ ವಿಶೇಷವಾದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್‌ಒ) ಸೌಲಭ್ಯವನ್ನು ಒಳಗೊಂಡಿದೆ.
ಸುಸ್ಥಿರ ಮತ್ತು ಭವಿಷ್ಯ-ಸಿದ್ಧ ಮೂಲಸೌಕರ್ಯ ಯೋಜನೆಯಾಗಿ ವಿನ್ಯಾಸಗೊಳಿಸಲಾದ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂಧನ-ದಕ್ಷ ವ್ಯವಸ್ಥೆಗಳು ಮತ್ತು ಜವಾಬ್ದಾರಿಯುತ ಪರಿಸರ ಅಭ್ಯಾಸಗಳನ್ನು ಸಂಯೋಜಿಸುವ ಮೂಲಕ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಘಟಕವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಇದರ ವಾಸ್ತುಶಿಲ್ಪದ ವಿನ್ಯಾಸವು ಭಾರತೀಯ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ, ಸಾಂಪ್ರದಾಯಿಕ ಘಾಟ್‌ಗಳು ಮತ್ತು ಹವೇಲಿಗಳನ್ನು ನೆನಪಿಸುವ ಅಂಶಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ ಸೌಂದರ್ಯದ ಜತೆಗೆ ಆಧುನಿಕ ಮೂಲಸೌಕರ್ಯಗಳ ಸಂಗಮವನ್ನು ಇಲ್ಲಿ ಕಾಣಬಹುದು.
ʻಯಮುನಾ ಎಕ್ಸ್‌ಪ್ರೆಸ್‌ವೇʼ ಉದ್ದಕ್ಕೂ ವ್ಯೂಹಾತ್ಮಕವಾಗಿ ನೆಲೆಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆ, ರೈಲು, ಮೆಟ್ರೋ ಮತ್ತು ಪ್ರಾದೇಶಿಕ ಸಾರಿಗೆ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ ಬಹು-ಮಾದರಿ ಸಾರಿಗೆ ಕೇಂದ್ರವಾಗಿ ಯೋಜಿಸಲಾಗಿದೆ. ಪ್ರಯಾಣಿಕರು ಮತ್ತು ಸರಕುಗಳಿಗೆ ಸಮರ್ಥ ಸಂಪರ್ಕವನ್ನು ಇದು ಖಾತರಿಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2245619)
ವಿಸಿಟರ್ ಕೌಂಟರ್ : 5