ಕೃಷಿ ಸಚಿವಾಲಯ
ಜಾಗತಿಕ ಬಿಕ್ಕಟ್ಟಿನ ನಡುವೆ ಕೃಷಿ ಕ್ಷೇತ್ರದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
'ರೈತ ಗುರುತಿನ ಚೀಟಿ' ಅನುಷ್ಠಾನವನ್ನು ತ್ವರಿತಗೊಳಿಸಲು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಅಧಿಕಾರಿಗಳಿಗೆ ನಿರ್ದೇಶನ
ಕೃಷಿ-ರಾಸಾಯನಿಕಗಳ ಪೂರೈಕೆ ಮತ್ತು ಬೀಜ-ಒಣಗಿಸುವ ಪ್ರಕ್ರಿಯೆಗೆ ಅಗತ್ಯವಾದ ಅನಿಲಗಳ ಲಭ್ಯತೆಯ ಪರಾಮರ್ಶೆಯನ್ನು ಸಹ ಸಭೆಯಲ್ಲಿ ನಡಸಲಾಯಿತು
ಪ್ರಕಟಣಾ ದಿನಾಂಕ:
25 MAR 2026 1:37PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ತಮ್ಮ ನಿವಾಸದಲ್ಲಿ ಮಹತ್ವದ ಪರಿಶೀಲನಾ ಸಭೆಯನ್ನು ನಡೆಸಿದರು. ಪ್ರಸ್ತುತ ಜಾಗತಿಕ ಅಸ್ಥಿರತೆಯ ನಡುವೆ ಭಾರತೀಯ ಕೃಷಿ ವಲಯ ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುವುದು, ಮುಂಬರುವ ಮುಂಗಾರು ಋತುವಿಗೆ ಕಾರ್ಯತಂತ್ರದ ಸನ್ನದ್ಧತೆಯನ್ನು ಖಾತ್ರಿಪಡಿಸುವುದು ಈ ಸಭೆಯ ಪ್ರಾಥಮಿಕ ಉದ್ದೇಶವಾಗಿತ್ತು.

ಸಭೆಯಲ್ಲಿ, ಕೇಂದ್ರ ಕೃಷಿ ಸಚಿವರು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು. ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರಿಗಳು ಸಕ್ರಿಯ ಪಾತ್ರ ವಹಿಸಬೇಕು ಎಂದು ಸಚಿವರು ಹೇಳಿದರು.

ಸಭೆಯ ಮುಖ್ಯಾಂಶಗಳು ಮತ್ತು ನಿರ್ಧಾರಗಳು:
ರಸಗೊಬ್ಬರ ಪೂರೈಕೆ ಮತ್ತು ರೈತರ ಗುರುತಿನ ಚೀಟಿ:
ರಸಗೊಬ್ಬರಗಳ ಸಮಾನ ಮತ್ತು ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಒತ್ತಿ ಹೇಳಿದರು. ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು 'ರೈತ ಗುರುತಿನ ಚೀಟಿ'ಗಳ ವಿತರಣೆ ಕೆಲಸವನ್ನು ತ್ವರಿತಗೊಳಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಉದ್ದೇಶಕ್ಕಾಗಿ ಶೀಘ್ರದಲ್ಲೇ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರೊಂದಿಗೆ ಸಭೆ ನಡೆಸುವುದಾಗಿ ಅವರು ಹೇಳಿದರು.
ಮಾರುಕಟ್ಟೆ ಪ್ರಭಾವಶೀಲತೆ ವಿರುದ್ಧ ನಿರ್ಣಾಯಕ ಕ್ರಮಗಳು - ಕಾಳಸಂತೆಯಲ್ಲಿ ಮಾರಾಟ ಮತ್ತು ಅಕ್ರಮ ದಾಸ್ತಾನು ನಿಗ್ರಹ
ಜಾಗತಿಕ ಬಿಕ್ಕಟ್ಟಿನ ಲಾಭ ಪಡೆದು ರಸಗೊಬ್ಬರಗಳು ಮತ್ತು ಬೀಜಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಶ್ರೀ ಚೌಹಾಣ್ ಹೇಳಿದರು.
ಬೀಜ ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ಗೆ ನೆರವು:
ಕೃಷಿ-ರಾಸಾಯನಿಕಗಳ ಲಭ್ಯತೆ ಮತ್ತು ಬೀಜವನ್ನು ಒಣಗಿಸಲು ಅಗತ್ಯವಾದ ಅನಿಲಗಳ ಲಭ್ಯತೆ ಬಗ್ಗೆ ಸಭೆ ಪರಿಶೀಲಿಸಿತು. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಪ್ಯಾಕೇಜಿಂಗ್ ಸಾಮಗ್ರಿಗಳಿಗೆ, ವಿಶೇಷವಾಗಿ ಹಾಲು ಮತ್ತು ಇತರ ಕೃಷಿ ಉತ್ಪನ್ನಗಳಿಗೆ ಕೊರತೆಯಾಗಬಾರದು ಎಂದು ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಒತ್ತಿ ಹೇಳಿದರು. ಇದನ್ನು ಖಚಿತಪಡಿಸಿಕೊಳ್ಳಲು, ಪೆಟ್ರೋಲಿಯಂ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷ ಘಟಕದ ರಚನೆ:
ಕೃಷಿ ಕ್ಷೇತ್ರದ ಹಗಲಿರುಳು ಮೇಲ್ವಿಚಾರಣೆಗಾಗಿ 'ವಿಶೇಷ ಘಟಕ'ವನ್ನು ಸ್ಥಾಪಿಸಲಾಗಿದೆ. ಈ ಕೋಶವು ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳ ಲಭ್ಯತೆಯ ಬಗ್ಗೆ ಕೇಂದ್ರ ಕೃಷಿ ಸಚಿವರಿಗೆ ವಾರಕ್ಕೊಮ್ಮೆ ವರದಿಯನ್ನು ಸಲ್ಲಿಸುತ್ತದೆ.
ಶ್ರೀ ಚೌಹಾಣ್ ಅವರು ತಮ್ಮ ಮಾತು ಮುಗಿಸುವ ಮುನ್ನ, ರೈತ ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಕೃಷಿ ಸಂಪನ್ಮೂಲಗಳನ್ನು ಸಮಯೋಚಿತವಾಗಿ ತಲುಪಿಸುವ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು.
*****
(ಪ್ರಕಟಣೆ ಐ.ಡಿ.: 2244984)
ವಿಸಿಟರ್ ಕೌಂಟರ್ : 14