ಕೃಷಿ ಸಚಿವಾಲಯ
ಅನೇಕ ರೈತರ ಆದಾಯವು ದ್ವಿಗುಣಗೊಂಡಿದೆ, ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಸಂಸತ್ತಿಗೆ ಮಾಹಿತಿ
ರೈತರಿಗೆ ಅವರ ಬೆವರಿನ ಸಂಪೂರ್ಣ ಮೌಲ್ಯವನ್ನು ನೀಡಲು ಮೋದಿ ಸರ್ಕಾರ ಬದ್ಧವಾಗಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ನಮ್ಮ ಸರ್ಕಾರ ರೈತರಿಗೆ ಕೃಷಿ ವೆಚ್ಚದ ಜತೆಗೆ ಶೇ.50 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಿದೆ: ಶ್ರೀ ಶಿವರಾಜ್ ಸಿಂಗ್
ದ್ವಿದಳ ಧಾನ್ಯಗಳು-ಎಣ್ಣೆಕಾಳುಗಳಿಂದ ಹಿಡಿದು ಹಣ್ಣು-ತರಕಾರಿಗಳವರೆಗೆ, ರೈತರ ಹಿತದೃಷ್ಟಿಯಿಂದ ಪ್ರತಿ ಬೆಳೆಗೂ ಸದೃಢ ಭದ್ರತಾ ಕವಚ ಒದಗಿಸಲಾಗಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್
ʻಪಿಎಂ-ಆಶಾʼ, ಬೆಳೆ ವಿಮೆ ಮತ್ತು ಬೆಲೆ ವ್ಯತ್ಯಾಸ ಯೋಜನೆಗಳು ರೈತರ ಆದಾಯವನ್ನು ಸುರಕ್ಷಿತಗೊಳಿಸುತ್ತವೆ; ಮೋದಿ ಸರ್ಕಾರ ಪ್ರತಿಯೊಂದು ಬಿಕ್ಕಟ್ಟಿನ ಸಮಯದಲ್ಲೂ ನಮ್ಮ 'ಅನ್ನದಾತʼರೊಂದಿಗೆ ನಿಲ್ಲುತ್ತದೆ - ಶ್ರೀ ಶಿವರಾಜ್ ಸಿಂಗ್ ಚೌಹಾಣ್
ದಾಖಲೆಯ ಪ್ರಮಾಣದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ, ನೇರ ನೆರವು ಹಾಗೂ ಡಿಜಿಟಲ್ ರೂಪದ ರೈತರ ಗುರುತಿನ ಚೀಟಿಯು ರೈತರಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ: ಶ್ರೀ ಚೌಹಾಣ್
ಪ್ರತಿಯೊಂದು ಪರಿಸ್ಥಿತಿಯಲ್ಲೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ: ಲೋಕಸಭೆಯಲ್ಲಿ ಬದ್ಧತೆ ವ್ಯಕ್ತಪಡಿಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್
ಪ್ರಕಟಣಾ ದಿನಾಂಕ:
24 MAR 2026 3:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. 'ಅನ್ನದಾತʼರನ್ನು ಬಿಕ್ಕಟ್ಟಿನಿಂದ ರಕ್ಷಿಸಲು ಎಲ್ಲಾ ಹಂತಗಳಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಲೋಕಸಭೆಯಲ್ಲಿ ಹೇಳಿದರು. ʻಕನಿಷ್ಠ ಬೆಂಬಲ ಬೆಲೆʼ(ಎಂಎಸ್‌ಪಿ), ʻಪಿಎಂ-ಆಶಾʼ, ʻಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆʼ, ಬೆಲೆ ವ್ಯತ್ಯಾಸ ಪಾವತಿ ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಲ್ಲಿ ದಾಖಲೆಯ ಖರೀದಿಯ ಮೂಲಕ ಎನ್‌ಡಿಎ ಸರ್ಕಾರವು ರೈತರ ಆದಾಯಕ್ಕೆ ಬಲವಾದ ಭದ್ರತಾ ಕವಚವನ್ನು ಒದಗಿಸಿದೆ. ಜೊತೆಗೆ ರೈತರ ಆದಾಯವು ದ್ವಿಗುಣಗೊಂಡಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಸಂಸದರು ಎತ್ತಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ವರ್ಷಗಳಲ್ಲಿ ಹಲವಾರು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಕೃಷಿ ಉತ್ಪಾದನೆ ಸುಮಾರು ಶೇ.44ರಷ್ಟು ಹೆಚ್ಚಾಗಿದೆ. ರೈತರ ಉತ್ಪಾದಕತೆ ಮತ್ತು ಆದಾಯವನ್ನು ಏಕಕಾಲದಲ್ಲಿ ಹೆಚ್ಚಿಸಲು ಸಮಗ್ರ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಹಿಂದಿನ ಸರ್ಕಾರಗಳ ಕಾಲದಲ್ಲಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ನೆಪಗಳನ್ನು ನೀಡಲಾಗುತ್ತಿತ್ತು. ಶೇಕಡಾ 50ಕ್ಕಿಂತ ಹೆಚ್ಚು ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದರಿಂದ ಮಾರುಕಟ್ಟೆಯನ್ನು ವಿರೂಪಗೊಳಿಸಿದಂತಾಗುತ್ತದೆ ಎಂದು ಹೇಳುವ ಮಟ್ಟಿಗೆ ಹೋಗಿತ್ತು ಎಂದು ಶ್ರೀ ಚೌಹಾಣ್ ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಗಣನೆಗೆ ತೆಗೆದುಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲು ತೀರ್ಮಾನಿಸಿತು ಮತ್ತು ಅದನ್ನು ನಿರಂತರವಾಗಿ ಜಾರಿಗೆ ತಂದಿತು. ಆ ಮೂಲಕ ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಆದಾಯವನ್ನು ಪಡೆಯಲು ಅನುವು ಮಾಡಿಕೊಟ್ಟಿತು.
ಕೇವಲ ಎಂಎಸ್‌ಪಿʼ ಘೋಷಿಸಿದರಷ್ಟೇ ಸಾಲದು, ವಾಸ್ತವವಾಗಿ ಆ ಬೆಲೆಯಲ್ಲಿ ಖರೀದಿಸುವುದು ಅತ್ಯಂತ ಮುಖ್ಯವಾಗಿದೆ. ಮತ್ತು ಈ ನಿಟ್ಟಿನಲ್ಲಿ ಸರ್ಕಾರವು ಗೋಧಿ, ಭತ್ತ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಿಗೆ ಮಾತ್ರವಲ್ಲದೆ ಇತರ ಹಲವಾರು ಬೆಳೆಗಳನ್ನು ದಾಖಲೆಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರಿಗೆ ನೇರ ಪ್ರಯೋಜನಗಳನ್ನು ಒದಗಿಸಿದೆ ಎಂದು ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ತಿಳಿಸಿದರು. ಹಾಲಿ ಸರ್ಕಾರದ ತನ್ನ ಉಪಕ್ರಮಗಳನ್ನು ಕೇವಲ ಧಾನ್ಯಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಬದಲಿಗೆ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ಸಕ್ರಿಯವಾಗಿ ಮಧ್ಯಪ್ರವೇಶಿಸುತ್ತಿದೆ, ಇದರಿಂದಾಗಿ ಯಾವುದೇ ಬೆಳೆಯ ಬೆಲೆ ಕುಸಿದರೆ ರೈತರು ನಷ್ಟವನ್ನು ಅನುಭವಿಸುವುದಿಲ್ಲ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾದ ಮಹತ್ವದ ಉಪಕ್ರಮವಾದ ʻಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನʼ( ಪಿಎಂ-ಆಶಾ) ಯೋಜನೆಯು ಯಾವುದೇ ಬೆಳೆಯ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಮಟ್ಟಕ್ಕೆ ತಲುಪಿದಾಗ, ಅಂತಹ ಬೆಳೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ಶ್ರೀ ಚೌಹಾಣ್ ಮಾಹಿತಿ ನೀಡಿದರು. ʻಪಿಎಂ-ಆಶಾʼ ಅಡಿಯಲ್ಲಿ ಮೂರು ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ - ಬೆಲೆ ಬೆಂಬಲ ಯೋಜನೆಯ ಮೂಲಕ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ನೇರವಾಗಿ ಖರೀದಿಸುವುದು; ಬೆಲೆ ವ್ಯತ್ಯಾಸ ಪಾವತಿ ಕಾರ್ಯವಿಧಾನದ ಮೂಲಕ ʻಎಂಎಸ್‌ಪಿʼ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹಾಗೂ ಮೂರನೆಯದಾಗಿ, ಅಗತ್ಯವಿದ್ದರೆ ಇತರ ವಿಧಾನಗಳ ಮೂಲಕ ರೈತರಿಗೆ ರಕ್ಷಣೆ ನೀಡುವುದು ಎಂದು ಅವರು ಹೇಳಿದರು.
ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಇತ್ತೀಚಿನ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ, ರಾಜ್ಯ ಸರ್ಕಾರವು ಕೇಂದ್ರದ ನೀತಿ ಬೆಂಬಲಿತ ಡಿಜಿಟಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ರೈತರ ಗುರುತಿನ ಚೀಟಿಯ ಮೂಲಕ ಕೇವಲ ಐದು ದಿನಗಳಲ್ಲಿ 14,000 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಿದೆ. ಆ ಮೂಲಕ ಅನ್ನದಾತರಿಗೆ ತ್ವರಿತ ಪರಿಹಾರವನ್ನು ಒದಗಿಸಿದೆ ಎಂದು ಮಾಹಿತಿ ನೀಡಿದರು.
ಒಂದೆಡೆ, ರಾಜ್ಯ ಸರ್ಕಾರಗಳು ʻಎಸ್‌ಡಿಆರ್‌ಎಫ್ʼನಂತಹ ವ್ಯವಸ್ಥೆಗಳ ಮೂಲಕ ಬೆಳೆ ನಷ್ಟವನ್ನು ಸರಿದೂಗಿಸಿದರೆ, ಮತ್ತೊಂದೆಡೆ, ʻಪ್ರಧಾನ ಮಂತ್ರಿ ಫಸಲ್ ಬಿಮಾʼ ಯೋಜನೆಯಡಿ ರೈತರಿಗೆ ವಿಮಾ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರವು ಸಾಧ್ಯವಾದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಸೋಯಾಬೀನ್ ಸೇರಿದಂತೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಂತಹ ಬೆಳೆಗಳನ್ನು ಪ್ರಸ್ತಾಪಿಸಿದ ಶ್ರೀ ಚೌಹಾಣ್ ಅವರು, ಬೆಲೆ ಕುಸಿತದ ಸಂದರ್ಭದಲ್ಲಿ, ಸರ್ಕಾರವು ಖರೀದಿಯನ್ನು ಮಾತ್ರ ಅವಲಂಬಿಸುವುದಿಲ್ಲ. ಬದಲಿಗೆ ಬೆಲೆ ವ್ಯತ್ಯಾಸ ಕಾರ್ಯವಿಧಾನದ ಮೂಲಕ ʻಎಂಸ್‌ಪಿʼ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ಸಂಪೂರ್ಣ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಆಯ್ಕೆಯನ್ನು ಅಳವಡಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಮಧ್ಯಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸಿದ ಸಚಿವರು, ಬೆಲೆ ವ್ಯತ್ಯಾಸ ಪಾವತಿ ಯೋಜನೆಯ ಮೂಲಕ, ಸರತಿ ಸಾಲಿನಲ್ಲಿ ನಿಲ್ಲದೆ ಮತ್ತು ಹೆಚ್ಚುವರಿ ಸರಕುಸಾಗಣೆ ವೆಚ್ಚಗಳಿಲ್ಲದೆ ರೈತರ ಆದಾಯವನ್ನು ರಕ್ಷಿಸಲಾಗಿದೆ. ಈ ಮಾದರಿಯು ಇತರ ರಾಜ್ಯಗಳಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಮಾತು ಮುಂದುವರಿಸಿದ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು, ʻಮಾರುಕಟ್ಟೆ ಮಧ್ಯಪ್ರವೇಶ ಯೋಜನೆʼ(ಎಂಐಎಸ್) ಮೂಲಕ ತ್ವರಿತವಾಗಿ ಹಾಳಾಗುವ ಹಣ್ಣುಗಳು ಮತ್ತು ತರಕಾರಿಗಳಿಗೆ ಮಾದರಿ ದರವನ್ನು ನಿಗದಿ ಪಡಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಒಂದೋ ಮಾದರಿ ಬೆಲೆಯಲ್ಲಿ ರೈತರಿಂದ ನೇರ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತದೆ ಅಥವಾ ಮಾದರಿ ದರ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ವ್ಯತ್ಯಾಸವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು. ದ್ರಾಕ್ಷಿ, ಮೆಣಸಿನಕಾಯಿ, ಆಲೂಗಡ್ಡೆ, ಈರುಳ್ಳಿ, ಟೊಮೆಟೊದಂತಹ ಉತ್ಪನ್ನಗಳ ವಿಷಯದಲ್ಲಿ, ರೈತರ ಪ್ರದೇಶಗಳಲ್ಲಿ ಬೆಲೆಗಳು ತುಂಬಾ ಕಡಿಮೆಯಿದ್ದರೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೊಡ್ಡ ನಗರಗಳ ಮಂಡಿಗಳಿಗೆ ಕೊಂಡೊಯ್ಯಲು ಬಯಸಿದರೆ, ಅಂತಹ ಸಂದರ್ಭಗಳಲ್ಲಿ, ಕೇಂದ್ರ ಸರ್ಕಾರವು ಸಾರಿಗೆ ವೆಚ್ಚವನ್ನು ಸಹ ಭರಿಸುತ್ತಿದೆ. ಇದರಿಂದ ರೈತರು ದೂರದ ಮಂಡಿಗಳಲ್ಲಿ ಉತ್ತಮ ಬೆಲೆಗಳನ್ನು ಪಡೆಯಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಉತ್ತರಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರ ಸಂಪೂರ್ಣ ಉತ್ಪನ್ನಗಳನ್ನು ಸರಿಯಾಗಿ ಖರೀದಿಸುವುದನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಆಹಾರ ನಿಗಮ (ಎಫ್‌ಸಿಐ), ʻನಾಫೆಡ್ʼ, ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿರುವ ಸ್ಥಳಗಳಲ್ಲಿ ಮತ್ತು ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಪುನರುಚ್ಚರಿಸಿದರು.
ʻಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆʼಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಒತ್ತಿ ಹೇಳಿದ ಶ್ರೀ ಶಿವರಾಜ್ ಸಿಂಗ್ ಅವರು, ಪ್ರತಿ ಪಂಚಾಯತ್ ಮಟ್ಟದಲ್ಲಿ ಬೆಳೆ ಕತ್ತರಿಸುವ ಪ್ರಯೋಗಗಳನ್ನು ನಡೆಸಲಾಗುತ್ತದೆ ಮತ್ತು ಅಂತಹ ನಾಲ್ಕು ಪ್ರಯೋಗಗಳನ್ನು ಪ್ರತಿ ಕ್ಲಸ್ಟರ್ / ಪಂಚಾಯತ್‌ನಲ್ಲಿ ಕಡ್ಡಾಯವಾಗಿ ನಡೆಸಲಾಗುತ್ತದೆ. ಇದರಿಂದಾಗಿ ಇಳುವರಿಯ ಅಂಕಿ-ಅಂಶಗಳ ಅಂದಾಜಿನಲ್ಲಿ ಯಾವುದೇ ಸಂದೇಹಕ್ಕೆ ಆಸ್ಪದ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಈಗ, ಉಪಗ್ರಹ ಆಧಾರಿತ ದೂರ ಸಂವೇದಿ ವಿಧಾನದ ಮೂಲಕ ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದು ನೈಜ ಇಳುವರಿ ಮತ್ತು ನಷ್ಟದ ಉತ್ತಮ ಮೌಲ್ಯಮಾಪನಕ್ಕೆ ಅನುವು ಮಾಡಿಕೊಡುತ್ತದೆ. ಜೊತೆಗೆ ವಿಮಾ ಹಕ್ಕುಗಳನ್ನು ಹೆಚ್ಚು ವೈಜ್ಞಾನಿಕ ಮತ್ತು ನಿಷ್ಪಕ್ಷಪಾತ ಆಧಾರದ ಮೇಲೆ ಪಾವತಿಸಬಹುದು ಎಂದು ಅವರು ಹೇಳಿದರು. ಹೊಸ ಬೆಳೆ ವಿಮೆ ವ್ಯವಸ್ಥೆಯಲ್ಲಿ ರೈತರು ಇದರ ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ʻಎನ್‌ಡಿಎʼ ಸರ್ಕಾರದ ಅಧಿಕಾರಾವಧಿಯಲ್ಲಿ, ರೈತರು ಪ್ರಧಾನ ʻಮಂತ್ರಿ ಫಸಲ್ ಬಿಮಾ ಯೋಜನೆʼಯಡಿ ಒಟ್ಟು ಸುಮಾರು 36,055 ಕೋಟಿ ರೂ.ಗಳನ್ನು ಪ್ರೀಮಿಯಂ ಆಗಿ ಜಮಾ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಮಾರು 1,92,477 ಕೋಟಿ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಕೇಂದ್ರ ಸಚಿವ ಶ್ರೀ ಚೌಹಾಣ್ ಮಾಹಿತಿ ನೀಡಿದರು. ಈ ಯೋಜನೆಯು ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಸಚಿವರು ತಿಳಿಸಿದರು. ಈ ಹಿಂದೆ, ಸ್ಥಳೀಯ ಮಟ್ಟದ ವಿಪತ್ತುಗಳು ಸಂಭವಿಸಿದಲ್ಲಿ ಅಥವಾ ಯಾವುದೇ ಒಬ್ಬ ರೈತನ ಬೆಳೆ ನಷ್ಟವಾಗಿದ್ದಲ್ಲಿ, ಅದನ್ನು ಸಾಮಾನ್ಯವಾಗಿ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಜೊತೆಗೆ ಮೌಲ್ಯಮಾಪನವು ಮುಖ್ಯವಾಗಿ ತಹಸಿಲ್ / ಬ್ಲಾಕ್ ಘಟಕ ಮಟ್ಟದಲ್ಲಿ ನಡೆಯುತ್ತಿತ್ತು. ಆದರೆ ಈಗ ಯಾವುದೇ ಒಬ್ಬ ರೈತನ ಬೆಳೆ ಹಾನಿಗೊಳಗಾಗಿದ್ದರೆ ಮತ್ತು ಇಳುವರಿಯ ಅಂಕಿ-ಅಂಶಗಳು ಅದನ್ನು ಸಾಬೀತುಪಡಿಸಿದರೆ, ಅವರ ನಷ್ಟಕ್ಕೆ ಪರಿಹಾರವನ್ನು ಬೆಳೆ ವಿಮಾ ಯೋಜನೆಯ ಮೂಲಕ ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಯಾವುದೇ ರೈತ ವಿಮಾ ಭದ್ರತೆಯಿಂದ ವಂಚಿತರಾಗುವುದಿಲ್ಲ ಎಂದು ತಿಳಿಸಿದರು.
ಇವು ಕೇವಲ ಕಾಗದದ ಯೋಜನೆಗಳಲ್ಲ, ಬದಲಿಗೆ ತಳಮಟ್ಟದಲ್ಲಿ ಜಾರಿಗೆ ತರಲಾದ ದೃಢವಾದ ಕ್ರಮಗಳಾಗಿವೆ. ಇದರ ನೇರ ಪ್ರಯೋಜನಗಳು ರೈತರ ಆದಾಯ ಮತ್ತು ಭದ್ರತೆಯಲ್ಲಿ ಗೋಚರಿಸುತ್ತವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿಯವರ ಸರ್ಕಾರವು ರೈತ ಸ್ನೇಹಿಯಾಗಿದೆ, ಇದು ಪ್ರತಿ ಬಿಕ್ಕಟ್ಟಿನಲ್ಲಿ 'ಅನ್ನದಾತ' ಮತ್ತು ಜೀವದಾತ ರೈತನೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು. ಯಾವುದೇ ಪರಿಸ್ಥಿತಿಯಲ್ಲೂ ರೈತರಿಗೆ ಅವರ ಬೆವರಿನ ಸಂಪೂರ್ಣ ಬೆಲೆಯನ್ನು ನೀಡುವ ಸಂಕಲ್ಪದಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು. ರೈತರ ಕಠಿಣ ಪರಿಶ್ರಮ ಮತ್ತು ಗೌರವವನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಸಚಿವರು ತಿಳಿಸಿದರು.
*****
(ಪ್ರಕಟಣೆ ಐ.ಡಿ.: 2244503)
ವಿಸಿಟರ್ ಕೌಂಟರ್ : 7