ಜಲ ಶಕ್ತಿ ಸಚಿವಾಲಯ
ನವದೆಹಲಿಯಲ್ಲಿ 2026ರ ವಿಶ್ವ ಜಲ ದಿನಾಚರಣೆಯ ಸಮಾವೇಶವನ್ನು ಆಯೋಜಿಸಲಿರುವ ಜಲಶಕ್ತಿ ಸಚಿವಾಲಯ
"ನೀರಿಗಾಗಿ ಉದ್ಯಮ" ಎಂಬ ವಿಷಯದ ಅಡಿಯಲ್ಲಿ 700ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆ
ಪ್ರಕಟಣಾ ದಿನಾಂಕ:
21 MAR 2026 12:15PM by PIB Bengaluru
ಜಾಗತಿಕವಾಗಿ ಮಾರ್ಚ್ 22 ರಂದು ಆಚರಿಸಲಾಗುವ ವಿಶ್ವ ಜಲ ದಿನವು ಶುದ್ಧ ನೀರಿನ ಪ್ರಾಮುಖ್ಯತೆ ಮತ್ತು ಸುಸ್ಥಿರ ನೀರು ನಿರ್ವಹಣೆಯ ತುರ್ತು ಅಗತ್ಯವನ್ನು ಜ್ಞಾಪಿಸುತ್ತದೆ. ಇದು ನೀರಿನ ಕೊರತೆ, ಹವಾಮಾನ ಬದಲಾವಣೆ ಮತ್ತು ನೀರಿನ ಸಮಾನ ಹಂಚಿಕೆ ಕುರಿತು ಹೆಚ್ಚುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದೇ ವೇಳೆ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ನೀರನ್ನು ಸುರಕ್ಷಿತಗೊಳಿಸುವತ್ತ ಕಾರ್ಯನಿರ್ವಹಿಸಲು ವಿಶ್ವಾದ್ಯಂತ ಸರ್ಕಾರಗಳು, ಉದ್ಯಮಗಳು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸುತ್ತದೆ. “Water and Gender,” ಎಂಬುದು ಈ ವರ್ಷದ ಜಾಗತಿಕ ವಿಷಯ ವಸ್ತುವಾಗಿದೆ. ಇದು ಸಮಗ್ರ ಮತ್ತು ಸಮಾನ ನೀರಿನ ಆಡಳಿತದ ಅಗತ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
ಈ ಜಾಗತಿಕ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಲು ಹಾಗೂ ಪುಷ್ಟಿ ನೀಡುವ ಉದ್ದೇಶದಿಂದ, ಮಾರ್ಚ್ 23, 2026 ರಂದು ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ "ನೀರಿಗಾಗಿ ಉದ್ಯಮ" ಎಂಬ ವಿಷಯದ ಅಡಿಯಲ್ಲಿ ವಿಶ್ವ ಜಲ ದಿನಾಚರಣೆ 2026 ಅನ್ನು ಆಯೋಜಿಸಲಿದೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಸರ್ಕಾರ ಮತ್ತು ಉದ್ಯಮಗಳ ಹಿರಿಯ ಪ್ರತಿನಿಧಿಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
"ಅಖಂಡ ಸರ್ಕಾರ" ಮತ್ತು "ಅಖಂಡ ಸಮಾಜ" ವಿಧಾನದ ಮೂಲಕ ಭಾರತದ ಜಲ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಲಾಖೆಗಳು, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮಗಳು ಒಗ್ಗೂಡುತ್ತಿರುವುದನ್ನು ಈ ಸಮಾವೇಶವು ಎತ್ತಿ ತೋರಿಸುತ್ತದೆ. ನೀರನ್ನು ಪ್ರಮುಖ ರಾಷ್ಟ್ರೀಯ ಸಂಪನ್ಮೂಲವೆಂದು ಪರಿಗಣಿಸುವುದು, ಅದರ ನಿರ್ವಹಣೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಪಾತ್ರವನ್ನು ಗುರುತಿಸುವುದರ ಜೊತೆಗೆ ಈ ಸಂದರ್ಭವನ್ನು ಮತ್ತಷ್ಟು ವಿಷೇಷವಾಗಿಸಲು ಸೂಕ್ತ ಚಟುವಟಿಕೆಗಳನ್ನು ಆಯೋಜಿಸಲು ಅವರನ್ನು ಪ್ರೋತ್ಸಾಹಿಸಲಾಗಿದೆ. ಇಂತಹ ಉಪಕ್ರಮಗಳು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬಹುದು, ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಬಹುದು ಮತ್ತು ಜವಾಬ್ದಾರಿಯುತ ನೀರಿನ ಬಳಕೆಯನ್ನು ಪ್ರೋತ್ಸಾಹಿಸಬಹುದು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು, ಮಳೆನೀರು ಕೊಯ್ಲು ಮತ್ತು ಮರುಬಳಕೆಯಂತಹ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸಬಹುದು, ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಲು ಕೈಗಾರಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಬಹುದು ಮತ್ತು ಸಮುದಾಯ ನೇತೃತ್ವದ ಉಪಕ್ರಮಗಳನ್ನು ಉತ್ತೇಜಿಸಬಹುದಾಗಿದೆ.
ಸುಸ್ಥಿರ ನೀರು ನಿರ್ವಹಣೆಗಾಗಿ ಸಂವಾದ, ನಾವೀನ್ಯತೆ ಮತ್ತು ಸಹಯೋಗಕ್ಕಾಗಿ ಈ ಸಮಾವೇಶವು ರಾಷ್ಟ್ರೀಯ ವೇದಿಕೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ, ನೀತಿ ನಿರೂಪಕರು, ಉದ್ಯಮ ಮುಖಂಡರು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು, MSMEಗಳು ಮತ್ತು ಯುವ ಆವಿಷ್ಕಾರಿಗಳು ಒಗ್ಗೂಡಿ - ರಚನಾ ಸಾಧ್ಯ, ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಸೃಷ್ಟಿಸಲು ಅವಕಾಶ ಕಲ್ಪಿಸುತ್ತದೆ.
ನೀರಿನ ಬಳಕೆಯ ದಕ್ಷತೆ, ಮರುಬಳಕೆ, ಪುನರ್ಬಳಕೆ ಮತ್ತು ಆವಿಷ್ಕಾರದ ಪ್ರಮುಖ ಚಾಲನಾ ಶಕ್ತಿಯಾಗಿ ಉದ್ಯಮವನ್ನು ಸ್ಥಾಪಿಸುತ್ತಾ, ಉದ್ಯಮಗಳು ನೀರಿನ ಬಳಕೆದಾರರಿಂದ ಜಲ ಉಸ್ತುವಾರರಾಗಿ ಪರಿವರ್ತನೆಗೊಳ್ಳುತ್ತಿರುವ ಹಾಗೂ ಹೆಚ್ಚು ಬುದ್ಧಿವಂತ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿರುವ ಒಂದು ವಿಶಿಷ್ಟ ಬದಲಾವಣೆಯನ್ನು ಈ ಸಮಾವೇಶವು ಉಲ್ಲೇಖಿಸುತ್ತದೆ. ಈ ಕಾರ್ಯಕ್ರಮವು ವಿವಿಧ ವಲಯಗಳಾದ್ಯಂತ 700 ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.
ಜಲ ವಲಯದಲ್ಲಿ ವಿನೂತನ ಮತ್ತು ಪ್ರಭಾವಶಾಲಿ ಪರಿಹಾರಗಳನ್ನು ಗುರುತಿಸುವುದರೊಂದಿಗೆ, ಜಲ ಶಕ್ತಿ ಹ್ಯಾಕಥಾನ್ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸುವುದು, ಈ ಅಭಿನಂದನಾ ಕಾರ್ಯಕ್ರಮದ ಒಂದು ಪ್ರಮುಖ ಮುಖ್ಯಾಂಶವಾಗಿದೆ. ರಾಜ್ಯ ಸರ್ಕಾರಗಳು, ಅದರಲ್ಲೂ ವಿಶೇಷವಾಗಿ ಗಣತಿ-ಕೇಂದ್ರಿತ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ, ಇದು ಪ್ರಮುಖ ರಾಷ್ಟ್ರೀಯ ಜಲಗಣತಿ ವರದಿಗಳ ಪೂರ್ಣಗೊಳಿಸುವಿಕೆ ಮತ್ತು ಬಿಡುಗಡೆಯನ್ನು ಗುರುತಿಸುವ ಸನ್ಮಾನ ಕಾರ್ಯಕ್ರಮವನ್ನೂ ಒಳಗೊಂಡಿರುತ್ತದೆ, ಇದು ದತ್ತಾಂಶ-ಚಾಲಿತ ನೀರಿನ ಆಡಳಿತದ ಮಹತ್ವವನ್ನು ಒತ್ತಿಹೇಳುತ್ತದೆ.
ಸಮಾವೇಶದ ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಅಂಶಗಳು (ಬೆಳಿಗ್ಗೆ 10:00 ರಿಂದ):
- 7ನೇ ಅಲ್ಪ ನೀರಾವರಿ ಗಣತಿ
- 2ನೇ ಜಲಮೂಲಗಳ ಗಣತಿ
- 1ನೇ ಚಿಲುಮೆಗಳ ಗಣತಿ
- 1ನೇ ಪ್ರಮುಖ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಗಣತಿ
- ರಾಷ್ಟ್ರೀಯ ಜಲ ದತ್ತಾಂಶ ನೀತಿ
- ತಾಂತ್ರಿಕ ಮತ್ತು ವಿಷಯಾಧಾರಿತ ಪ್ರಕಟಣೆಗಳು
ಮರುಬಳಕೆ, ಪುನರ್ಬಳಕೆ ಮತ್ತು ಸಂರಕ್ಷಣೆಯಲ್ಲಿನ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುವ ಕೈಗಾರಿಕಾ ನೀರಿನ ಬಳಕೆಯ ದಕ್ಷತೆಯ ಉತ್ತಮ ಅಭ್ಯಾಸಗಳ ಸಂಕಲನವನ್ನು ಬಿಡುಗಡೆ ಮಾಡುವದರೊಂದಿಗೆ, ಪ್ರಮುಖ ರಾಜ್ಯಗಳು ಮತ್ತು ಕೈಗಾರಿಕಾ ಸಂಘಗಳ ಗುರುತಿಸುವಿಕೆಯೂ ಈ ಸಮಾವೇಶ ಒಳಗೊಂಡಿದೆ.
ಈ ಸಮಾವೇಶವು ಈ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸಿದ ನಾಲ್ಕು ವಿಷಯಾಧಾರಿತ ಸಭೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಿದೆ:
- ಸಂಪನ್ಮೂಲ ಚೇತರಿಕೆ ಮತ್ತು ವರ್ತುಲರೂಪದ ಮರುಬಳಕೆ ವಿಧಾನಗಳನ್ನು ಒಳಗೊಂಡಂತೆ ಕೆಸರು ನಿರ್ವಹಣೆ ಮತ್ತು ಸಂಸ್ಕರಣಾ ಅಭ್ಯಾಸಗಳು
- ಕೈಗಾರಿಕಾ ನೇತೃತ್ವದ ನೀರಿನ ದಕ್ಷತೆ, AI ಮತ್ತು IoT ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ವರ್ತುಲರೂಪದ ನೀರಿನ ಬಳಕೆ
- ಹಿಮಾಲಯದ ಹಿಮನದಿಗಳನ್ನು ನಿರ್ಣಾಯಕ ಜಲ ಗೋಪುರಗಳಾಗಿ ಗಮನಿಸುತ್ತ, ಹಿಮನದಿ ವ್ಯವಸ್ಥೆಗಳು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ
- ಯೋಜನೆ ಮತ್ತು ನೀತಿಗಾಗಿ ನೀರಿನ ಜನಗಣತಿ ಡೇಟಾದ ಬಳಕೆಯ ಪ್ರಕರಣಗಳು
"ನೀರಿಗಾಗಿ ಉದ್ಯಮ" ಸಮಾವೇಶವು ಸುಸ್ಥಿರ ಜಲ ಉಸ್ತುವಾರಿಯ ಕಡೆಗೆ ಕೈಗಾರಿಕಾ ಬದ್ಧತೆಯನ್ನು ಪುನರುಚ್ಚರಿಸುವ ಜಂಟಿ ಕೈಗಾರಿಕಾ ಘೋಷಣೆಯೊಂದಿಗೆ ಸಮಾಪ್ತಿಯಾಗಲಿದೆ.
ಜಲ ವಲಯದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಹಾಗೂ ಸರ್ಕಾರ, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸುವ ಉಪಕ್ರಮಗಳನ್ನು ಸಹ ಸಚಿವಾಲಯವು ಪ್ರಮುಖವಾಗಿ ಪ್ರದರ್ಶಿಸಲಿದೆ.
ಈ ಬಹು-ಪಾಲುದಾರ ತೊಡಗಿಸಿಕೊಳ್ಳುವಿಕೆಯ ಮೂಲಕ, ಸಮಾವೇಶವು "ವಿಚಾರಗಳು. ನಾವೀನ್ಯತೆ. ಕ್ರಿಯೆ." ಎಂಬ ಮನೋಭಾವವನ್ನು ಸಾಕಾರಗೊಳಿಸುತ್ತದೆ — ನಾವೀನ್ಯತೆಯು ಬದ್ಧತೆಗೆ ಪುಷ್ಟಿನೀಡುತ್ತಾ ಜಲ - ಸುರಕ್ಷತೆ ಮತ್ತು ಸ್ಥಿತಿಸ್ಥಾಪಕ ಭಾರತವನ್ನು ನಿರ್ಮಿಸಲು ಪಾಲುದಾರಿಕೆ, ವಿನೂತನ ಆವಿಷ್ಕಾರ ಮತ್ತು ನೀತಿ ಒಮ್ಮುಖತೆಯನ್ನು ವೇಗಗೊಳಿಸುವ ಗುರಿ ಹೊಂದಿದೆ.
1992ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಪರಿಸರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ (UNCED) ವಿಶ್ವ ಜಲ ದಿನದ ಪರಿಕಲ್ಪನೆಯನ್ನು ಮೊದಲಬಾರಿಗೆ ಪ್ರಸ್ತಾಪಿಸಲಾಯಿತು. ನಂತರ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 22 ಅನ್ನು ವಿಶ್ವ ಜಲ ದಿನವೆಂದು ಗೊತ್ತುಪಡಿಸಿತು ಹಾಗೂ 2.1 ಶತಕೋಟಿ ಜನರು ಸುರಕ್ಷಿತ ನೀರು ಲಭ್ಯತೆಯಿಲ್ಲದೆ ಬದುಕುತ್ತಿದ್ದಾರೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು, 1993 ರಿಂದ ಇದನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿಯ 6ನೇ ಗುರಿಯನ್ನು ಸಾಧಿಸಲು ಎಲ್ಲ ಸಹಕಾರ ನೀಡುವುದರ ಮೇಲೆ ಈ ದಿನವನ್ನು ಪ್ರಮುಖವಾಗಿ ಕೇಂದ್ರೀಕರಿಸಲಾಗಿದೆ: ಅದೇ 2030ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯವನ್ನು ಖಚಿತಪಡಿಸುವುದು.
*****
(ಪ್ರಕಟಣೆ ಐ.ಡಿ.: 2243353)
ವಿಸಿಟರ್ ಕೌಂಟರ್ : 24