ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ 2024-25 ರ ಅಂತಿಮ ಅಂದಾಜುಗಳು ಮತ್ತು 2025-26 ರ ಮೊದಲ ಅಂದಾಜುಗಳನ್ನು ಬಿಡುಗಡೆ ಮಾಡಿದರು


ಪ್ರದೇಶ ವ್ಯಾಪ್ತಿ ಮತ್ತು ಉತ್ಪಾದನೆ ಎರಡರಲ್ಲೂ ದಾಖಲೆಯ ಬೆಳವಣಿಗೆಯೊಂದಿಗೆ ತೋಟಗಾರಿಕೆಯು  ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ - ಶ್ರೀ ಶಿವರಾಜ್ ಸಿಂಗ್

ಮೋದಿ ಸರ್ಕಾರದ ಅಡಿಯಲ್ಲಿ, ಹಣ್ಣುಗಳು ಮತ್ತು ತರಕಾರಿಗಳಿಂದ ಹಿಡಿದು ಮಸಾಲೆಗಳು, ಹೂವುಗಳು ಮತ್ತು ಔಷಧೀಯ ಸಸ್ಯಗಳವರೆಗೆ ಬಹುತೇಕ ಎಲ್ಲಾ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಾಗಿದೆ - ಶ್ರೀ ಚೌಹಾಣ್

2024-25ರಲ್ಲಿ ಒಟ್ಟು ತೋಟಗಾರಿಕಾ ಪ್ರದೇಶವು 301.36 ಲಕ್ಷ ಹೆಕ್ಟೇರ್‌ಗಳನ್ನು ತಲುಪಿ 3707.38 ಲಕ್ಷ ಟನ್‌ಗಳ ಉತ್ಪಾದನೆಯಾಗಿದೆ; 2025-26ರಲ್ಲಿ ಉತ್ಪಾದನೆಯು 3708.46 ಲಕ್ಷ ಟನ್‌ಗಳಷ್ಟಾಗುವ ನಿರೀಕ್ಷೆಯಿದೆ - ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಒಂದು ವರ್ಷದ ಪ್ರತಿಫಲದಲ್ಲಿ  10.50 ಲಕ್ಷ ಹೆಕ್ಟೇರ್ ಪ್ರದೇಶ ಮತ್ತು 159.94 ಲಕ್ಷ ಟನ್ ಉತ್ಪಾದನೆ ಸೇರಿವೆ, ಇದು ರೈತರಿಗೆ ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಹೆಚ್ಚುವರಿ ಬೆಂಬಲವನ್ನು ನೀಡುತ್ತದೆ - ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಈರುಳ್ಳಿ, ಆಲೂಗಡ್ಡೆ, ಟೊಮೆಟೊ, ಜೊತೆಗೆ ಮಸಾಲೆಗಳು, ಹೂವುಗಳು ಮತ್ತು ಔಷಧೀಯ ಸಸ್ಯಗಳ ಉತ್ಪಾದನೆ ಹೆಚ್ಚಾಗಿದೆ - ಶ್ರೀ ಶಿವರಾಜ್ ಸಿಂಗ್

ತಂತ್ರಜ್ಞಾನ ಮತ್ತು ಮೌಲ್ಯ ಸರಪಳಿಗಳ ಮೇಲೆ ಸರ್ಕಾರ ಗಮನಹರಿಸಿದ್ದರಿಂದ ತೋಟದ ಬೆಳೆಗಳು ಸಹ ಸುಧಾರಿಸಿವೆ - ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಕಟಣಾ ದಿನಾಂಕ: 17 MAR 2026 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ತೋಟಗಾರಿಕೆಯನ್ನು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅನುಮೋದನೆಯ ನಂತರ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು 2025-26 ರ ಮೊದಲ ಮುಂಗಾಣ್ಕೆ (ಮುಂಗಡ) ಅಂದಾಜು  ಹಾಗು  2024-25ರ ಸಾಲಿನ  ತೋಟಗಾರಿಕೆಯ ಅಂತಿಮ  ಅಂದಾಜುಗಳನ್ನು ಬಿಡುಗಡೆ ಮಾಡಿತು, ಇದು ದೇಶಾದ್ಯಂತ ಹಣ್ಣುಗಳು, ತರಕಾರಿಗಳು, ಮಸಾಲೆಗಳು, ಹೂವುಗಳು ಮತ್ತು ಔಷಧೀಯ ಸಸ್ಯಗಳ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಪ್ರಮುಖ ಹೆಚ್ಚಳವನ್ನು  ಸೂಚಿಸುತ್ತದೆ.

ತೋಟಗಾರಿಕೆ ಬೆಳೆಗಳ ದಾಖಲೆಯ ವಿಸ್ತೀರ್ಣ ಮತ್ತು ಉತ್ಪಾದನೆ

ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಅವರ ಅನುಮೋದನೆಯ ನಂತರ ಸೋಮವಾರ ಬಿಡುಗಡೆಯಾದ ದತ್ತಾಂಶವು ಒಟ್ಟು ತೋಟಗಾರಿಕೆ ಬೆಳೆ ಪ್ರದೇಶವು 2023-24 ರಲ್ಲಿ (ಅಂತಿಮ) 290.86 ಲಕ್ಷ ಹೆಕ್ಟೇರ್‌ಗಳಿಂದ 2024-25 ರಲ್ಲಿ 301.36 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಿದೆ ಎಂದು ತೋರಿಸುತ್ತದೆ (ಅಂತಿಮ ಅಂದಾಜುಗಳು) - ಗಮನಾರ್ಹ 10.50 ಲಕ್ಷ ಹೆಕ್ಟೇರ್‌ಗಳು (3.61%) ಹೆಚ್ಚಳ. ಒಟ್ಟು ಉತ್ಪಾದನೆಯು 3547.44 ಲಕ್ಷ ಟನ್‌ಗಳಿಂದ 3707.38 ಲಕ್ಷ ಟನ್‌ಗಳಿಗೆ ಏರಿಕೆ, ಇದು 159.94 ಲಕ್ಷ ಟನ್‌ಗಳಷ್ಟು (4.51%) ಹೆಚ್ಚಾಗಿದೆ. 2025-26 ಯೋಜನೆಯ ಮೊದಲ ಮುಂಗಡ ಅಂದಾಜುಗಳು 301.31 ಲಕ್ಷ ಹೆಕ್ಟೇರ್ ವಿಸ್ತೀರ್ಣ ಮತ್ತು 3708.46 ಲಕ್ಷ ಟನ್ ಉತ್ಪಾದನೆಯನ್ನು ನಿರೀಕ್ಷಿಸುತ್ತವೆ. ಇದು 2024-25 ರದಕ್ಕಿಂತ 1.09 ಲಕ್ಷ ಟನ್‌ಗಳಷ್ಟು ಅಧಿಕವಾಗಿರುತ್ತದೆ ಮತ್ತು ಸ್ಥಿರ ಪ್ರಗತಿಯನ್ನು ಸೂಚಿಸುತ್ತದೆ.

ಹಣ್ಣುಗಳು ಮತ್ತು ತರಕಾರಿಗಳು ಕೃಷಿ ಮತ್ತು ಪೋಷಣೆಯನ್ನು ಬಲಪಡಿಸುತ್ತವೆ

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರ ಪ್ರಕಾರ, 2024-25ರ ಹಣ್ಣಿನ ಉತ್ಪಾದನೆಯು 4.13% ಹೆಚ್ಚಳವಾಗಿ  (46.71 ಲಕ್ಷ ಟನ್) 1176.49 ಲಕ್ಷ ಟನ್‌ಗಳಿಗೆ ತಲುಪಿದೆ. 2023-24ರಲ್ಲಿ ಇದು 1129.78 ಲಕ್ಷ ಟನ್‌ಗಳಷ್ಟಿತ್ತು.  ಇದಕ್ಕೆ ಬಾಳೆಹಣ್ಣು, ಮಾವು, ಮ್ಯಾಂಡರಿನ್, ಪಪ್ಪಾಯಿ, ಪೇರಲ, ಕಲ್ಲಂಗಡಿ ಮತ್ತು ಹಲಸಿನ ಹಣ್ಣುಗಳ ಹೆಚ್ಚಳ ಕಾರಣ. ತರಕಾರಿ ಉತ್ಪಾದನೆಯು 5.11% (105.89 ಲಕ್ಷ ಟನ್) ಹೆಚ್ಚಳವಾಗಿ 2072.08 ಲಕ್ಷ ಟನ್‌ಗಳಿಂದ 2177.97 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಅಂದಾಜಿಸಲಾಗಿದೆ, ಈರುಳ್ಳಿ, ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಬದನೆಕಾಯಿ, ಬೆಂಡೆಕಾಯಿ, ಬಟಾಣಿ, ಕುಂಬಳಕಾಯಿ, ಸೋರೆಕಾಯಿ, ಹಾಗಲಕಾಯಿ, ಸೌತೆಕಾಯಿ, ಟಾಪಿಯೋಕಾ, ಸಿಹಿ ಗೆಣಸು, ಮೂಲಂಗಿ ಮತ್ತು ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಪ್ರಮಾಣದಲ್ಲಿ ಏರಿಕೆಯಾಗಿದೆ. 2025-26ನೇ ಸಾಲಿಗೆ ಹಣ್ಣುಗಳು 1186.80 ಲಕ್ಷ ಟನ್ (0.88% ಅಥವಾ 10.31 ಲಕ್ಷ ಟನ್ ಹೆಚ್ಚಳ), ತರಕಾರಿಗಳು 2161.60 ಲಕ್ಷ ಟನ್ ಆಗುವ ನಿರೀಕ್ಷೆಯಿದೆ, ಇದು ಟೊಮೆಟೊ, ಬಟಾಣಿ, ಟಾಪಿಯೋಕಾ, ಹಸಿರು ಮೆಣಸಿನಕಾಯಿ ಮತ್ತು ಕುಂಬಳಕಾಯಿಯಲ್ಲಿ ಏರಿಕೆಯ ಪ್ರವೃತ್ತಿಯನ್ನು ತೋರಿಸುತ್ತದೆ.

ದಿನನಿತ್ಯದ ಬುಟ್ಟಿ ಈರುಳ್ಳಿ, ಆಲೂಗಡ್ಡೆ, ಟೊಮೆಟೊಗಳಿಂದ ಬಲವರ್ಧನೆಗೊಂಡಿದೆ

ಅಂದಾಜಿನ ಪ್ರಕಾರ ಈರುಳ್ಳಿ ಬೆಳೆಯುವ ಪ್ರದೇಶವು 2023-24 ರಲ್ಲಿ ಇದ್ದ 15.41 ಲಕ್ಷ ಹೆಕ್ಟೇರ್ ನಿಂದ 2024-25 ರಲ್ಲಿ 19.68 ಲಕ್ಷ ಹೆಕ್ಟೇರ್‌ಗೆ (4.27 ಲಕ್ಷ ಹೆಕ್ಟೇರ್ ಅಥವಾ 27.74%) ಏರಿಕೆಯಾಗಿದೆ, ಉತ್ಪಾದನೆಯು 307.67 ಲಕ್ಷ ಟನ್‌ಗಳಿಗೆ (242.67 ಲಕ್ಷ ಟನ್‌ಗಳಿಂದ 65 ಲಕ್ಷ ಟನ್ ಅಥವಾ 26.79%) ಏರಿಕೆಯಾಗಿದೆ. ಆಲೂಗಡ್ಡೆ ಉತ್ಪಾದನೆಯು 2024-25 ರಲ್ಲಿ 585.71 ಲಕ್ಷ ಟನ್‌ಗಳೆಂದು ಅಂದಾಜಿಸಲಾಗಿತ್ತು (570.53 ಲಕ್ಷ ಟನ್‌ಗಳಿಂದ 15.18 ಲಕ್ಷ ಟನ್ ಅಥವಾ 2.66%), ಬಹುಶಃ 2025-26 ರಲ್ಲಿ 584.47 ಲಕ್ಷ ಟನ್‌ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. 2024-25ರಲ್ಲಿ ಟೊಮೆಟೊ ಉತ್ಪಾದನೆ 205.99 ಲಕ್ಷ ಟನ್‌ಗಳು (2023-24ರಲ್ಲಿ 213.23 ಲಕ್ಷ ಟನ್‌ಗಳಷ್ಟಿತ್ತು), ಆದರೆ 2025-26ರಲ್ಲಿ 227.02 ಲಕ್ಷ ಟನ್‌ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ, ಇದು ರೈತರ ಗಳಿಕೆ ಮತ್ತು ಗ್ರಾಹಕ ಪೂರೈಕೆಗೆ ನೆರವು ನೀಡುತ್ತದೆ

ಅಧಿಕ ಮೌಲ್ಯದ ಬೆಳೆಗಳ ಏರಿಕೆ: ಮಸಾಲೆಗಳು, ಹೂವುಗಳು, ಆರೊಮ್ಯಾಟಿಕ್ (ಪರಿಮಳಯುಕ್ತ) -ಔಷಧೀಯ ಸಸ್ಯಗಳು

ಆರೊಮ್ಯಾಟಿಕ್ (ಪರಿಮಳಯುಕ್ತ)  ಮತ್ತು ಔಷಧೀಯ ಸಸ್ಯಗಳ ವಿಸ್ತಾರವು  2024-25ರಲ್ಲಿ 9.26 ಲಕ್ಷ ಹೆಕ್ಟೇರ್‌ಗಳಿಂದ 6.13% (0.57 ಲಕ್ಷ ಹೆಕ್ಟೇರ್) ಹೆಚ್ಚಳಗೊಂಡು 9.83 ಲಕ್ಷ ಹೆಕ್ಟೇರ್‌ಗಳಿಗೆ ಏರಿದೆ, ಉತ್ಪಾದನೆಯು 7.26 ಲಕ್ಷ ಟನ್‌ಗಳಿಂದ 9.01 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. 2025-26ರಲ್ಲಿ 9.03 ಲಕ್ಷ ಟನ್‌ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಹೂವಿನ ಪ್ರದೇಶವು 25.24% (0.80 ಲಕ್ಷ ಹೆಕ್ಟೇರ್)  ಏರಿಕೆಯಾಗಿದೆ. ಅದು 3.17 ಲಕ್ಷ ಹೆಕ್ಟೇರ್‌ಗಳಿಂದ 3.97 ಲಕ್ಷ ಹೆಕ್ಟೇರ್ ಗಳಿಗೆ ವಿಸ್ತರಿಸಿದೆ, ಉತ್ಪಾದನೆಯು 20.65% ಹೆಚ್ಚಳವಾಗಿದೆ ಅದು 35.35 ಲಕ್ಷ ಟನ್‌ಗಳಿಂದ 42.65 ಲಕ್ಷ ಟನ್‌ಗಳಿಗೆ ತಲುಪಿದೆ, 2025-26ರಲ್ಲಿ 41.65 ಲಕ್ಷ ಟನ್‌ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಮಸಾಲೆ ಬೆಳೆ ಪ್ರದೇಶವು 50.93 ಲಕ್ಷ ಹೆಕ್ಟೇರ್‌ಗಳಿಗೆ ತಲುಪಿದೆ (1.38% ಅಥವಾ 0.69 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ), ಉತ್ಪಾದನೆಯು 129.93 ಲಕ್ಷ ಟನ್‌ಗಳಿಗೆ ತಲುಪಿದೆ (124.84 ಲಕ್ಷ ಟನ್‌ಗಳಿಂದ 4.08% ಹೆಚ್ಚಾಗಿದೆ), 2025-26ರಲ್ಲಿ 128.18 ಲಕ್ಷ ಟನ್‌ಗಳಷ್ಟು ಉತ್ಪಾದನೆ ನಿರೀಕ್ಷಿಸಲಾಗಿದೆ; ಜೀರಿಗೆ, ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನ ಬೆಳೆಗಳಲ್ಲಿ  ಬೆಳೆಯುವ ಪ್ರದೇಶ ಮತ್ತು ಉತ್ಪಾದನೆಯಲ್ಲಿ ಗಮನಾರ್ಹ ಪ್ರತಿಫಲ ಬಂದಿದೆ., 2025-26ರಲ್ಲಿ ಬೆಳ್ಳುಳ್ಳಿ, ಅರಿಶಿನ ಮತ್ತು ಏಲಕ್ಕಿ ಉತ್ಪಾದನೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.

ತೋಟಗಾರಿಕೆ ಬೆಳೆಗಳು ಮತ್ತು ಭವಿಷ್ಯದ ದಿಕ್ಕು ದಿಸೆ: ತಂತ್ರಜ್ಞಾನ, ನೀರಾವರಿ, ಮೌಲ್ಯ ಸರಪಳಿಗಳ ಮೇಲೆ ಒತ್ತು

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು, ತೋಟಗಾರಿಕೆ ಬೆಳೆ ಉತ್ಪಾದನೆಯು 2023-24ರಲ್ಲಿ ಇದ್ದ 176.66 ಲಕ್ಷ ಟನ್‌ಗಳಿಂದ 2024-25ರಲ್ಲಿ 169.81 ಲಕ್ಷ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. 2025-26ರಲ್ಲಿ, ವಿಸ್ತೀರ್ಣ ಮತ್ತು ಉತ್ಪಾದನೆಯು 2024-25ಕ್ಕೆ ಹೋಲಿಸಿದರೆ ಕ್ರಮವಾಗಿ 1.61% ಮತ್ತು 5.82% ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಅದು 46.59 ಲಕ್ಷ ಹೆಕ್ಟೇರ್ ಮತ್ತು 179.68 ಲಕ್ಷ ಟನ್‌ಗಳಿಗೆ ತಲುಪಿದೆ. ಅದು ಒಟ್ಟಾರೆಯಾಗಿ 2025-26ರಲ್ಲಿ ತೋಟಗಾರಿಕೆ ಉತ್ಪನ್ನ 3708.46 ಲಕ್ಷ ಟನ್‌ಗಳಷ್ಟಾಗಿರುತ್ತದೆ,  ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ತಂತ್ರಜ್ಞಾನ, ನೀರಾವರಿ, ಮೌಲ್ಯ ಸರಪಳಿಗಳು, ಸಂಸ್ಕರಣೆ, ಸಂಗ್ರಹಣೆ, ಶೀತಲ ಸರಪಳಿಗಳು ಮತ್ತು ಮಾರುಕಟ್ಟೆಗಳಲ್ಲಿ ಸರ್ಕಾರಿ ಹೂಡಿಕೆಗಳು ತಳಮಟ್ಟದ ಫಲಿತಾಂಶಗಳನ್ನು ನೀಡುತ್ತಿವೆ, ರೈತರ ಆದಾಯವನ್ನು ಹೆಚ್ಚಿಸುತ್ತವೆ ಮತ್ತು ಲಾಭದಾಯಕ, ಸುಸ್ಥಿರ ಕೃಷಿಯನ್ನು ಪೋಷಿಸುತ್ತಿವೆ. .

ರೈತರ ಆದಾಯವನ್ನು ಹೆಚ್ಚಿಸಲು, ಪೌಷ್ಠಿಕಾಂಶ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೃಷಿ ರಫ್ತುಗಳನ್ನು ಮುನ್ನಡೆಸಲು ತೋಟಗಾರಿಕೆ ಈಗ ಭದ್ರ ಬುನಾದಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಎಲ್ಲೆಡೆಯ ರೈತರಿಗೆ ಹಣ್ಣುಗಳು, ತರಕಾರಿಗಳು, ಮಸಾಲೆಗಳು, ಹೂವುಗಳು ಮತ್ತು ಔಷಧೀಯ ಬೆಳೆಗಳಿಂದ ಉತ್ತಮ, ಸುಸ್ಥಿರ ಗಳಿಕೆಯನ್ನು ಒದಗಿಸುವುದು ತೋಟಗಾರಿಕೆಯ ಗುರಿಯಾಗಿದೆ.  

 

*****


(ಪ್ರಕಟಣೆ ಐ.ಡಿ.: 2241733) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati