ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 18,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗು ಉದ್ಘಾಟನೆ ನೆರವೇರಿಸಿದರು


ಈ ಉಪಕ್ರಮಗಳು ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತವೆ: ಪ್ರಧಾನಮಂತ್ರಿ

ಇಂದು, ರೈಲ್ವೆಯನ್ನು ಆಧುನೀಕರಿಸಲು ದೇಶಾದ್ಯಂತ ತೀವ್ರ ಅಭಿಯಾನ ನಡೆಯುತ್ತಿದೆ, ಈ ಅಭಿಯಾನದಲ್ಲಿ ಪಶ್ಚಿಮ ಬಂಗಾಳ ಹಿಂದೆ ಬೀಳಬಾರದು ಎಂಬುದು ನಮ್ಮ ಸಂಕಲ್ಪವಾಗಿದೆ, ಅದಕ್ಕಾಗಿಯೇ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಮೂಲಸೌಕರ್ಯವನ್ನು ವೇಗವಾಗಿ ವಿಸ್ತರಿಸುತ್ತಿದೆ: ಪ್ರಧಾನಮಂತ್ರಿ

ಕೋಲ್ಕತ್ತಾ ಮತ್ತು ಹಾಲ್ದಿಯಾದಂತಹ ಬಂದರುಗಳು ಬಹಳ ಹಿಂದಿನಿಂದಲೂ ಪೂರ್ವ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ; ಹಾಲ್ದಿಯಾ ಡಾಕ್ ಕಾಂಪ್ಲೆಕ್ಸ್ ಯಾಂತ್ರೀಕರಣಗೊಳ್ಳುತ್ತಿದೆ, ಇದು ಸರಕು ಸಾಗಣೆ ಕಾರ್ಯಾಚರಣೆಯನ್ನು ವೇಗಗೊಳಿಸುತ್ತದೆ, ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವ್ಯಾಪಾರಕ್ಕೆ ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 MAR 2026 3:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 18,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, "ಇಂದು, ಕೋಲ್ಕತ್ತಾದ ನೆಲದಿಂದ, ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತಕ್ಕೆ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯಲಾಗುತ್ತಿದೆ" ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಸ್ತೆಗಳು, ರೈಲ್ವೆ ಮತ್ತು ಬಂದರು ಮೂಲಸೌಕರ್ಯಕ್ಕೆ ಸಂಬಂಧಿಸಿದ 18,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಯೋಜನೆಗಳು ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತಕ್ಕೆ ಹೊಸ ವೇಗವನ್ನು ನೀಡುತ್ತವೆ, ವ್ಯಾಪಾರ ಮತ್ತು ಉದ್ಯಮವನ್ನು ಉತ್ತೇಜಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಲಭಗೊಳಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಕೆಲವು ಪ್ರಮುಖ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಖರಗ್ಪುರ-ಮೋರೆಗ್ರಾಮ್ ಎಕ್ಸ್ ಪ್ರೆಸ್ ವೇ ಪೂರ್ಣಗೊಳ್ಳುವುದರಿಂದ ಪಶ್ಚಿಮ ಬಂಗಾಳದ ಅನೇಕ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗಗೊಳ್ಳುತ್ತವೆ  ಎಂದು ಹೇಳಿದರು. ದುಬ್ರಾಜ್ಪುರ ಬೈಪಾಸ್ ಮತ್ತು ಕಂಗ್ಸಬತಿ ಮತ್ತು ಶಿಲಾಬತಿ ನದಿಗಳ ಮೇಲೆ ನಿರ್ಮಿಸಲಾಗುತ್ತಿರುವ ಪ್ರಮುಖ ಸೇತುವೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಇದು ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ. "ಈ ಪರಿವರ್ತಕ ಯೋಜನೆಗಳಿಗಾಗಿ ನಾನು ಪಶ್ಚಿಮ ಬಂಗಾಳ ಮತ್ತು ಇಡೀ ಪೂರ್ವ ಭಾರತದ ಜನರನ್ನು ಅಭಿನಂದಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು.

ಭಾರತೀಯ ರೈಲ್ವೆಯನ್ನು ಆಧುನೀಕರಿಸಲು ದೇಶಾದ್ಯಂತ ತೀವ್ರಗತಿಯ  ಅಭಿಯಾನ ನಡೆಯುತ್ತಿದೆ ಮತ್ತು ಈ ಅಭಿಯಾನದಲ್ಲಿ ಪಶ್ಚಿಮ ಬಂಗಾಳ ಹಿಂದೆ ಬೀಳಬಾರದು ಎಂಬುದು ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಮೂಲಸೌಕರ್ಯವನ್ನು ವೇಗವಾಗಿ ವಿಸ್ತರಿಸುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. ಈ ಸಂದರ್ಭದಲ್ಲಿ, ಕಲೈಕುಂದ-ಕನಿಮಾಹುಲಿ ವಿಭಾಗದಲ್ಲಿ ಸ್ವಯಂಚಾಲಿತ ಬ್ಲಾಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. "ಈ ಉಪಕ್ರಮಗಳು ಕಾರ್ಯನಿರತ ರೈಲು ಮಾರ್ಗಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಪ್ರಯಾಣವನ್ನು ಸುರಕ್ಷಿತವಾಗಿಸುತ್ತವೆ ಮತ್ತು ಪ್ರಯಾಣಿಕರಿಗೆ ವೇಗ ಹಾಗು  ಅನುಕೂಲವನ್ನು ಹೆಚ್ಚಿಸುತ್ತವೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕಾಮಾಖ್ಯಗುರಿ, ಅನಾರಾ, ತಮ್ಲುಕ್, ಹಾಲ್ದಿಯಾ, ಬಾರಾಭುಮ್ ಮತ್ತು ಸಿಯುರಿ ಎಂಬ ಆರು ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳನ್ನಾಗಿ  ಉದ್ಘಾಟಿಸಿರುವುದಾಗಿ ಪ್ರಧಾನಿ ಘೋಷಿಸಿದರು. ಬಂಗಾಳದ ಶ್ರೇಷ್ಠ ಸಂಸ್ಕೃತಿಯು ಈಗ ಈ ನಿಲ್ದಾಣಗಳಲ್ಲಿ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ ಮತ್ತು ಇನ್ನೂ ಹಲವಾರು ನಿಲ್ದಾಣಗಳು ಪುನರಾಭಿವೃದ್ಧಿಗೆ ಒಳಪಡುತ್ತಿವೆ ಎಂದು ಅವರು ಹೇಳಿದರು. ಪುರುಲಿಯಾ ಮತ್ತು ಆನಂದ್ ವಿಹಾರ್ ಟರ್ಮಿನಲ್ ನಡುವಿನ ಹೊಸ ಎಕ್ಸ್ಪ್ರೆಸ್ ರೈಲು ಸೇವೆಗೂ ಹಸಿರು ನಿಶಾನೆ ತೋರಲಾಗಿದೆ. "ಈ ರೈಲು ಸೇವೆಯು ಪಶ್ಚಿಮ ಬಂಗಾಳದ ಜನರಿಗೆ ಮಾತ್ರವಲ್ಲದೆ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ದಿಲ್ಲಿಯ ಜನರಿಗೂ ಪ್ರಯೋಜನವನ್ನು ನೀಡುತ್ತದೆ" ಎಂದು ಶ್ರೀ ಮೋದಿ ದೃಢಪಡಿಸಿದರು.

ಆರ್ಥಿಕ ಪ್ರಗತಿಗೆ ಚಾಲನೆ ನೀಡುವಲ್ಲಿ ರಸ್ತೆ ಮತ್ತು ರೈಲು ಸಂಪರ್ಕದಂತೆಯೇ ಬಂದರುಗಳು ಮತ್ತು ಜಲಸಾರಿಗೆ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದಶಕಗಳಿಂದ, ಪೂರ್ವ ಭಾರತದ ಈ ಅಪಾರ ಸಾಮರ್ಥ್ಯವನ್ನು ನಿರ್ಲಕ್ಷಿಸಲಾಗಿತ್ತು, ಆದರೆ ಇಂದು, ಜಲಮಾರ್ಗಗಳು ವ್ಯಾಪಾರ ಮತ್ತು ಕೈಗಾರಿಕಾ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತಿವೆ ಎಂದು ಅವರು ಹೇಳಿದರು. ಈ ದಿಕ್ಕಿನಲ್ಲಿ, ಪ್ರಮುಖ ಬಂದರು ಮೂಲಸೌಕರ್ಯ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಗಳನ್ನು ಕೈಗೊಳ್ಳಲಾಗಿದೆ. ಕೋಲ್ಕತ್ತಾ ಮತ್ತು ಹಾಲ್ದಿಯಾ ಬಂದರುಗಳು ದೀರ್ಘಕಾಲದಿಂದ ಪೂರ್ವ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ ಮತ್ತು ಹಾಲ್ದಿಯಾ ಡಾಕ್ ಕಾಂಪ್ಲೆಕ್ಸ್ ನ ಯಾಂತ್ರೀಕರಣವು ಸರಕು ಕಾರ್ಯಾಚರಣೆಯನ್ನು ವೇಗಗೊಳಿಸುತ್ತದೆ, ಬಂದರು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗು ವ್ಯಾಪಾರಕ್ಕೆ ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದಲ್ಲದೆ, ಕೋಲ್ಕತ್ತಾ ಡಾಕ್ ವ್ಯವಸ್ಥೆಯಲ್ಲಿ ಬಾಸ್ಕ್ಯೂಲ್ ಸೇತುವೆಯ ನವೀಕರಣ ಮತ್ತು ಕಿಡ್ಡರ್ಪೋರ್ ಡಾಕ್ನಲ್ಲಿ ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯವನ್ನು ಸಹ ಕೈಗೊಳ್ಳಲಾಗುತ್ತಿದೆ. "ಈ ಎಲ್ಲಾ ಯೋಜನೆಗಳು ಪೂರ್ವ ಭಾರತದ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತವೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ರಸ್ತೆಗಳು, ರೈಲ್ವೆ ಮತ್ತು ಬಂದರುಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳು ಪಶ್ಚಿಮ ಬಂಗಾಳದ ಆಧುನಿಕ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಸಮಾರೋಪಗೊಳಿಸುತ್ತ ಹೇಳಿದರು. ಈ ಯೋಜನೆಗಳ ಪ್ರಯೋಜನಗಳು ರೈತರು, ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುತ್ತವೆ ಎಂದು ಅವರು ಹೇಳಿದರು. ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಹೊರಹೊಮ್ಮುತ್ತವೆ ಮತ್ತು ಸ್ಥಳೀಯ ಕೈಗಾರಿಕೆಗಳು ಹಾಗು ಸೇವೆಗಳು ಹೊಸ ವೇಗವನ್ನು ಪಡೆಯುತ್ತವೆ ಎಂದರು. ಭಾರತಕ್ಕೆ ದಾರಿ ತೋರಿಸುವಲ್ಲಿ ಬಂಗಾಳದ ಐತಿಹಾಸಿಕ ಪಾತ್ರವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಬಲವಾದ ಸಂಪರ್ಕ ಮತ್ತು ಆಧುನಿಕ ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ಬಂಗಾಳದ ಅಡಿಪಾಯವನ್ನು ರೂಪಿಸುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು. "ಭಾರತಕ್ಕೆ ಸದಾಕಾಲವೂ ದಾರಿ ತೋರಿಸಿದ ಬಂಗಾಳವು ಮತ್ತೊಮ್ಮೆ 'ವಿಕಸಿತ ಬಂಗಾಳ'ವಾಗುವ ಮೂಲಕ ಆ ವೈಭವವನ್ನು ಸಾಧಿಸಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

 

*****

 


(ಪ್ರಕಟಣೆ ಐ.ಡಿ.: 2240231) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Gujarati , Tamil , Malayalam