ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಶ್ರೀನಗರದಲ್ಲಿ ಶೀತಲಜಲ ಮೀನುಗಾರಿಕೆ ಕುರಿತು ತನ್ನ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಿದೆ



"ಶೀತಲಜಲ ಮೀನುಗಾರಿಕೆ ಅಭಿವೃದ್ಧಿಗೆ ಮಾದರಿ ಮಾರ್ಗಸೂಚಿಗಳನ್ನು" ಬಿಡುಗಡೆ ಮಾಡಲಿರುವ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್

ಪ್ರಕಟಣಾ ದಿನಾಂಕ: 13 MAR 2026 10:40AM by PIB Bengaluru

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2026ರ ಮಾರ್ಚ್ 14 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶೇರೆ ಕಾಶ್ಮೀರ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್‌ಕೆಐಸಿಸಿ) ಶೀತಲಜಲ ಮೀನುಗಾರಿಕೆ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಗೌರವಾನ್ವಿತ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜಮ್ಮು ಮತ್ತು ಕಾಶ್ಮೀರದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ; ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಹಾಯಕ ಸಚಿವರಾದ ಗೌರವಾನ್ವಿತ ಪ್ರೊ. ಎಸ್.ಪಿ. ಸಿಂಗ್ ಬಘೇಲ್; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಹಾಯಕ ಸಚಿವರಾದ ಶ್ರೀ ಜಾರ್ಜ್ ಕುರಿಯನ್; ಜಮ್ಮು ಮತ್ತು ಕಾಶ್ಮೀರದ ಕೃಷಿ ಇಲಾಖೆಯ ಸಚಿವರಾದ ಗೌರವಾನ್ವಿತ ಶ್ರೀ ಜಾವಿದ್ ಅಹ್ಮದ್ ದಾರ್ ಅವರು ಕಾರ್ಯಕ್ರಮ ಉಪಸ್ಥಿತರಿರಲಿದ್ದಾರೆ. ಭಾರತದ  ಶೀತಲ ನೀರಿನ ಮೀನುಗಾರಿಕೆಯ ಸಾಮರ್ಥ್ಯವನ್ನು ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಬಳಸಿಕೊಳ್ಳುವ ಕುರಿತ ಮೊದಲ ರೀತಿಯ ರಾಷ್ಟ್ರೀಯ ಸಂವಾದ ಇದಾಗಿದೆ.

ಭಾರತದ ಶೀತಲ ನೀರಿನ ಮೀನುಗಾರಿಕೆಯು ದೇಶದ ಜಲಚರ ಸಾಕಣೆ ಕ್ಷೇತ್ರದ ಒಂದು ವಿಶಿಷ್ಟ ಮತ್ತು ಮೌಲ್ಯಯುತ ವಿಭಾಗವಾಗಿದೆ. ಇದು ಪ್ರಧಾನವಾಗಿ ಹಿಮಾಲಯದ ಎತ್ತರದ ಪ್ರದೇಶಗಳು, ಈಶಾನ್ಯದ ಭಾಗಗಳು ಮತ್ತು ಪರ್ಯಾಯ ದ್ವೀಪದ ಎತ್ತರದ ಪ್ರದೇಶಗಳ ಆಯ್ದ ವಲಯಗಳಲ್ಲಿ ಮುಂಚೂಣಿಗೆ ಬರುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಪಶ್ಚಿಮ ಘಟ್ಟಗಳ ಕೆಲವು ಭಾಗಗಳು, ಈಶಾನ್ಯ ಮತ್ತು ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಒಟ್ಟಾರೆಯಾಗಿ 5.33 ಲಕ್ಷ ಚದರ ಕಿ.ಮೀ ಪರ್ವತ ಪ್ರದೇಶದಲ್ಲಿ ವ್ಯಾಪಿಸಿದೆ. ಈ ವಿಶಾಲವಾದ ಭೌಗೋಳಿಕತೆಯು ಪ್ರಾಚೀನ ನದಿಗಳು, ತೊರೆಗಳು, ಸರೋವರಗಳು ಮತ್ತು ಜಲಾಶಯಗಳಿಂದ ಸಮೃದ್ಧವಾಗಿದ್ದು, ಇದು ಶೀತಲಜಲ ಮೀನು ಪ್ರಭೇದಗಳ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಸೂಕ್ತವಾದ ಪರಿಸರ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಗುರುತಿಸಲಾದ 278ಕ್ಕೂ ಹೆಚ್ಚು ಶೀತಲಜಲ ಮೀನು ಪ್ರಭೇದಗಳೊಂದಿಗೆ, ಈ ಪರಿಸರ ವ್ಯವಸ್ಥೆಗಳು ಜೀವನೋಪಾಯ ಸೃಷ್ಟಿ, ಪೌಷ್ಠಿಕಾಂಶ ಭದ್ರತೆ, ವೈಜ್ಞಾನಿಕ ಜಲಚರ ಸಾಕಣೆ ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಅಪಾರ ಅವಕಾಶವನ್ನು ಒದಗಿಸುತ್ತವೆ.

ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ(ಪಿಎಂಎಂಎಸ್‌ವೈ) ಅಡಿಯಲ್ಲಿ, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಶೀತಲಜಲ ಮೀನುಗಾರಿಕೆ ವಿಭಾಗವನ್ನು ಬಲಪಡಿಸಲು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಮೂಲಸೌಕರ್ಯಗಳನ್ನು ಆಧುನೀಕರಿಸಲು, ಮೊಟ್ಟೆ ಕೇಂದ್ರಗಳನ್ನು ವಿಸ್ತರಿಸಲು, ಬೀಜ ಮತ್ತು ಫೀಡ್ ವ್ಯವಸ್ಥೆಗಳನ್ನು ಹೆಚ್ಚಿಸಲು, ʻರೇಸ್ ವೇʼ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು, ಸಾರಿಗೆ ಮತ್ತು ಶೀತಲಾಗಾರ ಜಾಲಗಳನ್ನು ಬಲಪಡಿಸಲು ಮತ್ತು ಜೀವನೋಪಾಯ ಆಧಾರಿತ ಚಟುವಟಿಕೆಗಳನ್ನು ಬೆಂಬಲಿಸಲು ಕೋಲ್ಡ್ ವಾಟರ್ ರಾಜ್ಯಗಳಿಗೆ 2,299.56 ಕೋಟಿ ರೂ.ಗಳ ವಿಶೇಷ ಹೂಡಿಕೆಯನ್ನು ಮಂಜೂರು ಮಾಡಲಾಗಿದೆ. ಈ ಮಧ್ಯಸ್ಥಿಕೆಗಳು ಭಾರತದಲ್ಲಿ ಆಧುನಿಕ, ತಂತ್ರಜ್ಞಾನ ಚಾಲಿತ ಶೀತಲಜಲ ಜಲಚರ ಸಾಕಣೆ ಪರಿಸರ ವ್ಯವಸ್ಥೆಗೆ ಅಡಿಪಾಯ ಹಾಕುತ್ತಿವೆ.

ಸಮ್ಮೇಳನದ ಸಂದರ್ಭದಲ್ಲಿ, ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಗೌರವಾನ್ವಿತ ಶ್ರೀ ರಾಜೀವ್ ರಂಜನ್ ಸಿಂಗ್ ಅವರು "ಶೀತಲಜಲ ಮೀನುಗಾರಿಕೆಯ ಅಭಿವೃದ್ಧಿಗೆ ಮಾದರಿ ಮಾರ್ಗಸೂಚಿ" ಬಿಡುಗಡೆ ಮಾಡಲಿದ್ದಾರೆ. ಸಾಂಪ್ರದಾಯಿಕ ಮತ್ತು ಪ್ರಗತಿಪರ ಶೀತಲಜಲ ಮೀನುಗಾರರು, ʻಪಿಎಂಎಂಕೆಎಸ್‌ವೈʼ ಅಡಿಯಲ್ಲಿ ಮೀನುಗಾರಿಕೆ ಸಹಕಾರಿ ಸಂಘಗಳು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನಗಳನ್ನು ವಿತರಿಸಲಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಅತ್ಯುತ್ತಮ ʻಎಫ್ಎಪಿಒʼಗಳು ಮತ್ತು ಅತ್ಯುತ್ತಮ ಮೀನುಗಾರಿಕೆ ನವೋದ್ಯಮಗಳಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ತಾಂತ್ರಿಕ ಅಧಿವೇಶನದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ, ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಸಾಂಸ್ಥಿಕ ಒಮ್ಮುಖ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಬಗ್ಗೆ ಚರ್ಚಿಸುತ್ತದೆ.

ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದ ನೀತಿ ನಿರೂಪಕರು, ತಜ್ಞರು, ಸಂಶೋಧಕರು ಮತ್ತು ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಜ್ಞಾನ ವಿನಿಮಯವನ್ನು ಉತ್ತೇಜಿಸುವ ಮೂಲಕ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಆದ್ಯತೆಗಳನ್ನು ಹೊಂದಿಸುವ ಮೂಲಕ, ಸಮ್ಮೇಳನವು ಶೀತಲಜಲ ಮೀನುಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಬೆಳವಣಿಗೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತದೆ.

ಭಾರತದ ಪ್ರಮುಖ ಶೀತಲಜಲ ಮತ್ಸ್ಯ ಪ್ರಭೇದಗಳಾದ ʻರೇನ್ಬೋ ಟ್ರೌಟ್ʼ, ʻಬ್ರೌನ್ ಟ್ರೌಟ್ʼ ಮತ್ತು ʻಮಸೀರ್ʼ ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಹೆಚ್ಚಿನ ಮೌಲ್ಯದ ಮತ್ಸ್ಯ ವಿಭಾಗದಲ್ಲಿ ಸೇರಿವೆ. ಉದ್ದೇಶಿತ ನೀತಿ ಉಪಕ್ರಮಗಳು ಕಳೆದ ದಶಕದಲ್ಲಿ ಟ್ರೌಟ್ ಉತ್ಪಾದನೆಯನ್ನು ಸುಮಾರು 1.8 ಪಟ್ಟು ಹೆಚ್ಚಿಸಲು ಅನುವು ಮಾಡಿಕೊಟ್ಟಿವೆ. ಆದರೂ ಭಾರತವು ʻಸಾಲ್ಮನ್ʼ ಮತ್ತು ʻಪ್ರೀಮಿಯಂ ಟ್ರೌಟ್ ʼನ ಆಮದನ್ನು ಮುಂದುವರಿಸಿದೆ. ಇದು ದೇಶೀಯ ಸಾಮರ್ಥ್ಯವನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಇದನ್ನು ಪರಿಹರಿಸಲು, ಭಾರತ ಸರ್ಕಾರವು ʻಶೀತಲಜಲ ಮೀನುಗಾರಿಕೆಗಾಗಿ ರಾಷ್ಟ್ರೀಯ ಮುನ್ನೋಟ-2030ʼ ಅನ್ನು ರೂಪಿಸಿದೆ. ಇದು ಶೀತಲಜಲ ಮೀನು ಉತ್ಪಾದನೆಯನ್ನು (ಟ್ರೌಟ್ ಮತ್ತು ಮಸೀರ್ ಇತ್ಯಾದಿ) ದ್ವಿಗುಣಗೊಳಿಸುವ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸಮ್ಮೇಳನವು ಸಮಯೋಚಿತ ಮತ್ತು ಕಾರ್ಯತಂತ್ರದ ಉಪಕ್ರಮವಾಗಿ ಕಾರ್ಯನಿರ್ವಹಿಸಲಿದೆ. ಶೀತಲಜಲ ಮೀನುಗಾರಿಕೆಯನ್ನು ವೇಗಗೊಳಿಸಲು, ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸಲು ಹಾಗೂ ಭಾರತದ ಗುಡ್ಡಗಾಡು ಮತ್ತು ದೂರದ ಪ್ರದೇಶಗಳಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಬಲಪಡಿಸಲು ಚರ್ಚೆ, ಪಾಲುದಾರಿಕೆ ಮತ್ತು ಮಾರ್ಗಸೂಚಿ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಹಿನ್ನೆಲೆ

ಕಳೆದ ದಶಕದಲ್ಲಿ, ಭಾರತ ಸರ್ಕಾರವು ಶೀತಲಜಲ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಮೀನುಗಾರಿಕೆಯನ್ನು ಬೆಂಬಲಿಸಲು ಸದೃಢ ಹೂಡಿಕೆ ವಾಸ್ತುಶಿಲ್ಪವನ್ನು ರಚಿಸಿದೆ. ʻನೀಲಿ ಕ್ರಾಂತಿʼ ಯೋಜನೆಯಿಂದ ಪ್ರಾರಂಭಿಸಿ ಮತ್ತು ʻಮತ್ಸ್ಯ ಮತ್ತು ಜಲಚರ ಮೂಲಸೌಕರ್ಯ ನಿಧಿʼ(ಎಫ್ಐಡಿಎಫ್), ʻಪಿಎಂಎಂಎಸ್‌ವೈʼ ಮತ್ತು ʻಪಿಎಂಎಂಕೆಎಸ್‌ವೈʼನಂತಹ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳವರೆಗೆ 39,272 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯನ್ನು ಯೋಜಿಸಲಾಗಿದೆ. ಅದರಲ್ಲಿ 34,266 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಈಗಾಗಲೇ  ಅನುಮೋದಿಸಲಾಗಿದೆ.

ʻಪಿಎಂಎಂಎಸ್‌ವೈʼ ಅಡಿಯಲ್ಲಿ, ಮೀನುಗಾರಿಕೆ ಇಲಾಖೆಯು 5,600 ʻರೇಸ್ ವೇʼಗಳು, 54 ಮೊಟ್ಟೆ ಕೇಂದ್ರಗಳು, 5,600 ಟ್ರೌಟ್ ಸಾಕಾಣಿಕೆ ಘಟಕಗಳು, 293 ಶೀತಲ ಸಂಗ್ರಹಾಗಾರಗಳು, 8,044 ಸಾರಿಗೆ ವಾಹನಗಳು ಮತ್ತು 260 ʻಫೀಡ್ ಮಿಲ್‌ʼಗಳಿಗೆ ಅನುಮೋದನೆ ನೀಡಿದೆ. ಈ ಚಟುವಟಿಕೆಗಳು ಶೀತಲಜಲ ಮೀನು ಕೃಷಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತಿವೆ ಜೊತೆಗೆ ರಾಜ್ಯಗಳಾದ್ಯಂತ ಉತ್ಪಾದನೆ ಮತ್ತು ವಿತರಣಾ ಜಾಲವನ್ನು ಗಮನಾರ್ಹವಾಗಿ ಸುಧಾರಿಸಿವೆ. ಈ ಚಟುವಟಿಕೆಗಳ ಜೊತೆಗೆ, 33.78 ಲಕ್ಷ ಮೀನುಗಾರರಿಗೆ  ವಿಮಾ ಬೆಂಬಲ ಮತ್ತು 23.51 ಲಕ್ಷ ಕುಟುಂಬಗಳಿಗೆ ಜೀವನೋಪಾಯ ಮತ್ತು ಪೌಷ್ಠಿಕಾಂಶದ ಬೆಂಬಲವನ್ನು  ಒದಗಿಸಲಾಗಿದೆ. ಆ ಮೂಲಕ ಪರ್ವತ ಸಮುದಾಯಗಳಲ್ಲಿ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಲಾಗಿದೆ

ರಾಷ್ಟ್ರೀಯವಾಗಿ ಅನುಮೋದಿಸಲಾದ ಹನ್ನೆರಡು ʻಸಮಗ್ರ ಆಕ್ವಾ ಪಾರ್ಕ್ʼಗಳ (ಐಎಪಿ) ಪೈಕಿ ಕಾಶ್ಮೀರದ ಅನಂತನಾಗ್, ಉತ್ತರಾಖಂಡದ ಉಧಮ್‌ಸಿಂಗ್ ನಗರ, ಅರುಣಾಚಲ ಪ್ರದೇಶದ ಜಿರೋ ಮತ್ತು ನಾಗಾಲ್ಯಾಂಡ್‌ನ ಮೊಕೊಕ್ಚುಂಗ್ ಎಂಬ ನಾಲ್ಕು ʻಐಎಪಿʼಗಳು ಶೀತಲಜಲ ಮೀನುಗಾರಿಕೆ ಅಡಿಯಲ್ಲಿ ಬರುತ್ತವೆ. ಗಮನಾರ್ಹವಾಗಿ, ʻಆಕ್ವಾ ಪಾರ್ಕ್ʼಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ, ಮೀನುಗಾರಿಕೆ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ ಮತ್ತು ಮೌಲ್ಯ ಸರಪಳಿಯುದ್ದಕ್ಕೂ ಆದಿಯಿಂದ ಅಂತ್ಯದವರೆಗೆ ಸಮಗ್ರ ಸಂಪರ್ಕವನ್ನು ಖಚಿತಪಡಿಸುತ್ತವೆ.

ಇದಲ್ಲದೆ, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ಶೀತಲಜಲ ಮೀನುಗಾರಿಕೆ ಕ್ಲಸ್ಟರ್‌ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಿದೆ. ಜಮ್ಮು-ಕಾಶ್ಮೀರದಲ್ಲಿದಲ್ಲಿ ಅನಂತನಾಗ್ ಜಿಲ್ಲೆ, ಉತ್ತರಾಖಂಡದಲ್ಲಿ ಪಿಥೋರಗಢ ಜಿಲ್ಲೆ ಮತ್ತು ಹಿಮಾಚಲ ಪ್ರದೇಶದಲ್ಲಿ ಕುಲು ಅನ್ನು ಮುಂಚೂಣಿ ಜಿಲ್ಲೆಗಳನ್ನಾಗಿ ಗುರುತಿಸಲಾಗಿದೆ.

ಭವಿಷ್ಯದಲ್ಲಿ ಒಳನಾಡು ಮತ್ತು ಎತ್ತರದ ಪ್ರದೇಶದ ಜಲಚರ ಸಾಕಣೆಗಾಗಿ ಪೂರೈಕೆ ಸರಪಳಿಯನ್ನು ಬಲಪಡಿಸುವ ಸಲುವಾಗಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆಯು ಡ್ರೋನ್ ತಂತ್ರಜ್ಞಾನದ ಮೂಲಕ ಭಾರತದ ಜಲಚರ ಸಾಕಣೆ ಸಂಬಂಧಿತ ಸರಕು-ಸಾಗಣೆಗೆ ಮಾನವರಹಿತ ವೈಮಾನಿಕ ವಾಹನಗಳನ್ನು ಬಳಸುತ್ತಿದೆ. ಸಾಂಪ್ರದಾಯಿಕ ಸಾರಿಗೆ ನಿಧಾನ ಅಥವಾ ವಿಶ್ವಾಸಾರ್ಹವಲ್ಲದ ದೂರದ ಮತ್ತು ಮೂಲಸೌಕರ್ಯಗಳ ಕೊರತೆಯಿರುವ ಪ್ರದೇಶಗಳಲ್ಲಿ ಡ್ರೋನ್ ಸಾರಿಗೆಯು ಮತ್ಸ್ಯ ಸಂಪತ್ತು ಹಾಳಾಗುವುದನ್ನು ಕಡಿಮೆ ಮಾಡುತ್ತದೆ, ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ ಮತ್ತು ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ.

 

*****


(ಪ್ರಕಟಣೆ ಐ.ಡಿ.: 2239524) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Malayalam