ಪ್ರಧಾನ ಮಂತ್ರಿಯವರ ಕಛೇರಿ
ಎನ್‌ಎಕ್ಸ್‌ಟಿ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
12 MAR 2026 9:57PM by PIB Bengaluru
ಇಂದು, ಮಾರ್ಚ್ 12, ಬಹಳ ಐತಿಹಾಸಿಕ ದಿನ. 1930 ಮಾರ್ಚ್ 12ರಂದು, ಮಹಾತ್ಮ ಗಾಂಧಿ ಅವರು ಸಬರಮತಿ ಆಶ್ರಮದಿಂದ ದಂಡಿಯಾತ್ರೆ ಪ್ರಾರಂಭಿಸಿದರು. ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಮಹತ್ವದ ತಿರುವು, ಏಕೆಂದರೆ ಈ ಪ್ರಯಾಣವು ದೇಶದ ಪ್ರತಿಯೊಂದು ಮೂಲೆಯನ್ನು ಒಂದೇ ಗುರಿಯೊಂದಿಗೆ ಸಂಪರ್ಕಿಸಿತು. ಅದೇ ಭಾರತದ ಸ್ವಾತಂತ್ರ್ಯ. ಇಂದು ಈ ಐತಿಹಾಸಿಕ ಪ್ರಯಾಣದ ಸುಮಾರು 100 ವರ್ಷಗಳ ನಂತರ, ನಾವು ಭಾರತೀಯರು ಮತ್ತೊಂದು ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಪ್ರಯಾಣವು ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ(ವಿಕಸಿತ ಭಾರತ). ನಮ್ಮ ಗುರಿ ಒಂದೇ, ನಮ್ಮ ಗಮ್ಯಸ್ಥಾನ ಒಂದೇ – ಅದೇ ಅಭಿವೃದ್ಧಿ ಹೊಂದಿದ ಭಾರತ. ಈ ಗುರಿ ಸಾಧಿಸುವಲ್ಲಿ ಇಂತಹ ಶೃಂಗಗಳಲ್ಲಿ ನಡೆಯುವ ಚಿಂತನ ಮಂಥನ ಮತ್ತು ಅವುಗಳಿಂದ ಪಡೆದ ಅಮೃತವು ದೊಡ್ಡ ಪಾತ್ರ ವಹಿಸುತ್ತದೆ. ಮುಂದಿನ ಶೃಂಗಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ದೇಶ ಮತ್ತು ವಿಶ್ವದ ಅನೇಕ ಸಹೋದ್ಯೋಗಿಗಳು ಇಲ್ಲಿಗೆ ಬಂದಿದ್ದಾರೆ, ಕೆಲವರು ಹಳೆಯ ಪರಿಚಯಸ್ಥರು ಇದ್ದಾರೆ. ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ.
ಸ್ನೇಹಿತರೆ,
21ನೇ ಶತಮಾನದ ಈ ಅವಧಿಯು "ನ ಭೂತೋ ನ ಭವಿಷ್ಯತಿ"ಯಂತಿದೆ (ಹಿಂದೆಯೂ ನಡೆದಿಲ್ಲ, ಭವಿಷ್ಯದಲ್ಲಿಯೂ ಸಂಭವಿಸುವುದಿಲ್ಲ). ಒಂದೆಡೆ ಯುದ್ಧದ ಭಯಾನಕತೆ, ಪೂರೈಕೆ ಸರಪಳಿಗಳು ಮತ್ತೆ ನಾಶವಾಗುತ್ತಿವೆ. ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳ ಪ್ರಸ್ತುತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಇಂತಹ ಅವಧಿಯಲ್ಲಿ, ನಮ್ಮ ಭಾರತವು ಈ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಹ ಮುಂದುವರಿಯುತ್ತಿದೆ. ಇಂದು ಇತಿಹಾಸದ ಒಂದು ಪ್ರಮುಖ ಹಂತದಲ್ಲಿ, ಹೆಚ್ಚು ಚರ್ಚಿಸಲ್ಪಡುವ ದೇಶ ಭಾರತ. ಪ್ರಸ್ತುತ ಹಲವಾರು ಬಿಕ್ಕಟ್ಟುಗಳ ನಡುವೆ, ಪ್ರಪಂಚದ ಪ್ರತಿಯೊಬ್ಬ ಗಂಭೀರ ನಾಯಕ ಮತ್ತು ಪ್ರತಿಯೊಬ್ಬ ಜ್ಞಾನವುಳ್ಳ ವ್ಯಕ್ತಿಯು ಭಾರತದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಫಿನ್ ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಭಾರತಕ್ಕೆ ಬಂದರು. ಜಾಗತಿಕ ದಕ್ಷಿಣವು ಈಗ ವಿಶ್ವದ ದಿಕ್ಕನ್ನು ನಿರ್ಧರಿಸುತ್ತದೆ, ಆ ದಿಕ್ಕನ್ನು ನಿರ್ಧರಿಸುವ ಅತ್ಯಂತ ಶಕ್ತಿಶಾಲಿ ದೇಶ ಭಾರತವಾಗಿರುತ್ತದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು, ಕೆನಡಾದ ಪ್ರಧಾನಿ ಕಾರ್ನಿ ಅವರು, ಮುಂದಿನ 3 ದಶಕಗಳಲ್ಲಿ ವಿಶ್ವದ ಆರ್ಥಿಕ ಗುರುತ್ವಾಕರ್ಷಣೆಯು ಬದಲಾಗುತ್ತಿರುವ ಕೇಂದ್ರ ಭಾರತ ಎಂದು ಹೇಳಿದರು. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರು ವಿಶ್ವದ ಅತಿದೊಡ್ಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತವು ಅನಿವಾರ್ಯ ಪಾಲುದಾರನಾಗಿದೆ ಎಂದು ನಂಬುತ್ತಾರೆ. ಇಂದು ತಂತ್ರಜ್ಞಾನ ಮತ್ತು ಆರ್ಥಿಕ ಜಗತ್ತಿನ ಜಾಗತಿಕ ನಾಯಕರ ಹೇಳಿಕೆಗಳ ಸಾರವನ್ನು ನಾವು ಹೊರತೆಗೆದರೆ, ಒಂದೇ ಒಂದು ಭಾವನೆ ಹೊರಹೊಮ್ಮುತ್ತದೆ. ನೀವು ಭವಿಷ್ಯದ ಭಾಗವಾಗಲು ಬಯಸಿದರೆ, ನೀವು ಭಾರತದೊಂದಿಗೆ ಸಂಬಂಧ ಹೊಂದಿರಬೇಕು; ನೀವು ಭಾರತದಲ್ಲಿರಬೇಕು ಎಂಬುದು.
ಸ್ನೇಹಿತರೆ,
ಇದೀಗ ಭಾರತ ಟಿ20 ವಿಶ್ವಕಪ್ ಗೆದ್ದಿದೆ, ಎಲ್ಲರೂ ಸಂತೋಷವಾಗಿದ್ದಾರೆ. ಭಾರತದಲ್ಲಿ ಕ್ರಿಕೆಟ್ ವಿಷಯ ಹೇಗಿದೆಯೆಂದರೆ, ಯಾವುದೋ ಕಚೇರಿಯಲ್ಲಿ ಕೋಟಿಗಳ ಬಗ್ಗೆ ಮಾತು ನಡೆಯುತ್ತಿದ್ದರೆ, ಯಾವುದೋ ಉತ್ತಮ ಪ್ರಸ್ತುತಿ ನಡೆಯುತ್ತಿದ್ದರೆ, ವಿದೇಶದಿಂದ ಬಂದ ಅತಿಥಿಗಳು ಪ್ರಸ್ತುತಿ ನೀಡುತ್ತಿರುವಾಗಲೂ, ಅವರು ಸ್ಕೋರ್ ಏನೆಂದು ನೋಡಲು ಒಂದು ಕ್ಷಣ ಸ್ಲೈಡ್‌ನಿಂದ ತಮ್ಮ ಕಣ್ಣು ಹಾಯಿಸುತ್ತಾರೆ. ಯಾರಾದರೂ ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಕೇಳುತ್ತಾರೆ - ಸಹೋದರ, ಸ್ಕೋರ್ ಏನಾಯಿತು? ಇಂದು ಭಾರತೀಯ ಆರ್ಥಿಕತೆಗೂ ಅದೇ ಪರಿಸ್ಥಿತಿ ಇದೆ. ಇಂದು ಪ್ರತಿಯೊಬ್ಬರೂ ಆರ್ಥಿಕತೆಯ ರನ್ನಿಂಗ್ ಕಾಮೆಂಟರಿ ಬಯಸುತ್ತಾರೆ. ಕಳೆದ ತಿಂಗಳು ಭಾರತದ ಆರ್ಥಿಕತೆಯ ಸ್ಥಿತಿ ಹೇಗಿತ್ತು? ಇಂದಿನ ಸ್ಥಿತಿ ಏನು? ಇದನ್ನೆಲ್ಲ ತಿಳಿದುಕೊಳ್ಳಲು ದೇಶವಾಸಿಗಳು ಕುತೂಹಲದಿಂದ ಇದ್ದಾರೆ. ದೇಶದಲ್ಲಿ ಮೊದಲು ಅಂತಹ ಕುತೂಹಲ ಇತ್ತೋ ಇಲ್ಲವೋ ನನಗೆ ನೆನಪಿಲ್ಲ. ಅದು ಇದ್ದಿದ್ದರೆ, ಅದು ಯಾವಾಗ? ಇದು ಇಂದು ಭಾರತೀಯರ ಆಕಾಂಕ್ಷೆಗಳು ಮತ್ತು ಆತ್ಮವಿಶ್ವಾಸದ ಮಟ್ಟವನ್ನು ತೋರಿಸುತ್ತದೆ. ಭಾರತದ ಮೇಲಿನ ವಿಶ್ವದ ನಂಬಿಕೆಗೆ ಇದು ದೊಡ್ಡ ಕಾರಣವೂ ಆಗಿದೆ.
ಮತ್ತು ಸ್ನೇಹಿತರೆ,
ಖಂಡಿತ, ಇಷ್ಟೊಂದು ನಿರೀಕ್ಷೆಗಳು ಇದ್ದಾಗ, ವಿಶ್ವದ ಕಣ್ಣುಗಳು ನಮ್ಮ ದೇಶದ ಮೇಲೆ ಇರುವಾಗ, ನಮ್ಮೆಲ್ಲರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.
ಸ್ನೇಹಿತರೆ,
ಇಂದಿನ ಭಾರತವು ಕೇವಲ ಮುಂದುವರಿಯುತ್ತಿಲ್ಲ. ಭಾರತವು ತನ್ನನ್ನು ತಾನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದೆ. ಇಂದು ದೇಶದಲ್ಲಿ ಮುಂದಿನ ಪೀಳಿಗೆಯ ಭೌತಿಕ ಮೂಲಸೌಕರ್ಯ ನಿರ್ಮಿಸಲಾಗುತ್ತಿದೆ; ನಾವು ಮುಂದಿನ ಪೀಳಿಗೆಯ ಡಿಜಿಟಲ್ ಮೂಲಸೌಕರ್ಯದತ್ತ ಸಾಗುತ್ತಿದ್ದೇವೆ. ಯುಪಿಐ ಡಿಜಿಟಲ್ ಪಾವತಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗದ ನೈಜ-ಸಮಯದ ಡಿಜಿಟಲ್ ಪಾವತಿಗಳನ್ನು ಹೊಂದಿರುವ ದೇಶವಾಗಿದೆ.
ಸ್ನೇಹಿತರೆ,
ಭಾರತವು ಇಂದು ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಮಾಡುತ್ತಿದೆ; ಅದು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸವಾರಿ ಮಾಡುತ್ತಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಅನೇಕ ಕಾರ್ಯಗಳು ಮತ್ತು ಅನೇಕ ನಿರ್ಧಾರಗಳನ್ನು ಅಸಾಧ್ಯ ಎಂದು ಪರಿಗಣಿಸಲಾಗಿತ್ತು. ಆದರೆ ಇಂದು ಭಾರತವು ಆ ನಿರ್ಧಾರಗಳನ್ನು ಸಹ ತೆಗೆದುಕೊಳ್ಳುತ್ತಿದೆ. 30 ನೇ ವಿಧಿ ರದ್ಧತಿ ಅಸಾಧ್ಯವೆಂದು ಒಮ್ಮೆ ಹೇಳಲಾಗಿತ್ತು. ಆದರೆ ಇಂದು ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯ ಗೋಡೆ ಕುಸಿದಿದೆ. ಒಂದು ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಎಲ್ಲರ ಸಂಪರ್ಕ ಅಸಾಧ್ಯವೆಂದು ತೋರುತ್ತಿತ್ತು. ಆದರೆ ಇಂದು 50 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳು ಇದನ್ನು ಸಾಧ್ಯವಾಗಿಸಿವೆ. ಒಂದು ಕಾಲದಲ್ಲಿ, ತ್ರಿವಳಿ ತಲಾಖ್ ಕೊನೆಗೊಳಿಸುವುದು ಅಸಾಧ್ಯವೆಂದು ಭಾವಿಸಲಾಗಿತ್ತು. ಆದರೆ ಇಂದು ಮುಸ್ಲಿಂ ಸಹೋದರಿಯರು ಈ ಅನ್ಯಾಯದಿಂದ ಸ್ವಾತಂತ್ರ್ಯ ಪಡೆದಿದ್ದಾರೆ. ಒಂದು ಕಾಲದಲ್ಲಿ, ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಅಸಾಧ್ಯವೆಂದು ತೋರುತ್ತಿತ್ತು. ಆದರೆ ಇಂದು ಇದಕ್ಕಾಗಿ ಒಂದು ಕಾನೂನು ಮಾಡಲಾಗಿದೆ. ಒಂದು ಕಾಲದಲ್ಲಿ, ಬಾಹ್ಯಾಕಾಶ ಮತ್ತು ಮುಂದುವರಿದ ತಂತ್ರಜ್ಞಾನದಲ್ಲಿ ಭಾರತದ ಮಿತಿಗಳನ್ನು ಎತ್ತಿ ತೋರಿಸಲಾಯಿತು. ಆದರೆ ಇಂದು ಮೂನ್ ಮಿಷನ್, ಸೆಮಿಕಂಡಕ್ಟರ್ ಮಿಷನ್, ಕ್ವಾಂಟಮ್ ಮಿಷನ್ - ಇವೆಲ್ಲವೂ ಭಾರತವನ್ನು ತಂತ್ರಜ್ಞಾನದ ಮುಂದಿನ ಗಡಿಯತ್ತ ಕೊಂಡೊಯ್ಯುತ್ತಿವೆ.
ಸ್ನೇಹಿತರೆ,
ಇಂದಿನ ಭಾರತವು ಕೇವಲ ಕನಸುಗಳನ್ನು ಕಾಣುತ್ತಿಲ್ಲ. ಭಾರತ ಅವುಗಳನ್ನು ನನಸಾಗಿಸುತ್ತಿದೆ. ಅದಕ್ಕಾಗಿಯೇ ಇಂದು ಜಗತ್ತು ಭಾರತವು ಕೇವಲ ಪ್ರಗತಿ ಸಾಧಿಸುತ್ತಿಲ್ಲ ಎಂದು ಹೇಳುತ್ತಿದೆ. ಭಾರತ ಮುಂದಕ್ಕೆ ಸಾಗುತ್ತಿದೆ.
ಸ್ನೇಹಿತರೆ,
ದೇಶದ ಅಭಿವೃದ್ಧಿಗೆ ಬಹಳ ಮುಖ್ಯವಾದ ಆಧಾರವೆಂದರೆ, ನಾವು ಸವಾಲುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು. ಜಾಗತಿಕ ಪರಿಸ್ಥಿತಿಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕಳೆದ ವರ್ಷಗಳಲ್ಲಿ ನಾವು ಮೊದಲು ಕೊರೊನಾದ ವಿಪತ್ತು ನೋಡಿದ್ದೇವೆ, ನಂತರ ರಷ್ಯಾ-ಉಕ್ರೇನ್ ಬಿಕ್ಕಟ್ಟು ನೋಡಿದ್ದೇವೆ ಮತ್ತು ಈಗ ಮತ್ತೊಂದು ದೊಡ್ಡ ಯುದ್ಧವು ನಮಗೆ ಬಹಳ ಹತ್ತಿರದಲ್ಲಿದೆ. ಈ ಯುದ್ಧವು ಇಡೀ ಜಗತ್ತನ್ನು ಬಹುದೊಡ್ಡ ಇಂಧನ ಬಿಕ್ಕಟ್ಟಿಗೆ ತಳ್ಳಿದೆ.
ಸ್ನೇಹಿತರೆ,
ಇಂತಹ ವಿಷಮ ಪರಿಸ್ಥಿತಿಯಲ್ಲಿ, ಒಂದು ರಾಷ್ಟ್ರವಾಗಿ ನಾವು ಇದರೊಂದಿಗೆ ಹೇಗೆ ಸ್ಪರ್ಧಿಸುತ್ತೇವೆ ಎಂಬುದು ಬಹಳ ಮುಖ್ಯ. ಬಿಕ್ಕಟ್ಟಿನ ಸಮಯವು ಒಂದು ರೀತಿಯಲ್ಲಿ ಇಡೀ ರಾಷ್ಟ್ರಕ್ಕ ಪರೀಕ್ಷೆಯಾಗಿದೆ. ನಾವು ಪರಿಸ್ಥಿತಿಯನ್ನು ಶಾಂತಿ ಮತ್ತು ತಾಳ್ಮೆಯಿಂದ ಎದುರಿಸಬೇಕು. ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವ ಮೂಲಕ ಮತ್ತು ಜನರನ್ನು ಜಾಗೃತಗೊಳಿಸುವ ಮೂಲಕ ನಾವು ಮುಂದುವರಿಯಬೇಕು. ಇದರಲ್ಲಿ ಪ್ರತಿಯೊಬ್ಬರ ಪಾತ್ರವಿದೆ. ಪ್ರತಿಯೊಂದು ರಾಜಕೀಯ ಪಕ್ಷ, ಮಾಧ್ಯಮ, ಸಾಮಾಜಿಕ ಸಂಸ್ಥೆಗಳು, ಉದ್ಯಮ, ಯುವಕರು, ಹಳ್ಳಿ, ನಗರ ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ಕೊರೊನಾ ಅವಧಿಯಲ್ಲಿ ಎಲ್ಲರೂ ಒಟ್ಟಾಗಿ ಸಾಗಿದಾಗ, ಬಿಕ್ಕಟ್ಟಿನೊಂದಿಗೆ ಸ್ಪರ್ಧಿಸುವ ದೇಶದ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಇಂದು ದೇಶದ ಮುಂದೆ ಮತ್ತೊಂದು ಸವಾಲು ಇದೆ. ಆದ್ದರಿಂದ, ನಾವು ಒಟ್ಟಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿ ಪ್ರಮುಖವಾಗಿಟ್ಟುಕೊಂಡು ನಮ್ಮ ಕರ್ತವ್ಯಗಳನ್ನು ಪೂರೈಸಬೇಕಾಗುತ್ತದೆ.
ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ತಮ್ಮದೇ ಆದ ಕಾರ್ಯಸೂಚಿ ಮುಂದಿಡಲು, ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ನಾನು ಅವರ ಬಗ್ಗೆ ರಾಜಕೀಯ ಟೀಕೆಗಳನ್ನು ಮಾಡಲು ಬಯಸುವುದಿಲ್ಲ. ಆದರೆ ಹಾಗೆ ಮಾಡುವುದರಿಂದ, ಅವರು ಸಾರ್ವಜನಿಕರ ಮುಂದೆ ಸ್ವತಃ ಬಹಿರಂಗಗೊಳ್ಳುತ್ತಿದ್ದಾರೆ, ದೇಶಕ್ಕೆ ದೊಡ್ಡ ಹಾನಿ ಉಂಟುಮಾಡುತ್ತಿದ್ದಾರೆ ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ.
ಸ್ನೇಹಿತರೆ,
ಇಂದು ಯುದ್ಧದಿಂದ ಉಂಟಾದ ಈ ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ಯಾವುದೇ ದೇಶವು ಹೊರತಾಗಿಲ್ಲ. ಹೆಚ್ಚು ಕಡಿಮೆ ಪ್ರಮಾಣದಲ್ಲಿ ಎಲ್ಲರೂ ಬಲಿಪಶುಗಳೇ. ಭಾರತ ಸರ್ಕಾರವೂ ಸಹ ಈ ಬಿಕ್ಕಟ್ಟನ್ನು ಎದುರಿಸಲು ಯಾವುದೇ ಅವಕಾಶ ಬಿಡುತ್ತಿಲ್ಲ. ನಾವು ವಿವಿಧ ಹಂತಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಾನು ಅನೇಕ ದೇಶಗಳ ಉನ್ನತ ನಾಯಕರೊಂದಿಗೆ ಇದರ ಬಗ್ಗೆ ಸಂಭಾಷಣೆ ನಡೆಸಿದ್ದೇನೆ. ಪೂರೈಕೆ ಸರಪಳಿಯಲ್ಲಿ ಉದ್ಭವಿಸಿರುವ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಗಳು ನಡೆಯುತ್ತಿವೆ.
ಸ್ನೇಹಿತರೆ,
ಭಾರತದ ತ್ವರಿತ ಅಭಿವೃದ್ಧಿಯನ್ನು ಬೆಂಬಲಿಸಲು, ವಿವಿಧ ಇಂಧನ ಮೂಲಗಳನ್ನು ನಿರಂತರವಾಗಿ ಉತ್ತೇಜಿಸುವುದು ಅಗತ್ಯವಾಗಿದೆ. ಇದನ್ನು ಬಲಪಡಿಸಲು, ನಾವು ಏಕಕಾಲದಲ್ಲಿ 2 ಹಂತಗಳಲ್ಲಿ ಕೆಲಸ ಮಾಡಿದ್ದೇವೆ. ಮೊದಲನೆಯದಾಗಿ, ದೇಶದಲ್ಲಿ ಇಂಧನ ಪ್ರವೇಶ ಹೆಚ್ಚಾಗುತ್ತಿದೆ, ನಾವು ಮೂಲಸೌಕರ್ಯವನ್ನು ಸಿದ್ಧಪಡಿಸಿದ್ದೇವೆ.
ಎರಡನೆಯದಾಗಿ, ನಾವು ಇಂಧನಕ್ಕಾಗಿ ವಿದೇಶಗಳ ಮೇಲೆ ಮಾತ್ರ ಅವಲಂಬಿತರಾಗಬೇಕಾಗಿಲ್ಲ, ನಾವು ಇಂಧನ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡಿದ್ದೇವೆ. ಈಗ ನಾನು ನಿಮಗೆ ಅನಿಲ ಕ್ಷೇತ್ರದ ಕೆಲವು ಅಂಕಿಅಂಶಗಳನ್ನು ನೀಡುತ್ತೇನೆ. 2014ರ ಹೊತ್ತಿಗೆ, ದೇಶದಲ್ಲಿ ಕೇವಲ 14 ಕೋಟಿ ಎಲ್‌ಪಿಜಿ ಸಂಪರ್ಕಗಳು ಇದ್ದವು. ಅಂದರೆ, ದೇಶದಲ್ಲಿ ಕೇವಲ ಅರ್ಧದಷ್ಟು ಕುಟುಂಬಗಳು ಮಾತ್ರ ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿದ್ದವು. ಇಂದು ಆ ಸಂಖ್ಯೆ 2 ಪಟ್ಟು ಹೆಚ್ಚಾಗಿದೆ, ಅಂದರೆ ಸುಮಾರು 33 ಕೋಟಿ ದೇಶೀಯ ಎಲ್‌ಪಿಜಿ ಸಂಪರ್ಕಗಳಿವೆ. ಕಳೆದ 11 ವರ್ಷಗಳಲ್ಲಿ ನಾವು ನಮ್ಮ ಬಾಟಲ್ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದೇವೆ. ವಿತರಣಾ ಕೇಂದ್ರಗಳು ಸಹ 13,000ದಿಂದ 25,000ಕ್ಕಿಂತ ಹೆಚ್ಚಿವೆ. 2014ರಲ್ಲಿ ದೇಶದಲ್ಲಿ ಕೇವಲ 4 ಎಲ್ಎನ್ ಜಿ ಟರ್ಮಿನಲ್‌ಗಳು ಇದ್ದವು. ಇಂದು ಅವುಗಳ ಸಂಖ್ಯೆಯೂ ದ್ವಿಗುಣಗೊಂಡಿದೆ. ಸುಮಾರು 3,500 ಕಿಲೋಮೀಟರ್ ಉದ್ದವಿದ್ದ ಅನಿಲ ಪೈಪ್‌ಲೈನ್ ಅನ್ನು 10,000 ಕಿಲೋಮೀಟರ್‌ಗಳಿಗೆ ವಿಸ್ತರಿಸಲಾಗಿದೆ. ಸುಮಾರು 60 ಪ್ರತಿಶತ ಎಲ್‌ಪಿಜಿ ವಿದೇಶದಿಂದ ಬರುವುದರಿಂದ, ದೇಶದ ದೊಡ್ಡ ಬಂದರುಗಳಲ್ಲಿ ಆಮದು ಟರ್ಮಿನಲ್ ಸಾಮರ್ಥ್ಯವನ್ನು ಸಹ ಗಮನಾರ್ಹವಾಗಿ ವಿಸ್ತರಿಸಲಾಗಿದೆ.
ಸ್ನೇಹಿತರೆ,
2014ರ ಮೊದಲು ದೇಶದಲ್ಲಿ ಕೇವಲ 25-26 ಲಕ್ಷ ಮನೆಗಳಿಗೆ ಪೈಪ್‌ಗಳ ಮೂಲಕ ಅಗ್ಗದ ಅನಿಲ, ಅಂದರೆ ಪಿಎನ್‌ಜಿ ಲಭ್ಯವಿತ್ತು. ಇಂದು ಈ ಸಂಖ್ಯೆ 1.25 ಕೋಟಿಗೂ ಹೆಚ್ಚು ತಲುಪಿದೆ. 2014ರಲ್ಲಿ ದೇಶದಲ್ಲಿ ಸಿಎನ್‌ಜಿಯಲ್ಲಿ ಚಲಿಸುವ ವಾಹನಗಳು ಸಹ 10 ಲಕ್ಷಕ್ಕಿಂತ ಹೆಚ್ಚಿರಲಿಲ್ಲ. ಇಂದು ಈ ಸಂಖ್ಯೆ 70 ಲಕ್ಷಕ್ಕಿಂತ ಹೆಚ್ಚಿದೆ. ಕಳೆದ ದಶಕದಲ್ಲಿ ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲಗಳನ್ನು ಸ್ಥಾಪಿಸಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತಿದೆ.
ಸ್ನೇಹಿತರೆ,
ಈ ಜಾಗತಿಕ ಬಿಕ್ಕಟ್ಟು ಮತ್ತೊಮ್ಮೆ ಯಾವುದೇ ದೇಶವು ಸ್ವಾವಲಂಬಿಯಾಗಿರುವುದು ಏಕೆ ಅಗತ್ಯ ಎಂಬುದನ್ನು ತೋರಿಸಿದೆ. ಅದಕ್ಕಾಗಿಯೇ ಕಳೆದ ವರ್ಷಗಳಲ್ಲಿ ಭಾರತವನ್ನು ಇಂಧನ ವಲಯಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ನಾವು ಸಮಗ್ರ ರೀತಿಯಲ್ಲಿ ಕೆಲಸ ಮಾಡಿದ್ದೇವೆ.
ಸ್ನೇಹಿತರೆ,
ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆ ಮಾಡಲು ನಾವು ಎಥೆನಾಲ್ ಮತ್ತು ಜೈವಿಕ ಇಂಧನಗಳಿಗೆ ಒತ್ತು ನೀಡಿದ್ದೇವೆ. 2014ರ ಮೊದಲು ದೇಶವು ಕೇವಲ ಒಂದೂವರೆ ಪ್ರತಿಶತ ಎಥೆನಾಲ್ ಮಿಶ್ರಣ ಸಾಮರ್ಥ್ಯ ಹೊಂದಿತ್ತು. ಇಂದು ನಾವು ಪೆಟ್ರೋಲ್‌ನಲ್ಲಿ ಸುಮಾರು 20 ಪ್ರತಿಶತ ಎಥೆನಾಲ್ ಮಿಶ್ರಣ ಮಾಡುವುದನ್ನು ತಲುಪುತ್ತಿದ್ದೇವೆ. ಈ ಕೆಲಸ ನಡೆಯದಿದ್ದರೆ ಕಳೆದ 11 ವರ್ಷಗಳಲ್ಲಿ ನಾವು ವಿದೇಶದಿಂದ ಸುಮಾರು 18 ಕೋಟಿ ಬ್ಯಾರೆಲ್‌ಗಳಷ್ಟು ಹೆಚ್ಚುವರಿ ತೈಲವನ್ನು ಖರೀದಿಸಬೇಕಾಗಿತ್ತು. ಇಂದಿನ ಪರಿಸ್ಥಿತಿಯನ್ನು ನೋಡಿದರೆ, ಎಥೆನಾಲ್‌ನಿಂದಾಗಿ ನಾವು ವರ್ಷಕ್ಕೆ ಸುಮಾರು 4.5 ಕೋಟಿ ಬ್ಯಾರೆಲ್‌ಗಳಷ್ಟು ಕಡಿಮೆ ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಅಂದರೆ ದೇಶವು ಇದರಿಂದ ಮಾತ್ರ ಸುಮಾರು 1.5 ಲಕ್ಷ ಕೋಟಿ ರೂಪಾಯಿ ಉಳಿಸಿದೆ.
ಸ್ನೇಹಿತರೆ,
ಭಾರತದಲ್ಲಿ ಪೆಟ್ರೋಲಿಯಂನ ಅತ್ಯಂತ ದೊಡ್ಡ ಬಳಕೆದಾರ ನಮ್ಮ ರೈಲ್ವೆ. ನಮ್ಮ ದೇಶದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣವು 60 ವರ್ಷಗಳ ಹಿಂದೆ ಪ್ರಾರಂಭವಾಯಿತು. ಇದರ ಹೊರತಾಗಿಯೂ 2014ರ ವರೆಗೆ ಕೇವಲ 20 ಪ್ರತಿಶತದಷ್ಟು ರೈಲ್ವೆ ಮಾರ್ಗಗಳನ್ನು ಮಾತ್ರ ವಿದ್ಯುದ್ದೀಕರಿಸಬಹುದಿತ್ತು. ಉಳಿದ ರೈಲ್ವೆ ಮಾರ್ಗಗಳಲ್ಲಿ, ಸಾವಿರಾರು ಡೀಸೆಲ್ ಎಂಜಿನ್‌ಗಳು ಓಡುತ್ತಿದ್ದವು. ಇಂದು ಭಾರತದಲ್ಲಿ ಬ್ರಾಡ್-ಗೇಜ್ ಜಾಲದ ಸುಮಾರು 100 ಪ್ರತಿಶತ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಈ ಕಾರಣದಿಂದಾಗಿ, 2024-25ನೇ ವರ್ಷದಲ್ಲಿ ಭಾರತೀಯ ರೈಲ್ವೆ ಸುಮಾರು 180 ಕೋಟಿ ಲೀಟರ್ ಡೀಸೆಲ್ ಉಳಿಸಿದೆ. ವಿದ್ಯುದೀಕರಣ ಆಗದಿದ್ದರೆ, ಇಷ್ಟೊಂದು ಡೀಸೆಲ್ ಉತ್ಪಾದಿಸಲು ಪ್ರತಿ ವರ್ಷ ಹೆಚ್ಚುವರಿ ಕಚ್ಚಾ ತೈಲ ಆಮದು ಮಾಡಿಕೊಳ್ಳಬೇಕಾಗಿತ್ತು. ಅದೇ ರೀತಿ ನಾವು ಮೆಟ್ರೋ ಜಾಲವನ್ನು ಹೆಚ್ಚಿಸಿದ್ದೇವೆ, ವಿದ್ಯುತ್ ಚಲನಶೀಲತೆಯ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.
ಅದೇ ರೀತಿ, ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ ನಾವು ಮತ್ತೊಂದು ದೊಡ್ಡ ಕೆಲಸ ಮಾಡಿದ್ದೇವೆ. ಇಂದು ನಮ್ಮ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟು ನವೀಕರಿಸಬಹುದಾದ ಮೂಲಗಳಿಂದ ಬಂದಿದೆ. ನಮ್ಮ ಇಂದಿನ ಒಟ್ಟು ನವೀಕರಿಸಬಹುದಾದ ಸಾಮರ್ಥ್ಯವು 250 ಗಿಗಾವ್ಯಾಟ್‌ಗಳ ಐತಿಹಾಸಿಕ ಅಂಕಿಅಂಶ ದಾಟಿದೆ. ಸ್ವಲ್ಪ ಯೋಚಿಸಿ, 2014ರಲ್ಲಿ ಭಾರತದ ಸೌರಶಕ್ತಿ ಸಾಮರ್ಥ್ಯವು ಕೇವಲ 2 ಗಿಗಾವ್ಯಾಟ್‌ಗಳಷ್ಟಿತ್ತು. ಇಂದು ಅದು ಸುಮಾರು 40 ಪಟ್ಟು ಹೆಚ್ಚಾಗಿ 130 ಗಿಗಾವ್ಯಾಟ್‌ಗಳಿಗೆ ತಲುಪಿದೆ. ಗೃಹ ಬಳಕೆಗಾಗಿ ಅನಿಲಕ್ಕಿಂತ ವಿದ್ಯುತ್ ಬಳಕೆಯನ್ನು ಹೆಚ್ಚಿಸಲು, ಪ್ರಧಾನಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆ ಜಾರಿಗೆ ತರಲಾಯಿತು. ಇಲ್ಲಿಯವರೆಗೆ ಸುಮಾರು 30 ಲಕ್ಷ ಕುಟುಂಬಗಳು ಈ ಯೋಜನೆಯಡಿ ಮೇಲ್ಛಾವಣಿ ಸೌರಶಕ್ತಿ ಸ್ಥಾಪಿಸಿವೆ.
ಸ್ನೇಹಿತರೆ,
ಇದರ ಜೊತೆಗೆ ನಾವು ಗೋಬರ್ಧನ್ ಯೋಜನೆಯ ಮೇಲೂ ಕೆಲಸ ಮಾಡಿದ್ದೇವೆ. ಇದರ ಅಡಿ, ಸಂಕುಚಿತ ಜೈವಿಕ ಅನಿಲ ತಯಾರಿಸುವ ಕೆಲಸ ಮಾಡಲಾಗಿದೆ. ಇಲ್ಲಿಯವರೆಗೆ, ದೇಶದಲ್ಲಿ 100 ಹೆಚ್ಚು ಸ್ಥಾವರಗಳು ಪ್ರಾರಂಭವಾಗಿವೆ ಮತ್ತು 600ಕ್ಕೂ ಹೆಚ್ಚು ಕೆಲಸಗಳು ನಡೆಯುತ್ತಿವೆ.
ಸ್ನೇಹಿತರೆ,
ಪೆಟ್ರೋಲ್-ಡೀಸೆಲ್ ಕ್ಷೇತ್ರದಲ್ಲಿ, ಸಾಮರ್ಥ್ಯ ವೃದ್ಧಿಯ ದಿಕ್ಕಿನಲ್ಲಿ ನಾವು ವ್ಯಾಪಕ ಪ್ರಯತ್ನಗಳನ್ನು ಮಾಡಿದ್ದೇವೆ. 2014ಕ್ಕಿಂತ ಮೊದಲು, ಭಾರತವು ಬಹುತೇಕ ಕಾರ್ಯತಂತ್ರ ಪೆಟ್ರೋಲಿಯಂ ಮೀಸಲು(ಸಂಗ್ರಹ) ಹೊಂದಿರಲಿಲ್ಲ. ಅಂದರೆ ಬಿಕ್ಕಟ್ಟಿನ ಸಮಯದಲ್ಲಿ ಕಚ್ಚಾ ತೈಲ ಸಂಗ್ರಹಿಸುವ ಸಾಮರ್ಥ್ಯ. ಇಂದು ನಮ್ಮಲ್ಲಿ 50 ಲಕ್ಷ ಟನ್‌ಗಳಿಗಿಂತ ಹೆಚ್ಚು ಕಾರ್ಯತಂತ್ರ ಪೆಟ್ರೋಲಿಯಂ ಮೀಸಲು ಇದೆ. ಇನ್ನೂ ಹೆಚ್ಚಿನ ಸಾಮರ್ಥ್ಯಕ್ಕಾಗಿ ಕೆಲಸ ನಡೆಯುತ್ತಿದೆ. ಕಳೆದ ದಶಕದಲ್ಲಿ ನಾವು ನಮ್ಮ ಸಂಸ್ಕರಣಾ ಸಾಮರ್ಥ್ಯವನ್ನು ವಾರ್ಷಿಕವಾಗಿ 40 ದಶಲಕ್ಷ ಟನ್‌ಗಳಿಗಿಂತ ಹೆಚ್ಚಿಗೆ ಮಾಡಿದ್ದೇವೆ ಹಾಗಾಗಿ, ಭಾರತ ಇಂದು ವಿಶ್ವದ ಅತಿದೊಡ್ಡ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾಗಿದೆ. ಅಂದರೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ನಾವು ಎಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ಯಾವ ದಿಕ್ಕುಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ನೀವು ಊಹಿಸಬಹುದು. ಯುದ್ಧದಿಂದ ಉಂಟಾಗುವ ಈ ಬಿಕ್ಕಟ್ಟಿನೊಂದಿಗೆ ನಾವು ಖಂಡಿತವಾಗಿಯೂ ಸ್ಪರ್ಧಿಸಲು ಸಾಧ್ಯವಾಗುತ್ತದೆ. 140 ಕೋಟಿ ದೇಶವಾಸಿಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನಾವು ಒಟ್ಟಾಗಿ ಸಂಘಟಿತರಾಗಿ ದೇಶವನ್ನು ಕೊರೊನಾ ಬಿಕ್ಕಟ್ಟಿನಿಂದ ಹೊರತಂದಂತೆಯೇ, ಅದೇ ರೀತಿ, ನಾವು ಈ ಜಾಗತಿಕ ಬಿಕ್ಕಟ್ಟನ್ನು ಸಹ ನಿವಾರಿಸುತ್ತೇವೆ. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ, ಸರ್ಕಾರಕ್ಕೆ ಸಂಬಂಧಿಸಿದಂತೆ, ಯಾವುದೇ ರೀತಿಯ ಪ್ರಯತ್ನ ಅಥವಾ ಹೋರಾಟದಲ್ಲಿ ನಾವು ಯಾವುದೇ ಕೊರತೆ ಉಳಿಯಲು ಬಿಡುವುದಿಲ್ಲ. ಪ್ರತಿಯೊಂದು ನಿರ್ಧಾರದಲ್ಲೂ, ಸಾರ್ವಜನಿಕ ಹಿತಾಸಕ್ತಿ ಅತ್ಯುನ್ನತವಾಗಿರುತ್ತದೆ.
ಸ್ನೇಹಿತರೆ,
ಉಕ್ರೇನ್ ಯುದ್ಧದಿಂದ ಇಂದಿನವರೆಗೆ, ಅದರ ಪರಿಣಾಮವು ಜಾಗತಿಕ ಮಾರುಕಟ್ಟೆಯಿಂದ ವಿಶ್ವದ ನಾಗರಿಕರಿಗೆ ಹೇಗೆ ಬೀಳುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಯುದ್ಧದಿಂದ ಉಂಟಾದ ಸಂದರ್ಭಗಳ ಹೊರೆ ಭಾರತದ ನಾಗರಿಕರ ಮೇಲೆ ಬೀಳದಂತೆ ನೋಡಿಕೊಳ್ಳುವುದು ಭಾರತ ಸರ್ಕಾರದ ಎಲ್ಲಾ ಸಂಭಾವ್ಯ ಪ್ರಯತ್ನವಾಗಿದೆ. ಉದಾಹರಣೆಗೆ, ರಷ್ಯಾ-ಉಕ್ರೇನ್ ಬಿಕ್ಕಟ್ಟು ಉಲ್ಬಣಗೊಂಡಾಗ ರಸಗೊಬ್ಬರ ಬೆಲೆಗಳು ಗಗನಕ್ಕೇರಿದವು. ಇದರ ಹೊರತಾಗಿಯೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3000 ರೂಪಾಯಿಗೆ ಲಭ್ಯವಿರುವ ಯೂರಿಯಾ ಚೀಲವನ್ನು ನಾವು ನಮ್ಮ ರೈತರಿಗೆ ಕೇವಲ 300 ರೂಪಾಯಿಗೆ ನೀಡಿದ್ದೇವೆ. ಜಗತ್ತಿನಲ್ಲಿ 3000 ರೂಪಾಯಿ ನಡೆಯುತ್ತಿದ್ದವು, ನಮ್ಮ ಸ್ಥಳದಲ್ಲಿ ಅದನ್ನು 300 ರೂಪಾಯಿಗೆ ನೀಡಲಾಗಿದೆ. ಈ ಬಾರಿಯೂ ಸಹ, ಯುದ್ಧವು ದೇಶದ ರೈತರು ಮತ್ತು ದೇಶದ ನಾಗರಿಕರ ಜೀವನದ ಮೇಲೆ ಕನಿಷ್ಠ ಪರಿಣಾಮ ಬೀರುವಂತೆ ಮಾಡುವುದು ನಮ್ಮ ಎಲ್ಲಾ ಪ್ರಯತ್ನಗಳಾಗಿರುತ್ತದೆ.
ಸ್ನೇಹಿತರೆ,
ಇಂದಿನ ಈ ಹಂತದಿಂದ ಇಂದಿನ ಈ ಮಹತ್ವದ ಸಮಯದಲ್ಲಿ, ರಾಜ್ಯ ಸರ್ಕಾರಗಳಿಗೆ ಒಂದು ಮನವಿಯೂ ಇದೆ. ಕಾಳಸಂತೆ ನಡೆಯದಂತೆ ಮತ್ತು ವದಂತಿಗಳು ಹರಡದಂತೆ ನೋಡಿಕೊಳ್ಳುವುದು ಅವಶ್ಯಕ. ಆದ್ದರಿಂದ ಪರಿಸ್ಥಿತಿಯ ಗಂಭೀರ ಮೇಲ್ವಿಚಾರಣೆ ಅಗತ್ಯ. ಕಾಳಸಂತೆ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮವೂ ಅಗತ್ಯ.
ಸ್ನೇಹಿತರೆ,
ಕಳೆದ ದಶಕವು ಸ್ವಾವಲಂಬನೆಯ ಜೊತೆಗೆ ಸೂಕ್ಷ್ಮ ಆಡಳಿತದ ದಶಕವಾಗಿದೆ. ನಮ್ಮ ದೇಶದ ಬಹುಪಾಲು ಭಾಗ, ಅಲ್ಲಿ ವಾಸಿಸುವ ಜನರು, ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್ ಸರ್ಕಾರಗಳ ಚಿಂತನೆಯಿಂದ ದೂರವಿದ್ದರು. ಆದರೆ ನಮ್ಮ ಸರ್ಕಾರವು ಅಭಿವೃದ್ಧಿಯ ಓಟದಲ್ಲಿ ಹಿಂದುಳಿದ ಜನರನ್ನು ಆಡಳಿತದ ಆದ್ಯತೆಗಳಿಗೆ ಸಂಪರ್ಕಿಸಿದೆ. ಇಂದು ಈ ಪ್ರದೇಶಗಳಲ್ಲಿ ವಸತಿ, ರಸ್ತೆಗಳು, ಶಾಲೆಗಳು-ಆಸ್ಪತ್ರೆಗಳಂತಹ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ, ಆಕಾಂಕ್ಷೆಯ ಜಿಲ್ಲಾ ಯೋಜನೆ, ಆಕಾಂಕ್ಷೆಯ ಬ್ಲಾಕ್ ಯೋಜನೆ ಮತ್ತು ಪ್ರಧಾನ ಮಂತ್ರಿ ಜನ್ಮನ್ ಯೋಜನೆಯಂತಹ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಸ್ನೇಹಿತರೆ,
ಕಾಂಗ್ರೆಸ್ ಸರ್ಕಾರಗಳ ಒಂದು ದೊಡ್ಡ ಪಾಪವೆಂದರೆ, ಅವರು ದೇಶದ ಬಹುಭಾಗವನ್ನು ಮಾವೋವಾದಿ ಭಯೋತ್ಪಾದನೆಯ ಬೆಂಕಿಯಲ್ಲಿ ಸುಡಲು ಬಿಟ್ಟರು. ದೇಶದ ಬಹುತೇಕ ಪ್ರತಿಯೊಂದು ದೊಡ್ಡ ರಾಜ್ಯದ ಬಹುಪಾಲು ಭಾಗವು ಮಾವೋವಾದಿ ಭಯೋತ್ಪಾದನೆಯ ಹಿಡಿತದಲ್ಲಿತ್ತು. ಆದರೆ ಸ್ನೇಹಿತರೆ, ಕಳೆದ ವರ್ಷಗಳಲ್ಲಿ ದೇಶವು ಈ ಪರಿಸ್ಥಿತಿಯನ್ನು ಬದಲಾಯಿಸಲು ನಿರ್ಣಯ ತೆಗೆದುಕೊಂಡಿತು. ನಾವು ಹೆಚ್ಚಿನ ನೈತಿಕತೆಯೊಂದಿಗೆ ಮುಂದುವರೆದಿದ್ದೇವೆ. ದೇಶವು ಇಂದು ಅದರ ಫಲಿತಾಂಶ ನೋಡುತ್ತಿದೆ. 2013ರಲ್ಲಿ, 180 ಕ್ಕೂ ಹೆಚ್ಚು ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯಿಂದ ಪ್ರಭಾವಿತವಾಗಿದ್ದವು. ಆದರೆ ಇಂದು ಮಾವೋವಾದಿ ಭಯೋತ್ಪಾದನೆಯಿಂದ ಪ್ರಭಾವಿತವಾದ ಜಿಲ್ಲೆಗಳ ಸಂಖ್ಯೆ ಒಂದೇ ಅಂಕೆಗೆ ತಲುಪಿದೆ.
ಸ್ನೇಹಿತರೆ,
ಕಳೆದ ವರ್ಷವೊಂದರಲ್ಲೇ 2,100 ಹೆಚ್ಚು ನಕ್ಸಲರು ಶರಣಾಗಿದ್ದಾರೆ, 900ಕ್ಕೂ ಹೆಚ್ಚು ಬಂಧನಗಳನ್ನು ಮಾಡಲಾಗಿದೆ, ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಸಿದ್ಧರಿಲ್ಲದವರನ್ನು, ಭದ್ರತಾ ಪಡೆಗಳು 300ಕ್ಕೂ ಹೆಚ್ಚು ಅಂತಹ ಕಠಿಣ ನಕ್ಸಲರನ್ನು ಕೊಂದಿವೆ. ಇದರ ಪರಿಣಾಮವಾಗಿ, ಒಂದು ಕಾಲದಲ್ಲಿ ಭಯದ ನೆರಳಿನಲ್ಲಿ ಬದುಕುತ್ತಿದ್ದ ಪ್ರದೇಶಗಳಲ್ಲಿ ಇಂದು ಅಭಿವೃದ್ಧಿಯ ಹೊಸ ಶಕ್ತಿ ಹರಿಯುತ್ತಿದೆ.
ಸ್ನೇಹಿತರೆ,
ಇಂದು ಭಾರತವು ಮುನ್ನಡೆಯುತ್ತಿರುವ ವೇಗವು ಅದರ ಪ್ರಗತಿಯ ವೇಗವನ್ನು ತಡೆಯಲು ಅಸಾಧ್ಯವಾಗಿದೆ. 140 ಕೋಟಿ ಭಾರತೀಯರ ಆಕಾಂಕ್ಷೆ ಇಂದು ಮುಂದಿನ ಹಂತದಲ್ಲಿದೆ. ಒಂದು ಕನಸು ನನಸಾದಾಗ, ಹೊಸ ಕನಸುಗಳು, ಹೊಸ ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ನನಗೆ ತಿಳಿದಿದೆ. ನಾನು ಇದನ್ನು ಹೊರೆಯೆಂದು ಪರಿಗಣಿಸುವುದಿಲ್ಲ, ಬದಲಿಗೆ ಅದನ್ನು ಜನರ ನಂಬಿಕೆಯ ಬಂಡವಾಳವೆಂದು ಪರಿಗಣಿಸುತ್ತೇನೆ. ಹೌದು... ನಿರೀಕ್ಷೆಗಳ ಹೊರೆಯಡಿ ಮೋದಿ ಒಂದು ದಿನ ನಾಶವಾಗುತ್ತಾರೆ, ಒಂದು ದಿನ ನಿಗ್ರಹಿಸಲ್ಪಡುತ್ತಾರೆ ಎಂದು ಭಾವಿಸುವ ಕೆಲವು ಹಿತೈಷಿಗಳು ನಮ್ಮಲ್ಲಿದ್ದಾರೆ. ಆದರೆ ಅವರ ಉದ್ದೇಶ ಎಷ್ಟು ಕೆಟ್ಟದೆಂದರೆ ಅವರ ನಿರೀಕ್ಷೆಗಳು ಎಂದಿಗೂ ಈಡೇರುವುದಿಲ್ಲ, ದೇಶವಾಸಿಗಳ ಆಶೀರ್ವಾದ ಇರುವವರೆಗೆ ಅವು ಈಡೇರುವುದಿಲ್ಲ. ಈಗ 140 ಕೋಟಿ ಭಾರತೀಯರ ಭರವಸೆಗಳು ಮತ್ತು ಆಕಾಂಕ್ಷೆಗಳು ಮಾತ್ರ ಈಡೇರುತ್ತವೆ. ಭಾರತವು ಪ್ರತಿಯೊಂದು ವಲಯದಲ್ಲೂ ಸ್ವಾವಲಂಬಿಯಾಗುತ್ತಿದೆ, ಭಾರತವು ಎಲ್ಲಾ ಸ್ಥಿತಿಯಲ್ಲೂ ಅಭಿವೃದ್ಧಿ ಹೊಂದುತ್ತಿದೆ.
ಈ ಭಾವನೆಯೊಂದಿಗೆ, ನಾನು ನನ್ನ ಭಾಷಣ ಮುಕ್ತಾಯಗೊಳಿಸುತ್ತೇನೆ.
ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
ತುಂಬು ಧನ್ಯವಾದಗಳು!
*****
(ಪ್ರಕಟಣೆ ಐ.ಡಿ.: 2239480)
ವಿಸಿಟರ್ ಕೌಂಟರ್ : 9