ರೈಲ್ವೇ ಸಚಿವಾಲಯ
ರೈಲ್ವೆಯು ಪ್ರಯಾಣ ದರಗಳನ್ನು ವ್ಯಾಪಾರ ರಹಸ್ಯವೆಂದು ಪರಿಗಣಿಸುವುದಿಲ್ಲ; ಕಾಲಕಾಲಕ್ಕೆ ಕೈಗೊಳ್ಳಲಾದ ಪ್ರಯಾಣಿಕರ ದರ ತರ್ಕಬದ್ಧಗೊಳಿಸುವಿಕೆ, ಪರಿಷ್ಕರಣೆ ಇತ್ಯಾದಿಗಳಲ್ಲಿನ ಯಾವುದೇ ಬದಲಾವಣೆಗಳನ್ನು ವ್ಯಾಪಕವಾಗಿ ಪ್ರಕಟಿಸಲಾಗುತ್ತದೆ: ಶ್ರೀ ಅಶ್ವಿನಿ ವೈಷ್ಣವ್
ವಂದೇ ಭಾರತ್ ಸ್ಲೀಪರ್ ಪ್ರಯಾಣ ದರವು ಪ್ರತಿ ಪಿಕೆಎಂಗೆ ₹2.40 ರಿಂದ ₹3.80 ರವರೆಗೆ ಇರುತ್ತದೆ, ಇದು ಚೀನಾ, ಜಪಾನ್ ಮತ್ತು ಫ್ರಾನ್ಸ್‌ನಲ್ಲಿ ಇದೇ ರೀತಿಯ ಸೇವೆಗಳಿಗೆ ವಿಧಿಸುವ ದರಕ್ಕಿಂತ ಭಾರತದ ದರ ತುಂಬಾ ಕಡಿಮೆಯಾಗಿದೆ, ಅಲ್ಲಿ ಇದು ಪ್ರತಿ ಪಿಕೆಎಂಗೆ ₹7.00 ರಿಂದ ₹20.00 ವರೆಗೆ ಇರುತ್ತದೆ
ಭಾರತೀಯ ರೈಲ್ವೆ 2024–25ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ ರೂ. 60,239 ಕೋಟಿ ಸಬ್ಸಿಡಿ ನೀಡಿದೆ, ಇದರಿಂದ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿಯಾಗಿ 43% ರಷ್ಟು ರಿಯಾಯಿತಿ ನೀಡಿದಂತಾಗಿದೆ.
ರೈಲ್ವೆಯು ಹಿರಿಯ ನಾಗರಿಕರು, ಅಂಗವಿಕಲರು, 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಸ್ಲೀಪರ್, 3ಎ.ಸಿ. /2ಎ.ಸಿ. ಮತ್ತು ಮೀಸಲಾದ ಆಸನ ತರಗತಿಗಳಲ್ಲಿ ಆದ್ಯತೆಯ ಮೇರೆಗೆ ಕೆಳಗಿನ ಬರ್ತ್‌ಗಳು ಮತ್ತು ಮೀಸಲಾದ ಕೋಟಾಗಳನ್ನು ಒದಗಿಸುತ್ತದೆ
ಪ್ರಕಟಣಾ ದಿನಾಂಕ:
11 MAR 2026 6:22PM by PIB Bengaluru
ರೈಲ್ವೆ ಸಚಿವಾಲಯವು ಟಿಕೆಟ್ ದರವನ್ನು "ವ್ಯಾಪಾರ ರಹಸ್ಯ" ಎಂದು ಪರಿಗಣಿಸುವುದಿಲ್ಲ. ಎಲ್ಲಾ ವರ್ಗದ ಪ್ರಯಾಣಿಕರ ಸೇವೆಗಳ ದರಗಳಿಗೆ ಸಂಬಂಧಿಸಿದ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿರುವ ವ್ಯಾಪಕವಾಗಿ ಪ್ರಕಟಿತ ಮಾಹಿತಿಯಾಗಿದೆ.
ಭಾರತೀಯ ರೈಲ್ವೆ 2024-25ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ ರೂ. 60,239 ಕೋಟಿ ಸಬ್ಸಿಡಿಯನ್ನು ನೀಡಿತು. ಇದು ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 43% ರಿಯಾಯಿತಿಗೆ ಸಮನಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೇವೆಯನ್ನು ಒದಗಿಸುವ ವೆಚ್ಚ ರೂ. 100 ಆಗಿದ್ದರೆ, ಟಿಕೆಟ್‌ನ ಬೆಲೆ ರೂ. 57 ಮಾತ್ರ. ಈ ಸಬ್ಸಿಡಿ ಎಲ್ಲಾ ಪ್ರಯಾಣಿಕರಿಗೆ ಮುಂದುವರಿಯುತ್ತಿದೆ. ಇದಲ್ಲದೆ, ಈ ಸಬ್ಸಿಡಿ ಮೊತ್ತವನ್ನು ಮೀರಿದ ರಿಯಾಯಿತಿಗಳು 4 ವರ್ಗದ ಅಂಗವಿಕಲ ವ್ಯಕ್ತಿಗಳು (ದಿವ್ಯಾಂಗರು), 11 ವರ್ಗದ ರೋಗಿಗಳು ಮತ್ತು 8 ವರ್ಗದ ವಿದ್ಯಾರ್ಥಿಗಳಂತಹ ಅನೇಕ ವರ್ಗಗಳಿಗೆ ಮುಂದುವರಿಯುತ್ತಿವೆ.
ಅತ್ಯಂತ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರ ದರಗಳ ವಿವಿಧ ಘಟಕಗಳ ವಿವರಗಳನ್ನು (ಮೂಲ ದರ, ಮೀಸಲಾತಿ/ಕಾಯ್ದಿರಿಸುವಿಕೆ ಶುಲ್ಕ, ಸೂಪರ್‌ಫಾಸ್ಟ್ ಶುಲ್ಕ, ಜಿ.ಎಸ್.ಟಿ., ಇತ್ಯಾದಿ) ಪ್ರಯಾಣಿಕರ ಟಿಕೆಟ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ, ಭೌತಿಕ ಮತ್ತು ಡಿಜಿಟಲ್ ರೂಪದಲ್ಲಿ ದರ ಕೋಷ್ಟಕಗಳಾಗಿ ಪ್ರಕಟಿಸಲಾಗುತ್ತದೆ, ಗಣಕೀಕೃತ ಟಿಕೆಟಿಂಗ್ ವ್ಯವಸ್ಥೆಗಳಲ್ಲಿ (ಪ್ರಯಾಣಿಕರ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆ, ಕಾಯ್ದಿರಿಸದ ಟಿಕೆಟಿಂಗ್ ವ್ಯವಸ್ಥೆ), ಮೊಬೈಲ್ ಅಪ್ಲಿಕೇಶನ್ (RailOne) ಇತ್ಯಾದಿಗಳಲ್ಲಿ ವಿವರ ಲಭ್ಯವಿರುತ್ತದೆ / ಪ್ರದರ್ಶಿಸಲಾಗುತ್ತದೆ.
ಇದಲ್ಲದೆ, ಕಾಲಕಾಲಕ್ಕೆ ಕೈಗೊಳ್ಳುವ ಪ್ರಯಾಣಿಕರ ದರಗಳ ತರ್ಕಬದ್ಧಗೊಳಿಸುವಿಕೆ, ಪರಿಷ್ಕರಣೆ ಇತ್ಯಾದಿಗಳಲ್ಲಿನ ಯಾವುದೇ ಬದಲಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ವ್ಯಾಪಕವಾಗಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಉದ್ಯಮವಾಗಿ ಭಾರತೀಯ ರೈಲ್ವೆಯು ಆರ್ಥಿಕವಾಗಿ ಸುಸ್ಥಿರ ರೀತಿಯಲ್ಲಿ ಸೇವೆಗಳನ್ನು ತಲುಪಿಸಲು ಜನರಿಗೆ ಮತ್ತು ಸಂಸತ್ತಿಗೆ ಸಂಪೂರ್ಣ ಜವಾಬ್ದಾರವಾಗಿರುತ್ತದೆ. ಸೇವಾ ವೆಚ್ಚ, ಇತರ ಸಾರಿಗೆ ವಿಧಾನಗಳಿಂದ ಸ್ಪರ್ಧೆ, ಕೈಗೆಟುಕುವಿಕೆ ಇತ್ಯಾದಿಗಳನ್ನು ಪರಿಗಣಿಸಿ ಪ್ರಯಾಣಿಕರ ದರಗಳನ್ನು ನಿರ್ಧರಿಸಲಾಗುತ್ತದೆ.
ಹಿರಿಯ ನಾಗರಿಕರು ಮತ್ತು ಅಂಗವಿಕಲರು ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಭಾರತೀಯ ರೈಲ್ವೆ ನಿರಂತರವಾಗಿ ಶ್ರಮಿಸುತ್ತಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವಿಸ್ತರಿಸಲಾದ ಕೆಲವು ಸೌಲಭ್ಯಗಳು ಈ ಕೆಳಗಿನಂತಿವೆ:
i. ಯಾವುದೇ ಆಯ್ಕೆ ನೀಡದಿದ್ದರೂ, ಲಭ್ಯತೆಗೆ ಒಳಪಟ್ಟು, ಅಂಗವಿಕಲರು (ಪಿಡಬ್ಲ್ಯೂಡಿಗಳು), ಹಿರಿಯ ನಾಗರಿಕರು, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರಿಗೆ ಸ್ವಯಂಚಾಲಿತವಾಗಿ ಕೆಳಗಿನ ಬರ್ತ್‌ಗಳ ಹಂಚಿಕೆ ಮಾಡಲಾಗುತ್ತದೆ.
ii. ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಕೋಚ್‌ಗೆ (ಬೋಗಿಗೆ) ಆರರಿಂದ ಏಳು ಲೋವರ್ (ಕೆಳಗಿನ) ಬರ್ತ್‌ಗಳು, ಹವಾನಿಯಂತ್ರಿತ 3 ಟೈರ್ (3AC) ನಲ್ಲಿ ತಲಾ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಮತ್ತು ಹವಾನಿಯಂತ್ರಿತ 2 ಟೈರ್ (2AC) ದರ್ಜೆಗಳಲ್ಲಿ ಪ್ರತಿ ಕೋಚ್‌ಗೆ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳ ಸಂಯೋಜಿತ ಮೀಸಲು ಕೋಟಾ (ರೈಲಿನಲ್ಲಿರುವ ಆ ವರ್ಗದ ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿ) ಹಿರಿಯ ನಾಗರಿಕರು, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಒದಗಿಸಲಾಗುತ್ತದೆ..
iii. ರಾಜಧಾನಿ/ಶತಾಬ್ದಿ ಮಾದರಿಯ ರೈಲುಗಳು ಸೇರಿದಂತೆ ಮೈಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ಅಂಗವಿಕಲರು ಮತ್ತು ಅವರ ಸಹಾಯಕರಿಗೆ ಮೀಸಲಾತಿ ಕೋಟಾವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:-
- ಸ್ಲೀಪರ್ ಕ್ಲಾಸ್‌ನಲ್ಲಿ ನಾಲ್ಕು ಬರ್ತ್‌ಗಳು (ಎರಡು ಕೆಳಗಿನ ಮತ್ತು ಎರಡು ಮಧ್ಯಮ ಬರ್ತ್‌ಗಳು ಸೇರಿದಂತೆ)
- 3 ಎ.ಸಿ./3ಇ ನಲ್ಲಿ ನಾಲ್ಕು ಬರ್ತ್‌ಗಳು (ಎರಡು ಕೆಳಗಿನ ಮತ್ತು ಎರಡು ಮಧ್ಯಮ ಬರ್ತ್‌ಗಳು ಸೇರಿದಂತೆ)
- ಎರಡನೇ ಸಿಟ್ಟಿಂಗ್ (2 ಎಸ್) / ಹವಾನಿಯಂತ್ರಿತ ಚೇರ್ ಕಾರ್ (ಸಿಸಿ) ಗಳಲ್ಲಿ ನಾಲ್ಕು ಸೀಟ್ (ಆಸನ) ಗಳನ್ನು ಆ ರೈಲು ಎರಡಕ್ಕಿಂತ ಹೆಚ್ಚು ಕೋಚ್‌ಗಳನ್ನು ಹೊಂದಿದ್ದಲ್ಲಿ ಕಾಯ್ದಿರಿಸಲಾಗುತ್ತದೆ.
iv. ರೈಲಿನಲ್ಲಿ ಕೆಳಗಿನ ಬರ್ತ್‌ಗಳು ಖಾಲಿ ಇದ್ದರೆ ಅವುಗಳನ್ನು ಹಿರಿಯ ನಾಗರಿಕರು, ಅಂಗವಿಕಲರು ಅಥವಾ ಗರ್ಭಿಣಿಯರಿಗೆ (ಅವರಿಗೆ ಮಧ್ಯಮ/ಮೇಲಿನ ಬರ್ತ್‌ಗಳನ್ನು ನೀಡಲಾಗಿದ್ದಲ್ಲಿ) ಆದ್ಯತೆಯ ಮೇಲೆ ಹಂಚಿಕೆ ಮಾಡುವುದು.
ಮೊದಲ ವಂದೇ ಭಾರತ್ ಸ್ಲೀಪರ್ ಸೇವೆ ಅಂದರೆ 27575/27576 ಹೌರಾ-ಕಾಮಾಖ್ಯ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಅನ್ನು 22.01.2026 ರಿಂದ ಪರಿಚಯಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ಸೇವೆಗಳು ಸೇರಿದಂತೆ ಹೊಸ ರೈಲು ಸೇವೆಗಳ ವಿಸ್ತರಣೆಯು ಪ್ರಗತಿಯಲ್ಲಿರುವ ಪ್ರಕ್ರಿಯೆಯಾಗಿದ್ದು, ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ, ಅವುಗಳೆಂದರೆ -
- ಆ ವಿಭಾಗದ ಸಾಮರ್ಥ್ಯ
- ಮಾರ್ಗದ ಲಭ್ಯತೆ
- ಅಗತ್ಯವಿರುವ ರೋಲಿಂಗ್ ಸ್ಟಾಕ್ ಲಭ್ಯತೆ (ಅಂದರೆ ಲೊಕೊಮೋಟಿವ್, ಬೋಗಿಗಳು, ವ್ಯಾಗನ್ ಗಳು ಇತ್ಯಾದಿ)
- ರೋಲಿಂಗ್ ಸ್ಟಾಕ್‌ಗೆ ಹೊಂದಿಕೆಯಾಗುವ ಮೂಲಸೌಕರ್ಯಗಳ ಲಭ್ಯತೆ
- ರೈಲ್ವೆ ಹಳಿಗಳು ಮತ್ತು ಇತರ ಸ್ವತ್ತುಗಳ ನಿರ್ವಹಣೆ ಅಗತ್ಯತೆ.
- ವಿಭಾಗದ ಆಕ್ಯುಪೆನ್ಸಿ (ಪ್ರಯಾಣಿಕರ ಸಂಖ್ಯೆ) ಮತ್ತು ಸಂಚಾರ ಅಗತ್ಯತೆ
ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಲು, ವಂದೇ ಭಾರತ್ ಸ್ಲೀಪರ್‌ಗೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿರುವ ಆಧುನಿಕ ಕೋಚ್‌ಗಳನ್ನು ಒದಗಿಸಲಾಗಿದೆ, ಉದಾಹರಣೆಗೆ ಜರ್ಕ್-ಫ್ರೀ ಸೆಮಿ ಪರ್ಮನೆಂಟ್ ಕಪ್ಲರ್‌ಗಳು, ಕವಾಚ್, ಹೆಚ್ಚಿನ ವೇಗವರ್ಧನೆ, ಸುಧಾರಿತ ಅಗ್ನಿ ಸುರಕ್ಷತಾ ಮಾನದಂಡಗಳು, ಸೀಲ್ಡ್ ಗ್ಯಾಂಗ್‌ವೇಗಳು, ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿಗಳು, ತುರ್ತು ಟಾಕ್-ಬ್ಯಾಕ್ ಯುನಿಟ್, ಕೇಂದ್ರೀಕೃತ ಕೋಚ್ ಮೇಲ್ವಿಚಾರಣಾ ವ್ಯವಸ್ಥೆ, ಇತ್ಯಾದಿ.
ವಂದೇ ಭಾರತ್ ಸ್ಲೀಪರ್ ರೈಲಿನ ದರ ರಚನೆಯು ಪ್ರತಿ ಪ್ರಯಾಣಿಕರಿಗೆ ಪ್ರತಿ ಕಿಲೋಮೀಟರ್ ದರವನ್ನು ಆಧರಿಸಿದೆ, ಅಂದರೆ 3 ನೇ ಹವಾನಿಯಂತ್ರಿತ ವರ್ಗಕ್ಕೆ (3AC) ಜಿಎಸ್‌ಟಿ ಹೊರತುಪಡಿಸಿ ₹2.40. ಅಂದರೆ ಜಿಎಸ್‌ಟಿ ಹೊರತುಪಡಿಸಿ 1000 ಕಿಮೀ ದೂರಕ್ಕೆ ದರಗಳು 3 ಎಸಿಗೆ ಸುಮಾರು ₹2400.
ವಂದೇ ಭಾರತ್ ಸ್ಲೀಪರ್ ರೈಲು ಎಲ್ಲವನ್ನೂ ಒಳಗೊಂಡ ದರವನ್ನು ಹೊಂದಿರುವ ಪ್ರತ್ಯೇಕ ವರ್ಗದ ಪ್ರಯಾಣಿಕ ಸೇವೆಯಾಗಿದೆ ಮತ್ತು ಈ ರೈಲಿಗೆ ಆರ್‌ಎಸಿ ಟಿಕೆಟ್‌ಗಳ ನಿಬಂಧನೆ ಇಲ್ಲ. ದೃಢಪಡಿಸಿದ ಟಿಕೇಟ್ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದಾಗ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರು ಟಿಕೇಟ್ ದೃಢೀಕರಣವನ್ನು ಪಡೆಯುತ್ತಾರೆ. ಆದ್ದರಿಂದ ಸೇವೆಗಳು ಪ್ರಯಾಣಿಕರಿಗೆ ಸುಲಭ ಲಭ್ಯವಾಗುತ್ತವೆ.
ರೈಲ್ವೆ ಸದಾ ಸಮಾಜದ ಎಲ್ಲಾ ಸ್ತರಗಳಿಗೆ ಕೈಗೆಟುಕುವ ಸೇವೆಗಳನ್ನು ಒದಗಿಸಲು ಶ್ರಮಿಸುತ್ತದೆ. ಅದರಂತೆ, ಸಮಾಜದ ವಿವಿಧ ವರ್ಗಗಳ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಇದು ವಿವಿಧ ವರ್ಗಗಳ ರೈಲು ಸೇವೆಗಳನ್ನು ನಿರ್ವಹಿಸುತ್ತದೆ, ಇದರಲ್ಲಿ ಸಮಾಜದ ಹಿಂದುಳಿದ ವರ್ಗಕ್ಕೆ ಪ್ರಯೋಜನವನ್ನು ನೀಡಲು ಕಡಿಮೆ ದರದ ರೈಲುಗಳು ಮತ್ತು ವರ್ಧಿತ ಸೌಲಭ್ಯಗಳನ್ನು ಹೊಂದಿರುವ ರೈಲುಗಳು ಸೇರಿವೆ.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ರೈಲ್ವೆಯ ದರಗಳು ಅತ್ಯಂತ ಕಡಿಮೆ. ವಂದೇ ಭಾರತ್ ಸ್ಲೀಪರ್‌ನ ದರವು ಪ್ರತಿ ಪಿಕೆಎಂಗೆ ₹2.40 ರಿಂದ ₹3.80 ರವರೆಗೆ ಇರುತ್ತದೆ, ಇದು ಚೀನಾ, ಜಪಾನ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಇದೇ ರೀತಿಯ ಸೇವೆಗಳ ವಿಭಾಗದ ದರಗಳಿಗಿಂತ ತುಂಬಾ ಕಡಿಮೆಯಾಗಿದೆ, ಅಲ್ಲಿ ಪಿಕೆಎಂಗೆ ₹7.00 ರಿಂದ ₹20.00 ವರೆಗೆ ಇರುತ್ತದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತ ನೀಡಿದರು.
*****
(ಪ್ರಕಟಣೆ ಐ.ಡಿ.: 2238661)
ವಿಸಿಟರ್ ಕೌಂಟರ್ : 6