ರಕ್ಷಣಾ ಸಚಿವಾಲಯ
azadi ka amrit mahotsav

'ರಕ್ಷಣಾ ಪಡೆಗಳ ಮುನ್ನೋಟ-2047: ಭವಿಷ್ಯ ಸನ್ನದ್ಧ ಭಾರತೀಯ ಸೇನಾಪಡೆಗಾಗಿ ಮಾರ್ಗಸೂಚಿ' ಬಿಡುಗಡೆ ಮಾಡಿದ ರಕ್ಷಣಾ ಸಚಿವರು

ಪ್ರಕಟಣಾ ದಿನಾಂಕ: 10 MAR 2026 12:23PM by PIB Bengaluru

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು  ಮಾರ್ಚ್ 10, 2026ರಂದು ನವದೆಹಲಿಯ ಸೌತ್ ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ರಕ್ಷಣಾ ಪಡೆಗಳ ಮುನ್ನೋಟ-2047: ಭವಿಷ್ಯ ಸನ್ನದ್ಧ ಭಾರತೀಯ ಸೇನಾಪಡೆಗಾಗಿ ಮಾರ್ಗಸೂಚಿ' ಯನ್ನು  ಬಿಡುಗಡೆ ಮಾಡಿದರು. 2047ರ ವೇಳೆಗೆ 'ವಿಕಸಿತ ಭಾರತ'ವಾಗುವ ಭಾರತದ ಆಕಾಂಕ್ಷೆಯನ್ನು ಬೆಂಬಲಿಸುವ ಸಾಮರ್ಥ್ಯವುಳ್ಳ ರಕ್ಷಣಾ ಪಡೆಗಳನ್ನು ಆಧುನಿಕ, ಸಂಯೋಜಿತ ಮತ್ತು ತಾಂತ್ರಿಕವಾಗಿ ಸುಧಾರಿತ ಮಿಲಿಟರಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ  'ಸಂಯೋಜಿತ ಸೇನಾ ಸಿಬ್ಬಂದಿಯ ಪ್ರಧಾನ ಕಚೇರಿ'ಯು ಈ ಸಮಗ್ರ ನೀಲನಕ್ಷೆಯನ್ನು ರೂಪಿಸಿದೆ.

ಬದಲಾಗುತ್ತಿರುವ ಭೌಗೋಳಿಕ-ಕಾರ್ಯತಂತ್ರ, ತಾಂತ್ರಿಕ ಮತ್ತು ಭದ್ರತಾ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಕ್ಷಣಾ ಪಡೆಗಳಲ್ಲಿ ಅಗತ್ಯವಿರುವ ಕಾರ್ಯತಂತ್ರದ ಸುಧಾರಣೆಗಳು, ಸಾಮರ್ಥ್ಯ ವರ್ಧನೆಗಳು ಮತ್ತು ಸಾಂಸ್ಥಿಕ ಬದಲಾವಣೆಗಳನ್ನು ಈ 'ಮುನ್ನೋಟ'ದ ದಾಖಲೆಯು ವಿವರಿಸುತ್ತದೆ. ಜಾಗತಿಕ ಮತ್ತು ಪ್ರಾದೇಶಿಕ ಪರಿಸ್ಥಿತಿಗಳು ವೇಗವಾಗಿ ಬದಲಾಗುತ್ತಿವೆ. ಇದರ ನಡುವೆ ಎದುರಾಳಿಗಳನ್ನು ತಡೆಯಬಲ್ಲ, ಎಲ್ಲಾ ಬಗೆಯ ಸಂಘರ್ಷಗಳಿಗೆ ಪ್ರತಿಕ್ರಿಯಿಸಬಲ್ಲ ಮತ್ತು ವಿಸ್ತರಿಸುತ್ತಿರುವ ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸಬಲ್ಲ ಸಾಮರ್ಥ್ಯವುಳ್ಳ  ಸೇನಾಪಡೆಯನ್ನು ಮತ್ತಷ್ಟು ಸಮಗ್ರ, ಬಹು-ವಲಯದ ಮತ್ತು ಚುರುಕಾದ ಶಕ್ತಿಯಾಗಿ ಪರಿವರ್ತಿಸಲು ಇದು ಉದ್ದೇಶಿಸಿದೆ.

ಯೋಜನೆ, ಕಾರ್ಯಾಚರಣೆಗಳು ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಹೆಚ್ಚಿನ ಸಮನ್ವಯವನ್ನು ಉತ್ತೇಜಿಸುವ ಮೂಲಕ ರಕ್ಷಣಾ ಪಡೆಗಳ ನಡುವೆ ಸಹಭಾಗಿತ್ವ ಮತ್ತು ಸಮನ್ವಯಕ್ಕೆ ಒತ್ತು ನೀಡುವುದು ಈ 'ಮುನ್ನೋಟ'ದ ಪ್ರಧಾನ ಅಂಶವಾಗಿದೆ. ಭವಿಷ್ಯದ ಯುದ್ಧದ ಸವಾಲುಗಳಿಗೆ ಹೊಂದಿಕೊಳ್ಳುವಂತಹ ಮಿಲಿಟರಿ ಪಡೆಯನ್ನು ನಿರ್ಮಿಸಲು ನಾವೀನ್ಯತೆ, ಸುಧಾರಿತ ತಂತ್ರಜ್ಞಾನಗಳು ಮತ್ತು ಆಧುನಿಕ ತರಬೇತಿಯ ಮಹತ್ವವನ್ನು ಇದು ಎತ್ತಿ ತೋರುತ್ತದೆ.

ಇದರಲ್ಲಿ ಗಮನ ಕೇಂದ್ರೀಕರಿಸಲಾದ ಮತ್ತೊಂದು ಪ್ರಮುಖ  ಕ್ಷೇತ್ರವೆಂದರೆ ಅದು ರಕ್ಷಣೆಯಲ್ಲಿ ಆತ್ಮನಿರ್ಭರತೆ ಅಥವಾ ಸ್ವಾವಲಂಬನೆ. ಜೊತೆಗೆ ದೇಶದ ವಿಶಿಷ್ಟ ಭದ್ರತಾ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಥಳೀಯ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ಉತ್ತೇಜಿಸುವುದು ಸಹ ಇದರ ಭಾಗವಾಗಿದೆ. ದೇಶೀಯ ರಕ್ಷಣಾ ಉತ್ಪಾದನೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ರಾಷ್ಟ್ರೀಯ ಬೆಳವಣಿಗೆಗೆ ಕೊಡುಗೆ ನೀಡುವ ಜೊತೆಗೆ  ಕಾರ್ಯಾಚರಣೆಯ ಸನ್ನದ್ಧತೆಯನ್ನು ಇದು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಮುನ್ನೋಟದ ದಾಖಲೆಯು ಅಲ್ಪಾವಧಿ, ಮಧ್ಯಕಾಲೀನ ಮತ್ತು ದೀರ್ಘಾವಧಿಯ ಕಾಲಮಿತಿಗಳಲ್ಲಿ ಸ್ಪಷ್ಟವಾಗಿ ಆದ್ಯತೆಯ ಸಾಮರ್ಥ್ಯದ ಗುರಿಗಳೊಂದಿಗೆ ಮಾನದಂಡ ನಿರ್ಣಯದ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳುತ್ತದೆ. ಈ ರಚನಾತ್ಮಕ ವಿಧಾನವು ವಿಶ್ವದರ್ಜೆಯ ರಕ್ಷಣಾ ಪಡೆಯನ್ನು ನಿರ್ಮಿಸಲು ಅಗತ್ಯವಾದ ನಿರ್ಣಾಯಕ ಮಿಲಿಟರಿ ಸಾಮರ್ಥ್ಯಗಳು, ಸಾಂಸ್ಥಿಕ ಸುಧಾರಣೆಗಳು ಮತ್ತು ಕಾರ್ಯತಂತ್ರದ ಸಹಭಾಗಿತ್ವದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತದೆ.

ಭವಿಷ್ಯದ ಭದ್ರತಾ ಸವಾಲುಗಳ ಸಂಕೀರ್ಣತೆಯನ್ನು ಗುರುತಿಸಿ, ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ, ತಾಂತ್ರಿಕ ಮತ್ತು ಆರ್ಥಿಕ ಶಕ್ತಿಯೊಂದಿಗೆ ಮಿಲಿಟರಿ ಶಕ್ತಿಯನ್ನು ಸಂಯೋಜಿಸುವ ಇಡೀ ರಾಷ್ಟ್ರದ ವಿಧಾನದ ಅಗತ್ಯವನ್ನು 'ಮುನ್ನೋಟ'ದ ದಾಖಲೆಯು ಒತ್ತಿಹೇಳುತ್ತದೆ. ಸುಸ್ಥಿರ ಸುಧಾರಣೆಗಳು, ನಾವೀನ್ಯತೆ ಮತ್ತು ರಾಷ್ಟ್ರೀಯ ಬದ್ಧತೆಯ ಮೂಲಕ, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ, ರಾಷ್ಟ್ರದ ಮಿಲಿಟರಿಯು ಜಾಗತಿಕವಾಗಿ ಗೌರವಿಸಲ್ಪಡುವ, ತಾಂತ್ರಿಕವಾಗಿ ಮುಂದುವರಿದ ಮತ್ತು ಯುದ್ಧ-ಸನ್ನದ್ಧ ಮಿಲಿಟರಿಯಾಗಿ ನಿಲ್ಲುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಆ ಮೂಲಕ ಇದು ಸಶಕ್ತ ಮತ್ತು ಸದೃಢ 'ವಿಕಸಿತ ಭಾರತ'ಕ್ಕೆ ಕೊಡುಗೆ ನೀಡುತ್ತದೆ.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ಸೇನಾ ಉಪ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಪುಷ್ಪೇಂದ್ರ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2237437) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Punjabi , Gujarati