ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
“ಸಬ್ಕಾ ಸಾಥ್ ಸಬ್ಕಾ ವಿಕಾಸ್ – ಜನರ ಆಶೋತ್ತರಗಳ ಈಡೇರಿಕೆ” ಎಂಬ ವಿಷಯದ ಅಡಿಯಲ್ಲಿ ಆರೋಗ್ಯ ಕ್ಷೇತ್ರದ ಉಪಕ್ರಮಗಳ ಕುರಿತಾದ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಭಾರತವು ತಡೆಗಟ್ಟುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಮುನ್ನಡೆಯುತ್ತಿದೆ; ವೈದ್ಯಕೀಯ ಕಾಲೇಜುಗಳ ಕ್ಷಿಪ್ರ ವಿಸ್ತರಣೆಯು ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುತ್ತದೆ: ಪ್ರಧಾನ ಮಂತ್ರಿ
ಯೋಗ ಮತ್ತು ಆಯುರ್ವೇದವು ಸಮಗ್ರ ಮತ್ತು ಸ್ವಾಸ್ಥ್ಯದ ಕಡೆಗೆ ಜಾಗತಿಕ ಬದಲಾವಣೆಯನ್ನು ಪ್ರೇರೇಪಿಸುತ್ತಿವೆ: ಪ್ರಧಾನಮಂತ್ರಿ
ಉದಯೋನ್ಮುಖ ಕೌಶಲ ಆಧಾರಿತ ಉದ್ಯೋಗಗಳಿಗೆ ಯುವಕರನ್ನು ಸಜ್ಜುಗೊಳಿಸಲು ಹೊಸ ತರಬೇತಿ ಮಾದರಿಗಳಿಗೆ ಪ್ರಧಾನಮಂತ್ರಿ ಕರೆ
ನಾಗರಿಕರಿಗಾಗಿ ಹೆಚ್ಚಿನ ಟೆಲಿಮೆಡಿಸಿನ್ ಜಾಗೃತಿ ಮತ್ತು ಸರಳ ಡಿಜಿಟಲ್ ಆರೋಗ್ಯ ವೇದಿಕೆಗಳಿಗೆ ಪ್ರಧಾನ ಮಂತ್ರಿಗಳ ಒತ್ತಾಯ
ಕೇಂದ್ರ ಬಜೆಟ್ 2026-27 ಬಲವಾದ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ: ಶ್ರೀ ನಡ್ಡಾ
ರೋಗನಿರ್ಣಯ ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಒಂದು ಲಕ್ಷ ನುರಿತ ಮಿತ್ರ ಆರೋಗ್ಯ ವೃತ್ತಿಪರರನ್ನು ಗುರಿಯಾಗಿಸಿಕೊಂಡ ಸರ್ಕಾರ: ಶ್ರೀ ನಡ್ಡಾ
ಉತ್ತಮ ಮೂಲಸೌಕರ್ಯ, ತುರ್ತು ಸ್ಪಂದನಾ ವ್ಯವಸ್ಥೆಗಳು ಮತ್ತು ನುರಿತ ಕಾರ್ಯಪಡೆಯು ಸಮಯೋಚಿತ ಜೀವ ರಕ್ಷಕ ಆರೈಕೆಗೆ ಪ್ರಮುಖವಾಗಿವೆ: ಶ್ರೀ ನಡ್ಡಾ
ಪ್ರಕಟಣಾ ದಿನಾಂಕ:
09 MAR 2026 6:26PM by PIB Bengaluru
“ಇಂದು ಭಾರತವು ರೋಗ ತಡೆಗಟ್ಟುವಿಕೆ ಹಾಗೂ ಸಮಗ್ರ ಆರೋಗ್ಯದ ಬೃಹತ್ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಜಿಲ್ಲೆಗಳಾದ್ಯಂತ ನೂರಾರು ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗುವುದರೊಂದಿಗೆ ದೇಶದ ಆರೋಗ್ಯ ಮೂಲಸೌಕರ್ಯವು ಸದೃಢಗೊಂಡಿದೆ.” ‘ವಿಕಸಿತ ಭಾರತ @2047’ ರ ಗುರಿಯ ಭಾಗವಾಗಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತಾ, “ಸಬ್ಕಾ ಸಾಥ್ ಸಬ್ಕಾ ವಿಕಾಸ್ - ಜನರ ಆಶೋತ್ತರಗಳ ಈಡೇರಿಕೆ” ಎಂಬ ವಿಷಯದ ಕುರಿತಾದ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಈ ವಿಷಯವನ್ನು ಹಂಚಿಕೊಂಡರು.

ಸಮಗ್ರ ಆರೋಗ್ಯ ರಕ್ಷಣೆಯ ಮನೋಭಾವದೊಂದಿಗೆ, ಭಾರತವು ಯೋಗಕ್ಷೇಮ, ಆರಂಭಿಕ ರೋಗನಿರ್ಣಯ ಮತ್ತು ಸುಲಭವಾಗಿ ಲಭ್ಯವಾಗುವ ಚಿಕಿತ್ಸೆಯ ಮೇಲೆ ಸ್ಥಿರವಾಗಿ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ದೇಶದ ಆರೋಗ್ಯ ಮೂಲಸೌಕರ್ಯವು ಗಣನೀಯವಾಗಿ ವಿಸ್ತರಿಸಿದೆ ಮತ್ತು ಆಯುಷ್ಮಾನ್ ಭಾರತ್ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರದಂತಹ ಉಪಕ್ರಮಗಳ ಮೂಲಕ ಆರೋಗ್ಯ ಸೇವೆಗಳು ಹಳ್ಳಿಗಳನ್ನು ತಲುಪುತ್ತಿವೆ ಎಂದು ಅವರು ತಿಳಿಸಿದರು. ಈ ಪ್ರಯತ್ನಗಳು ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟುಕುವ ಮತ್ತು ಲಭ್ಯವಾಗುವ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಅಡಿಪಾಯವನ್ನು ಬಲಪಡಿಸಿವೆ ಎಂದು ಅವರು ಹೇಳಿದರು.
ಭಾರತದ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಿಗೆ ಜಾಗತಿಕ ಮನ್ನಣೆ ಸಿಗುತ್ತಿರುವುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಯೋಗ ಮತ್ತು ಆಯುರ್ವೇದಗಳು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿವೆ ಮತ್ತು ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮಗ್ರ ಮತ್ತು ಪೂರಕ ವಿಧಾನವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು.

ಶ್ರೀ ಮೋದಿ ಅವರು ಉದಯೋನ್ಮುಖ ‘ಆರೈಕೆ ಆರ್ಥಿಕತೆ’ (care economy) ಮತ್ತು ತರಬೇತಿ ಪಡೆದ ಆರೋಗ್ಯ ವೃತ್ತಿಪರರು ಹಾಗೂ ಆರೈಕೆದಾರರಿಗೆ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಗಮನ ಸೆಳೆದರು.“ಮುಂಬರುವ ದಶಕದಲ್ಲಿ, ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆಯು ವೇಗವಾಗಿ ಹೆಚ್ಚಾಗಲಿದೆ. ಇದಲ್ಲದೆ, ಇಂದಿಗೂ ವಿಶ್ವದ ಅನೇಕ ದೇಶಗಳು ಆರೈಕೆದಾರರಿಗಾಗಿ ಭಾರಿ ಬೇಡಿಕೆಯನ್ನು ಎದುರಿಸುತ್ತಿವೆ. ಆದ್ದರಿಂದ, ಆರೋಗ್ಯ ಕ್ಷೇತ್ರದಲ್ಲಿ ಲಕ್ಷಾಂತರ ಯುವಕರಿಗೆ ಹೊಸ ಕೌಶಲ ಆಧಾರಿತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ” ಎಂದು ಅವರು ಹೇಳಿದರು, ಈ ಅವಕಾಶಗಳಿಗಾಗಿ ಭಾರತದ ಯುವಕರನ್ನು ಸಜ್ಜುಗೊಳಿಸಲು ಹೊಸ ತರಬೇತಿ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಕೌಶಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಆರೋಗ್ಯ ವೃತ್ತಿಪರರ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸಬಲ್ಲ ಬಲಿಷ್ಠ ತರಬೇತಿ ವ್ಯವಸ್ಥೆಯನ್ನು ನಿರ್ಮಿಸಲು ಸಲಹೆಗಳನ್ನು ಹಂಚಿಕೊಳ್ಳುವಂತೆ ವೆಬಿನಾರ್ ನಲ್ಲಿ ಭಾಗವಹಿಸಿದ್ದ ತಜ್ಞರಿಗೆ ಪ್ರಧಾನ ಮಂತ್ರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಗಳು, ವಿಶೇಷವಾಗಿ ದೂರದ ಮತ್ತು ಸೌಲಭ್ಯವಂಚಿತ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸುವಲ್ಲಿ ಟೆಲಿಮೆಡಿಸಿನ್ ಬೆಳೆಯುತ್ತಿರುವ ಪಾತ್ರವನ್ನು ಉಲ್ಲೇಖಿಸಿದರು. ಟೆಲಿಮೆಡಿಸಿನ್ ಸೇವೆಗಳ ವಿಸ್ತರಣೆಯಲ್ಲಿ ಸಾಧಿಸಿದ ಪ್ರಗತಿಯನ್ನು ಗುರುತಿಸಿದ ಅವರು, ಹೆಚ್ಚಿನ ನಾಗರಿಕರು ಡಿಜಿಟಲ್ ಆರೋಗ್ಯ ವೇದಿಕೆಗಳ ಪ್ರಯೋಜನವನ್ನು ಪಡೆಯಲು ಅನುಕೂಲವಾಗುವಂತೆ ಜಾಗೃತಿಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ನಾಗರಿಕರ ಆಶೋತ್ತರಗಳನ್ನು ಈಡೇರಿಸುವುದು ಕೇಂದ್ರ ಬಜೆಟ್ ನ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು. ಬಜೆಟ್ ನಂತರದ ವೆಬಿನಾರ್ ಗಳಲ್ಲಿ ನಡೆಯುವ ಚರ್ಚೆಗಳು ಬಜೆಟ್ ನಲ್ಲಿ ಘೋಷಿಸಲಾದ ಆರೋಗ್ಯ ಕ್ಷೇತ್ರದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬಲವಾದ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು, 2026-27ರ ಕೇಂದ್ರ ಬಜೆಟ್ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ದೇಶಾದ್ಯಂತ ಗುಣಮಟ್ಟದ ಸೇವೆಗಳ ಲಭ್ಯತೆಯನ್ನು ವಿಸ್ತರಿಸುವ ಸರ್ಕಾರದ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಆಧುನಿಕ ಆರೋಗ್ಯ ರಕ್ಷಣೆಗೆ ಸಮಗ್ರ ಮತ್ತು ತಂಡ ಆಧಾರಿತ ವಿಧಾನದ ಅಗತ್ಯವಿದೆ; ವೈದ್ಯರು, ದಾದಿಯರು, ಪೂರಕ ಆರೋಗ್ಯ ವೃತ್ತಿಪರರು, ತಂತ್ರಜ್ಞರು ಮತ್ತು ಚಿಕಿತ್ಸಕರು (Therapists) ಪರಿಣಾಮಕಾರಿ ರೋಗಿಗಳ ಆರೈಕೆಯನ್ನು ನೀಡಲು ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಒತ್ತಿ ಹೇಳಿದರು.

ಮಿತ್ರ ಆರೋಗ್ಯ (Allied Health) ಶಿಕ್ಷಣ ಮತ್ತು ತರಬೇತಿಯನ್ನು ವಿಸ್ತರಿಸುವ ಮೂಲಕ ಈ ವಲಯದ ಕಾರ್ಯಪಡೆಯನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಶ್ರೀ ನಡ್ಡಾ ಅವರು ಎತ್ತಿ ತೋರಿಸಿದರು. ರಾಷ್ಟ್ರೀಯ ಮಿತ್ರ ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರ ಆಯೋಗದ ಕಾಯ್ದೆ, 2021 ಮತ್ತು ಈ ಆಯೋಗದ ಸ್ಥಾಪನೆಯು ಮಿತ್ರ ಮತ್ತು ಆರೋಗ್ಯ ರಕ್ಷಣಾ ವೃತ್ತಿಗಳಿಗೆ ಬಲವಾದ ನಿಯಂತ್ರಕ ಚೌಕಟ್ಟನ್ನು ಒದಗಿಸಿದೆ ಎಂದು ಅವರು ಉಲ್ಲೇಖಿಸಿದರು. ಈ ಅಡಿಪಾಯದ ಮೇಲೆ, ರೋಗನಿರ್ಣಯ (Diagnostics), ಪುನರ್ವಸತಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ಆದ್ಯತೆಯ ವಿಭಾಗಗಳಲ್ಲಿ ಒಂದು ಲಕ್ಷ ನುರಿತ ಸಹವರ್ತಿ ಆರೋಗ್ಯ ವೃತ್ತಿಪರರ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ಸರ್ಕಾರದ ಗಮನದ ಬಗ್ಗೆಯೂ ಕೇಂದ್ರ ಆರೋಗ್ಯ ಸಚಿವರು ಇದೇ ಸಂದರ್ಭದಲ್ಲಿ ಮಾತನಾಡಿದರು. ಸುಧಾರಿತ ಕ್ಲಿನಿಕಲ್ ಆರೈಕೆ, ತರಬೇತಿ ಮತ್ತು ಸಂಶೋಧನೆಯನ್ನು ವಿಸ್ತರಿಸಲು ಉತ್ತರ ಭಾರತದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಎರಡನೇ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಜೊತೆಗೆ, ಪೂರ್ವ ಮತ್ತು ಈಶಾನ್ಯ ಪ್ರಾಂತ್ಯಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ರಾಂಚಿಯ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಮತ್ತು ತೇಜ್‌ಪು ರದ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಪ್ರಾದೇಶಿಕ ಉನ್ನತ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಹೇಳಿದರು.
ದೇಶಾದ್ಯಂತ, ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಮತ್ತು ಟ್ರಾಮಾ ಕೇರ್ ಸೇವೆಗಳನ್ನು ಬಲಪಡಿಸುವ ಮಹತ್ವವನ್ನು ಶ್ರೀ ನಡ್ಡಾ ಅವರು ಒತ್ತಿ ಹೇಳಿದರು. ಸುಧಾರಿತ ಮೂಲಸೌಕರ್ಯ, ಸಂಯೋಜಿತ ತುರ್ತು ಸ್ಪಂದನಾ ವ್ಯವಸ್ಥೆಗಳು ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲವು ಸಮಯೋಚಿತ ಜೀವ ರಕ್ಷಕ ಆರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮತ್ತು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಆರೋಗ್ಯ ಕ್ಷೇತ್ರದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು, ಸಂಸ್ಥೆಗಳು, ಉದ್ಯಮ ಮತ್ತು ಶೈಕ್ಷಣಿಕ ವಲಯಗಳ ನಡುವೆ ನಿರಂತರ ಸಹಯೋಗಕ್ಕೆ ಕರೆ ನೀಡಿದ ಕೇಂದ್ರ ಆರೋಗ್ಯ ಸಚಿವರು, ಎಲ್ಲಾ ತಜ್ಞರು, ನೀತಿ ನಿರೂಪಕರು ಮತ್ತು ಪಾಲುದಾರರ ಅಮೂಲ್ಯವಾದ ಸಲಹೆಗಳಿಗಾಗಿ ಧನ್ಯವಾದ ಅರ್ಪಿಸಿದರು.
ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಪಾಲ್ ಅವರು ಆರೋಗ್ಯಕ್ಕೆ ಸಂಬಂಧಿಸಿದ ಮೂರು ಸಮಾನಾಂತರ ಉಪ-ಗೋಷ್ಠಿಗಳ (breakout sessions) ನಡಾವಳಿಗಳನ್ನು ಸಾರಾಂಶ ರೂಪದಲ್ಲಿ ಮಂಡಿಸಿದರು. ಅವುಗಳೆಂದರೆ: “ಮಿತ್ರ ಆರೋಗ್ಯ ವೃತ್ತಿಪರರ ಪ್ರಮಾಣ ಹೆಚ್ಚಿಸುವುದು”, “1.5 ಲಕ್ಷ ಆರೈಕೆದಾರರಿಗೆ ತರಬೇತಿ” ಮತ್ತು ಭಾರತದಲ್ಲಿ “ಐದು ಪ್ರಾದೇಶಿಕ ವೈದ್ಯಕೀಯ ಹಬ್ ಗಳ” ಸ್ಥಾಪನೆ. ಪ್ರೆಸೆಂಟೇಶನ್ ಮೂಲಕ, ಅವರು ವೆಬಿನಾರ್ ನ ಪ್ರಮುಖ ಚರ್ಚಾ ವಿಷಯಗಳ ಸಾರಾಂಶವನ್ನು ಮತ್ತು ಮೂರು ಪ್ರಮುಖ ಬಜೆಟ್ ಉದ್ದೇಶಗಳನ್ನು ಸಾಧಿಸಲು ಕಾರ್ಯತಂತ್ರದ ಮುಂದಿನ ಹಾದಿಯನ್ನು ವಿವರಿಸಿದರು.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ, ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ವಿನೋದ್ ಕೊತ್ವಾಲ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2237236)
ವಿಸಿಟರ್ ಕೌಂಟರ್ : 4