ಭಾರೀ ಕೈಗಾರಿಕೆಗಳ ಸಚಿವಾಲಯ
ʻನಿರ್ಮಾಣ ಸಲಕರಣೆಗಳ ಹಣಕಾಸು ಸಮಾವೇಶʼದಲ್ಲಿ (ಸಿಇ ಫೈನಾನ್ಸ್ ಕಾನ್‌ಕ್ಲೇವ್) ಸದೃಢ ಹಣಕಾಸು ಪರಿಸರ ವ್ಯವಸ್ಥೆಯನ್ನು ಉಲ್ಲೆಖಿಸಿದ ಹೆಚ್.ಡಿ. ಕುಮಾರಸ್ವಾಮಿ
ಪ್ರಧಾನಮಂತ್ರಿ ಮೋದಿ ಅವರ ದೂರದೃಷ್ಟಿಯ ಅಡಿಯಲ್ಲಿ, ಭಾರತವು ನಿರ್ಮಾಣ ಸಲಕರಣೆಗಳ ಹಣಕಾಸು ನೀತಿಯನ್ನು ಬಲಪಡಿಸಿದೆ
ನಿರ್ಮಾಣ ಸಲಕರಣೆ ವಲಯದಲ್ಲಿ ಜಾಗತಿಕ ನಾಯಕತ್ವ ಸ್ಥಾನಮಾನ ಗಳಿಸಲು ಭಾರತದ ಬಂಡವಾಳ ವೆಚ್ಚ ಹೆಚ್ಚಳ: ಹೆಚ್.ಡಿ.ಕುಮಾರಸ್ವಾಮಿ
ಜಾಗತಿಕ ವ್ಯಾಪ್ತಿಗಾಗಿ ದೇಶೀಯ ಶಕ್ತಿಯನ್ನು ನಿರ್ಮಿಸುವತ್ತ ʻನಿರ್ಮಾಣ ಸಲಕರಣೆ ಹಣಕಾಸು ಸಮಾವೇಶʼವು ಗಮನ ಹರಿಸುತ್ತದೆ
ನಿರ್ಮಾಣ ಸಲಕರಣೆಗಳ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಸರ್ಕಾರವು ಕಾರ್ಯತಂತ್ರದ ಕ್ರಮಗಳನ್ನು ಅನಾವರಣಗೊಳಿಸಿದೆ
ಪ್ರಕಟಣಾ ದಿನಾಂಕ:
25 FEB 2026 12:27PM by PIB Bengaluru
ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ 6ನೇ ವಾರ್ಷಿಕ ನಿರ್ಮಾಣ ಸಲಕರಣೆಗಳ ಹಣಕಾಸು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಭಾರತದ ಮೂಲಸೌಕರ್ಯ ಮತ್ತು ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸುವಲ್ಲಿ ದೃಢವಾದ ಹಣಕಾಸು ವ್ಯವಸ್ಥೆಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು.

ಉದ್ಯಮದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, "ಸದೃಢ ಮೂಲಸೌಕರ್ಯ ಮತ್ತು ನಿರ್ಮಾಣ ಸಲಕರಣೆಗಳ ಹಣಕಾಸು ಪರಿಸರ ವ್ಯವಸ್ಥೆಯ ನಿರ್ಮಾಣ: ಜಾಗತಿಕವಾಗಿ ತಲುಪಲು ದೇಶೀಯ ಶಕ್ತಿಯ ಬಲವರ್ಧನೆ" ಎಂಬ ಸಮಾವೇಶದ ಧ್ಯೇಯವಾಕ್ಯವು ಅತ್ಯಂತ ಸಮಯೋಚಿತವಾಗಿದೆ. ಇದು ಕಾರ್ಯತಂತ್ರದ ದೃಷ್ಟಿಯಿಂದಲೂ ಭಾರತದ ಬೆಳವಣಿಗೆಯ ಪಥದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಒತ್ತಿ ಹೇಳಿದರು.
"ಭಾರತವು ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ, ಮತ್ತು ಮುಂಬರುವ ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ. ಮೂಲಸೌಕರ್ಯ ವಿಸ್ತರಣೆ, ಉತ್ಪಾದನೆ ಹೆಚ್ಚಳ ಮತ್ತು ಸುಸ್ಥಿರ ಬಂಡವಾಳ ಹೂಡಿಕೆಯಿಂದ ಈ ಬೆಳವಣಿಗೆಯ ಪಥವು ಪ್ರೇರಿತವಾಗಿದೆ," ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದನ್ನು ಉಲ್ಲೆಖಿಸಿದ ಸಚಿವರು, ಸರ್ಕಾರವು ಭೌತಿಕ ಸ್ವತ್ತುಗಳ ಜೊತೆಗೆ ದೀರ್ಘಕಾಲೀನ ಕೈಗಾರಿಕಾ ಸಾಮರ್ಥ್ಯವನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
"ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ನಾವು ಕೇವಲ ರಸ್ತೆಗಳು ಮತ್ತು ಸೇತುವೆಗಳನ್ನು ಮಾತ್ರವಲ್ಲ, ʻವಿಕಸಿತ ಭಾರತ-2047ʼರ ಅಡಿಪಾಯವನ್ನು ನಿರ್ಮಿಸುತ್ತಿದ್ದೇವೆ," ಎಂದು ಅವರು ಹೇಳಿದರು.
ಉದ್ದೇಶಿತ ನೀತಿ ಉಪಕ್ರಮಗಳು ಹಾಗೂ ಪ್ರೋತ್ಸಾಹಕ ನೀತಿಗಳ ಮೂಲಕ ನಿರ್ಮಾಣ ಉಪಕರಣಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಬೃಹತ್ ಕೈಗಾರಿಕೆಗಳ ಸಚಿವಾಲಯದ ಸಕ್ರಿಯ ಪಾತ್ರವನ್ನು ಕುಮಾರಸ್ವಾಮಿ ಒತ್ತಿ ಹೇಳಿದರು. 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ದಾಖಲೆ 12.2 ಲಕ್ಷ ಕೋಟಿ ರೂ.ಗಳ ಸಾರ್ವಜನಿಕ ಬಂಡವಾಳ ವೆಚ್ಚದ ಹಂಚಿಕೆಯ ಮೂಲಕ ಸರ್ಕಾರ ಈ ನಿಟ್ಟಿನಲ್ಲಿ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಅವರು ಹೇಳಿದರು. ಹೆದ್ದಾರಿಗಳು, ರೈಲ್ವೆಗಳು, ಸರಕು-ಸಾಗಣೆ ಕಾರಿಡಾರ್‌ಗಳು, ಬಂದರುಗಳು, ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಮತ್ತು ನಗರ ವಿಸ್ತರಣೆಯನ್ನು ಒಳಗೊಂಡ ರಚನಾತ್ಮಕ ಹಾಗೂ ಬಹು-ವಾರ್ಷಿಕ ಉತ್ತೇಜನವನ್ನು ಇದು ಒಳಗೊಂಡಿದೆ ಎಂದು ಬಣ್ಣಿಸಿದರು.

ಹೆಚ್ಚಿನ ಮೌಲ್ಯದ ಮತ್ತು ತಾಂತ್ರಿಕವಾಗಿ ಸುಧಾರಿತ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಬೃಹತ್ ಕೈಗಾರಿಕೆಗಳ ಸಚಿವಾಲಯವು ಕೈಗೊಳ್ಳಲಿರುವ ಉದ್ದೇಶಿತ ʻನಿರ್ಮಾಣ ಮತ್ತು ಮೂಲಸೌಕರ್ಯ ಸಾಧನಗಳ ಬಲವರ್ಧನೆʼ (ಸಿಐಇ) ಉಪಕ್ರಮದ ಬಗ್ಗೆಯೂ ಸಚಿವರು ಗಮನ ಸೆಳೆದರು.
"ದೇಶದೊಳಗೆ ಕಾರ್ಯತಂತ್ರದ ಸಾಮರ್ಥ್ಯವನ್ನು ನಿರ್ಮಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ತಯಾರಕರು ಆತ್ಮವಿಶ್ವಾಸದಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು, ಭದ್ರತೆಯ ಭಾವದೊಂದಿಗೆ ನಾವೀನ್ಯತೆಯಲ್ಲಿ ತೊಡಗಲು ಹಾಗೂ ಜಾಗತಿಕವಾಗಿ ಸ್ಪರ್ಧಿಸಲು ಇದು ಅನುವು ಮಾಡಿಕೊಡುತ್ತದೆ," ಎಂದು ಅವರು ಹೇಳಿದರು.
ಉದ್ಯಮದ ಅಂದಾಜುಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು, ಭಾರತೀಯ ನಿರ್ಮಾಣ ಸಲಕರಣೆಗಳ ಮಾರುಕಟ್ಟೆಯು ಪ್ರಸ್ತುತ ಸುಮಾರು 9.5 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ. 2030ರ ವೇಳೆಗೆ ಇದು ದ್ವಿಗುಣಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಈ ವಲಯವು 2025ರ ಹಣಕಾಸು ವರ್ಷದಲ್ಲಿ 1,40,000ಕ್ಕೂ ಹೆಚ್ಚು ಘಟಕಗಳ ಮಾರಾಟವನ್ನು ದಾಖಲಿಸಿದೆ. ದಶಕದ ಅಂತ್ಯದ ವೇಳೆಗೆ 25 ಶತಕೋಟಿ ಡಾಲರ್ ಮಾರುಕಟ್ಟೆಯಾಗಿ ವಿಕಸನಗೊಳ್ಳುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಈ ವಲಯದ ಮೇಲೆ ಉದಯೋನ್ಮುಖ ತಂತ್ರಜ್ಞಾನಗಳ ಕ್ರಾಂತಿಕಾರಿ ಪರಿಣಾಮವನ್ನು ಅವರು ಎತ್ತಿ ತೋರಿಸಿದರು. "ಯಾಂತ್ರೀಕೃತಗೊಂಡ, ಕೃತಕ ಬುದ್ಧಿಮತ್ತೆ ಆಧರಿತ ವಾಹನ ನಿರ್ವಹಣೆ, ಮುನ್ಸೂಚಕ ನಿರ್ವಹಣೆ ಹಾಗೂ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ನಿರ್ಮಾಣ ಉಪಕರಣಗಳು ಕಾರ್ಯಾಚರಣೆಯ ದಕ್ಷತೆಯನ್ನು ಮರುವ್ಯಾಖ್ಯಾನಿಸುತ್ತಿವೆ," ಎಂದು ಸಚಿವರು ಹೇಳಿದರು. ʻಪಿಎಂ ಇ-ಡ್ರೈವ್ʼನಂತಹ ಸರ್ಕಾರದ ಉಪಕ್ರಮಗಳು ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಕೈಗಾರಿಕಾ ಬೆಳವಣಿಗೆಯತ್ತ ಪರಿವರ್ತನೆಯನ್ನು ವೇಗಗೊಳಿಸುತ್ತಿವೆ ಎಂದು ಹೇಳಿದರು.
ಸದೃಢ ಹಣಕಾಸು ಪರಿಸರ ವ್ಯವಸ್ಥೆಯು ಆರ್ಥಿಕತೆಯಾದ್ಯಂತ ಗುಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಸಚಿವರು ಒತ್ತಿ ಹೇಳಿದರು. "ಬಲವಾದ ನಿರ್ಮಾಣ ಸಲಕರಣೆಗಳ ಹಣಕಾಸು ಪರಿಸರ ವ್ಯವಸ್ಥೆಯು ತಯಾರಕರನ್ನು ಬಲಪಡಿಸುವುದಲ್ಲದೆ; ಇದು ದೇಶಾದ್ಯಂತ ಗುತ್ತಿಗೆದಾರರು, ಎಂಎಸ್ಎಂಇಗಳು, ಸರಕು-ಸಾಗಣೆ ನಿರ್ವಾಹಕರು ಮತ್ತು ಮೂಲಸೌಕರ್ಯ ಅಭಿವೃದ್ಧಿದಾರರನ್ನು ಸಬಲೀಕರಣಗೊಳಿಸುತ್ತದೆ," ಎಂದು ಅವರು ಹೇಳಿದರು.
"ನಿರ್ಮಾಣ ಸಲಕರಣೆಗಳ ವಲಯವು ಕೇವಲ ಭಾರತದ ಬೆಳವಣಿಗೆಯ ಹಾದಿಯಲ್ಲಿ ಭಾಗವಹಿಸುತ್ತಿಲ್ಲ - ಅದು ಅದನ್ನು ನಿರ್ಮಿಸುತ್ತಿದೆ" ಎಂದು ಅವರು ಹೇಳಿದರು. ರಾಷ್ಟ್ರೀಯ ಅಭಿವೃದ್ಧಿ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ, ಜಾಗತಿಕವಾಗಿ ಸ್ಪರ್ಧಾತ್ಮಕವಾದ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸದೃಢವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮಧ್ಯಸ್ಥಗಾರರನ್ನು ಒತ್ತಾಯಿಸಿದರು.
ಭಾರತವನ್ನು ನಿರ್ಮಾಣ ಉಪಕರಣಗಳ ಉತ್ಪಾದನೆ ಮತ್ತು ಹಣಕಾಸಿನ ಜಾಗತಿಕ ಕೇಂದ್ರವನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡುವ ಮೂಲಕ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
(ಪ್ರಕಟಣೆ ಐ.ಡಿ.: 2232632)
ವಿಸಿಟರ್ ಕೌಂಟರ್ : 9