ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತವು ಗ್ರಾಹಕ ಸ್ಥಾನದಿಂದ ಜಾಗತಿಕ ಎಐ ಉತ್ಪಾದಕನಾಗಿ ಪರಿವರ್ತನೆಗೊಳ್ಳುವಲ್ಲಿ ಸ್ವತಂತ್ರ ಎಐ ಪಾತ್ರ ಪ್ರಮುಖವಾಗಿದೆ
"ಭಾರತದ ಸ್ವತಂತ್ರ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶದಿಂದ ಆದ ವಿಸ್ತಾರ ಪ್ರಭಾವ" ಎನ್ನುವ ವಿಷಯದ ಕುರಿತು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಅಧಿವೇಶನವು ಜಾಗತಿಕ ಎಐ ನಾಯಕತ್ವದ ಹಾದಿಗಳನ್ನು ಅನ್ವೇಷಿಸುತ್ತದೆ
ಸ್ವತಂತ್ರ ಎಐ (ಸಾವರೆನ್ ಎಐ) ಎಂದರೆ ಭಾರತದ ನೈಜ ಸವಾಲುಗಳಿಗೆ ನಿಯಂತ್ರಣ, ಒಳಗೊಳ್ಳುವಿಕೆ ಮತ್ತು ಪರಿಹಾರಗಳು: ಶ್ರೀ ಅಭಿಷೇಕ್ ಸಿಂಗ್, ಹೆಚ್ಚುವರಿ ಕಾರ್ಯದರ್ಶಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದೀರ್ಘಾವಧಿಯ ಸಂಶೋಧನಾ ಪರಿಸರ ವ್ಯವಸ್ಥೆ ಮತ್ತು ರಾಷ್ಟ್ರೀಯ ಸಹಯೋಗಕ್ಕಾಗಿ ನಾಯಕರಿಂದ ಕರೆ
ಪ್ರಕಟಣಾ ದಿನಾಂಕ:
17 FEB 2026 4:29PM by PIB Bengaluru
ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ “ಭಾರತದ ಸ್ವತಂತ್ರ ಕೃತಕ ಬುದ್ಧಿಮತ್ತೆ (ಸಾವರೆನ್ ಎಐ) ಮತ್ತು ದತ್ತಾಂಶದಿಂದ ಆದ ವಿಸ್ತಾರ ಪ್ರಭಾವ” ಎನ್ನುವ ವಿಷಯದ ಅಧಿವೇಶನವು ಭಾರತವು ಕೃತಕ ಬುದ್ಧಿಮತ್ತೆಯ (ಎಐ) ಗ್ರಾಹಕ ಸ್ಥಾನದಿಂದ ಜಾಗತಿಕ ಮನ್ನಣೆಯೊಂದಿಗೆ ಎಐ ವ್ಯವಸ್ಥೆಗಳ ಉತ್ಪಾದಕರಾಗುವವರೆಗೆ ಹೇಗೆ ಸಾಗಬಹುದು ಎನ್ನುವುದರ ಮೇಲೆ ಕೇಂದ್ರೀಕರಿಸಿದೆ.

ಚರ್ಚೆಯು ಆಳವಾದ ಸಂಶೋಧನಾ ಪ್ರತಿಭೆ ಮತ್ತು ದೀರ್ಘಕಾಲೀನ ನಾವೀನ್ಯತೆ ಹೂಡಿಕೆಯಲ್ಲಿನ ಅಂತರವನ್ನು ತೆಗೆದು ಹಾಕುವ ಅಗತ್ಯವನ್ನು ಉಲ್ಲೇಖಿಸಿತು. ನಿಜವಾದ ಎಐ ಸಾಮರ್ಥ್ಯವನ್ನು ಅಲ್ಪಾವಧಿಯ ಮಧ್ಯಸ್ಥಿಕೆಗಳ ಮೂಲಕ ನಿರ್ಮಿಸುವ ಬದಲು ನಿರಂತರ ಸಂಶೋಧನಾ ಪರಿಸರ ವ್ಯವಸ್ಥೆಗಳು ಮತ್ತು ಬಲವಾದ ಮಾರ್ಗದರ್ಶನದ ಮೂಲಕ ನಿರ್ಮಿಸಲಾಗುತ್ತದೆ ಎಂದು ಸಮಿತಿ ಒತ್ತಿಹೇಳಿತು. ತಜ್ಞರು ಸ್ವತಂತ್ರ ಎಐನ ಮೂರು ಪ್ರಮುಖ ಸ್ತಂಭಗಳ ಬಗ್ಗೆ ಒತ್ತಿ ಹೇಳಿದರು: ಭಾರತೀಯ ಭಾಷೆಗಳು ಮತ್ತು ಸಾಮಾಜಿಕ ಸಂದರ್ಭಗಳಿಗೆ ಹೊಂದಿಕೊಳ್ಳುವ ಸ್ಥಳೀಯ ಮಾದರಿಗಳ ಅಭಿವೃದ್ಧಿ; ಹೊಂದಿಕೊಳ್ಳುವ ದೇಶೀಯ ಮೂಲಸೌಕರ್ಯದ ರಚನೆ; ಮತ್ತು ಮೂಲಭೂತ ಸಂಶೋಧನೆಯ ಬಲವರ್ಧನೆ.
ಕಾರ್ಯಕ್ರಮವು ದೇಶದ ಆದ್ಯತೆಗಳಾದ ಆರ್ಥಿಕ ಸೇರ್ಪಡೆ, ಕೃಷಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತವುಗಳಿಗೆ ಮುಂದುವರಿದ ಎಐ ಸಂಶೋಧನೆಯನ್ನು ಜೋಡಿಸಿತು. ಅರ್ಥಪೂರ್ಣ ಮತ್ತು ಸಮಗ್ರ ಫಲಿತಾಂಶಗಳನ್ನು ನೀಡಲು ಎಐ ಅನ್ನು ಭಾರತದ ಅಭಿವೃದ್ಧಿ ಗುರಿಗಳೊಂದಿಗೆ ಜೋಡಿಸಬೇಕು ಎಂದು ಭಾಷಣ ಮಾಡಿದವರು ಹೇಳಿದರು.
ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ ಐ ಸಿ) ಮಹಾನಿರ್ದೇಶಕರು ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಷೇಕ್ ಸಿಂಗ್, ಸ್ವತಂತ್ರ ಎಐ ಎಂದರೆ ಪ್ರತ್ಯೇಕವಾಗಿ ಕೆಲಸ ಮಾಡುವುದು ಎಂದಲ್ಲ ಎಂದು ಹೇಳಿದರು. ಎಐ ಯಲ್ಲಿ ಸ್ವತಂತ್ರ ಎಂದರೆ ಎಐ ವ್ಯವಸ್ಥೆಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ, ನಿಯೋಜಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎನ್ನುವುದರ ಮೇಲೆ ನಿಯಂತ್ರಣ ಹೊಂದಿರುವುದು ಎಂದು ಅವರು ಹೇಳಿದರು. ನಾಗರಿಕರು ತಮ್ಮದೇ ಭಾಷೆಗಳಲ್ಲಿ ಸೇವೆಗಳನ್ನು ಪಡೆಯಬಹುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ಆರ್ಥಿಕ ಸೇರ್ಪಡೆಯಲ್ಲಿನ ನಿಜವಾದ ಸವಾಲುಗಳನ್ನು ಪರಿಹರಿಸಲು ಎಐ ಅನ್ನು ಬಳಸಬೇಕು ಎಂದು ಅವರು ಒತ್ತಿ ಹೇಳಿದರು.

ಭಾರತ್ ಜೆನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಿಷಿ ಬಾಲ್, ಆಡಳಿತ, ನಾಗರಿಕ ಸೇವೆಗಳು ಮತ್ತು ಹಣಕಾಸು ಮುಂತಾದ ಆದ್ಯತೆಯ ಮತ್ತು ಸೂಕ್ಷ್ಮ ಕ್ಷೇತ್ರಗಳಿಂದ ಪ್ರಾರಂಭಿಸಿ ಎಐ ಅಳವಡಿಕೆಯು ಎಲ್ಲಾ ವಲಯಗಳಲ್ಲಿ ನಡೆಯುತ್ತದೆ ಆದರೆ ಅದನ್ನು ಹಂತ ಹಂತವಾಗಿ ಮತ್ತು ಎಚ್ಚರಿಕೆಯಿಂದ ಕಾರ್ಯಗತಗೊಳಿಸಬೇಕು. ಎಐ ಅಭಿವೃದ್ಧಿಯನ್ನು ವಲಯವಾರು ಪ್ರಕ್ರಿಯೆಯಾಗಿರದೆ ನಿರಂತರ ಪ್ರಯಾಣವಾಗಿದೆ ಎಂದು ಅವರು ವಿವರಿಸಿದರು. ಸಾಮಾನ್ಯ ಮಾದರಿಗಳು, ಇನ್ಫರನ್ಸ್ ಆರ್ಕಿಟೆಕ್ಚರ್ ತಂತ್ರಜ್ಞಾನ ಮತ್ತು ಘಟಕಗಳನ್ನು ಒಳಗೊಂಡಂತೆ ಹಂಚಿಕೆಯ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು, ಇದು ನಾವೀನ್ಯಕಾರರು ವೇಗವಾಗಿ ಮತ್ತು ಸುರಕ್ಷಿತ ಪರಿಹಾರಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಸ್ವತಂತ್ರ ಎಐಗಾಗಿ, ವ್ಯಾಪಕವಾಗಿ ಬಳಸಬಹುದಾದ ಮಾದರಿಗಳು ಮತ್ತು ಮೂಲಸೌಕರ್ಯಗಳ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ರಚಿಸುವ ಅಗತ್ಯವಿದೆ ಮತ್ತು ನವೋದ್ಯಮಗಳು ಹೊಸತನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಅಂತಹ ಪರಿಸರ ವ್ಯವಸ್ಥೆಗೆ ದೇಶಾದ್ಯಂತ ಸಹಯೋಗದ ಪ್ರಯತ್ನಗಳ ಅಗತ್ಯವಿದೆ ಎಂದು ಅವರು ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಹಿತಿ ವ್ಯವಸ್ಥೆಗಳು ಮತ್ತು ನಿರ್ವಹಣಾ ನಿರ್ದೇಶನಾಲಯ (ಡಿಐಎಸ್ ಎಂ) ನಿರ್ದೇಶಕ ಶ್ರೀ ರಾಜೀವ್ ರತನ್ ಚೆಟ್ವಾನಿ, ಕೃತಕ ಬುದ್ಧಿಮತ್ತೆಯ ಕಾರ್ಯತಂತ್ರದ ಮಹತ್ವವನ್ನು ಎತ್ತಿ ತೋರಿಸಿದರು. ಇಸ್ರೋಗೆ, ಸ್ವತಂತ್ರ ಎಐ, ಒಂದು ಕಾರ್ಯತಂತ್ರದ ಅವಶ್ಯಕತೆ ಮತ್ತು ಬಾಹ್ಯಾಕಾಶ ವೀಕ್ಷಣೆ ಹಾಗು ರಾಷ್ಟ್ರೀಯ ಸ್ವಾಯತ್ತತೆಗೆ ಪ್ರಮುಖ ಮೂಲಸೌಕರ್ಯವಾಗಿದೆ ಎಂದು ಅವರು ಹೇಳಿದರು. ಕಾರ್ಯತಂತ್ರದ ವಲಯಗಳಲ್ಲಿ ಬಳಸುವ ಎಐ ವ್ಯವಸ್ಥೆಗಳು ನೇರ ಅಂತರ್ಜಾಲದ ಅವಲಂಬನೆಯಿಲ್ಲದೆ ಆಫ್ಲೈನ್ನಲ್ಲಿ ಕಾರ್ಯನಿರ್ವಹಿಸಬೇಕು ಹಾಗು ಪಾರದರ್ಶಕ ಮತ್ತು ಪರಿಶೋಧನೆಗೆ ಒಳಪಟ್ಟಿರಬೇಕು ಎಂದು ಅವರು ಒತ್ತಿ ಹೇಳಿದರು. ವಿವರಿಸಬಹುದಾದ ಮಾದರಿಗಳು, ದತ್ತಾಂಶ ಸ್ಪಷ್ಟ ವಿವರಗಳು ಮತ್ತು ರಾಷ್ಟ್ರೀಯ ಕಾನೂನು ಚೌಕಟ್ಟುಗಳೊಂದಿಗೆ ಹೊಂದಿಕೆಯಾಗುವ ತರಬೇತಿಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೃಷಿ, ವಿಪತ್ತು ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ನಗರ ಯೋಜನೆಯನ್ನು ಬಲಪಡಿಸಲು ಭಾರತದ ವಿಶಾಲವಾದ ಭೌಗೋಳಿಕ ದತ್ತಾಂಶ ಸಂಪನ್ಮೂಲಗಳನ್ನು ಎಐ ಮೂಲಕ ಬಳಸಿಕೊಳ್ಳಬಹುದು, ಇದರಿಂದಾಗಿ ಭದ್ರತೆ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.
ನಿರಂತರ ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ಸಹಯೋಗದ ಮೂಲಕ ಭಾರತದ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಒಟ್ಟಾರೆ ಗಮನಕ್ಕೆ ಈ ಅಧಿವೇಶನವು ಕೊಡುಗೆ ನೀಡಿತು. ನಾವೀನ್ಯತೆಯನ್ನು ಬೆಂಬಲಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ಮುನ್ನಡೆಸಲು ದೀರ್ಘಕಾಲೀನ ಸಾಮರ್ಥ್ಯವನ್ನು ನಿರ್ಮಿಸುವ ಹಂಚಿಕೆಯ ಬದ್ಧತೆಯನ್ನು ಚರ್ಚೆಗಳು ತೋರಿಸಿದವು.
*****
(ಪ್ರಕಟಣೆ ಐ.ಡಿ.: 2229862)
ವಿಸಿಟರ್ ಕೌಂಟರ್ : 6