ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗೋಧಿ ರಫ್ತಿಗೆ ಸರ್ಕಾರದ ಅನುಮೋದನೆ ಮತ್ತು ಹೆಚ್ಚುವರಿ ಗೋಧಿ ಉತ್ಪನ್ನ ಹಾಗು ಸಕ್ಕರೆ ರಫ್ತಿಗೆ ಅವಕಾಶ

प्रविष्टि तिथि: 13 FEB 2026 3:39PM by PIB Bengaluru

I. ಭಾರತ ಸರ್ಕಾರವು 25 ಲಕ್ಷ ಮೆಟ್ರಿಕ್ ಟನ್ (ಎಲ್.ಎಂ.ಟಿ.-LMT) ಗೋಧಿ ಮತ್ತು ಹೆಚ್ಚುವರಿ 5 ಎಲ್.ಎಂ.ಟಿ. ಗೋಧಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಮೋದನೆ ನೀಡಿದೆ, ಇದು ದೇಶೀಯ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮತ್ತು ಉತ್ಪಾದಕರಿಗೆ ಲಾಭದಾಯಕ ಆದಾಯವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ನಿರ್ಣಾಯಕ ಮತ್ತು ರೈತ ಕೇಂದ್ರಿತ ಕ್ರಮವಾಗಿದೆ. ಪ್ರಸ್ತುತ ಲಭ್ಯತೆ ಮತ್ತು ಬೆಲೆ ಸನ್ನಿವೇಶದ ಸಮಗ್ರ ಮೌಲ್ಯಮಾಪನದ ನಂತರ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ, ಇದು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

2025–26ರ ಅವಧಿಯಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಗೋಧಿ ದಾಸ್ತಾನು ಲಭ್ಯತೆಯು ಸುಮಾರು 75 ಎಲ್.ಎಂ.ಟಿ ಯಷ್ಟಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು 32 ಎಲ್.ಎಂ.ಟಿ.ಯಷ್ಟು ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಆಗಿರುವ ಈ ಗಣನೀಯ ಹೆಚ್ಚಳವು ದೇಶದಲ್ಲಿ ಆರಾಮದಾಯಕ ಪೂರೈಕೆಯ ಸ್ಥಿತಿಯನ್ನು ಸೂಚಿಸುತ್ತದೆ. ಇದಲ್ಲದೆ, ಏಪ್ರಿಲ್ 1, 2026 ರ ಹೊತ್ತಿಗೆ, ಎಫ್.ಸಿ.ಐ. ಯೊಂದಿಗೆ ಕೇಂದ್ರೀಯ ಪೂಲ್‌ನಲ್ಲಿ ಒಟ್ಟು ಗೋಧಿ ಲಭ್ಯತೆಯನ್ನು ಸುಮಾರು 182 ಎಲ್.ಎಂ.ಟಿ.ಯಷ್ಟು ಎಂದು ಅಂದಾಜಿಸಲಾಗಿದೆ, ಹೀಗಾಗಿ ರಫ್ತು ಅನುಮತಿಗಳು ದೇಶೀಯ ಆಹಾರ ಭದ್ರತಾ ಅವಶ್ಯಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಾತ್ರಿಪಡಿಸಲಾಗಿದೆ.

2026ರ ರಬಿಯಲ್ಲಿ ಗೋಧಿ ವಿಸ್ತೀರ್ಣವು ಕಳೆದ ವರ್ಷದ 328.04 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ ಸುಮಾರು 334.17 ಲಕ್ಷ ಹೆಕ್ಟೇರ್‌ಗಳಿಗೆ ಹೆಚ್ಚಿದೆ. ಇದು ಖಚಿತವಾದ ಎಂ.ಎಸ್.ಪಿ. ಮತ್ತು ಖರೀದಿ ಕಾರ್ಯವಿಧಾನಗಳಿಂದ ಬೆಂಬಲಿತವಾದ ಗೋಧಿ ಕೃಷಿಯಲ್ಲಿ ರೈತರ ಬಲವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ಮತ್ತೊಂದು ಉತ್ತಮ ಇಳುವರಿ/ಸುಗ್ಗಿಯ ಸಾಧ್ಯತೆಯನ್ನು ಸೂಚಿಸುತ್ತದೆ.

ಹೆಚ್ಚಿನ ದಾಸ್ತಾನು/ಸ್ಟಾಕ್ ಲಭ್ಯತೆ, ತೀರಾ ಭಾರವಲ್ಲದ ಬೆಲೆಗಳು, ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಉತ್ಪಾದನೆ ಮತ್ತು ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯು ಮಾರುಕಟ್ಟೆಗೆ ಬರುವ  ಸಮಯದಲ್ಲಿ ಆತಂಕದಿಂದ ಮಾಡುವ  ಮಾರಾಟವನ್ನು ತಡೆಯುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, 25 ಎಲ್.ಎಂ.ಟಿ.  ಗೋಧಿ ಮತ್ತು 5 ಎಲ್.ಎಂ.ಟಿ. ಗೋಧಿ ಉತ್ಪನ್ನಗಳ ರಫ್ತಿಗೆ ಅನುಮತಿ ನೀಡುವ ಸರ್ಕಾರದ ನಿರ್ಧಾರವು ದೇಶೀಯ ಬೆಲೆಗಳನ್ನು ಸ್ಥಿರಗೊಳಿಸಲು, ಮಾರುಕಟ್ಟೆ ದ್ರವ್ಯತೆಯನ್ನು ಸುಧಾರಿಸಲು, ದಕ್ಷ ದಾಸ್ತಾನು (ಸ್ಟಾಕ್ )  ಆವರ್ತನವನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರ ಆದಾಯವನ್ನು ಮತ್ತಷ್ಟು ಬಲಪಡಿಸಲು ನೆರವಾಗುತ್ತದೆ ಮತ್ತು ರಾಷ್ಟ್ರೀಯ ಆಹಾರ ಭದ್ರತೆಗೆ ಸಹಾಯ ಮಾಡುತ್ತದೆ.

II. ಇದರೊಂದಿಗೆ, ಸಕ್ಕರೆ ರಫ್ತಿಗೆ ಅನುಕೂಲವಾಗುವಂತೆ, ಭಾರತ ಸರ್ಕಾರವು ಪ್ರಸಕ್ತ ಸಕ್ಕರೆ ಹಂಗಾಮು 2025–26ರಲ್ಲಿ ಇಚ್ಚೆ ವ್ಯಕ್ತಪಡಿಸುವ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚುವರಿಯಾಗಿ 5 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಅನುಮತಿ ನೀಡಲು ನಿರ್ಧರಿಸಿದೆ. ಇದಕ್ಕೂ ಮೊದಲು, ಸರ್ಕಾರವು 14.11.2025ರ ಆದೇಶದ ಪ್ರಕಾರ, ಪ್ರಸಕ್ತ ಸಕ್ಕರೆ ಹಂಗಾಮು 2025–26ರಲ್ಲಿ 15 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯ ರಫ್ತಿಗೆ ಅನುಮತಿಸಿತ್ತು.

ಸಕ್ಕರೆ ಕಾರ್ಖಾನೆಗಳು ಒದಗಿಸಿದ ಮಾಹಿತಿಯ ಪ್ರಕಾರ, 31.01.2026 ರವರೆಗೆ ಕೇವಲ 1.97 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಮಾತ್ರ ರಫ್ತು ಮಾಡಲಾಗಿದೆ. ಇದಲ್ಲದೆ, ಸಕ್ಕರೆ ಕಾರ್ಖಾನೆಗಳಿಂದ ಸುಮಾರು 2.72 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2026 ರ ಜೂನ್ 30 ರೊಳಗೆ ಅವರಿಗೆ  ನಿಗದಿಪಡಿಸಿದ ಪ್ರಮಾಣದಲ್ಲಿ ಕನಿಷ್ಠ 70% ರಫ್ತು ಮಾಡಬೇಕು ಎಂಬ ಷರತ್ತಿಗೆ ಒಳಪಟ್ಟು, ಇಚ್ಛೆಯ ಸಕ್ಕರೆ ಕಾರ್ಖಾನೆಗಳಿಗೆ 5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಫ್ತು ಪ್ರಮಾಣವನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ. ರಫ್ತು ಕೋಟಾವನ್ನು ಇಚ್ಛೆಯ ಸಕ್ಕರೆ ಕಾರ್ಖಾನೆಗಳಿಗೆ ಅನುಪಾತದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ ಮತ್ತು ಕಾರ್ಖಾನೆಗಳು ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳಲ್ಲಿ ತಮ್ಮ ಇಚ್ಛೆಯನ್ನು ಸಲ್ಲಿಸಬೇಕು. ಹಾಗೆ ಹಂಚಿಕೆಯಾದ ರಫ್ತು ಕೋಟಾವನ್ನು ಬೇರೆ ಯಾವುದೇ ಸಕ್ಕರೆ ಕಾರ್ಖಾನೆಯೊಂದಿಗೆ ಬದಲಾಯಿಸಲಾಗುವುದಿಲ್ಲ ಅಥವಾ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ.

ಈ ನಿರ್ಧಾರವು ಹೆಚ್ಚಿನ ಸಕ್ಕರೆ ರಫ್ತಿಗೆ ಅನುಕೂಲ ಮಾಡಿಕೊಡುತ್ತದೆ. ಮತ್ತು ದೇಶದಲ್ಲಿ ಹೆಚ್ಚುವರಿ ಸಕ್ಕರೆ ಲಭ್ಯತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(रिलीज़ आईडी: 2227585) आगंतुक पटल : 59
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Malayalam