ಪ್ರಧಾನ ಮಂತ್ರಿಯವರ ಕಛೇರಿ
ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಸಿಇಒಗಳು ಮತ್ತು ತಜ್ಞರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಿದರು
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬಿಯಾಗುವ ಗುರಿಯತ್ತ ವಿವಿಧ ಸಂಸ್ಥೆಗಳ ಸಿಇಒಗಳು ಬಲವಾದ ಬೆಂಬಲ ವ್ಯಕ್ತಪಡಿಸಿದರು
ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ನಾಯಕ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಸಿಇಒಗಳು ಗುರುತಿಸಿದರು
ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಸುರಕ್ಷಿತವಾದ ಕೃತಕ ಬುದ್ಧಿಮತ್ತೆ (ಎಐ) ಪರಿಸರ ವ್ಯವಸ್ಥೆಯತ್ತ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನೈತಿಕ ಬಳಕೆಯ ಬಗ್ಗೆ ಯಾವುದೇ ರಾಜಿ ಇರಬಾರದು ಎಂದು ಪ್ರಧಾನಮಂತ್ರಿ ಅವರು ಹೇಳಿದರು
ಯುಪಿಐ ಮೂಲಕ, ಭಾರತವು ಜಾಗತಿಕವಾಗಿ ತನ್ನ ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸಿದೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿಯೂ ಅದನ್ನು ಪುನರಾವರ್ತಿಸಬಹುದು: ಪ್ರಧಾನಮಂತ್ರಿ
ನಮ್ಮ ತಂತ್ರಜ್ಞಾನದೊಂದಿಗೆ ಪ್ರಭಾವ ಬೀರುವ ಜೊತೆಗೆ ಜಗತ್ತಿಗೆ ಸ್ಫೂರ್ತಿ ನೀಡುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು
ಪ್ರಮುಖ ಕ್ಷೇತ್ರಗಳಲ್ಲಿ ಸ್ಥಳೀಯ ತಂತ್ರಜ್ಞಾನದ ಬಳಕೆಯನ್ನು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು
प्रविष्टि तिथि:
29 JAN 2026 5:51PM by PIB Bengaluru
ಪ್ರಧಾನಮಂತ್ರಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಸಿಇಒಗಳು ಮತ್ತು ತಜ್ಞರೊಂದಿಗೆ ಸಂವಾದ ನಡೆಸಿದರು.
ಫೆಬ್ರವರಿಯಲ್ಲಿ ನಡೆಯಲಿರುವ "ಇಂಡಿಯಾಎಐ ಇಂಪ್ಯಾಕ್ಟ್ ಶೃಂಗಸಭೆ"ಗೆ ಅನುಗುಣವಾಗಿ, ಕಾರ್ಯತಂತ್ರದ ಸಹಯೋಗಗಳನ್ನು ಬೆಳೆಸುವುದು, ಎಐ ನಾವೀನ್ಯತೆಗಳನ್ನು ಪ್ರದರ್ಶಿಸುವುದು ಮತ್ತು ಭಾರತದ ಎಐ ಮಿಷನ್ ಗುರಿಗಳನ್ನು ವೇಗಗೊಳಿಸುವ ಮಹತ್ವದ ಗುರಿಯನ್ನು ಈ ಸಂವಾದ ಹೊಂದಿತ್ತು. ಸಂವಾದದ ಸಂದರ್ಭದಲ್ಲಿ , ಸಿಇಒಗಳು ಎಐ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುವ ಗುರಿಯತ್ತ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಎಐ ಕ್ಷೇತ್ರದಲ್ಲಿ ಜಾಗತಿಕವಾಗಿ ನಾಯಕನನ್ನಾಗಿ ಮಾಡಲು ಕೇಂದ್ರ ಸರ್ಕಾರ ಮಾಡುತ್ತಿರುವ ಎಲ್ಲಾ ಪ್ರಯತ್ನಗಳು ಮತ್ತು ಸಂಪನ್ಮೂಲಗಳನ್ನು ಅವರುಗಳು ಶ್ಲಾಘಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಕೊಡುಗೆ ನೀಡಲು ಅದನ್ನು ಬಳಸುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಪ್ರಮುಖ ಕ್ಷೇತ್ರಗಳಲ್ಲಿ ಸ್ಥಳೀಯ ತಂತ್ರಜ್ಞಾನದ ಬಳಕೆಯನ್ನು ಅಳವಡಿಸಿಕೊಳ್ಳಲು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು.
ಮುಂಬರುವ "ಎಐ ಇಂಪ್ಯಾಕ್ಟ್ ಶೃಂಗಸಭೆ"ಯ ಕುರಿತು ಮಾತನಾಡುತ್ತಾ, ಎಲ್ಲಾ ವ್ಯಕ್ತಿಗಳು ಮತ್ತು ಕಂಪನಿಗಳು ಹೊಸ ಅವಕಾಶಗಳನ್ನು ಅನ್ವೇಷಿಸಲು ಮತ್ತು ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯಲು ಶೃಂಗಸಭೆಯನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮೂಲಕ ಭಾರತವು ತನ್ನ ತಾಂತ್ರಿಕ ಪರಾಕ್ರಮವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ ಮತ್ತು ಎಐ ಕ್ಷೇತ್ರದಲ್ಲೂ ಅದನ್ನು ಪುನರಾವರ್ತಿಸಬಹುದು ಎಂದು ಅವರು ಹೇಳಿದರು.
ಭಾರತವು ಪ್ರಮಾಣ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ವಿಶಿಷ್ಟ ಪ್ರತಿಪಾದನೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು, ಇದರಿಂದಾಗಿ ಜಗತ್ತು ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ನಂಬುತ್ತದೆ. 'ಎಲ್ಲರಿಗೂ ಎಐ' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ, ನಾವು ನಮ್ಮ ತಂತ್ರಜ್ಞಾನದೊಂದಿಗೆ ಪ್ರಭಾವವನ್ನು ಸೃಷ್ಟಿಸುವುದರ ಜೊತೆಗೆ ಜಗತ್ತನ್ನು ಪ್ರೇರೇಪಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಎಲ್ಲಾ ಜಾಗತಿಕ ಎಐ ಪ್ರಯತ್ನಗಳಿಗೆ ಭಾರತವನ್ನು ಫಲವತ್ತಾದ ತಾಣವನ್ನಾಗಿ ಮಾಡುವಂತೆ ಪ್ರಧಾನಮಂತ್ರಿ ಅವರು ಸಿಇಒಗಳು ಮತ್ತು ತಜ್ಞರನ್ನು ಒತ್ತಾಯಿಸಿದರು.
ತಂತ್ರಜ್ಞಾನದ ದತ್ತಾಂಶ ಭದ್ರತೆ ಮತ್ತು ಪ್ರಜಾಪ್ರಭುತ್ವೀಕರಣದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಸುರಕ್ಷಿತವಾದ ಎಐ ಪರಿಸರ ವ್ಯವಸ್ಥೆಯತ್ತ ನಾವು ಕೆಲಸ ಮಾಡಬೇಕು ಎಂದು ಅವರು ಹೇಳಿದರು. "ಎಐ"ಯ ನೈತಿಕ ಬಳಕೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಎಐ ಕೌಶಲ್ಯ ಮತ್ತು ಪ್ರತಿಭೆ ನಿರ್ಮಾಣದತ್ತ ಗಮನಹರಿಸುವ ಅಗತ್ಯವನ್ನು ಸಹ ಅವರು ಹೇಳಿದರು. ಭಾರತದ ಎಐ ಪರಿಸರ ವ್ಯವಸ್ಥೆಯು ರಾಷ್ಟ್ರದ ಪಾತ್ರ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸಬೇಕು ಎಂದು ಪ್ರಧಾನಮಂತ್ರಿ ಅವರು ಮನವಿ ಮಾಡಿದರು.
ಉನ್ನತ ಮಟ್ಟದ ದುಂಡುಮೇಜಿನ ಸಭೆಯಲ್ಲಿ ವಿಪ್ರೋ, ಟಿಸಿಎಸ್, ಎಚ್.ಸಿ.ಎಲ್ ಟೆಕ್, ಜೊಹೊ ಕಾರ್ಪೊರೇಷನ್, ಎಲ್.ಟಿ.ಐ ಮೈಂಡ್ ಟ್ರೀ, ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್, ಅದಾನಿಕಾನೆಕ್ಸ್, ಎನ್.ಎಕ್ಸ್.ಟ್ರಾ ಡೇಟಾ ಮತ್ತು ನೆಟ್ ವೆಬ್ ಟೆಕ್ನಾಲಜೀಸ್ ಸೇರಿದಂತೆ ಎಐ ಕ್ಷೇತ್ರದಲ್ಲಿ ಕೆಲಸ ಮಾಡುವ ವಿವಿಧ ಕಂಪನಿಗಳ ಸಿಇಒಗಳು ಮತ್ತು ಐಐಐಟಿ ಹೈದರಾಬಾದ್, ಐಐಟಿ ಮದ್ರಾಸ್ ಮತ್ತು ಐಐಟಿ ಬಾಂಬೆಯ ತಜ್ಞರು ಭಾಗವಹಿಸಿದ್ದರು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಕೂಡ ಈ ವಿಶೇಷ ಸಂವಾದದಲ್ಲಿ ಭಾಗವಹಿಸಿದ್ದರು.
*****
.
(रिलीज़ आईडी: 2220555)
आगंतुक पटल : 4