ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಇಂಧನ ಸಪ್ತಾಹ-2026 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

प्रविष्टि तिथि: 27 JAN 2026 11:38AM by PIB Bengaluru

ಶುಭಾಶಯಗಳು

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಗೋವಾ ಮುಖ್ಯಮಂತ್ರಿಗಳೆ, ಇತರೆ ಸಚಿವರೆ, ರಾಯಭಾರಿಗಳೆ, ಸಿಇಒಗಳೆ, ಗಣ್ಯ ಅತಿಥಿಗಳೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಇಂಧನ ಸಪ್ತಾಹದ ಹೊಸ ಆವೃತ್ತಿಯಲ್ಲಿ, ವಿಶ್ವದ ಸುಮಾರು 125 ದೇಶಗಳ ಪ್ರತಿನಿಧಿಗಳು ಗೋವಾದಲ್ಲಿ ಒಟ್ಟುಗೂಡಿದ್ದಾರೆ. ನೀವು ಇಂಧನ-ಸುರಕ್ಷತೆ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಚರ್ಚಿಸಲು ಭಾರತಕ್ಕೆ ಬಂದಿದ್ದೀರಿ. ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ.

ಸ್ನೇಹಿತರೆ,

ಅತಿ ಕಡಿಮೆ ಅವಧಿಯಲ್ಲಿ ಭಾರತ ಇಂಧನ ಸಪ್ತಾಹವು ಸಂವಾದ ಮತ್ತು ಕ್ರಿಯೆಯ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ. ಇಂದು ಭಾರತವು ಇಂಧನ ವಲಯಕ್ಕೆ ಅಗಾಧ ಅವಕಾಶಗಳ ತಾಣವಾಗಿದೆ. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಅಂದರೆ ನಮ್ಮ ದೇಶದಲ್ಲಿ ಇಂಧನ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಹೊರತಾಗಿ, ವಿಶ್ವದ ಬೇಡಿಕೆಯನ್ನು ಪೂರೈಸಲು ಭಾರತವು ಅತ್ಯುತ್ತಮ ಅವಕಾಶಗಳನ್ನು ಸಹ ಒದಗಿಸುತ್ತಿದೆ. ಇಂದು ನಾವು ವಿಶ್ವದ ಪೆಟ್ರೋಲಿಯಂ ಉತ್ಪನ್ನಗಳ ಅಗ್ರ 5 ರಫ್ತುದಾರರಲ್ಲಿ ಒಬ್ಬರಾಗಿದ್ದೇವೆ. ನಾವು ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ರಫ್ತು ವ್ಯಾಪ್ತಿ ಹೊಂದಿದ್ದೇವೆ. ಭಾರತದ ಸಾಮರ್ಥ್ಯವು ನಿಮಗೆ ಹೆಚ್ಚಿನ ಉಪಯೋಗ ನೀಡಲಿದೆ. ಆದ್ದರಿಂದ, ಇಂಧನ ಸಪ್ತಾಹದ ವೇದಿಕೆಯು ನಮ್ಮ ಪಾಲುದಾರಿಕೆಗಳನ್ನು ಅನ್ವೇಷಿಸಲು ಅತ್ಯುತ್ತಮ ಸ್ಥಳವಾಗಿದೆ. ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೆ,

ನನ್ನ ವಿಷಯವನ್ನು ಪ್ರಸ್ತುತಪಡಿಸುವ ಮೊದಲು, ನಾನು ಒಂದು ದೊಡ್ಡ ಬೆಳವಣಿಗೆಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ನಿನ್ನೆಯಷ್ಟೇ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಬಹುದೊಡ್ಡ ಒಪ್ಪಂದ ನಡೆದಿದೆ. ವಿಶ್ವಾದ್ಯಂತದ ಜನರು ಇದನ್ನು 'ಎಲ್ಲಾ ಒಪ್ಪಂದಗಳ ತಾಯಿ' ಎಂದು ಚರ್ಚಿಸುತ್ತಿದ್ದಾರೆ. ಈ ಒಪ್ಪಂದವು ಭಾರತದ 140 ಕೋಟಿ ಜನರಿಗೆ ಮತ್ತು ಐರೋಪ್ಯ ರಾಷ್ಟ್ರಗಳ ಕೋಟ್ಯಂತರ ಜನರಿಗೆ ದೊಡ್ಡ ಅವಕಾಶಗಳನ್ನು ತಂದಿದೆ. ಇದು ವಿಶ್ವದ 2 ಪ್ರಮುಖ ಆರ್ಥಿಕತೆಗಳ ನಡುವಿನ ಒಂಬಡಿಕೆಯ ಅದ್ಭುತ ಉದಾಹರಣೆಯಾಗಿದೆ. ಈ ಒಪ್ಪಂದವು ಜಾಗತಿಕ ಜಿಡಿಪಿಯ ಸುಮಾರು 25% ಮತ್ತು ಜಾಗತಿಕ ವ್ಯಾಪಾರದ ಸುಮಾರು 3ನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ. ವ್ಯಾಪಾರದ ಜೊತೆಗೆ, ಈ ಒಪ್ಪಂದವು ಪ್ರಜಾಪ್ರಭುತ್ವ ಮತ್ತು ಕಾನೂನು ಆಡಳಿತದ ಕಡೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಐರೋಪ್ಯ ಒಕ್ಕೂಟ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಯುನೈಟೆಡ್ ಕಿಂಗ್ ಡಂ ಮತ್ತು ಇಎಫ್ ಟಿಎ ಒಪ್ಪಂದಗಳಿಗೆ ಪೂರಕವಾಗಿರುತ್ತದೆ. ಇದು ವ್ಯಾಪಾರ ಮತ್ತು ಜಾಗತಿಕ ಪೂರೈಕೆ ಸರಪಳಿಗಳಿಗೆ ಬಲ ನೀಡುತ್ತದೆ. ಇದಕ್ಕಾಗಿ ನಾನು ಭಾರತದ ಯುವಕರನ್ನು ಮತ್ತು ಎಲ್ಲಾ ದೇಶವಾಸಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮ ಮತ್ತು ಪಾದರಕ್ಷೆಗಳಂತಹ ಪ್ರತಿಯೊಂದು ವಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸಹೋದ್ಯೋಗಿಗಳನ್ನು ಸಹ ನಾನು ಅಭಿನಂದಿಸುತ್ತೇನೆ. ಈ ಒಪ್ಪಂದವು ನಿಮಗೆ ತುಂಬಾ ಸಹಾಯಕವಾಗಲಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಸ್ನೇಹಿತರೆ,

ವ್ಯಾಪಾರ ಒಪ್ಪಂದವು ಭಾರತದಲ್ಲಿ ಉತ್ಪಾದನೆಗೆ ಬಲ ನೀಡುವುದಲ್ಲದೆ, ಸೇವೆಗಳಿಗೆ ಸಂಬಂಧಿಸಿದ ವಲಯಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ಈ ಮುಕ್ತ ವ್ಯಾಪಾರ ಒಪ್ಪಂದವು ಪ್ರಪಂಚದ ಪ್ರತಿಯೊಂದು ವ್ಯವಹಾರ ಮತ್ತು ಪ್ರತಿಯೊಬ್ಬ ಹೂಡಿಕೆದಾರರಿಗೆ ಭಾರತದಲ್ಲಿ ಮತ್ತಷ್ಟು ವಿಶ್ವಾಸ ಬಲಪಡಿಸುತ್ತದೆ.

ಸ್ನೇಹಿತರೆ,

ಇಂದು ಭಾರತವು ಪ್ರತಿಯೊಂದು ವಲಯದಲ್ಲಿ ಜಾಗತಿಕ ಪಾಲುದಾರಿಕೆಗಳ ಮೇಲೆ ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ನಾನು ಇಂಧನ ವಲಯದ ಬಗ್ಗೆ ಚರ್ಚಿಸಿದರೆ, ಇಂಧನ ಮೌಲ್ಯ ಸರಪಳಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಇಲ್ಲಿ ಬೃಹತ್ ಹೂಡಿಕೆ ಸಾಧ್ಯತೆಗಳಿವೆ. ಪರಿಶೋಧನಾ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಭಾರತವು ತನ್ನ ಪರಿಶೋಧನಾ ವಲಯವನ್ನು ಗಮನಾರ್ಹವಾಗಿ ತೆರೆದಿದೆ. ನಮ್ಮ ಆಳ ಸಮುದ್ರ ಪರಿಶೋಧನೆಗೆ ಸಂಬಂಧಿಸಿದ ಸಮುದ್ರಯಾನ ಮಿಷನ್ ಬಗ್ಗೆಯೂ ನಿಮಗೆ ತಿಳಿದಿದೆ. ಈ ದಶಕದ ಅಂತ್ಯದ ವೇಳೆಗೆ ನಮ್ಮ ತೈಲ ಮತ್ತು ಅನಿಲ ವಲಯದಲ್ಲಿ ಹೂಡಿಕೆಯನ್ನು 100 ಶತಕೋಟಿ ಡಾಲರ್ ಗಳಿಗೆ ಕೊಂಡೊಯ್ಯಲು ನಾವು ಶ್ರಮಿಸುತ್ತಿದ್ದೇವೆ. ಪರಿಶೋಧನಾ ವ್ಯಾಪ್ತಿಯನ್ನು 1 ದಶಲಕ್ಷ ಚದರ ಕಿಲೋಮೀಟರ್ ‌ಗಳಿಗೆ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಈ ಚಿಂತನೆಯೊಂದಿಗೆ 170ಕ್ಕೂ ಹೆಚ್ಚು ಬ್ಲಾಕ್ ‌ಗಳನ್ನು ಈಗಾಗಲೇ ಇಲ್ಲಿ ನೀಡಲಾಗಿದೆ. ಅಂಡಮಾನ್ ನಿಕೋಬಾರ್ ಜಲಾನಯನ ಪ್ರದೇಶವು ನಮ್ಮ ಮುಂದಿನ ಹೈಡ್ರೋಕಾರ್ಬನ್ ಭರವಸೆಯಾಗುತ್ತಿದೆ.

ಸ್ನೇಹಿತರೆ,

ನಾವು ಪರಿಶೋಧನಾ ವಲಯದಲ್ಲೂ ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ನಿಷೇಧಿತ ಪ್ರದೇಶಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಇಂಡಿಯಾ ಇಂಧನ ಸಪ್ತಾಹದ ಹಿಂದಿನ ಆವೃತ್ತಿಗಳಲ್ಲಿ ನೀವು ನೀಡಿದ್ದ ಸಲಹೆಗಳ ಆಧಾರದ ಮೇಲೆ ನೀವು ಏನೇ ಹೇಳಿದ್ದರೂ, ನಾವು ನಮ್ಮ ಕಾಯಿದೆಗಳು ಮತ್ತು ನಿಯಮಗಳಲ್ಲಿ ಅದಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿದ್ದೇವೆ. ನೀವು ಪರಿಶೋಧನಾ ವಲಯದಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಕಂಪನಿಯ ಲಾಭದಾಯಕತೆಯು ಹೆಚ್ಚಾಗುವುದು ಖಚಿತ.

ಸ್ನೇಹಿತರೆ,

ಭಾರತದ ಮತ್ತೊಂದು ವಿಶೇಷತೆಯೆಂದರೆ, ಇಂಧನ ಕ್ಷೇತ್ರದಲ್ಲಿ ಹೂಡಿಕೆಯು  ಬಹಳ ಲಾಭದಾಯಕವಾಗಿಸುತ್ತದೆ. ನಮ್ಮಲ್ಲಿ ಬಹುದೊಡ್ಡ ಸಂಸ್ಕರಣಾ ಸಾಮರ್ಥ್ಯವಿದೆ. ಸಂಸ್ಕರಣಾ ಸಾಮರ್ಥ್ಯದ ವಿಷಯದಲ್ಲಿ ನಾವು ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಶೀಘ್ರದಲ್ಲೇ ನಾವು ವಿಶ್ವದಲ್ಲೇ ನಂಬರ್ 1 ಆಗುತ್ತೇವೆ. ಇಂದು ಭಾರತದ ಸಂಸ್ಕರಣಾ ಸಾಮರ್ಥ್ಯ ಸುಮಾರು 260 ವಾರ್ಷಿಕ ದಶಲಕ್ಷ  ಮೆಟ್ರಿಕ್ ಟನ್(ಎಂಎಂಟಿಪಿಎ) ಆಗಿದೆ. ಇದನ್ನು 300 ಎಂಎಂಟಿಪಿಎಗಿಂತ ಅಧಿಕ ಸಾಮರ್ಥ್ಯಕ್ಕೆ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದು ಹೂಡಿಕೆದಾರರಿಗೆ ಬಹುದೊಡ್ಡ ಅನುಕೂಲವಾಗಿದೆ.

ಸ್ನೇಹಿತರೆ,

ಭಾರತದಲ್ಲಿ ಎಲ್ಎನ್ ಜಿ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಎನ್ ಜಿಯಿಂದ ನಮ್ಮ ಒಟ್ಟು ಇಂಧನ ಬೇಡಿಕೆಯ 15% ಪ್ರಮಾಣವನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ. ಆದ್ದರಿಂದ ನಾವು ಎಲ್ಎನ್ ಜಿಯ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಕೆಲಸ ಮಾಡಬೇಕಾಗಿದೆ. ಇಂದು ಭಾರತವು ಸಾರಿಗೆಯಲ್ಲಿಯೂ ಸಹ ಬಹುದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಎಲ್ಎನ್ ಜಿ ಸಾಗಣೆಗೆ ಅಗತ್ಯವಿರುವ ಹಡಗುಗಳನ್ನು ನಾವು  ಭಾರತದಲ್ಲೇ ತಯಾರಿಸಲು ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಭಾರತದಲ್ಲಿ ಹಡಗು ನಿರ್ಮಾಣಕ್ಕಾಗಿ 70,000 ಕೋಟಿ ರೂಪಾಯಿಗಳ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ದೇಶದ ಬಂದರುಗಳಲ್ಲಿ ಎಲ್ಎನ್ ಜಿಗಾಗಿ ಟರ್ಮಿನಲ್ ‌ಗಳ ನಿರ್ಮಾಣದಲ್ಲಿ ಅನೇಕ ಹೂಡಿಕೆ ಸಾಧ್ಯತೆಗಳಿವೆ. ಮರು-ಅನಿಲೀಕರಣಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಲು ದೊಡ್ಡ ಸಾಧ್ಯತೆಗಳು ಉದ್ಭವಿಸುತ್ತಿವೆ.

ಸ್ನೇಹಿತರೆ,

ಭಾರತದಲ್ಲಿ ಎಲ್‌ಎನ್ ‌ಜಿ ಸಾಗಣೆಗೆ ಈಗ ಬಹುದೊಡ್ಡ ಪೈಪ್ ‌ಲೈನ್  ಅಗತ್ಯವಿದೆ. ಕಳೆದ ವರ್ಷಗಳಲ್ಲಿ ನಾವು ಇದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದೇವೆ. ಆದರೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಇಂದು ನಗರ ಅನಿಲ ವಿತರಣಾ ಜಾಲವು ಭಾರತದ ಅನೇಕ ನಗರಗಳನ್ನು ತಲುಪಿದೆ, ನಾವು ಇತರೆ ನಗರಗಳನ್ನು ಅದರೊಂದಿಗೆ ವೇಗವಾಗಿ ಸಂಪರ್ಕಿಸುತ್ತಿದ್ದೇವೆ. ನಗರ ಅನಿಲ ವಿತರಣೆಯು ನಿಮ್ಮ ಹೂಡಿಕೆಗೆ ಬಹು ಆಕರ್ಷಕ ಕ್ಷೇತ್ರವಾಗಿದೆ.

ಸ್ನೇಹಿತರೆ,

ಭಾರತವು ಬೃಹತ್ ಜನಸಂಖ್ಯೆ ಹೊಂದಿದೆ, ನಮ್ಮ ಆರ್ಥಿಕತೆಯು ನಿರಂತರವಾಗಿ ಬೆಳೆಯುತ್ತಿದೆ. ಇಂತಹ ಭಾರತದಲ್ಲಿ, ಪೆಟ್ರೋಕೆಮಿಕಲ್ ಉತ್ಪನ್ನಗಳ ಬೇಡಿಕೆಯೂ ನಿರಂತರವಾಗಿ ಹೆಚ್ಚಾಗಲಿದೆ. ಆದ್ದರಿಂದ, ನಮಗೆ ಬಹುದೊಡ್ಡ ಇಂಧನ ಮೂಲಸೌಕರ್ಯ ಬೇಕಾಗುತ್ತದೆ, ಇದರಲ್ಲಿಯೂ ನಿಮ್ಮ ಹೂಡಿಕೆಯು ನಿಮಗೆ ಸಾಕಷ್ಟು ಬೆಳವಣಿಗೆಯನ್ನು ನೀಡುತ್ತದೆ. ಇವೆಲ್ಲದರ ಜೊತೆಗೆ, ಭಾರತದಲ್ಲಿ ಕೆಳಮಟ್ಟದ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ನಿಮಗೆ ವಿಫುಲ ಅವಕಾಶಗಳಿವೆ.

ಸ್ನೇಹಿತರೆ,

ಇಂದಿನ ಭಾರತವು ಸುಧಾರಣಾ ಎಕ್ಸ್ ‌ಪ್ರೆಸ್ ‌ನಲ್ಲಿ ಸವಾರಿ ಮಾಡುತ್ತಿದೆ, ಪ್ರತಿಯೊಂದು ವಲಯದಲ್ಲೂ ಸುಧಾರಣೆಗಳನ್ನು ವೇಗವಾಗಿ ಜಾರಿಗೆ ತರುತ್ತಿದೆ. ದೇಶೀಯ ಹೈಡ್ರೋಕಾರ್ಬನ್ ‌ಗಳನ್ನು ಸಬಲೀಕರಣಗೊಳಿಸಲು ನಾವು ಸುಧಾರಣೆಗಳನ್ನು ಮಾಡುತ್ತಿದ್ದೇವೆ. ಜಾಗತಿಕ ಸಹಯೋಗಕ್ಕಾಗಿ ಪಾರದರ್ಶಕ ಮತ್ತು ಹೂಡಿಕೆದಾರ ಸ್ನೇಹಿ ವಾತಾವರಣ ಸೃಷ್ಟಿಸುತ್ತಿದ್ದೇವೆ. ಭಾರತವು ಈಗ ಇಂಧನ ಸ್ವಾತಂತ್ರ್ಯದ ಧ್ಯೇಯದಲ್ಲಿ ಕೆಲಸ ಮಾಡುತ್ತಿದೆ, ಇಂಧನ ಭದ್ರತೆಯನ್ನು ಮೀರಿ ಮುಂದೆ ಸಾಗುತ್ತಿದೆ. ಭಾರತದ ಸ್ಥಳೀಯ ಬೇಡಿಕೆಯನ್ನು ಪೂರೈಸಬಲ್ಲ ಮತ್ತು ಕೈಗೆಟುಕುವ ಸಂಸ್ಕರಣೆ ಮತ್ತು ಸಾರಿಗೆ ಪರಿಹಾರಗಳೊಂದಿಗೆ ಇಡೀ ಜಗತ್ತಿನ ರಫ್ತಿಗೆ ತುಂಬಾ ಸ್ಪರ್ಧಾತ್ಮಕವಾಗಿರುವ ಇಂಧನ ವಲಯದ ಪರಿಸರ ವ್ಯವಸ್ಥೆಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ.

ಸ್ನೇಹಿತರೆ,

ನಮ್ಮ ಇಂಧನ ವಲಯವು ನಮ್ಮ ಆಕಾಂಕ್ಷೆಗಳ ಕೇಂದ್ರಬಿಂದುವಾಗಿದೆ. ಇದರಲ್ಲಿ 500 ಶತಕೋಟಿ ಡಾಲರ್ ‌ಗಳ ಹೂಡಿಕೆ ಅವಕಾಶಗಳಿವೆ. ಆದ್ದರಿಂದ, ನನ್ನ ಕರೆ - ಮೇಕ್ ಇನ್ ಇಂಡಿಯಾ ಆಗಿದೆ. ಇಂಡಿಯಾದಲ್ಲಿ ನಾವೀನ್ಯತೆ, ಇಂಡಿಯಾದೊಂದಿಗೆ ಮಾಪನ ಮಾಡಿ, ಭಾರತದಲ್ಲಿ ಹೂಡಿಕೆ ಮಾಡಿ. ಈ ಉತ್ತೇಜನದೊಂದಿಗೆ, ಭಾರತ ಇಂಧನ ಸಪ್ತಾಹಕ್ಕೆ ನಿಮ್ಮೆಲ್ಲರಿಗೂ ನಾನು ಅನೇಕ ಶುಭಾಶಯಗಳನ್ನು ನೀಡುತ್ತೇನೆ.

ತುಂಬು ಧನ್ಯವಾದಗಳು.

 

*****


(रिलीज़ आईडी: 2219524) आगंतुक पटल : 4
इस विज्ञप्ति को इन भाषाओं में पढ़ें: Malayalam , English , Urdu , हिन्दी , Manipuri , Assamese , Punjabi , Gujarati