ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರದಿಂದ ಪಿಎಸ್‌ಜಿಐಸಿ, ನಬಾರ್ಡ್ ಮತ್ತು ಆರ್ ಬಿ ಐ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಅನುಮೋದನೆ


ಈ ನಿರ್ಧಾರವು ಉದ್ಯೋಗಿಗಳು ಮತ್ತು ಪಿಂಚಣಿದಾರರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಯೋಗಕ್ಷೇಮದ ಮೇಲೆ ಸರ್ಕಾರದ ನಿರಂತರ ಬದ್ಧತೆ ಮತ್ತು ಒತ್ತು ನೀಡುವುದನ್ನು ಪ್ರತಿಬಿಂಬಿಸುತ್ತದೆ

ಇದರಿಂದ ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಮತ್ತು 23,260 ಕುಟುಂಬ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ

प्रविष्टि तिथि: 23 JAN 2026 10:44AM by PIB Bengaluru

ಹಣಕಾಸು ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಪಿಂಚಣಿದಾರರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಸರಣಿ ಕ್ರಮಗಳ ಭಾಗವಾಗಿ, ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) ಗಾಗಿ ವೇತನ ಪರಿಷ್ಕರಣೆಯನ್ನು ಅನುಮೋದಿಸಿದೆ. ಇದರ ಜೊತೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ನ ನಿವೃತ್ತರಿಗಾಗಿ ಪಿಂಚಣಿ ಪರಿಷ್ಕರಣೆಯನ್ನು ಸಹ ಅನುಮೋದಿಸಲಾಗಿದೆ.

ಈ ನಿರ್ಧಾರವು ಪಿಂಚಣಿದಾರರ ದೀರ್ಘಾವಧಿಯ ಮತ್ತು ಸಮರ್ಪಿತ ವೃತ್ತಿಪರ ಸೇವೆಯನ್ನು ಗುರುತಿಸಿ, ಅವರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ಸರ್ಕಾರದ ನಿರಂತರ ಬದ್ಧತೆ ಮತ್ತು ಒತ್ತು ನೀಡುವುದನ್ನು ಪ್ರತಿಬಿಂಬಿಸುತ್ತದೆ.

ಇದರ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs):

• ವೇತನ ಪರಿಷ್ಕರಣೆ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ (PSGICs) ಉದ್ಯೋಗಿಗಳ ವೇತನ ಪರಿಷ್ಕರಣೆಯು 01.08.2022 ರಿಂದ ಜಾರಿಗೆ ಬರಲಿದೆ. ಒಟ್ಟು ವೇತನ ಬಿಲ್ನಲ್ಲಿ ಶೇ. 12.41 ರಷ್ಟು ಹೆಚ್ಚಳವಾಗಲಿದ್ದು, ಪ್ರಸ್ತುತ ಇರುವ ಮೂಲ ವೇತನ ಮತ್ತು ತುಟ್ಟಿಭತ್ಯೆಯಲ್ಲಿ (DA) ಶೇ. 14 ರಷ್ಟು ಏರಿಕೆಯಾಗಲಿದೆ. ಇದರಿಂದ ಒಟ್ಟು 43,247 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಅಲ್ಲದೆ, 01.04.2010 ರ ನಂತರ ಕೆಲಸಕ್ಕೆ ಸೇರಿದ ಉದ್ಯೋಗಿಗಳ ಉತ್ತಮ ಭವಿಷ್ಯಕ್ಕಾಗಿ ಎನ್ ಪಿ ಎಸ್ (NPS) ಕೊಡುಗೆಯನ್ನು ಶೇ. 10 ರಿಂದ ಶೇ. 14 ಕ್ಕೆ ಹೆಚ್ಚಿಸಲಾಗಿದೆ.

• ಕುಟುಂಬ ಪಿಂಚಣಿ ಪರಿಷ್ಕರಣೆ: ಕುಟುಂಬ ಪಿಂಚಣಿಯನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ ಶೇ. 30 ರ ಏಕರೂಪದ ದರದಲ್ಲಿ ಪರಿಷ್ಕರಿಸಲಾಗಿದೆ. ಸಂಸ್ಥೆಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ನಿರ್ಧಾರದಿಂದ, ಪ್ರಸ್ತುತ ಇರುವ ಒಟ್ಟು 15,582 ಕುಟುಂಬ ಪಿಂಚಣಿದಾರರ ಪೈಕಿ 14,615 ಮಂದಿಗೆ ಲಾಭವಾಗಲಿದೆ.

• ಆರ್ಥಿಕ ವೆಚ್ಚ: ಈ ಎಲ್ಲ ಬದಲಾವಣೆಗಳಿಂದ ಒಟ್ಟು ವೆಚ್ಚವು ₹8170.30 ಕೋಟಿ ಆಗಲಿದೆ. ಅಂದರೆ ವೇತನ ಪರಿಷ್ಕರಣೆಯ ಬಾಕಿ ಹಣಕ್ಕಾಗಿ (Arrears) ₹5822.68 ಕೋಟಿ, ಎನ್ ಪಿ ಎಸ್ಗಾಗಿ ₹250.15 ಕೋಟಿ ಮತ್ತು ಕುಟುಂಬ ಪಿಂಚಣಿಗಾಗಿ ₹2097.47 ಕೋಟಿ ವ್ಯಯವಾಗಲಿದೆ.

ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs), ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL), ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL), ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (OICL), ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (UIICL), ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (GIC) ಮತ್ತು ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (AICIL) ಸಂಸ್ಥೆಗಳನ್ನು ಒಳಗೊಂಡಿವೆ.

 ನಬಾರ್ಡ್

• ವೇತನ ಪರಿಷ್ಕರಣೆ: ನಬಾರ್ಡ್ ನ ಎಲ್ಲಾ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ಉದ್ಯೋಗಿಗಳಿಗೆ 1ನೇ ನವೆಂಬರ್, 2022 ರಿಂದ ಅನ್ವಯವಾಗುವಂತೆ ವೇತನ ಮತ್ತು ಭತ್ಯೆಗಳಲ್ಲಿ ಸುಮಾರು ಶೇ. 20 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಸುಮಾರು 3800 ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

• ಪಿಂಚಣಿ ಪರಿಷ್ಕರಣೆ: ಮೂಲತಃ ನಬಾರ್ಡ್ನಿಂದ ನೇಮಕಗೊಂಡು 1ನೇ ನವೆಂಬರ್, 2017 ಕ್ಕಿಂತ ಮೊದಲು ನಿವೃತ್ತರಾದ ನಬಾರ್ಡ್ ನಿವೃತ್ತರ ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯನ್ನು ಈಗ ಮಾಜಿ ಆರ್ ಬಿ ಐ ನಬಾರ್ಡ್ (ex-RBI NABARD) ನಿವೃತ್ತರ ಪಿಂಚಣಿಗೆ ಸಮಾನವಾಗಿ ತರಲಾಗಿದೆ.

• ಆರ್ಥಿಕ ವೆಚ್ಚ: ಈ ವೇತನ ಪರಿಷ್ಕರಣೆಯಿಂದಾಗಿ ವಾರ್ಷಿಕ ಸುಮಾರು ₹170 ಕೋಟಿ ಹೆಚ್ಚುವರಿ ವೇತನ ವೆಚ್ಚವಾಗಲಿದ್ದು, ಒಟ್ಟು ಸುಮಾರು ₹510 ಕೋಟಿ ಬಾಕಿ (Arrears) ಹಣವನ್ನು ಪಾವತಿಸಬೇಕಾಗುತ್ತದೆ. ಇನ್ನು ಪಿಂಚಣಿ ಪರಿಷ್ಕರಣೆಯಿಂದಾಗಿ ₹50.82 ಕೋಟಿ ಒಂದು ಬಾರಿಯ ಬಾಕಿ ಹಣದ ಪಾವತಿಯಾಗಲಿದೆ ಹಾಗೂ ನಬಾರ್ಡ್ನ 269 ಪಿಂಚಣಿದಾರರು ಮತ್ತು 457 ಕುಟುಂಬ ಪಿಂಚಣಿದಾರರಿಗೆ ಪ್ರತಿ ತಿಂಗಳು ಒಟ್ಟು ₹3.55 ಕೋಟಿ ಹೆಚ್ಚುವರಿ ಪಿಂಚಣಿ ವೆಚ್ಚವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 

• ಪಿಂಚಣಿ ಪರಿಷ್ಕರಣೆ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ ಬಿ ಐ) ನಿವೃತ್ತರಿಗಾಗಿ ಪಿಂಚಣಿ ಮತ್ತು ಕುಟುಂಬ ಪಿಂಚಣಿಯ ಪರಿಷ್ಕರಣೆಗೆ ಸರ್ಕಾರವು ಅನುಮೋದನೆ ನೀಡಿದೆ. ಹಿರಿಯ ನಾಗರಿಕರು ಮತ್ತು ಅವರ ಅವಲಂಬಿತರಿಗೆ ನ್ಯಾಯೋಚಿತ, ಸಮರ್ಪಕ ಮತ್ತು ಸುಸ್ಥಿರ ನಿವೃತ್ತಿ ಪ್ರಯೋಜನಗಳನ್ನು ಖಚಿತಪಡಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

• ಪರಿಷ್ಕರಣೆಯ ವಿವರ: ಅನುಮೋದಿತ ಪರಿಷ್ಕರಣೆಯ ಅಡಿಯಲ್ಲಿ, 1ನೇ ನವೆಂಬರ್, 2022 ರಿಂದ ಅನ್ವಯವಾಗುವಂತೆ ಮೂಲ ಪಿಂಚಣಿ ಮತ್ತು ತುಟ್ಟಿ ಪರಿಹಾರದ ಮೇಲೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಶೇ. 10 ರಷ್ಟು ಹೆಚ್ಚಿಸಲಾಗುವುದು. ಇದು ಎಲ್ಲಾ ನಿವೃತ್ತರ ಮೂಲ ಪಿಂಚಣಿಯಲ್ಲಿ 1.43 ರಷ್ಟು ಪರಿಣಾಮಕಾರಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ಅವರ ಮಾಸಿಕ ಪಿಂಚಣಿಯಲ್ಲಿ ಗಮನಾರ್ಹ ಸುಧಾರಣೆಯಾಗಲಿದೆ. ಈ ಪರಿಷ್ಕರಣೆಯಿಂದ ಒಟ್ಟು 30,769 ಫಲಾನುಭವಿಗಳಿಗೆ ಪ್ರಯೋಜನವಾಗಲಿದ್ದು, ಇದರಲ್ಲಿ 22,580 ಪಿಂಚಣಿದಾರರು ಮತ್ತು 8,189 ಕುಟುಂಬ ಪಿಂಚಣಿದಾರರು ಸೇರಿದ್ದಾರೆ.

• ಹಣಕಾಸಿನ ಪರಿಣಾಮ: ಇದರ ಒಟ್ಟು ಹಣಕಾಸಿನ ಪರಿಣಾಮವು 2,696.82 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದರಲ್ಲಿ ಬಾಕಿ (Arrears) ಪಾವತಿಗಾಗಿ 2,485.02 ಕೋಟಿ ರೂ.ಗಳ ಒಂದು ಬಾರಿಯ ವೆಚ್ಚ ಮತ್ತು 211.80 ಕೋಟಿ ರೂ.ಗಳ ವಾರ್ಷಿಕ ಆವರ್ತಕ ವೆಚ್ಚ ಸೇರಿದೆ.

ಸಾರಾಂಶ:

ಮೇಲಿನ ಕ್ರಮಗಳಿಂದಾಗಿ, ಒಟ್ಟು ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಮತ್ತು 23,260 ಕುಟುಂಬ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಈ ಕ್ರಮವು PSGIC ಗಳು ಮತ್ತು ನಬಾರ್ಡ್ (NABARD) ನ ಉದ್ಯೋಗಿಗಳಿಗೆ ಹಾಗೂ ಆರ್ ಬಿ ಐ (RBI) ಮತ್ತು ನಬಾರ್ಡ್ ನ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಜೀವನ ವೆಚ್ಚವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ನಿವೃತ್ತಿಯ ನಂತರ ಗೌರವಯುತ ಜೀವನ ಮಟ್ಟ ಹಾಗೂ ಸಾಮಾಜಿಕ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಅರ್ಥಪೂರ್ಣ ಪರಿಹಾರವನ್ನು ಒದಗಿಸುತ್ತದೆ.

ದೇಶದ ಸಮಗ್ರ  ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರವು ಬದ್ಧವಾಗಿದೆ.

 

*****


(रिलीज़ आईडी: 2217657) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Malayalam