ಉಪರಾಷ್ಟ್ರಪತಿಗಳ ಕಾರ್ಯಾಲಯ
ಬೆಂಗಳೂರಿನ ಸಿಎಂಆರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಹೇಳಿದ ಉಪರಾಷ್ಟ್ರಪತಿ
ಭಾರತವು ತಂತ್ರಜ್ಞಾನದ ಸೃಷ್ಟಿಕರ್ತನಾಗಿ ಹೊರಹೊಮ್ಮುತ್ತಿದೆ: ಉಪರಾಷ್ಟ್ರಪತಿ
ಯಾರೂ ಭಾರತಕ್ಕೆ ಷರತ್ತುಗಳನ್ನು ವಿಧಿಸದಂತೆ ಖಚಿತಪಡಿಸಿಕೊಳ್ಳುವುದೇ ವಿಕಸಿತ ಭಾರತದ ಗುರಿ: ಉಪರಾಷ್ಟ್ರಪತಿ
प्रविष्टि तिथि:
21 JAN 2026 6:13PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಬೆಂಗಳೂರಿನ ಸಿಎಂಆರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ವಿಶಿಷ್ಟ ಸೇವೆಯನ್ನು ಪೂರೈಸಿದ ಸಂಸ್ಥೆಯನ್ನು ಅಭಿನಂದಿಸಿದರು.
ರಜತ ಮಹೋತ್ಸವವನ್ನು ಕೇವಲ ಸಮಯದ ಒಂದು ಮೈಲಿಗಲ್ಲು ಮಾತ್ರವಲ್ಲದೆ, ದೂರದೃಷ್ಟಿ, ಪರಿಶ್ರಮ ಮತ್ತು ಉದ್ದೇಶದ ಆಚರಣೆ ಎಂದು ಉಪರಾಷ್ಟ್ರಪತಿಯವರು ಬಣ್ಣಿಸಿದರು. ತಾಂತ್ರಿಕ ಶಿಕ್ಷಣವು ಕೇವಲ ನುರಿತ ವೃತ್ತಿಪರರನ್ನು ಮಾತ್ರವಲ್ಲದೆ ಜವಾಬ್ದಾರಿಯುತ ನಾಗರಿಕರನ್ನು ಮತ್ತು ನೈತಿಕ ನಾಯಕರನ್ನು ಸೃಷ್ಟಿಸಬೇಕು ಎಂಬ ತನ್ನ ಸ್ಥಾಪಕ ನಂಬಿಕೆಗೆ ಬದ್ಧವಾಗಿರುವುದಕ್ಕಾಗಿ ಅವರು ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಅವರು ಶ್ಲಾಘಿಸಿದರು. ಸಂಸ್ಥೆಯು NAAC ನಿಂದ ಅತ್ಯುನ್ನತ A++ ಗ್ರೇಡ್ ಮಾನ್ಯತೆ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಇದೇ ಸಂದರ್ಭದಲ್ಲಿ ಇನ್ಕ್ಯುಬೇಶನ್ ಸೆಂಟರ್ ಮತ್ತು ಸಭಾಂಗಣವನ್ನು ಉದ್ಘಾಟಿಸಿದರು.
ರಾಜ್ಯಪಾಲರಾಗಿ ತಮ್ಮದೇ ಆದ ಅನುಭವವನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಶಿಕ್ಷಣ ಸಂಸ್ಥೆಗಳ ಶ್ರೇಣಿ ಮತ್ತು ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ತಾವು ನಿರಂತರವಾಗಿ ಒತ್ತು ನೀಡಿದ್ದಾಗಿ ತಿಳಿಸಿದರು. ಬೋಧಕ ಸಿಬ್ಬಂದಿಯ ಹುದ್ದೆಗಳು ಖಾಲಿ ಇರುವುದರಿಂದ ಸಂಸ್ಥೆಗಳ ಗ್ರೇಡಿಂಗ್ ಕುಸಿಯುತ್ತದೆ ಎಂದು ಗಮನಿಸಿದ ಅವರು, ಬೋಧಕ ಸಿಬ್ಬಂದಿಯ ಸಾಮರ್ಥ್ಯವನ್ನು ಬಲಪಡಿಸುವುದು ನೇರವಾಗಿ ಶೈಕ್ಷಣಿಕ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪಷ್ಟ ಗುರಿಗಳನ್ನು ಹೊಂದುವಂತೆ ಮತ್ತು ತಮ್ಮ ಪ್ರಯಾಣವನ್ನು ಇತರರೊಂದಿಗೆ ಹೋಲಿಸದೆ ನಿಮ್ಮದೇ ಆದ ವೇಗದಲ್ಲಿ ಗುರಿಯತ್ತ ಸಾಗುವಂತೆ ಸಲಹೆ ನೀಡಿದರು. ಅದೃಷ್ಟವು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಒಲಿಯದಿರಬಹುದು, ಆದರೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯು ತಕ್ಷಣವೇ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಯಶಸ್ಸನ್ನು ನೀಡುತ್ತದೆ ಎಂದರು.
ಭಾರತದ ನಾವೀನ್ಯತೆ ಆಧಾರಿತ ಬೆಳವಣಿಗೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ದೇಶವು ಇನ್ನು ಮುಂದೆ ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದೇಶವಾಗಿ ಉಳಿದಿಲ್ಲ, ಬದಲಿಗೆ ಸ್ಥಿರವಾಗಿ ತಂತ್ರಜ್ಞಾನದ ಸೃಷ್ಟಿಕರ್ತನಾಗಿ ಹೊರಹೊಮ್ಮುತ್ತಿದೆ ಎಂದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ವಿಜ್ಞಾನಿಗಳಿಗೆ ಕರೆ ನೀಡಿದಾಗ, ರಾಷ್ಟ್ರವು ಆ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸಿತು, ಇದು ಭಾರತದ ವೈಜ್ಞಾನಿಕ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸಿತು ಎಂದು ಅವರು ನೆನಪಿಸಿಕೊಂಡರು. ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ತನ್ನ ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ಸೆಂಟರ್ ಮೂಲಕ 50 ಕ್ಕೂ ಹೆಚ್ಚು ನವೋದ್ಯಮಗಳನ್ನು ಪೋಷಿಸಿ, ಕ್ರಿಯಾತ್ಮಕ ಮತ್ತು ಸ್ಥಿತಿಸ್ಥಾಪಕ ಉದ್ಯಮಶೀಲತಾ ವ್ಯವಸ್ಥೆಗೆ ಕೊಡುಗೆ ನೀಡುತ್ತಿರುವ ಸಿಎಂಆರ್ ಐಟಿ ಯನ್ನು ಶ್ಲಾಘಿಸಿದರು.
ಶಿಕ್ಷಣ ಸಂಸ್ಥೆಗಳು ಯುವಜನತೆಗೆ ಮಾರ್ಗದರ್ಶಕ ಬೆಳಕಾಗಿದ್ದು, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅನಿವಾರ್ಯ ಪಾತ್ರ ವಹಿಸುತ್ತವೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. 'ವಿಕಸಿತ ಭಾರತ @2047'ರ ಗುರಿಯು ಇತರ ದೇಶಗಳಿಗೆ ಷರತ್ತುಗಳನ್ನು ವಿಧಿಸಲು ಅಲ್ಲ, ಬದಲಿಗೆ ಭಾರತ ಮಾತೆಗೆ ಯಾರೂ ಎಂದಿಗೂ ಷರತ್ತುಗಳನ್ನು ವಿಧಿಸದಂತೆ ಖಚಿತಪಡಿಸಿಕೊಳ್ಳಲು ಬಲವಾದ ಮತ್ತು ಶಕ್ತಿಯುತ ರಾಷ್ಟ್ರವನ್ನು ನಿರ್ಮಿಸುವುದಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಕ್ತಿಯು ಸ್ವಾವಲಂಬನೆ, ಜ್ಞಾನ, ನಾವೀನ್ಯತೆ ಮತ್ತು ನೈತಿಕ ವಿಶ್ವಾಸದ ಮೇಲೆ ನಿಂತಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಬಗ್ಗೆ ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು, ಇದು ಭಾರತದ ಯುವಕರು ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ, ಬಹುಶಿಸ್ತೀಯ ಕಲಿಕೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೀತಿಗಳಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದರು.
ಎಲ್ಲಾ ರೀತಿಯ ವ್ಯಸನಗಳ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಉಪರಾಷ್ಟ್ರಪತಿಯವರು, ಮಾದಕವಸ್ತು ಬಳಕೆಯ ಅಪಾಯಗಳ ಬಗ್ಗೆ ಜಾಗರೂಕರಾಗಿರಲು ತಿಳಿಸಿದರು. "ಮಾದಕವಸ್ತುಗಳು ಬೇಡ" ಎಂದು ಹೇಳಲು ಮತ್ತು ತಮ್ಮ ಸಹಪಾಠಿಗಳನ್ನೂ ಹಾಗೆಯೇ ಮಾಡಲು ಪ್ರೋತ್ಸಾಹಿಸಲು ಯುವಜನರಿಗೆ ಕರೆ ನೀಡಿದರು.
ರಜತ ಮಹೋತ್ಸವವನ್ನು ಒಂದು ಮೈಲಿಗಲ್ಲು ಮತ್ತು ಆತ್ಮಾವಲೋಕನದ ಕ್ಷಣ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಇದು ಕೇವಲ ಸಾಧನೆಗಳನ್ನು ಆಚರಿಸುವ ಅವಕಾಶವಲ್ಲದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು, ಜವಾಬ್ದಾರಿಯುತವಾಗಿ ಆವಿಷ್ಕರಿಸಲು ಮತ್ತು ಮೂಲ ಮೌಲ್ಯಗಳನ್ನು ಕಳೆದುಕೊಳ್ಳದೆ ಪ್ರಸ್ತುತವಾಗಿರಲು ಬದ್ಧತೆಯನ್ನು ನವೀಕರಿಸುವ ಅವಕಾಶವಾಗಿದೆ ಎಂದರು. ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ತನ್ನ ಬಲವಾದ ಅಡಿಪಾಯ, ದೂರದೃಷ್ಟಿಯ ನಾಯಕತ್ವ ಮತ್ತು ಯುವ ಶಕ್ತಿಯೊಂದಿಗೆ ವಿಕಸಿತ ಭಾರತದತ್ತ ಭಾರತದ ಪ್ರಯಾಣಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್; ಸಿಎಂಆರ್ ಜ್ಞಾನಧಾರ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಬಿತಾ ರಾಮಮೂರ್ತಿ; ಸಿಎಂಆರ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಡಾ. ಕೆ. ಸಿ. ರಾಮಮೂರ್ತಿ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(रिलीज़ आईडी: 2217067)
आगंतुक पटल : 12