ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸಂವಹನ ಮಹಾ ಲೇಖಪಾಲರ ಕಚೇರಿಯು ಅಭಿವೃದ್ಧಿಪಡಿಸಿದ 'ಸಂಪನ್' (SAMPANN) ಪಿಂಚಣಿ ಪೋರ್ಟಲ್ ಈಗ ಡಿಜಿಲಾಕರ್ ನೊಂದಿಗೆ ಸಂಯೋಜನೆ: ಪಿಂಚಣಿದಾರರು ತಮ್ಮ ಡಿಜಿಲಾಕರ್ ಲೇಖಾ ಮೂಲಕ ಇ-ಪಿಪಿಒ, ಗ್ರಾಚ್ಯುಟಿ ಮಂಜೂರಾತಿ ಆದೇಶಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ಯಾವುದೇ ಸಮಯದಲ್ಲಿ ಪಡೆಯಬಹುದು
ಡಿಜಿಟಲ್ ಇಂಡಿಯಾ ಉತ್ತೇಜನ: 'ಸಂಪನ್-ಡಿಜಿಲಾಕರ್' ಸಂಯೋಜನೆಯು ಎಲ್ಲಾ ಪಿಂಚಣಿದಾರರಿಗೆ ಸುರಕ್ಷಿತ, ಕಾಗದರಹಿತ ಪಿಂಚಣಿ ದಾಖಲೆಗಳನ್ನು ಒದಗಿಸುತ್ತದೆ
प्रविष्टि तिथि:
21 JAN 2026 11:02AM by PIB Bengaluru
ದೆಹಲಿಯ ಸಂವಹನ ಮಹಾಲೇಖಪಾಲರ ಕಚೇರಿಯು, ಭಾರತ ಸರ್ಕಾರದ 'ಡಿಜಿಟಲ್ ಇಂಡಿಯಾ' ಕಾರ್ಯಕ್ರಮಕ್ಕೆ ಅನುಗುಣವಾಗಿ, ದೂರಸಂವಹನ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಪಿಂಚಣಿದಾರರಿಗೆ 'ಸಂಪನ್' ಪಿಂಚಣಿ ಪೋರ್ಟಲ್ ಅನ್ನು ಡಿಜಿಲಾಕರ್ ವೇದಿಕೆಯೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದೆ.
ಈ ಸಂಯೋಜನೆಯು ಪಿಂಚಣಿದಾರರಿಗೆ 'ಸಂಪನ್'ನಿಂದ ಪ್ರಮುಖ ದಾಖಲೆಗಳನ್ನು—ಅಂದರೆ ಪಿಂಚಣಿ ಪಾವತಿ ಆದೇಶಗಳು (ಇ-ಪಿಪಿಒ), ಗ್ರಾಚ್ಯುಟಿ ಮಂಜೂರಾತಿ ಆದೇಶಗಳು, ಕಮ್ಯುಟೇಶನ್ ಮಂಜೂರಾತಿಗಳು ಮತ್ತು ಫಾರ್ಮ್-16 ಅನ್ನು—ನೇರವಾಗಿ ತಮ್ಮ ಡಿಜಿಲಾಕರ್ ಲೇಖಾ ಮೂಲಕ ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಸ್ಮಾರ್ಟ್‌ಫೋನ್ ಅಥವಾ ಡೆಸ್ಕ್ ಟಾಪ್ ಮೂಲಕ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಇವುಗಳನ್ನು ಪಡೆಯಬಹುದಾಗಿದ್ದು, ಈ ಸೌಲಭ್ಯವು ಸುರಕ್ಷಿತ ಹಾಗೂ ಕಾಗದರಹಿತ ಪ್ರವೇಶವನ್ನು ಖಚಿತಪಡಿಸುತ್ತದೆ. ಇದು ಬ್ಯಾಂಕಿಂಗ್ ಅಥವಾ ವೈದ್ಯಕೀಯ ಮರುಪಾವತಿಯಂತಹ ಅಗತ್ಯ ಸೇವೆಗಳಿಗೆ ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ.
ದೆಹಲಿಯ ಸಂವಹನ ಮಹಾಲೇಖಪಾಲರಾದ ಶ್ರೀ ಆಶಿಷ್ ಜೋಶಿ ಅವರು, ಈ ಉಪಕ್ರಮವು ಭೌತಿಕ ಪ್ರತಿಗಳ ಅಗತ್ಯವನ್ನು ನಿವಾರಿಸುತ್ತದೆ, ದೆಹಲಿ-ಎನ್ ಸಿ ಆರ್ ಮತ್ತು ಅದರಾಚೆಗಿನ ಪ್ರದೇಶಗಳಲ್ಲಿರುವ ಪಿಂಚಣಿದಾರರ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ ಎಂದು ಹೇಳಿದರು. ಈ ಉಪಕ್ರಮವು ನಮ್ಮ ಪಿಂಚಣಿದಾರರಿಗೆ ಡಿಜಿಟಲ್ ಸ್ವಾವಲಂಬನೆಯನ್ನು ನೀಡುತ್ತದೆ ಮತ್ತು ಕಾಗದರಹಿತ ಡಿಜಿಟಲ್ ಆಡಳಿತದ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಅವರು ಹೇಳಿದರು.
ಪಿಂಚಣಿದಾರರು ಆಧಾರ್ ಬಳಸಿ https://digilocker.gov.in ಗೆ ಲಾಗ್ ಇನ್ ಆಗುವ ಮೂಲಕ, ತಮ್ಮ ಪಿಪಿಒ ಸಂಖ್ಯೆಯನ್ನು ಲಿಂಕ್ ಮಾಡಿ ತಕ್ಷಣವೇ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಹಾಯಕ್ಕಾಗಿ ಮೀಸಲಾದ ಸಹಾಯವಾಣಿಗಳು ಮತ್ತು 'ಸಂಪನ್' ಪೋರ್ಟಲ್ ಗಳು ಲಭ್ಯವಿವೆ. ಪೋರ್ಟಲ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.
'ಸಂಪನ್' (SAMPANN) ಬಗ್ಗೆ:
ಸಂಪನ್ (ಸಿಸ್ಟಮ್ ಫಾರ್ ಅಕೌಂಟಿಂಗ್ ಅಂಡ್ ಮ್ಯಾನೇಜ್ಮೆಂಟ್ ಆಫ್ ಪೆನ್ಷನ್) ಎಂಬುದು ಇಲಾಖೆಯ ಪ್ರಮುಖ ಡಿಜಿಟಲ್ ವೇದಿಕೆಯಾಗಿದೆ. ಇದನ್ನು ಪಿಂಚಣಿ ಆಡಳಿತ ಮತ್ತು ಸಂಬಂಧಿತ ಹಣಕಾಸು ನಿರ್ವಹಣಾ ಕಾರ್ಯಗಳಿಗಾಗಿ ಸಂವಹನ ಮಹಾಲೇಖಪಾಲರ ಕಚೇರಿಯು ಅಭಿವೃದ್ಧಿಪಡಿಸಿದೆ, ಮಾಲೀಕತ್ವ ಹೊಂದಿದೆ ಮತ್ತು ನಿರ್ವಹಿಸುತ್ತದೆ. ಇದನ್ನು 29 ಡಿಸೆಂಬರ್ 2018 ರಂದು ಗೌರವಾನ್ವಿತ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ವ್ಯವಸ್ಥೆ-ಕೇಂದ್ರಿತ ಆಡಳಿತದಿಂದ ಪಿಂಚಣಿದಾರ-ಕೇಂದ್ರಿತ ಆಡಳಿತದ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ, ನಿವೃತ್ತರು ಮತ್ತು ಅವರ ಕುಟುಂಬಗಳು ತಮ್ಮ ಹಕ್ಕಿನ ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಭೇಟಿ ನೀಡುವುದರಿಂದ ಮುಕ್ತಿ ನೀಡುತ್ತದೆ.
ಸಂಪನ್ ಪೋರ್ಟಲ್ ಪ್ರಕರಣಗಳ ಪ್ರಾರಂಭ ಮತ್ತು ಪ್ರಕ್ರಿಯೆಯಿಂದ ಹಿಡಿದು ಇ-ಪಿಂಚಣಿ ಪಾವತಿ ಆದೇಶಗಳ ವಿತರಣೆ, ಪಾವತಿ, ಲೆಕ್ಕಪತ್ರ ನಿರ್ವಹಣೆ, ಸಮನ್ವಯ (reconciliation), ಹಣಕಾಸು ವರದಿ, ಆಡಿಟ್ ಸುಗಮಗೊಳಿಸುವಿಕೆ ಮತ್ತು ಕುಂದುಕೊರತೆ ನಿವಾರಣೆಯವರೆಗೆ ಸಂಪೂರ್ಣ ಪಿಂಚಣಿ ಜೀವನಚಕ್ರವನ್ನು ಡಿಜಿಟಲೀಕರಣಗೊಳಿಸಿದೆ. ಪಿಂಚಣಿದಾರರು ಈಗ ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಪಾವತಿಗಳನ್ನು ಪಡೆಯುತ್ತಾರೆ; ಅವರು ಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು, ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು, ಇ-ಪಿಪಿಒಗಳನ್ನು ಜನರೇಟ್ ಮಾಡಬಹುದು, ಮೊಬೈಲ್ ಸಂಖ್ಯೆ ಅಥವಾ ವಿಳಾಸ ಬದಲಾವಣೆಗೆ ವಿನಂತಿಸಬಹುದು ಮತ್ತು ಮನೆಯಿಂದಲೇ ದೂರುಗಳನ್ನು ದಾಖಲಿಸಬಹುದು. ನಮ್ಮ ಗೌರವಾನ್ವಿತ ಹಿರಿಯ ನಾಗರಿಕರಿಗೆ ಮತ್ತಷ್ಟು ಸಹಾಯ ಮಾಡಲು ಇಲಾಖೆಯು ಟೋಲ್-ಫ್ರೀ ಸಹಾಯವಾಣಿಗಳನ್ನು ಸಹ ನಡೆಸುತ್ತಿದೆ.
ಪದೇಪದೇ ಕೇಳಲಾಗುವ ಪ್ರಶ್ನೆಗಳು
ಸಂಪನ್ ಸೇವೆಗಳನ್ನು ಪಡೆಯಲು ಡಿಜಿಲಾಕರ್ ಬಳಕೆ
- ಡಿಜಿಲಾಕರ್ ಎಂದರೇನು?
ಡಿಜಿಲಾಕರ್ ಎಂಬುದು ಭಾರತ ಸರ್ಕಾರದ ಬೆಂಬಲಿತ, ಸುರಕ್ಷಿತ ಕ್ಲೌಡ್ ವೇದಿಕೆಯಾಗಿದೆ. ನಾಗರಿಕರು ಪರವಾನಗಿಗಳು, ವಾಹನ ನೋಂದಣಿ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳಂತಹ ಅಧಿಕೃತ ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಲು, ಪಡೆಯಲು ಮತ್ತು ಹಂಚಿಕೊಳ್ಳಲು ಇದು ಬಳಕೆಯಾಗುತ್ತದೆ. ಇದು ಡಿಜಿಟಲ್ ವ್ಯಾಲೆಟ್ ಆಗಿ ಕಾರ್ಯನಿರ್ವಹಿಸುತ್ತದೆ, ಭೌತಿಕ ದಾಖಲೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಬ್ಯಾಂಕಿಂಗ್, ಉದ್ಯೋಗ ಮತ್ತು ಶಿಕ್ಷಣದಂತಹ ಸೇವೆಗಳ ಪರಿಶೀಲನೆಯನ್ನು ಸುಲಭಗೊಳಿಸುತ್ತದೆ. ಇದು ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ನಲ್ಲಿ ಲಭ್ಯವಿದೆ.
2. ಡಿಜಿಲಾಕರ್ ಅನ್ನು ಪ್ರವೇಶಿಸುವುದು ಹೇಗೆ?
ಎ) ವೆಬ್ ಪೋರ್ಟಲ್ ಮೂಲಕ:
- ಅಧಿಕೃತ ಪೋರ್ಟಲ್‌ಗೆ ಹೋಗಿ: https://digilocker.gov.in/
- ಮೇಲ್ಭಾಗದಲ್ಲಿರುವ ಲಾಗಿನ್ / ರಿಜಿಸ್ಟರ್ ಕ್ಲಿಕ್ ಮಾಡಿ.
ಬಿ) ಮೊಬೈಲ್ ಅಪ್ಲಿಕೇಶನ್ ಮೂಲಕ:
- ಗೂಗಲ್ ಪ್ಲೇ ಸ್ಟೋರ್ (ಆಂಡ್ರಾಯ್ಡ್) ಅಥವಾ ಆಪಲ್ ಸ್ಟೋರ್ (ಐಒಎಸ್) ನಿಂದ ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಆಯ್ಕೆಯ ಭಾಷೆಯನ್ನು ಆರಿಸಿ.
- ಅಗತ್ಯವಿರುವ ಅನುಮತಿಗಳನ್ನು ನೀಡಿ.
- ನೋಂದಣಿ ಮತ್ತು ಲಾಗಿನ್ ಮಾಡುವುದು ಹೇಗೆ?
ನೋಂದಣಿ:
- ಅಪ್ಲಿಕೇಶನ್/ಪೋರ್ಟಲ್ ತೆರೆಯಿರಿ ಮತ್ತು 'ರಿಜಿಸ್ಟರ್' ಟ್ಯಾಪ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆಯನ್ನು ನಮೂದಿಸಿ.
- ನೀವು ಒಟಿಪಿಪಡೆಯುತ್ತೀರಿ — ನಿಮ್ಮ ಸಂಖ್ಯೆಯನ್ನು ಪರಿಶೀಲಿಸಲು ಅದನ್ನು ನಮೂದಿಸಿ.
ಎಂ-ಪಿನ್ ಸೆಟ್ ಮಾಡಿ (MPIN):
- ಒಟಿಪಿ ಪರಿಶೀಲಿಸಿದ ನಂತರ, ಎಂ-ಪಿನ್ ರಚಿಸಲು ನಿಮ್ಮನ್ನು ಕೇಳಲಾಗುತ್ತದೆ — ಇದು ನಿಮ್ಮ ಲಾಗಿನ್ ಅನ್ನು ಸುರಕ್ಷಿತಗೊಳಿಸುತ್ತದೆ.
- ಭವಿಷ್ಯದ ಲಾಗಿನ್ ಗಳಿಗಾಗಿ ನಿಮ್ಮ ಎಂ-ಪಿನ್ ಅನ್ನು ಉಳಿಸಿಕೊಳ್ಳಿ.
ಲಾಗಿನ್:
ನೀವು ಎಂ-ಪಿನ್ ಅಥವಾ ಒಟಿಪಿ ಬಳಸಿ ಲಾಗಿನ್ ಆಗಬಹುದು.
4. ಡಿಜಿಲಾಕರ್ನಲ್ಲಿ ಸೇವೆಗಳನ್ನು ಹುಡುಕುವುದು ಹೇಗೆ?
- ಲಾಗಿನ್ ಆದ ನಂತರ, ನೀವು ಡಿಜಿಲಾಕರ್ ಡ್ಯಾಶ್‌ಬೋರ್ಡ್ ಅನ್ನು ನೋಡುತ್ತೀರಿ.
- ಬಳಕೆದಾರರು ಸೇವೆಗಳನ್ನು ಹುಡುಕಲು 'ಸರ್ಚ್ ಡಾಕ್ಯುಮೆಂಟ್ಸ್' ಆಯ್ಕೆಯನ್ನು ಬಳಸಬಹುದು.
- SAMPANN, Controller, Communication, DoT, Pension, Gratuity, Commutation ಮುಂತಾದ ಕೀವರ್ಡ್‌ಗಳನ್ನು ಬಳಸಿ ಡಿಜಿಲಾಕರ್ ನಲ್ಲಿ ಸಂಪನ್ ಸೇವೆಯನ್ನು ಹುಡುಕಬಹುದು.
5 .ಡಿಜಿಲಾಕರ್ನಲ್ಲಿ ಸಂಪನ್ ಸೇವೆಗಳನ್ನು ಬಳಸುವುದು ಹೇಗೆ?
ಪ್ರಸ್ತುತ, ಸಂಪನ್ ನ ಈ ಕೆಳಗಿನ ನಾಲ್ಕು ದಾಖಲೆಗಳನ್ನು ಡಿಜಿಲಾಕರ್ ನಲ್ಲಿ ಇರಿಸಲಾಗಿದೆ:
ಅ) ಇ-ಪಿಪಿಒ (e-PPO)
ಆ) ಗ್ರಾಚ್ಯುಟಿ ಪಾವತಿ ಆದೇಶ
ಇ) ಕಮ್ಯುಟೇಶನ್ ಪಾವತಿ ಆದೇಶ
ಈ) ಫಾರ್ಮ್-16
ಸಂಪನ್ ಬಳಕೆದಾರರು ಪ್ರತಿಯೊಂದು ವರ್ಗದ ಸೇವೆಯಲ್ಲಿ ತಮ್ಮ ಪಿಪಿಒ ಸಂಖ್ಯೆಯನ್ನು ನಮೂದಿಸಬಹುದು ಮತ್ತು 'ಗೆಟ್ ಡಾಕ್ಯುಮೆಂಟ್' ಕ್ಲಿಕ್ ಮಾಡಬಹುದು. ವ್ಯವಸ್ಥೆಯು ನಮೂದಿಸಿದ ವಿವರಗಳಿಗೆ ಸಂಬಂಧಿಸಿದ ಪಿಂಚಣಿ ಪ್ರಮಾಣಪತ್ರ/ಗ್ರಾಚ್ಯುಟಿ ಪಾವತಿ ಆದೇಶ/ಕಮ್ಯುಟೇಶನ್ ಪಾವತಿ ಆದೇಶ/ಫಾರ್ಮ್-16 ಅನ್ನು ಜನರೇಟ್ ಮಾಡುತ್ತದೆ.
*****
(रिलीज़ आईडी: 2216751)
आगंतुक पटल : 17