ರಾಜ್ಯಸಭಾ ಕಾರ್ಯಾಲಯ
ಲಕ್ನೋದಲ್ಲಿ ನಡೆದ 86ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆಯ ಸಮರ್ಥ ಅಳವಡಿಕೆಗಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ನಡುವೆ ಸಮನ್ವಯಕ್ಕೆ ಕರೆ ನೀಡಿದ ರಾಜ್ಯಸಭಾ ಉಪಾಧ್ಯಕ್ಷರಾದ ಶ್ರೀ ಹರಿವಂಶ್
ನಿಖರವಾದ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಿಗಾಗಿ ರಾಜ್ಯಗಳು ತಮ್ಮ ಸಾಂಸ್ಥಿಕ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ ಶ್ರೀ ಹರಿವಂಶ್
ಶಾಸನಗಳ ಮೇಲಿನ ವಿವಿಧ ಚರ್ಚೆಗಳು ಮತ್ತು ಬಜೆಟ್ ಸೇರಿದಂತೆ ಎಲ್ಲಾ ಅಧಿಕೃತ ನೀತಿ ದಾಖಲೆಗಳ ರಕ್ಷಕರು ಶಾಸಕಾಂಗಗಳಾಗಿವೆ ಎಂದ ಶ್ರೀ ಹರಿವಂಶ್
"ಕೃತಕ ಬುದ್ಧಿಮತ್ತೆಯು ಸಂಸದೀಯ ಬಳಕೆಗೆ ಸೂಕ್ತವಾಗುವುದು ಕೇವಲ ಅದರ ಅಲ್ಗಾರಿದಮಿಕ್ ಸಾಮರ್ಥ್ಯದಿಂದಲ್ಲ, ಬದಲಿಗೆ ಆ ತಂತ್ರಜ್ಞಾನಕ್ಕೆ ಯಾವ ಜ್ಞಾನದ ಆಧಾರದ ಮೇಲೆ ತರಬೇತಿ ನೀಡಲಾಗಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ"
ಪ್ರಕಟಣಾ ದಿನಾಂಕ:
20 JAN 2026 4:39PM by PIB Bengaluru
ಗೌರವಾನ್ವಿತ ಉಪಸಭಾಪತಿ ಹರಿವಂಶ್ ಅವರು ಮಂಗಳವಾರ ಲಕ್ನೋದಲ್ಲಿ ನಡೆದ 86ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದ ಪೂರ್ಣ ಅಧಿವೇಶನದಲ್ಲಿ ಭಾಷಣ ಮಾಡಿದರು. ವಿವಿಧ ರಾಜ್ಯಗಳ ಪೀಠಾಸೀನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸನಸಭೆಗಳನ್ನು ಹೆಚ್ಚು ದಕ್ಷಗೊಳಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವನ್ನು ಒತ್ತಿಹೇಳಿದರು. ಅದರೊಂದಿಗೆ, ಈ ತಂತ್ರಜ್ಞಾನವನ್ನು ನಿಖರ ಮತ್ತು ವಿಶ್ವಾಸಾರ್ಹವಾಗಿಸಲು ಅಗತ್ಯವಿರುವ ವಿವಿಧ ಕ್ರಮಗಳನ್ನು ಅವರು ವಿವರಿಸಿದರು. ಸಂಸತ್ತಿನಲ್ಲಿ ಎಐ ಅನ್ನು ಜಾರಿಗೆ ತರುವ ವಿವಿಧ ಪ್ರಾಯೋಗಿಕ ಉದಾಹರಣೆಗಳು ಮತ್ತು ಮಾರ್ಗಗಳನ್ನು ಮಂಡಿಸುವುದರ ಜೊತೆಗೆ, ರಾಜ್ಯ ಶಾಸನಸಭೆಗಳು ಮತ್ತು ಸಂಸತ್ತಿನ ನಡುವೆ ಹೆಚ್ಚಿನ ಸಮನ್ವಯಕ್ಕೆ ಅವರು ಕರೆ ನೀಡಿದರು. ಇದು ಶಾಸಕಾಂಗಗಳ ಸಾಂಸ್ಥಿಕ ಜ್ಞಾನವನ್ನು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳೆರಡರಲ್ಲೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ನೀತಿಗಳ ಕುರಿತಾದ ಸಾಮರಸ್ಯದ ಸಮನ್ವಯ ಮತ್ತು ಮಾಹಿತಿಯ ಲಭ್ಯತೆಯ ದೃಷ್ಟಿಕೋನವನ್ನು ಒತ್ತಿಹೇಳುತ್ತಾ ಅವರು, “ಶಾಸಕಾಂಗಗಳು ಶಾಸನಗಳ ಮೇಲಿನ ವಿವಿಧ ಚರ್ಚೆಗಳು, ಬಜೆಟ್ಗಳು ಸೇರಿದಂತೆ ಎಲ್ಲಾ ಅಧಿಕೃತ ನೀತಿ ದಾಖಲೆಗಳ ರಕ್ಷಕಗಳಾಗಿವೆ. ಈ ದಾಖಲೆಗಳನ್ನು ಸದನದ ಮುಂದಿಟ್ಟಾಗ ಅವು ಸದನದ ಭಾಗವಾಗುತ್ತವೆ. ಈ ಮಾಹಿತಿಯು ಹೆಚ್ಚಾಗಿ ವಿವಿಧ ಸಚಿವಾಲಯಗಳಲ್ಲಿ ಹಂಚಿಹೋಗಿರುತ್ತದೆ. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಇವುಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಒಂದು ವೇದಿಕೆಯನ್ನು ನಿರ್ಮಿಸಬಹುದು. ಇದು ಶಾಸಕಾಂಗ ಸಂಸ್ಥೆಯನ್ನು 'ಜ್ಞಾನದ ಕೇಂದ್ರ'ವಾಗಿ ಉತ್ತೇಜಿಸುತ್ತದೆ." ಎಂದು ಹೇಳಿದರು. ಇದಲ್ಲದೆ, ಭಾರತೀಯ ಸಂದರ್ಭಕ್ಕೆ ಸೂಕ್ತವಾದ ತಂತ್ರಜ್ಞಾನವನ್ನು ರೂಪಿಸಲು ಶಾಸಕಾಂಗ ಚರ್ಚೆಗಳ ವಿಶಿಷ್ಟ ಭಾಷೆ, ಶಬ್ದಕೋಶ ಮತ್ತು ದೇಶಾದ್ಯಂತ ಇರುವ ದಾಖಲೆಗಳನ್ನು ಒಳಗೊಂಡ 'ಡೇಟಾ ಲೇಕ್' (ದತ್ತಾಂಶ ಸಂಗ್ರಹ) ನಿರ್ಮಿಸುವ ಅಗತ್ಯವನ್ನು ಅವರು ಉಲ್ಲೇಖಿಸಿದರು.
ಕೃತಕ ಬುದ್ಧಿಮತ್ತೆ ತರಬೇತಿ ಮತ್ತು ಅದರ ಮೂಲಕ ಬರುವ ಫಲಿತಾಂಶಗಳ ಮೇಲೆ ಮಾನವ ಮೇಲ್ವಿಚಾರಣೆ ಇರುವ 'ಹೈಬ್ರಿಡ್ ಕಾರ್ಯವಿಧಾನ' ವ್ಯವಸ್ಥೆಗೆ ಹರಿವಂಶ ಅವರು ಕರೆ ನೀಡಿದರು. “ಕೇವಲ ಅಲ್ಗಾರಿದಮಿಕ್ ಸಾಮರ್ಥ್ಯದಿಂದಾಗಿ ಕೃತಕ ಬುದ್ಧಿಮತ್ತೆ ಸಂಸದೀಯ ಬಳಕೆಗೆ ಸೂಕ್ತವೆನಿಸುವುದಿಲ್ಲ. ಬದಲಾಗಿ ಯಾವ ಜ್ಞಾನದ ಮೇಲೆ ಆ ತಂತ್ರಜ್ಞಾನಕ್ಕೆ ತರಬೇತಿ ನೀಡಲಾಗಿದೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ಸಂಸದೀಯ ಕೃತಕ ಬುದ್ಧಿಮತ್ತೆಗೆ ಸಂಸತ್ತಿನ ಒಳಗಡೆಯೇ ತರಬೇತಿ ನೀಡಬೇಕು ಮತ್ತು ಎಚ್ಚರಿಕೆಯಿಂದ ಸಂಗ್ರಹಿಸಿದ ಸಂಸದೀಯ ದತ್ತಾಂಶವನ್ನು ಅದಕ್ಕೆ ಒದಗಿಸಬೇಕು. ಕೌಶಲ್ಯಗಳನ್ನು ಪಡೆದುಕೊಳ್ಳಬಹುದು, ವರ್ಗಾಯಿಸಬಹುದು ಅಥವಾ ಹೊರಗುತ್ತಿಗೆ ನೀಡಬಹುದು. ಆದರೆ, ಜ್ಞಾನ ಎಂಬುದು ಸಂದರ್ಭೋಚಿತವಾದುದು ಮತ್ತು ಅದು ಸಂಸ್ಥೆಯೊಳಗೆ ಆಳವಾಗಿ ಬೇರೂರಿರುತ್ತದೆ. ಸಂಸದೀಯ ಜ್ಞಾನವು ವಿಶಿಷ್ಟವಾದುದು. ಇದು ದಶಕಗಳ ಕಾಲದ ಚರ್ಚೆಗಳು, ತೀರ್ಪುಗಳು, ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಆಚರಣೆಗಳ ಮೂಲಕ ನಿರ್ಮಾಣವಾಗಿದೆ” ಎಂದು ಅವರು ಒತ್ತಿಹೇಳಿದರು.
ತಮ್ಮ ಭಾಷಣದಲ್ಲಿ ಅವರು, ಸಂಸತ್ತು ವಿವಿಧ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲು ಕೃತಕ ಬುದ್ಧಿಮತ್ತೆ-ಆಧಾರಿತ ಪ್ರತಿಲೇಖನ ಮತ್ತು ಏಕಕಾಲಿಕ ವ್ಯಾಖ್ಯಾನವನ್ನು ಹೇಗೆ ಪರೀಕ್ಷಿಸುತ್ತಿದೆ ಎಂದು ವಿವರಿಸಿದರು. ಪ್ರಸ್ತುತ, ಸಂಸತ್ತಿನ ಸದಸ್ಯರು ಸದನದ ಕಲಾಪಗಳು ಮತ್ತು ಇತರ ಆಡಳಿತಾತ್ಮಕ ದಾಖಲೆಗಳನ್ನು ತಮ್ಮ ಇಚ್ಛೆಯ ಭಾಷೆಯಲ್ಲಿ ಪಡೆಯಬಹುದಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕಾರ್ಯಗತಗೊಳಿಸಲಾಗಿದೆ. ಪ್ರಶ್ನೋತ್ತರ ಅವಧಿಯ ಪ್ರಶ್ನೆಗಳ ಸ್ವೀಕಾರಾರ್ಹತೆಯ ಪರಿಶೀಲನೆ, ಹಿಂದಿನ ನಿದರ್ಶನಗಳು ಮತ್ತು ತೀರ್ಪುಗಳನ್ನು ಹುಡುಕುವುದು ಮುಂತಾದ ದೈನಂದಿನ ಆಡಳಿತಾತ್ಮಕ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಹೇಗೆ ನಿರ್ವಹಿಸಬಹುದು ಎಂಬುದನ್ನು ಉಪಸಭಾಪತಿಯವರು ವಿವರಿಸಿದರು. ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಸಿಬ್ಬಂದಿ ಮತ್ತು ಶಾಸಕರಿಗೆ ಹೆಚ್ಚಿನ ಜಾಗೃತಿ ಮತ್ತು ದೃಷ್ಟಿಕೋನ ರೂಪಿಸುವ ಕಾರ್ಯಾಗಾರಗಳನ್ನು ನಡೆಸುವಂತೆ ಅವರು ಕರೆ ನೀಡಿದರು.
ಡಿಜಿಟಲ್ ಉಪಕರಣಗಳ ಬಳಕೆಯ ಹೊರತಾಗಿ, ಶಾಸಕರ ಹೊಣೆಗಾರಿಕೆಯನ್ನು ಬಲಪಡಿಸುವುದು ಮತ್ತು ಸಾಮರ್ಥ್ಯ ವೃದ್ಧಿಯ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಜನವರಿ 19 ರಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಮ್ಮುಖದಲ್ಲಿ ಈ ಸಮ್ಮೇಳನವು ಪ್ರಾರಂಭವಾಯಿತು.


*****
(ಪ್ರಕಟಣೆ ಐ.ಡಿ.: 2216486)
ವಿಸಿಟರ್ ಕೌಂಟರ್ : 65