ಹಣಕಾಸು ಸಚಿವಾಲಯ
‘ಐಎಫ್‌ಎಸ್‌ಸಿ-ಐಆರ್‌ಡಿಎಐ-ಗಿಫ್ಟ್ ಸಿಟಿ ಜಾಗತಿಕ ಮರು ವಿಮೆ ಶೃಂಗಸಭೆʼಯಲ್ಲಿ ಭಾರತದ ವಿಮಾ ಬೆಳವಣಿಗೆಯನ್ನು ಉಲ್ಲೇಖಿಸಿದ ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿಗಳು
"2047 ರ ವೇಳೆಗೆ ಎಲ್ಲರಿಗೂ ವಿಮೆ" ಎಂಬ ದೃಷ್ಟಿಕೋನವನ್ನು ಎಲ್ಲರನ್ನೂ ಒಳಗೊಂಡ ವಿಮಾ ಬೆಳವಣಿಗೆಗೆ ಮಾರ್ಗಸೂಚಿಯಾಗಿ ಕಾರ್ಯದರ್ಶಿ ಹೇಳಿದರು
ವಿಮಾ ವಲಯವು 2024-25ರ ಹಣಕಾಸು ವರ್ಷದಲ್ಲಿ 11.93 ಲಕ್ಷ ಕೋಟಿ ರೂ.ಗಳ ಪ್ರೀಮಿಯಂ ಮತ್ತು 74.44 ಲಕ್ಷ ಕೋಟಿ ರೂ.ಗಳ ‘ನಿರ್ವಹಣೆಯಲ್ಲಿರುವ ಆಸ್ತಿ’ಯೊಂದಿಗೆ (ಎಯುಎಂ) ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ
प्रविष्टि तिथि:
19 JAN 2026 2:11PM by PIB Bengaluru
ಆರ್ಥಿಕ ಸೇವೆಗಳ ಇಲಾಖೆ(ಡಿಎಫ್ಎಸ್) ಕಾರ್ಯದರ್ಶಿ ಶ್ರೀ ಎಂ. ನಾಗರಾಜು ಅವರು ಇಂದು ಮುಂಬೈನಲ್ಲಿ ನಡೆದ ʻ ಐಎಫ್‌ಎಸ್‌ಸಿ-ಐಆರ್‌ಡಿಎಐ-ಗಿಫ್ಟ್ ಸಿಟಿ ಜಾಗತಿಕ ಮರುವಿಮೆ ಶೃಂಗಸಭೆʼಯ 3ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಐಎಫ್ಎಸ್ಸಿ ಗಿಫ್ಟ್ ಸಿಟಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಶ್ಲಾಘಿಸುವ ಮೂಲಕ ಅವರು ಮಾತು ಪ್ರಾರಂಭಿಸಿದರು. ಭಾರತವು ತನ್ನ ಮರುವಿಮಾ ಕ್ಷೇತ್ರದಲ್ಲಿ ಪರಿವರ್ತನಾತ್ಮಕ ಬೆಳವಣಿಗೆಯ ಉತ್ತುಂಗದಲ್ಲಿದೆ. "ಭಾರತವನ್ನು ಇಂದು ಬೆಸೆಯುವುದು, ಭಾರತವನ್ನು ನಾಳೆ ವಿಮೆ ವ್ಯಾಪ್ತಿಗೆ ಒಳಪಡಿಸುವುದು-ಭಾರತದ ವಿಕಸನದ ಮಾರ್ಗಸೂಚಿ" ಎಂಬ ಕಾರ್ಯಕ್ರಮದ ವಿಷಯವು "2047ರ ವೇಳೆಗೆ ಎಲ್ಲರಿಗೂ ವಿಮೆ" ಆಶಯದೊಂದಿಗೆ ನಿಕಟವಾಗಿ ಹೊಂದಾಣಿಕೆಯಾಗುತ್ತದೆ ಎಂದು ಕಾರ್ಯದರ್ಶಿ ಹೇಳಿದರು.


ʻಐಎಫ್ಎಸ್ಸಿಎ-ಐಆರ್‌ಡಿಎಐ ಗಿಫ್ಟ್ ಸಿಟಿ ಜಾಗತಿಕ ಮರುವಿಮಾ ಶೃಂಗಸಭೆʼಯನ್ನು ಹಣಕಾಸು ಸೇವಾ ವಲಯದ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಪ್ರಮುಖ ವೇದಿಕೆ ಎಂದು ಕಾರ್ಯದರ್ಶಿ ಬಣ್ಣಿಸಿದರು. ವಿಶೇಷವಾಗಿ ಜಾಗತಿಕ ಆರ್ಥಿಕತೆಯಲ್ಲಿ ದೇಶವು ತನ್ನ ಪಾತ್ರವನ್ನು ಬಲಪಡಿಸುತ್ತಿರುವ ಈ ಸಮದಯದಲ್ಲಿ, ಭಾರತವನ್ನು ತನ್ನ ಆರ್ಥಿಕ ಉದ್ದೇಶಗಳತ್ತ ಕೊಂಡೊಯ್ಯುವಲ್ಲಿ ವಿಮೆ ಮತ್ತು ಮರುವಿಮೆ ನಿರ್ಣಾಯಕವೆಂದು ಅವರು ಒತ್ತಿಹೇಳಿದರು. ಜಾಗತಿಕ ಆರ್ಥಿಕ ಸನ್ನಿವೇಶವನ್ನು ಉಲ್ಲೇಖಿಸಿದ ಕಾರ್ಯದರ್ಶಿಯವರು, 1.46 ಶತಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ಸವಾಲಿನ ಜಾಗತಿಕ ಪರಿಸ್ಥಿತಿಗಳ ಹೊರತಾಗಿಯೂ, ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. 2026ರಲ್ಲಿ ಶೇಕಡಾ 6.6ರ ದರದಲ್ಲಿ ಆರ್ಥಿಕ ಬೆಳವಣಿಗೆಯನ್ನು ಅಂದಾಜಿಸಲಾಗಿದೆ ಎಂದು ಹೇಳಿದರು.
ಜಾಗತಿಕ ವಿಮಾ ಸನ್ನಿವೇಶದ ವಿಚಾರವಾಗಿ, ʻಸ್ವಿಸ್ ರೆ ಸಿಗ್ಮಾʼ ವರದಿಯನ್ನು(ಸಂಖ್ಯೆ 02/2025) ಉಲ್ಲೇಖಿಸಿದ ಅವರು, ಜಾಗತಿಕ ವಿಮಾ ಉದ್ಯಮದಲ್ಲಿ 2024ರಲ್ಲಿ ಬಲವಾದ ಕಾರ್ಯಕ್ಷಮತೆ ಗೋಚರಿಸಿತು. ಆದರೆ, ಜಾಗತಿಕ ಆರ್ಥಿಕ ಕುಸಿತ ಮತ್ತು ಅಸ್ಥಿರ ನೀತಿ ವಾತಾವರಣದಿಂದಾಗಿ ಜೀವ ವಿಮೆ ಮತ್ತು ಜೀವೇತರ ವಿಮಾ ವಿಭಾಗಗಳಲ್ಲಿ ಪ್ರೀಮಿಯಂ ಬೆಳವಣಿಗೆಯು ನಿಧಾನವಾಗುತ್ತಿದೆ ಎಂದು ಹೇಳಿದರು. ʻಸ್ವಿಸ್ ರೆʼ ವರದಿಯ ಪ್ರಕಾರ, ಭಾರತವು 2024ರಲ್ಲಿ ಸಾಧಾರಣ ಪ್ರೀಮಿಯಂ ಪರಿಮಾಣಗಳ ಮೂಲಕ ಜಾಗತಿಕವಾಗಿ 10ನೇ ಅತಿದೊಡ್ಡ ವಿಮಾ ಮಾರುಕಟ್ಟೆಯಾಗಿ ಸ್ಥಾನ ಪಡೆದಿದ್ದು, ಶೇಕಡಾ 1.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಒಟ್ಟಾರೆ ವಿಮೆ ವ್ಯಾಪ್ತಿಯು ಶೇ.3.7 ರಷ್ಟಿದೆ. ಜೀವ ವಿಮೆ ಶೇಕಡಾ 2.7 ಮತ್ತು ಜೀವೇತರ ವಿಮೆ ಪ್ರಮಾಣ ಶೇ.1 ರಷ್ಟಿದೆ. ಇದೇವೇಳೆ ವಿಮೆ ಸಾಂದ್ರತೆಯು ಸ್ವಲ್ಪಮಟ್ಟಿಗೆ ಏರಿಕೆಯಾಗಿ 97 ಡಾಲರ್‌ಗೆ ತಲುಪಿದೆ. ಇದು ಗಮನಾರ್ಹ ಬಳಕೆಯಾಗದ ಮಾರುಕಟ್ಟೆ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಮಾಹಿತಿ ನೀಡಿದರು.
ಹಣಕಾಸು ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಭಾರತೀಯ ವಿಮಾ ವಲಯವು ಮರಣ, ಆಸ್ತಿ ಮತ್ತು ಅಪಘಾತದ ಅಪಾಯಗಳ ವಿರುದ್ಧ ರಕ್ಷಣೆ ಒದಗಿಸುವ ಮೂಲಕ, ಉಳಿತಾಯವನ್ನು ಉತ್ತೇಜಿಸುವ ಮೂಲಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ದೀರ್ಘಾವಧಿಯ ಯೋಜನೆಗಳಿಗೆ ದೀರ್ಘಕಾಲೀನ ಹಣವನ್ನು ಒದಗಿಸುವ ಮೂಲಕ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಕಾರ್ಯದರ್ಶಿ ಹೇಳಿದರು. 2024-25ರ ಹಣಕಾಸು ವರ್ಷದಲ್ಲಿ, ಈ ವಲಯವು 41.84 ಕೋಟಿ ಪಾಲಿಸಿಗಳನ್ನು ವಿತರಿಸಿದೆ, 11.93 ಲಕ್ಷ ಕೋಟಿ ರೂ.ಗಳ ಪ್ರೀಮಿಯಂಗಳನ್ನು ಸಂಗ್ರಹಿಸಿದೆ, 8.36 ಲಕ್ಷ ಕೋಟಿ ರೂ.ಗಳ ಕ್ಲೈಮ್‌ಗಳನ್ನು ಪಾವತಿಸಿದೆ ಮತ್ತು 31 ಮಾರ್ಚ್ 2025 ರಂದು ಇದ್ದಂತೆ 74.44 ಲಕ್ಷ ಕೋಟಿ ರೂ.ಗಳ ʻನಿರ್ವಹಣೆಯಲ್ಲಿರುವ ಒಟ್ಟು ಆಸ್ತಿಗಳುʼ(ಎಯುಎಂ) ವರದಿ ಮಾಡಿದೆ. 2024-25ರಲ್ಲಿ ಭಾರತದ ಒಟ್ಟು ಮರುವಿಮಾ ಮಾರುಕಟ್ಟೆ 1.12 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಅವರು ಮಾಹಿತಿ ನೀಡಿದರು.
ಸರ್ಕಾರ ಮತ್ತು ವಿಮಾ ನಿಯಂತ್ರಣ ಪ್ರಾಧಿಕಾರಗಳು ನೀತಿ ಉಪಕ್ರಮಗಳು ಹಾಗೂ ರಚನಾತ್ಮಕ ಸುಧಾರಣೆಗಳ ಮೂಲಕ ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆ ಮತ್ತು ವಿಮಾ ಲಭ್ಯತೆ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿವೆ. ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಶೇಕಡಾ 100ಕ್ಕೆ ಹೆಚ್ಚಿಸಲಾಗಿದೆ, ಕಳೆದ ವರ್ಷ ಹೊಸ ಮರುವಿಮೆದಾರರನ್ನು ನೋಂದಾಯಿಸಲಾಗಿದೆ. ʻಸರ್ವರಿಗೂ ವಿಮೆ, ಸರ್ವರಿಗೂ ಸುರಕ್ಷತೆ ಕಾಯ್ದೆ-2025ʼ(ವಿಮಾ ಕಾನೂನುಗಳ ತಿದ್ದುಪಡಿ ಕಾಯಿದೆ) ಪಾಲಿಸಿದಾರರಿಗೆ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ. ʻಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ-2023ʼರ ಮೂಲಕ ಡೇಟಾ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ʻಐಆರ್‌ಡಿಎಐʼನ ನಿಯಂತ್ರಕ ಅಧಿಕಾರವನ್ನು ಹೆಚ್ಚಿಸುತ್ತದೆ.
ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಕಾರ್ಯದರ್ಶಿಗಳು, ಜಾಗತಿಕ ಮರುವಿಮಾ ಕೇಂದ್ರವಾಗುವ ಭಾರತದ ಆಕಾಂಕ್ಷೆಯನ್ನು ಮುನ್ನಡೆಸುವಲ್ಲಿ ʻಐಎಫ್ಎಸ್ಸಿಎʼ ಪಾತ್ರವನ್ನು ಒತ್ತಿ ಹೇಳಿದರು. ʻಐಎಫ್ಎಸ್ಸಿಎ ಕಾಯ್ದೆ-2019ʼರ ಅಡಿಯಲ್ಲಿ, ʻಗಿಫ್ಟ್ ಸಿಟಿ ಐಎಫ್ಎಸ್ಸಿʼ ಜಾಗತಿಕ ಸಹವರ್ತಿಗಳೊಂದಿಗೆ ಹೊಂದಾಣಿಕೆ ಮಾಡುತ್ತದೆ, ʻಐಎಫ್ಎಸ್ಸಿ ವಿಮಾ ಕಚೇರಿʼಗಳನ್ನು ನಿಯಂತ್ರಿಸುತ್ತದೆ, ವಿದೇಶಿ ಮರುವಿಮೆದಾರರಿಗೆ ಶಾಖೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ, ಜಾಗತಿಕ ಮಾನದಂಡಗಳೊಂದಿಗೆ ನಿಯಮಗಳನ್ನು ಸಮನ್ವಯಗೊಳಿಸುತ್ತದೆ ಜೊತೆಗೆ ಐಎಫ್ಎಸ್ಸಿಗಳು, ʻಎಸ್ಇಝಡ್ʼಗಳು, ದೇಶೀಯ ಸುಂಕ ಪ್ರದೇಶಗಳು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮರುವಿಮೆಯನ್ನು ಸುಗಮಗೊಳಿಸುತ್ತದೆ. ಭಾರತದ ವಿಮಾ ಮತ್ತು ಮರುವಿಮಾ ಕ್ಷೇತ್ರಗಳು ಏರುಗತಿಯಲ್ಲಿವೆ ಎಂದು ಗುರುತಿಸಲಾಗಿದೆ. ಗಿಫ್ಟ್ ಸಿಟಿ ಮೂಲಕ ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳುವಂತೆ ಭಾರತೀಯ ವಿಮಾದಾರರು ಮತ್ತು ಮರುವಿಮೆದಾರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಆ ಮೂಲಕ "2047ರ ವೇಳೆಗೆ ಎಲ್ಲರಿಗೂ ವಿಮೆ" ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಹಯೋಗದೊಂದಿಗೆ ಕೆಲಸ ಮಾಡುವಂತೆ ಉತ್ತೇಜಿಸಲಾಗುತ್ತಿದೆ ಎಂದು ಹೇಳುವ ಮೂಲಕ ಕಾರ್ಯದರ್ಶಿಗಳು ತಮ್ಮ ಮಾತು ಮುಗಿಸಿದರು.
*****
(रिलीज़ आईडी: 2216110)
आगंतुक पटल : 9