ರಕ್ಷಣಾ ಸಚಿವಾಲಯ
ಜಾಗತಿಕ ಅನಿಶ್ಚಿತತೆಗಳ ನಡುವೆ 'ಆಪರೇಷನ್ ಸಿಂಧೂರ್' ಒಂದು ಸಮತೋಲಿತ ಮಿಲಿಟರಿ ಪ್ರತಿಕ್ರಿಯೆಯಾಗಿತ್ತು, ಇದು ಭಾರತದ ಧೈರ್ಯ, ಶಕ್ತಿ, ಸಂಯಮ ಮತ್ತು ರಾಷ್ಟ್ರೀಯ ಗುಣದ ಸಂಕೇತವಾಗಿದೆ: ಜೈಪುರದಲ್ಲಿ ನಡೆದ ಭೂಸೇನಾ ದಿನಾಚರಣೆಯಲ್ಲಿ ರಕ್ಷಣಾ ಸಚಿವರು
“ಭಯೋತ್ಪಾದಕ ಸಿದ್ಧಾಂತವು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಭಾರತದ ಶಾಂತಿ ಪ್ರಯತ್ನಗಳು ಮುಂದುವರಿಯಲಿವೆ”
“ಭಾರತೀಯ ಭೂಸೇನೆಯು ಅದಮ್ಯ ಧೈರ್ಯ, ಅಚಲ ಸಮರ್ಪಣೆ ಮತ್ತು ಅಪ್ರತಿಮ ತ್ಯಾಗದ ದ್ಯೋತಕವಾಗಿದೆ”
“2047ರ ವೇಳೆಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಪಡೆಯಾಗುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಮುನ್ನಡೆಯುತ್ತಿದೆ”
“ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರವು ಭಾರತದ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ಸ್ವದೇಶಿ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸುತ್ತಿದೆ”
“ವಿಸ್ತರಿಸುತ್ತಿರುವ ಯುದ್ಧದ ಆಯಾಮಗಳಿಗೆ ವಿವಿಧ ಸೇನಾ ಪಡೆಗಳ ನಡುವೆ ಬಲಿಷ್ಠ ಸಮನ್ವಯದ ಅಗತ್ಯವಿದೆ”
प्रविष्टि तिथि:
15 JAN 2026 7:35PM by PIB Bengaluru
“ವಿಶ್ವದಾದ್ಯಂತ ಅನಿಶ್ಚಿತತೆಗಳು ನೆಲೆಸಿರುವ ಈ ಸಮಯದಲ್ಲಿ 'ಆಪರೇಷನ್ ಸಿಂಧೂರ್' ಒಂದು ಸಮತೋಲಿತ ಮಿಲಿಟರಿ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದೆ. ಇದು ಭಾರತದ ಧೈರ್ಯ, ಶಕ್ತಿ, ಸಂಯಮ ಮತ್ತು ರಾಷ್ಟ್ರೀಯ ಗುಣದ ಸಂಕೇತವಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ,” ಎಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಹೇಳಿದರು. ರಾಜಸ್ಥಾನದ ಜೈಪುರದಲ್ಲಿ 2026ರ ಜನವರಿ 15ರಂದು ನಡೆದ 78ನೇ ಭಾರತೀಯ ಭೂಸೇನಾ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಸೈನಿಕರ ಅದಮ್ಯ ಧೈರ್ಯ, ಅಚಲ ಸಮರ್ಪಣಾ ಭಾವ ಮತ್ತು ಯುದ್ಧಭೂಮಿಯ ಬದಲಾಗುತ್ತಿರುವ ಸಂದರ್ಭಗಳಿಗೆ ತಕ್ಕಂತೆ ಅವರು ಹೊಂದಿಕೊಂಡ ರೀತಿಯನ್ನು ಶ್ಲಾಘಿಸಿದ ರಕ್ಷಣಾ ಸಚಿವರು, "ಭಯೋತ್ಪಾದಕರ ವಿರುದ್ಧದ ಈ ಕ್ರಮವನ್ನು ಅತ್ಯಂತ ಎಚ್ಚರಿಕೆಯ ಮೌಲ್ಯಮಾಪನ ಮತ್ತು ಮಾನವೀಯ ಮೌಲ್ಯಗಳಿಗೆ ಗೌರವ ನೀಡಿ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.

ಭಾರತೀಯ ಸಶಸ್ತ್ರ ಪಡೆಗಳು ತೋರಿದ ಶೌರ್ಯ ಮತ್ತು ಚುರುಕುತನವನ್ನು ಭಯೋತ್ಪಾದಕರು ಎಂದಿಗೂ ಊಹಿಸಿರಲು ಸಾಧ್ಯವಿರಲಿಲ್ಲ ಎಂದು ಪ್ರತಿಪಾದಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ನಮ್ಮ ಸೈನಿಕರ ಈ ಪರಾಕ್ರಮವೇ ಶತ್ರುಗಳು ಯಾವುದೇ ದುಷ್ಕೃತ್ಯ ಎಸಗದಂತೆ ತಡೆಯಿತು ಎಂದು ಒತ್ತಿ ಹೇಳಿದರು. ಸಶಸ್ತ್ರ ಪಡೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, “ಪರಿಸ್ಥಿತಿ ಕಷ್ಟಕರವಾಗಿತ್ತು ಮತ್ತು ಸಾಕಷ್ಟು ಒತ್ತಡವಿತ್ತು. ಆದರೆ ನಮ್ಮ ಸೈನಿಕರು ತೋರಿದ ಸಂಯಮ, ಒಗ್ಗಟ್ಟು ಮತ್ತು ತಾಳ್ಮೆಯೊಂದಿಗೆ ಈ ಕಾರ್ಯಾಚರಣೆಯನ್ನು ಪೂರೈಸಿದ ರೀತಿ ಅಭೂತಪೂರ್ವ ಮತ್ತು ಶ್ಲಾಘನೀಯವಾಗಿದೆ,” ಎಂದರು. 'ಆಪರೇಷನ್ ಸಿಂಧೂರ್' ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಎಚ್ಚರಿಸಿದ ಅವರು, ಭಯೋತ್ಪಾದನಾ ಸಿದ್ಧಾಂತವು ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೆ ಶಾಂತಿ ಸ್ಥಾಪನೆಗಾಗಿ ಭಾರತದ ಪ್ರಯತ್ನಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.
ಈ ಕಾರ್ಯಾಚರಣೆಯಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳ ಬಳಕೆಯು, ಸ್ವಾವಲಂಬನೆಯು ಕೇವಲ ಹೆಮ್ಮೆಯ ವಿಷಯವಲ್ಲ ಬದಲಾಗಿ ಅದೊಂದು ಅನಿವಾರ್ಯತೆ ಎಂಬ ಅಂಶವನ್ನು ಎತ್ತಿ ತೋರಿಸಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು. ದೇಶವು 'ಆತ್ಮನಿರ್ಭರತೆ'ಯ ಹಾದಿಯಲ್ಲಿ ಬಹಳ ದೂರ ಸಾಗಿದೆ ಮತ್ತು ಸಶಸ್ತ್ರ ಪಡೆಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ 'ಆತ್ಮನಿರ್ಭರ ಭಾರತ'ದ ಗುರಿಯನ್ನು ತಲುಪಲು ಈ ಪ್ರಯತ್ನಗಳನ್ನು ಮತ್ತಷ್ಟು ವೇಗಗೊಳಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಯುದ್ಧದ ಆಯಾಮಗಳು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ಸೇನಾ ಪಡೆಗಳ ನಡುವಿನ ಪರಸ್ಪರ ಸಮನ್ವಯ ಮತ್ತು ಸಂಪರ್ಕವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ರಾಜನಾಥ್ ಸಿಂಗ್ ಅವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು, ಭಾರತದ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಸ್ವದೇಶಿ ಶಸ್ತ್ರಾಸ್ತ್ರ ಮತ್ತು ಯುದ್ಧೋಪಕರಣಗಳ ಮೂಲಕ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಒತ್ತಿ ಹೇಳಿದರು. ಸ್ವಾವಲಂಬನೆಯ ನಿರಂತರ ಪ್ರಯತ್ನಗಳು ಈಗ ಫಲ ನೀಡುತ್ತಿವೆ ಎಂದು ತಿಳಿಸಿದ ಅವರು, 2014ರಲ್ಲಿ ಕೇವಲ 46,000 ಕೋಟಿ ರೂಪಾಯಿಯಷ್ಟಿದ್ದ ದೇಶೀಯ ರಕ್ಷಣಾ ಉತ್ಪಾದನೆಯು ಇಂದು ದಾಖಲೆಯ 1.51 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಿದರು. ಇದೇ ವೇಳೆ ರಕ್ಷಣಾ ರಫ್ತಿನ ಬಗ್ಗೆ ಮಾಹಿತಿ ನೀಡಿದ ಅವರು, 2014ರಲ್ಲಿ 1,000 ಕೋಟಿ ರೂಪಾಯಿಗಿಂತಲೂ ಕಡಿಮೆ ಇದ್ದ ರಫ್ತು ಪ್ರಮಾಣವು ಇಂದು ಸುಮಾರು 24,000 ಕೋಟಿ ರೂಪಾಯಿಗಳ ದಾಖಲೆಯ ಮಟ್ಟಕ್ಕೆ ಜಿಗಿದಿದೆ ಎಂದು ತಿಳಿಸಿದರು.
‘ಸೈನಿಕನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿರುವುದರ ಜೊತೆಗೆ ತಾಂತ್ರಿಕವಾಗಿಯೂ ಸುಸಜ್ಜಿತನಾಗಿರಬೇಕು’ ಎಂಬ ಮಂತ್ರವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಭಾರತೀಯ ಭೂಸೇನೆಯನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ಇತ್ತೀಚಿನ ತಾಂತ್ರಿಕ ಪ್ರಗತಿಯಿಂದ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ನಿರಂತರವಾಗಿ ಬಲಪಡಿಸುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು. ವಿಶ್ವದ ಇಂದಿನ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾ ಅವರು, “ವಿಶ್ವವು ಎಲ್ಲಾ ಸ್ಥಾಪಿತ ಸಿದ್ಧಾಂತಗಳು ಸವಾಲನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಶಸ್ತ್ರ ಪಡೆಗಳನ್ನು ಬಲಪಡಿಸುವುದು ಮತ್ತು ಅವುಗಳ ಆಧುನೀಕರಣ ಹಾಗೂ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ನಾವು ಯಾವಾಗಲೂ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ಸೈನಿಕರ ಸಾಮರ್ಥ್ಯವನ್ನು ಬಲಪಡಿಸುವತ್ತ ಗಮನ ಹರಿಸಿದ್ದೇವೆ,” ಎಂದು ಹೇಳಿದರು.

ಭಾರತೀಯ ಭೂಸೇನೆಯನ್ನು ಅದಮ್ಯ ಧೈರ್ಯ, ಅಚಲ ಸಮರ್ಪಣೆ ಮತ್ತು ಅನುಪಮ ತ್ಯಾಗದ ದ್ಯೋತಕ ಎಂದು ಬಣ್ಣಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ಸೇನೆಯು 'ವೈವಿಧ್ಯತೆಯಲ್ಲಿ ಏಕತೆ'ಗೆ ಒಂದು ಪ್ರಜ್ವಲ ಉದಾಹರಣೆಯಾಗಿದೆ ಎಂದರು. ದೇಶದ ವಿವಿಧ ಭಾಗಗಳಿಂದ ಬರುವ, ಭಿನ್ನ ಸಂಸ್ಕೃತಿ ಮತ್ತು ಹಿನ್ನೆಲೆಯ ಸೈನಿಕರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಒಂದು ಸಾಮಾನ್ಯ ಗುರಿಗಾಗಿ ಒಂದಾಗುತ್ತಾರೆ ಎಂದು ಅವರು ತಿಳಿಸಿದರು. ಸೇನೆಯ ಸಾಮಾಜಿಕ ಜವಾಬ್ದಾರಿಯನ್ನು ಶ್ಲಾಘಿಸಿದ ರಕ್ಷಣಾ ಸಚಿವರು, “ರಾಷ್ಟ್ರದ ಸಾಮಾಜಿಕ ಏಕತೆಯನ್ನು ಬಲಪಡಿಸುವಲ್ಲಿ ಭಾರತೀಯ ಭೂಸೇನೆಯ ಕೊಡುಗೆ ಅಮೂಲ್ಯವಾದುದು. ಇದು ಕೇವಲ ಒಂದು ಮಿಲಿಟರಿ ಪಡೆಯಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಪ್ರಮುಖ ಸ್ತಂಭವಾಗಿದೆ,” ಎಂದು ಹೇಳಿದರು. ಪ್ರಪಂಚದ ಇತರ ಮಿಲಿಟರಿ ಪಡೆಗಳಿಗೂ ಭಾರತೀಯ ಸೇನೆಗೂ ಇರುವ ವ್ಯತ್ಯಾಸವನ್ನು ಗುರುತಿಸಿದ ಅವರು, “ವಿಶ್ವದ ಬಹುತೇಕ ಮಿಲಿಟರಿ ಪಡೆಗಳು ಒಂದು ಪ್ರತ್ಯೇಕ ವಲಯವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಭಾರತದಲ್ಲಿ, ಸೇನೆಯು ಸಾಮಾನ್ಯ ನಾಗರಿಕರೊಂದಿಗೆ ಬೆರೆತು ಕೆಲಸ ಮಾಡುತ್ತದೆ. ಜನರ ಅಚಲ ವಿಶ್ವಾಸವೇ ನಮ್ಮ ಮಿಲಿಟರಿಯ ಅತಿದೊಡ್ಡ ಶಕ್ತಿ. ಈ ನಂಬಿಕೆಯ ಬಾಂಧವ್ಯವೇ ಭಾರತದ ರಾಷ್ಟ್ರೀಯ ಭದ್ರತಾ ಚೌಕಟ್ಟಿನ ಭದ್ರ ಬುನಾದಿಯಾಗಿದೆ,” ಎಂದು ಅಭಿಪ್ರಾಯಪಟ್ಟರು.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತೀಯ ಸೈನಿಕರ ಅಮೂಲ್ಯ ಕೊಡುಗೆಯನ್ನು ರಕ್ಷಣಾ ಸಚಿವರು ಎತ್ತಿ ತೋರಿಸಿದರು. ನಮ್ಮ ಸೈನಿಕರು ಕೇವಲ ಶಾಂತಿಯನ್ನು ಕಾಪಾಡುವುದಷ್ಟೇ ಅಲ್ಲದೆ, ವಿವಿಧ ದೇಶಗಳ ನಾಗರಿಕರಿಗೆ ವೈದ್ಯಕೀಯ ನೆರವು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾನವೀಯ ಸಹಾಯವನ್ನು ಒದಗಿಸಿದ್ದಾರೆ ಎಂದು ಅವರು ತಿಳಿಸಿದರು. ಸೇನೆಯ ಸೇವೆಯನ್ನು ಶ್ಲಾಘಿಸಿದ ಅವರು, “ನಮ್ಮ ಸೇನೆಯು ಜಗತ್ತಿಗೆ ಶಾಂತಿಯ ದೂತನಾಗಿ ಹೊರಹೊಮ್ಮಿದೆ. ಇದು 'ವಸುಧೈವ ಕುಟುಂಬಕಂ' ಎಂಬ ಭಾರತದ ಶ್ರೇಷ್ಠ ತತ್ತ್ವವನ್ನು ಮತ್ತಷ್ಟು ಬಲಪಡಿಸಿದೆ,” ಎಂದು ಹೇಳಿದರು.

ಮಾತೃಭೂಮಿಯ ಸೇವೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮುಡಿಪಾಗಿಟ್ಟ ನಿವೃತ್ತ ಸೈನಿಕರ ಕಲ್ಯಾಣಕ್ಕಾಗಿ ಸರ್ಕಾರವು ಬದ್ಧವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಪುನರುಚ್ಚರಿಸಿದರು. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಮಾತನಾಡುತ್ತಾ, “ಹಿಂದೆ ಮಹಿಳೆಯರನ್ನು ಸಶಸ್ತ್ರ ಪಡೆಗಳಲ್ಲಿ ಕೇವಲ ಬೆಂಬಲಿತ ಪಾತ್ರಗಳಿಗೆ ಮಾತ್ರ ನೇಮಿಸಿಕೊಳ್ಳಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಅವರ ಪಾತ್ರವನ್ನು ವಿಸ್ತರಿಸುವ ದೃಷ್ಟಿಕೋನ ಹೊಂದಿದ್ದರು. ಈಗ ಸೇನೆಯಲ್ಲಿ ಮಹಿಳೆಯರಿಗೆ 'ಖಾಯಂ ಕಮಿಷನ್' ನೀಡಲಾಗುತ್ತಿದೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಕೂಡ ಮಹಿಳೆಯರಿಗೆ ಬಾಗಿಲು ತೆರೆದಿದೆ. ಸಶಸ್ತ್ರ ಪಡೆಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ನಿರಂತರವಾಗಿ ಸಮಾನ ಅವಕಾಶಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ,” ಎಂದು ಅವರು ಹೇಳಿದರು.
ಸಶಸ್ತ್ರ ಪಡೆಗಳಿಗೆ ಸೇರುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ರಕ್ಷಣಾ ಸಚಿವರು ಯುವಜನತೆಗೆ ಕರೆ ನೀಡಿದರು. “ಸೇನೆಗೆ ಸೇರಲು ಕೇವಲ ದೈಹಿಕ ಶಕ್ತಿ ಮಾತ್ರ ಸಾಲದು. ಮಾನಸಿಕ ಸಾಮರ್ಥ್ಯ, ನೈತಿಕ ಧೈರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನಾಯಕತ್ವದಂತಹ ಗುಣಗಳು ಅತ್ಯಗತ್ಯ. ಯುವಜನರು ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು,” ಎಂದು ಅವರು ಕಿವಿಮಾತು ಹೇಳಿದರು. ಸೈನಿಕರ ಕುಟುಂಬಗಳ ಹಿತರಕ್ಷಣೆ ಮಾಡುವುದು ನಾಗರಿಕರ ಕರ್ತವ್ಯವಾಗಿದೆ ಎಂದರು. ಸಶಸ್ತ್ರ ಪಡೆಗಳ ತ್ಯಾಗವು ವ್ಯರ್ಥವಾಗದಂತೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು; ಏಕೆಂದರೆ ಸಮೃದ್ಧ ಮತ್ತು ಶಕ್ತಿಯುತ ರಾಷ್ಟ್ರ ಮಾತ್ರ ತನ್ನ ಸೈನ್ಯವನ್ನು ಬಲಪಡಿಸಲು ಸಾಧ್ಯ ಎಂದು ಶ್ರೀ ರಾಜನಾಥ್ ಸಿಂಗ್ ತಿಳಿಸಿದರು.

ಶ್ರೀ ರಾಜನಾಥ್ ಸಿಂಗ್ ಅವರ ಜೈಪುರ ಭೇಟಿಯು ಜೈಪುರ ಮಿಲಿಟರಿ ಸ್ಟೇಷನ್ ನಲ್ಲಿ ಸೈನಿಕರೊಂದಿಗಿನ ಸಂವಾದವನ್ನು ಒಳಗೊಂಡಿತ್ತು. ನಂತರ ದಕ್ಷಿಣ ಪಶ್ಚಿಮ ಕಮಾಂಡ್ ನ ಆಶ್ರಯದಲ್ಲಿ ಭೂಸೇನಾ ದಿನಾಚರಣೆಯ ಭಾಗವಾಗಿ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶೌರ್ಯ, ಸಂಪ್ರದಾಯ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪ್ರದರ್ಶಿಸುವ ‘ಶೌರ್ಯ ಸಂಧ್ಯಾ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ಅಚಲ ಮನೋಭಾವವನ್ನು ಗೌರವಿಸಿತು, ಜೊತೆಗೆ ಸಶಸ್ತ್ರ ಪಡೆಗಳು ಮತ್ತು ನಾಗರಿಕರ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಬಲಪಡಿಸಿತು.
ಈ ಕಾರ್ಯಕ್ರಮವು ಪ್ಯಾರಾಮೋಟರ್ ಪ್ರದರ್ಶನ ಮತ್ತು ಬಲೂನ್ ಗಳನ್ನು ಹಾರಿಸುವ ಮೂಲಕ ಪ್ರಾರಂಭವಾಯಿತು. ಕಳರಿಪಯಟ್ಟು ಮತ್ತು ಮಲ್ಲಕಂಬ ಸೇರಿದಂತೆ ರೋಮಾಂಚಕ ಸಮರ ಕಲೆಗಳು ಮತ್ತು ಸಾಂಪ್ರದಾಯಿಕ ಕ್ರೀಡಾ ಪ್ರದರ್ಶನಗಳು ಭಾರತೀಯ ಸೇನೆಯ ದೈಹಿಕ ಪರಾಕ್ರಮ, ಶಿಸ್ತು ಮತ್ತು ಶ್ರೀಮಂತ ಸಮರ ಪರಂಪರೆಯನ್ನು ಪ್ರದರ್ಶಿಸಿದವು. 30 ಸದಸ್ಯರ ನೇಪಾಳದ ಸೇನಾ ಬ್ಯಾಂಡ್‌ನ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವರು ಬ್ಯಾಂಡ್ ತಂಡವನ್ನು ಸನ್ಮಾನಿಸಿದರು.

ಈ ಸಂಜೆಯ ಕಾರ್ಯಕ್ರಮವು ‘ಆಪರೇಷನ್ ಸಿಂಧೂರ್’ನ ಅದ್ಭುತ ಮರುಚಿತ್ರಣದೊಂದಿಗೆ ಮುಕ್ತಾಯಗೊಂಡಿತು. ಇದು ಸಿಂಕ್ರೊನೈಸ್ ಮಾಡಿದ ದೃಶ್ಯ ಮತ್ತು ಧ್ವನಿ ಪ್ರದರ್ಶನವಾಗಿತ್ತು. ಇದರ ಬೆನ್ನಲ್ಲೇ ನಡೆದ ಆಕರ್ಷಕ ಡ್ರೋನ್ ಪ್ರದರ್ಶನವು ಪ್ರೇಕ್ಷಕರಲ್ಲಿ ಸ್ಫೂರ್ತಿ ತುಂಬಿತು ಮತ್ತು ಅವರನ್ನು ಮಂತ್ರಮುಗ್ಧಗೊಳಿಸಿತು.
ಇದೇ ಕಾರ್ಯಕ್ರಮದ ಭಾಗವಾಗಿ 50 ‘ನಮನ್’ (NAMAN) ಕೇಂದ್ರಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಾಯಿತು. ‘ಪ್ರಾಜೆಕ್ಟ್ ನಮನ್’ ಅನ್ನು ಸೇನಾ ನಿವೃತ್ತರು, ಪಿಂಚಣಿದಾರರು, ವೀರ ನಾರಿಯರು ಮತ್ತು ಮೃತರ ವಾರಸುದಾರರಿಗೆ ಸಮರ್ಪಿತ ಬೆಂಬಲ ಮತ್ತು ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಒಂದೇ ಸೂರಿನಡಿ ಮತ್ತು ಅನುಕೂಲಕರವಾದ ಸ್ಥಳದಲ್ಲಿ ‘ಸ್ಪರ್ಶ್’ (SPARSH) ಆಧಾರಿತ ಪಿಂಚಣಿ ಸೇವೆಗಳು, ಸರ್ಕಾರದಿಂದ ನಾಗರಿಕರಿಗೆ ದೊರೆಯುವ ಸೇವೆಗಳು ಮತ್ತು ವ್ಯವಹಾರದಿಂದ ಗ್ರಾಹಕರಿಗೆ ದೊರೆಯುವ ಸೇವೆಗಳನ್ನು ಒದಗಿಸುತ್ತದೆ. ಇದು ಡಿಜಿಟಲ್ ಪಿಂಚಣಿ ವ್ಯವಸ್ಥೆಯಾದ ಸ್ಪರ್ಶ್ (System for Pension Administration Raksha) ಅನುಷ್ಠಾನವನ್ನು ಕೇಂದ್ರವಾಗಿರಿಸಿಕೊಂಡಿದೆ. ದೇಶಾದ್ಯಂತ ಇರುವ ನಿವೃತ್ತ ಸೈನಿಕರು ಮತ್ತು ವಾರಸುದಾರರಿಗೆ ಸುಲಭವಾಗಿ ಲಭ್ಯವಾಗುವ ಸಹಾಯ ಕೇಂದ್ರಗಳ ನಿರ್ಣಾಯಕ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಇದು ಸ್ವಾಗತ ಮತ್ತು ಸೌಲಭ್ಯ ಕೇಂದ್ರಗಳ ಸ್ಥಾಪನೆಯನ್ನು ಒಳಗೊಂಡಿದೆ.

ಈ ಕಾರ್ಯಕ್ರಮದಲ್ಲಿ ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸನ್ ರಾವ್ ಬಾಗ್ಡೆ, ಮಿಜೋರಾಂ ರಾಜ್ಯಪಾಲರಾದ ಜನರಲ್ (ಡಾ.) ವಿಜಯ್ ಕುಮಾರ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ರಾಜಸ್ಥಾನದ ಉಪಮುಖ್ಯಮಂತ್ರಿಗಳಾದ ಶ್ರೀಮತಿ ದಿಯಾ ಕುಮಾರಿ ಮತ್ತು ಶ್ರೀ ಪ್ರೇಮ್ ಚಂದ್ ಬೈರ್ವಾ, ದಕ್ಷಿಣ ಪಶ್ಚಿಮ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್, ಇತರ ಹಿರಿಯ ಸೇನಾ ಅಧಿಕಾರಿಗಳು, ನಿವೃತ್ತ ಸೈನಿಕರು, ಮೃತರ ವಾರಸುದಾರರು, ನಾಗರಿಕ ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಪಾಲ್ಗೊಂಡಿದ್ದರು.
*****
(रिलीज़ आईडी: 2215107)
आगंतुक पटल : 9