ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ
ಭಯೋತ್ಪಾದನಾ ಮೂಲಸೌಕರ್ಯ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ಗುರಿಯಾಗಿಸಿಕೊಂಡು ಭಯೋತ್ಪಾದನಾ ನಿಗ್ರಹ (CT) ಕಾರ್ಯಾಚರಣೆಗಳು ಮಿಷನ್ ಮೋಡ್ ನಲ್ಲಿ ಮುಂದುವರಿಯಬೇಕು
ಮೋದಿ ಸರ್ಕಾರದ ನಿರಂತರ ಮತ್ತು ಸಂಘಟಿತ ಪ್ರಯತ್ನಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲವು ಜರ್ಜರಿತವಾಗಿದೆ
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸನ್ನಿವೇಶವನ್ನು ಬಲಪಡಿಸುವಲ್ಲಿ ಭದ್ರತಾ ಏಜೆನ್ಸಿಗಳು ಕೈಗೊಂಡಿರುವ ಪ್ರಯತ್ನಗಳನ್ನು ಕೇಂದ್ರ ಗೃಹ ಸಚಿವರು ಶ್ಲಾಘಿಸಿದರು
प्रविष्टि तिथि:
08 JAN 2026 9:16PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ದಳದ (IB) ನಿರ್ದೇಶಕರು, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPFs) ಮುಖ್ಯಸ್ಥರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಭಯೋತ್ಪಾದನೆಯ ವಿರುದ್ಧದ 'ಶೂನ್ಯ ಸಹಿಷ್ಣುತೆ' (Zero Tolerance) ನೀತಿಯನ್ನು ಪುನರುಚ್ಚರಿಸಿದ ಶ್ರೀ ಶಾ ಅವರು, ಮೋದಿ ಸರ್ಕಾರದ ನಿರಂತರ ಮತ್ತು ಸಂಘಟಿತ ಪ್ರಯತ್ನಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲವು (Terror Eco-system) ದುರ್ಬಲಗೊಂಡಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸನ್ನಿವೇಶವನ್ನು ಬಲಪಡಿಸುವಲ್ಲಿ ಭದ್ರತಾ ಏಜೆನ್ಸಿಗಳು ಕೈಗೊಂಡಿರುವ ಪ್ರಯತ್ನಗಳನ್ನು ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಶ್ಲಾಘಿಸಿದರು. ಭಯೋತ್ಪಾದನಾ ಮೂಲಸೌಕರ್ಯ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ಗುರಿಯಾಗಿಸಿಕೊಂಡು ಭಯೋತ್ಪಾದನಾ ನಿಗ್ರಹ (CT) ಕಾರ್ಯಾಚರಣೆಗಳನ್ನು ಮಿಷನ್ ಮೋಡ್ ನಲ್ಲಿ ಮುಂದುವರಿಸಬೇಕು ಎಂದು ಅವರು ತಿಳಿಸಿದರು.
370ನೇ ವಿಧಿಯ ರದ್ಧತಿಯ ನಂತರ ಸಾಧಿಸಿದ ಪ್ರಗತಿಯನ್ನು ಕಾಯ್ದುಕೊಳ್ಳಲು ಮತ್ತು ಶೀಘ್ರದಲ್ಲೇ 'ಭಯೋತ್ಪಾದನಾ ಮುಕ್ತ ಜಮ್ಮು ಮತ್ತು ಕಾಶ್ಮೀರ' ಗುರಿಯನ್ನು ತಲುಪಲು ಎಲ್ಲಾ ಭದ್ರತಾ ಏಜೆನ್ಸಿಗಳು ಜಾಗರೂಕರಾಗಿರಬೇಕು ಹಾಗೂ ಸಮನ್ವಯದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದು ಕೇಂದ್ರ ಗೃಹ ಸಚಿವರು ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
*****
(रिलीज़ आईडी: 2212742)
आगंतुक पटल : 8