ಕೃಷಿ ಸಚಿವಾಲಯ
ವಿಕಸಿತ ಭಾರತ - ಜಿ ರಾಮ್ ಜಿ ಕಾಯ್ದೆ ಸ್ವಾವಲಂಬಿ ಗ್ರಾಮಗಳಿಗೆ ಅಡಿಪಾಯ ಹಾಕುತ್ತದೆ: ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್
ಈರೋಡ್ ನಲ್ಲಿ ರೈತರು ಮತ್ತು ಕಾರ್ಮಿಕರೊಂದಿಗೆ ಸಂವಾದದ ನಡೆಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕಾರ್ಮಿಕರು ಮತ್ತು ಕೆಲಸಗಾರರಿಗೆ ಮೀಸಲಾದ ಹಣವನ್ನು ಲೂಟಿ ಮಾಡಲು ಯಾರಿಗೂ ಬಿಡುವುದಿಲ್ಲ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಈರೋಡ್ ನಲ್ಲಿ ಅರಿಶಿನ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಸ್ಥಾಪಿಸಲು ಐಸಿಎಆರ್ ಗೆ ನಿರ್ದೇಶನ
प्रविष्टि तिथि:
05 JAN 2026 7:04PM by PIB Bengaluru
ವಿಕಸಿತ ಭಾರತ – ಜಿ ರಾಮ್ ಜಿ ಕಾಯ್ದೆಯು ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಈರೋಡ್ ನಲ್ಲಿ ತಿಳಿಸಿದರು.
ಈರೋಡ್ ನಲ್ಲಿ ಕಾರ್ಮಿಕರು ಮತ್ತು ಕೆಲಸಗಾರರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಈ ಮಹತ್ವಾಕಾಂಕ್ಷೆಯ ಉಪಕ್ರಮದ ವಿವಿಧ ನಿಬಂಧನೆಗಳನ್ನು ವಿವರಿಸಿದರು. ಈ ಕಾಯ್ದೆಯು ಉದ್ಯೋಗ ಸೃಷ್ಟಿಯನ್ನು ಬಲಪಡಿಸಲು, ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲು ಮತ್ತು ಗ್ರಾಮಗಳಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಕೈಗೊಂಡಿರುವ ಒಂದು ದೃಢವಾದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಸಾರ್ವಜನಿಕ ಸಹಭಾಗಿತ್ವದ ಮೂಲಕ ಮಾತ್ರ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಗ್ರಾಮಗಳ ಗುರಿಯನ್ನು ತಲುಪಲು ಸಾಧ್ಯ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದರು.
ಹಳೆಯ ವ್ಯವಸ್ಥೆಯಡಿಯಲ್ಲಿ, ಮನರೇಗಾ ಯೋಜನೆಯು 100 ದಿನಗಳ ಉದ್ಯೋಗದ ಖಾತರಿಯನ್ನು ನೀಡುತ್ತಿತ್ತು, ಆದರೆ ಅನೇಕ ಸ್ಥಳಗಳಲ್ಲಿ ಕೆಲಸವು ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ ಮತ್ತು ವೇತನವನ್ನೂ ಸಹ ಕೂಡಲೇ ಪಾವತಿಸಲಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಹೇಳಿದರು. ಇದನ್ನು ಗಂಭೀರ ವಿಷಯ ಎಂದು ಬಣ್ಣಿಸಿದ ಅವರು, ಇಂತಹ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರವು ‘ವಿಕಸಿತ ಭಾರತ – ಜಿ ರಾಮ್ ಜಿ’ ಕಾಯ್ದೆಯ ಮೂಲಕ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಹೊಸ ಕಾಯ್ದೆಯಡಿ, ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗೆ ಕೆಲಸ ನೀಡದಿದ್ದರೆ, ಕಾರ್ಮಿಕರು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಅದೇ ರೀತಿ, ವೇತನ ಪಾವತಿಯಲ್ಲಿ 15 ದಿನಗಳಿಗಿಂತ ಹೆಚ್ಚು ವಿಳಂಬವಾದರೆ, ಅದಕ್ಕೆ ಬಡ್ಡಿಯನ್ನು ಸಹ ನೀಡಲಾಗುವುದು. ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ಪಾವತಿಸಲು ಮತ್ತು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಆಡಳಿತಾತ್ಮಕ ವೆಚ್ಚವನ್ನು ಶೇಕಡಾ 6 ರಿಂದ ಶೇಕಡಾ 9ಕ್ಕೆ ಹೆಚ್ಚಿಸಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು.
ಹೊಸ ಕಾಯ್ದೆಯಡಿ ಗ್ರಾಮ ಸಭೆಗಳಿಗೆ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ತಮ್ಮ ಗ್ರಾಮಗಳಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದನ್ನು ಇನ್ನು ಮುಂದೆ ಗ್ರಾಮ ಸಭೆಗಳೇ ನಿರ್ಧರಿಸಲಿವೆ. ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ಇನ್ನು ಮುಂದೆ ಚೆನ್ನೈ ಅಥವಾ ದೆಹಲಿಯಲ್ಲಿ ತೆಗೆದುಕೊಳ್ಳುವುದಿಲ್ಲ, ಬದಲಾಗಿ ಗ್ರಾಮ ಮಟ್ಟದಲ್ಲೇ ತೆಗೆದುಕೊಳ್ಳಲಾಗುವುದು ಎಂದು ಶ್ರೀ ಚೌಹಾಣ್ ಸ್ಪಷ್ಟಪಡಿಸಿದರು.
ಕೆಲವರು ಈ ಯೋಜನೆಯ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕಾರ್ಮಿಕರು ಮತ್ತು ಕೆಲಸಗಾರರಿಗೆ ಸಲ್ಲಬೇಕಾದ ಹಣವು ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಯೋಜನೆಯಲ್ಲಿ ಬದಲಾವಣೆಗಳನ್ನು ತಂದಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಈರೋಡ್ ನಲ್ಲಿ ಅರಿಶಿನ ಪರೀಕ್ಷಾ ಪ್ರಯೋಗಾಲಯದ ಘೋಷಣೆ
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈರೋಡ್ ನ ಪ್ರಸಿದ್ಧ ಅರಿಶಿನ ಮಾರುಕಟ್ಟೆಗೆ ಭೇಟಿ ನೀಡಿ, ಅರಿಶಿನ ಬೆಳೆಯುವ ರೈತರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ, ಅವರು ಈರೋಡ್ ನಲ್ಲಿ ಅರಿಶಿನ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದರು ಮತ್ತು ಈ ಬಗ್ಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಈ ಸೌಲಭ್ಯವು ಗುಣಮಟ್ಟದ ಪರೀಕ್ಷೆ, ಪ್ರಮಾಣೀಕರಣ ಮತ್ತು ಅರಿಶಿನದ ಉತ್ತಮ ಮಾರುಕಟ್ಟೆ ಪ್ರಕ್ರಿಯೆಯ ಮೂಲಕ ರೈತರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಅರಿಶಿನ ಮಂಡಳಿಯ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವ ಭರವಸೆಯನ್ನೂ ಕೇಂದ್ರ ಸಚಿವರು ಈರೋಡ್ ನಲ್ಲಿ ನೀಡಿದರು. ಈ ವಿಷಯವು ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಬರುತ್ತದೆ, ಆದರೂ ಕೃಷಿ ಸಚಿವನಾಗಿ ನಾನು ವೈಯಕ್ತಿಕವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಇದು ಅರಿಶಿನ ಬೆಳೆಗಾರರಿಗೆ ನೀತಿ ನಿರೂಪಣೆಯ ಬೆಂಬಲ, ಸುಧಾರಿತ ಮಾರುಕಟ್ಟೆ ಪ್ರವೇಶ ಮತ್ತು ಹೊಸ ರಫ್ತು ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಈರೋಡ್ ಪ್ರದೇಶದಲ್ಲಿ ಶೀತಲೀಕರಣ ಘಟಕಗಳ ಅಗತ್ಯವು ಅತ್ಯಂತ ಪ್ರಮುಖವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಬಹುದು ಮತ್ತು ಈ ಉದ್ದೇಶಕ್ಕಾಗಿ ಆರ್ ಕೆ ವಿ ವೈ (ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ) ನಿಧಿಯನ್ನು ಬಳಸಿಕೊಳ್ಳುವಂತೆ ತಮಿಳುನಾಡು ಸರ್ಕಾರವನ್ನು ಕೋರಲಾಗುವುದು ಎಂದು ಅವರು ತಿಳಿಸಿದರು. ಅರಿಶಿನದ ಅಕ್ರಮ ಸಾಗಣೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೆಹಲಿಯಲ್ಲಿ ಸಭೆ ನಡೆಸಲಾಗುವುದು ಎಂದರು. ಉತ್ತಮ ಗುಣಮಟ್ಟದ ಬೀಜವು ಕೃಷಿಯ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿದ ಅವರು, ಐಸಿಎಆರ್ ಮೂಲಕ ಬೀಜ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸಿದರು.
ಮಹಿಳಾ ರೈತರೊಂದಿಗೆ ಸಂವಾದ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸುವ 100ಕ್ಕೂ ಹೆಚ್ಚು ಮಳಿಗೆಗಳನ್ನು ಅವರು ವೀಕ್ಷಿಸಿದರು ಮತ್ತು ರೈತರು ಹಾಗೂ ಉದ್ಯಮಿಗಳೊಂದಿಗೆ ಅವರ ಉತ್ಪನ್ನಗಳು, ಗುಣಮಟ್ಟ ಮತ್ತು ಭವಿಷ್ಯದ ಸಾಧ್ಯತೆಗಳ ಬಗ್ಗೆ ಸಂವಾದ ನಡೆಸಿದರು. ಶ್ರೀ ಚೌಹಾಣ್ ಅವರು 1,000ಕ್ಕೂ ಹೆಚ್ಚು ಮಹಿಳಾ ರೈತರೊಂದಿಗೆ ಚರ್ಚೆ ನಡೆಸಿದರಲ್ಲದೆ, ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದರು.





*****
(रिलीज़ आईडी: 2211652)
आगंतुक पटल : 24