ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಯ (ಇಸಿಎಂಎಸ್) 3ನೇ ಕಂತಿನ ಅಡಿಯಲ್ಲಿ 22 ಪ್ರಸ್ತಾವನೆಗಳನ್ನು ಸರ್ಕಾರ ಅನುಮೋದಿಸಿದೆ
41,863 ಕೋಟಿ ರೂ.ಗಳ ಹೂಡಿಕೆಯು 33,791 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ
ಈ ಕಾರ್ಯಕ್ರಮವು ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ, ದೇಶೀಯ ಬೇಡಿಕೆಯ ಹೆಚ್ಚಿನ ಭಾಗವನ್ನು ದೇಶೀಯವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
प्रविष्टि तिथि:
02 JAN 2026 6:04PM by PIB Bengaluru
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಈ ಹಿಂದೆ ಘೋಷಿಸಿದ್ದ 12,704 ಕೋಟಿ ರೂಪಾಯಿ ಮೌಲ್ಯದ 24 ಅರ್ಜಿಗಳ ಅನುಮೋದನೆಯ ಮುಂದುವರಿದ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ ಇನ್ನೂ 22 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಇವುಗಳು 41,863 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆ ಮತ್ತು 2,58,152 ಕೋಟಿ ರೂಪಾಯಿಗಳ ಅಂದಾಜು ಉತ್ಪಾದನೆಯ ಗುರಿಯನ್ನು ಹೊಂದಿವೆ. ಈ ಅನುಮೋದನೆಗಳು 33,791 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಈ ಅನುಮೋದನೆಗಳು 11 ಗುರಿ ವಿಭಾಗದ ಉತ್ಪನ್ನಗಳ ತಯಾರಿಕೆಯನ್ನು ಒಳಗೊಂಡಿವೆ. ಇವು ಮೊಬೈಲ್ ತಯಾರಿಕೆ, ಟೆಲಿಕಾಂ, ಗ್ರಾಹಕ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರದ ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಮತ್ತು ಐಟಿ ಹಾರ್ಡ್‌ವೇರ್ ಉತ್ಪನ್ನಗಳಂತಹ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತವೆ. ಆ 11 ಉತ್ಪನ್ನಗಳು ಈ ಕೆಳಗಿನಂತಿವೆ:
- 5 ಮೂಲ ಘಟಕಗಳು: ಪಿಸಿಬಿ, ಕೆಪಾಸಿಟರ್ ಗಳು, ಕನೆಕ್ಟರ್ ಗಳು, ಎನ್‌ಕ್ಲೋಸರ್ಸ್ ಮತ್ತು ಲಿಥಿಯಂ-ಅಯಾನ್ ಸೆಲ್.
- 3 ಉಪ-ಜೋಡಣೆಗಳು: ಕ್ಯಾಮೆರಾ ಮಾಡ್ಯೂಲ್, ಡಿಸ್‌ಪ್ಲೇ ಮಾಡ್ಯೂಲ್ ಮತ್ತು ಆಪ್ಟಿಕಲ್ ಟ್ರಾನ್ಸ್‌ಸೀವರ್.
- 3 ಪೂರೈಕೆ ಸರಪಳಿ ವಸ್ತುಗಳು: ಅಲ್ಯೂಮಿನಿಯಂ ಎಕ್ಸ್‌ಟ್ರೂಶನ್, ಆನೋಡ್ ಮೆಟೀರಿಯಲ್ ಮತ್ತು ಲ್ಯಾಮಿನೇಟ್ - ತಾಮ್ರ ಲೇಪಿತ

ಪಿಸಿಬಿ (ಎಚ್ ಡಿ ಐ ಗಳು ಒಳಗೊಂಡಂತೆ) ತಯಾರಿಕೆಗಾಗಿ 9 ಅರ್ಜಿದಾರರಿಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ ಇಂಡಿಯಾ ಸರ್ಕ್ಯೂಟ್ಸ್ ಪ್ರೈವೇಟ್ ಲಿಮಿಟೆಡ್, ವೈಟಲ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಸಿಗ್ನಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಎಪಿಟೋಮ್ ಕಾಂಪೊನೆಂಟ್ಸ್ ಪ್ರೈವೇಟ್ ಲಿಮಿಟೆಡ್, ಬಿಪಿಎಲ್ ಲಿಮಿಟೆಡ್, ಎಟಿ ಆಂಡ್ ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಸೆಂಟ್-ಕೆ ಸರ್ಕ್ಯೂಟ್ ಪ್ರೈವೇಟ್ ಲಿಮಿಟೆಡ್, ಸಿಪ್ಸಾ ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಶೋಗಿನಿ ಟೆಕ್ನೋಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ.
ಇದಲ್ಲದೆ, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಗಳಲ್ಲಿ ಇಂಧನ ಸಂಗ್ರಹಣೆ ಮತ್ತು ಪವರ್ ಕಂಡೀಷನಿಂಗ್ ಗೆ ಅತ್ಯಗತ್ಯವಾಗಿರುವ ಕೆಪಾಸಿಟರ್ ಗಳ ತಯಾರಿಕೆಗಾಗಿ, ಡೆಕಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ ಘಟಕಗಳು ಹಾಗೂ ವ್ಯವಸ್ಥೆಗಳ ಪ್ರಮುಖ ಜಾಗತಿಕ ತಯಾರಿಕಾ ಸಂಸ್ಥೆಯಾದ ಟಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಅನುಮೋದನೆ ನೀಡಲಾಗಿದೆ. ಅತಿ ವೇಗದ ಕನೆಕ್ಟರ್ ಗಳ ತಯಾರಿಕೆಗಾಗಿ, ಆಂಪೆನಾಲ್ ಹೈ ಸ್ಪೀಡ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಅನುಮೋದನೆ ನೀಡಲಾಗಿದೆ.
ಹಾಗೆಯೇ, ಮೊಬೈಲ್, ಐಟಿ ಹಾರ್ಡ್‌ವೇರ್ ಉತ್ಪನ್ನಗಳು ಮತ್ತು ಸಂಬಂಧಿತ ಸಾಧನಗಳ ಎನ್‌ಕ್ಲೋಸರ್ಸ್ ತಯಾರಿಕೆಗಾಗಿ, ಎಲೆಕ್ಟ್ರಾನಿಕ್ ಘಟಕಗಳ ಜಾಗತಿಕ ತಯಾರಿಕಾ ಸಂಸ್ಥೆಯಾದ ಯುಝಾನ್ ಟೆಕ್ನಾಲಜಿ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ವ್ಯವಸ್ಥೆಗಳ ಪ್ರಮುಖ ಭಾರತೀಯ ತಯಾರಿಕಾ ಸಂಸ್ಥೆಯಾದ ಮದರ್ ಸನ್ ಎಲೆಕ್ಟ್ರಾನಿಕ್ ಕಾಂಪೊನೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಮುಖ ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಕ ಹಾಗೂ ವಿಶ್ವಾಸಾರ್ಹ ಜಾಗತಿಕ ಬ್ರಾಂಡ್ ಆಗಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ, ಗ್ರಾಹಕ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್ ನಲ್ಲಿ ಮರುಪೂರಣ ಮಾಡಬಹುದಾದ ಇಂಧನ ಸಂಗ್ರಹ ಘಟಕಗಳಾಗಿ ಕಾರ್ಯನಿರ್ವಹಿಸುವ ಡಿಜಿಟಲ್ ಅಪ್ಲಿಕೇಶನ್‌ಗಳಿಗಾಗಿ ಲಿಥಿಯಂ-ಅಯಾನ್ ಸೆಲ್‌ಗಳ ತಯಾರಿಕೆಗಾಗಿ, ಲಿಥಿಯಂ-ಅಯಾನ್ ಸೆಲ್ ತಯಾರಿಕೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಎಟಿಎಲ್ ಬ್ಯಾಟರಿ ಟೆಕ್ನಾಲಜಿ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಅರ್ಜಿಯನ್ನು ಅನುಮೋದಿಸಲಾಗಿದೆ.
ಉಪ-ಜೋಡಣೆ (ಸಬ್ - ಅಸೆಂಬ್ಲಿ) ವಿಭಾಗದಲ್ಲಿ, ಆಪ್ಟಿಕಲ್ ಟ್ರಾನ್ಸ್‌ಸೀವರ್ (ಎಸ್ ಪಿ ಎಫ್) ತಯಾರಿಕೆಗಾಗಿ ಡಿಕ್ಸನ್ ಎಲೆಕ್ಟ್ರೋಕನೆಕ್ಟ್ ಪ್ರೈವೇಟ್ ಲಿಮಿಟೆಡ್ ಗೆ; ಕ್ಯಾಮೆರಾ ಮಾಡ್ಯೂಲ್ ಸಬ್ ಅಸೆಂಬ್ಲಿ ತಯಾರಿಕೆಗಾಗಿ ಕುನ್ಶನ್ ಕ್ಯೂ ಟೆಕ್ ಮೈಕ್ರೋಎಲೆಕ್ಟ್ರಾನಿಕ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಗೆ; ಮತ್ತು ವಿಶ್ವದ ಅಗ್ರಗಣ್ಯ ಎಲೆಕ್ಟ್ರಾನಿಕ್ಸ್ ಬ್ರಾಂಡ್‌ಗಳಲ್ಲಿ ಒಂದಾದ ಸ್ಯಾಮ್‌ಸಂಗ್ ಡಿಸ್‌ಪ್ಲೇ ನೋಯ್ಡಾ ಪ್ರೈವೇಟ್ ಲಿಮಿಟೆಡ್ ಗೆ ಡಿಸ್‌ಪ್ಲೇ ಮಾಡ್ಯೂಲ್ ಸಬ್-ಅಸೆಂಬ್ಲಿ ತಯಾರಿಕೆಗಾಗಿ ಅನುಮೋದನೆ ನೀಡಲಾಗಿದೆ.
ಇದಲ್ಲದೆ, ಎಲೆಕ್ಟ್ರಾನಿಕ್ಸ್ ತಯಾರಿಕಾ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಪಡಿಸಲು, ಲಿಥಿಯಂ-ಅಯಾನ್ ಸೆಲ್‌ಗಳ ಶಕ್ತಿ ಸಾಂದ್ರತೆ ಮತ್ತು ಜೀವನಚಕ್ರವನ್ನು ನಿರ್ಧರಿಸುವ ನಿರ್ಣಾಯಕ ವಸ್ತುವಾದ ಆನೋಡ್ ಮೆಟೀರಿಯಲ್ ತಯಾರಿಕೆಗಾಗಿ ಎನ್ ಪಿ ಎಸ್ ಪಿ ಎಲ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ಅನುಮೋದನೆ ನೀಡಲಾಗಿದೆ. ಪಿಸಿಬಿ ತಯಾರಿಕೆಗೆ ಅಗತ್ಯವಾದ ಮೂಲ ವಸ್ತುವಾಗಿರುವ ಮತ್ತು ಪಿಸಿಬಿ ತಯಾರಿಕೆಯ ಒಟ್ಟು ಸಾಮಗ್ರಿಗಳ ವೆಚ್ಚದಲ್ಲಿ ಸುಮಾರು ಶೇ. 30ರಷ್ಟು ಪಾಲನ್ನು ಹೊಂದಿರುವ ಲ್ಯಾಮಿನೇಟ್ - ತಾಮ್ರ ಲೇಪಿತ ತಯಾರಿಕೆಗಾಗಿ ವಿಪ್ರೋ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ, ಪ್ರಸ್ತುತ ಶೇ. 100 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿರುವ ಮೊಬೈಲ್ ಫೋನ್ ಗಳ ಎನ್‌ಕ್ಲೋಸರ್‌ಗಳಿಗಾಗಿ ಅಲ್ಯೂಮಿನಿಯಂ ಎಕ್ಸ್‌ಟ್ರೂಶನ್ ತಯಾರಿಸಲು ಹಿಂದಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಅನುಮೋದನೆ ನೀಡಲಾಗಿದೆ.

ಅನುಮೋದನೆ ಪಡೆದ ಘಟಕಗಳು ಎಂಟು ರಾಜ್ಯಗಳಲ್ಲಿ ಅಂದರೆ ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಹರಡಿಕೊಂಡಿವೆ. ಇದು ಭೌಗೋಳಿಕವಾಗಿ ಸಮತೋಲಿತ ಕೈಗಾರಿಕಾ ಬೆಳವಣಿಗೆ ಮತ್ತು ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ವಿಸ್ತರಣೆಯ ಮೇಲೆ ಸರ್ಕಾರ ಹೊಂದಿರುವ ಗಮನವನ್ನು ಪುನರುಚ್ಚರಿಸುತ್ತದೆ. ಇತ್ತೀಚಿನ ಅನುಮೋದನೆಗಳೊಂದಿಗೆ, ಈವರೆಗೆ ಇಸಿಎಂಎಸ್ ಅಡಿಯಲ್ಲಿ 11 ರಾಜ್ಯಗಳಲ್ಲಿ ಒಟ್ಟು 46 ಅರ್ಜಿಗಳನ್ನು ಅನುಮೋದಿಸಲಾಗಿದೆ. ಇವುಗಳ ಒಟ್ಟು ಹೂಡಿಕೆಯು 54,567 ಕೋಟಿ ರೂಪಾಯಿಗಳಾಗಿದ್ದು, ಸುಮಾರು 51,000 ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುತ್ತಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, "ಈ ಕಾರ್ಯಕ್ರಮವು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ, ಇದು ದೇಶೀಯ ಬೇಡಿಕೆಯ ಬಹುದೊಡ್ಡ ಭಾಗವನ್ನು ಸ್ವದೇಶಿಯವಾಗಿಯೇ ಪೂರೈಸಲು ಅನುವು ಮಾಡಿಕೊಟ್ಟಿದೆ" ಎಂದು ಹೇಳಿದರು. ಎಲೆಕ್ಟ್ರಾನಿಕ್ಸ್ ಕ್ಷೇತ್ರದ ದೃಷ್ಟಿಕೋನವನ್ನು ವಿವರಿಸುತ್ತಾ, "ಅನೇಕ ಇತರ ಆರ್ಥಿಕತೆಗಳಲ್ಲಿ ಬೆಳವಣಿಗೆ ಸ್ಥಗಿತಗೊಂಡಾಗಲೂ, ಅಂದರೆ 2047ರ ವೇಳೆಗೆ ಭಾರತವು ಇನ್ನೂ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿರುತ್ತದೆ" ಎಂದು ತಿಳಿಸಿದರು. ಭಾರತವು 2100 ರವರೆಗೆ ನಿರಂತರವಾಗಿ ಬೆಳೆಯುವ ಏಕೈಕ ಆರ್ಥಿಕತೆಯಾಗಲಿದೆ, ಆದ್ದರಿಂದ ಈ ಬೆಳವಣಿಗೆಯು ಮುಂದುವರಿಯಲು ಎಲ್ಲಾ ರಚನಾತ್ಮಕ ಅಡಿಪಾಯಗಳನ್ನು ಈಗಲೇ ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಅವರು ಮಾತನಾಡಿ, "ಭಾರತವನ್ನು ಎಲೆಕ್ಟ್ರಾನಿಕ್ಸ್ ತಯಾರಿಕೆಯ ಮುಂದಿನ ದೊಡ್ಡ ತಾಣವಾಗಿ ನೋಡಲಾಗುತ್ತಿದೆ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡುವೆ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ" ಎಂದು ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಶ್ರೀ ಎಸ್ ಕೃಷ್ಣನ್ ಅವರು ಮಾತನಾಡಿ, "ಪ್ರಸ್ತುತ ಹಂತದಲ್ಲಿ ಅನುಮೋದಿಸಲಾದ ಅರ್ಜಿಗಳು ದೇಶದ ಎಲೆಕ್ಟ್ರಾನಿಕ್ ತಯಾರಿಕಾ ಪರಿಸರ ವ್ಯವಸ್ಥೆಗೆ ಅತ್ಯಂತ ಪ್ರಮುಖವಾಗಿವೆ ಮತ್ತು ಇವು ಇಸಿಎಂಎಸ್ ನ ಮಹತ್ವದ ಗುರಿಗಳಲ್ಲಿ ಒಂದನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತವೆ" ಎಂದು ತಿಳಿಸಿದರು.
ಈ ಅನುಮೋದನೆಗಳು ದೇಶೀಯ ಪೂರೈಕೆ ಸರಪಳಿಯನ್ನು ಗಣನೀಯವಾಗಿ ಬಲಪಡಿಸಲಿವೆ, ನಿರ್ಣಾಯಕ ಎಲೆಕ್ಟ್ರಾನಿಕ್ ಬಿಡಿಭಾಗಗಳಿಗಾಗಿ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿವೆ ಮತ್ತು ಭಾರತದಲ್ಲಿ ಉನ್ನತ ಮೌಲ್ಯದ ಉತ್ಪಾದನಾ ಸಾಮರ್ಥ್ಯಗಳ ಬೆಳವಣಿಗೆಯನ್ನು ಬೆಂಬಲಿಸಲಿವೆ.
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿನ ಈ ಅನುಮೋದನೆಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪಯಣದಲ್ಲಿ ದಿಟ್ಟ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದ್ದು, ಭಾರತವನ್ನು ಎಲೆಕ್ಟ್ರಾನಿಕ್ಸ್ ತಯಾರಿಕೆಯ ಜಾಗತಿಕ ಹಬ್ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿವೆ.
*****
(रिलीज़ आईडी: 2210991)
आगंतुक पटल : 16