ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು
ಭಾರತದಂತಹ ಯುವ ರಾಷ್ಟ್ರಕ್ಕೆ, ಕೃತಕ ಬುದ್ಧಿಮತ್ತೆ (ಎ.ಐ.) ಕೇವಲ ತಂತ್ರಜ್ಞಾನ ಮಾತ್ರವಲ್ಲ, ಅದು ಸಕಾರಾತ್ಮಕ ಬದಲಾವಣೆಗೆ ಒಂದು ಅದ್ಭುತ ಅವಕಾಶ: ರಾಷ್ಟ್ರಪತಿ ದ್ರೌಪದಿ ಮುರ್ಮು
प्रविष्टि तिथि:
01 JAN 2026 2:28PM by PIB Bengaluru
ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಎಂ.ಎಸ್.ಡಿ.ಇ.ಯ “ಸೋರ್” (ಎಸ್.ಒ.ಎ.ಆರ್.) (ಎ.ಐ. ಸಿದ್ಧತೆಗಾಗಿ ಕೌಶಲ್ಯ) ಉಪಕ್ರಮದ ಅಡಿಯಲ್ಲಿ #SkilltheNation (ಸ್ಕಿಲ್ ದ ನೇಶನ್ ) ಸವಾಲನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಒಡಿಶಾದ ರೈರಂಗಪುರದಲ್ಲಿಇಗ್ನೋ ( IGNOU) ಪ್ರಾದೇಶಿಕ ಕೇಂದ್ರ ಮತ್ತು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಕೃತಕ ಬುದ್ಧಿಮತ್ತೆ ವಿಶ್ವಾದ್ಯಂತ ಆರ್ಥಿಕತೆ ಮತ್ತು ಸಮಾಜಗಳನ್ನು ಮರುರೂಪಿಸುತ್ತಿದೆ ಎಂದು ಹೇಳಿದರು. ನಾವು ಹೇಗೆ ಕಲಿಯುತ್ತೇವೆ, ಹೇಗೆ ಕೆಲಸ ಮಾಡುತ್ತೇವೆ, ಆಧುನಿಕ ಸೇವೆಗಳನ್ನು ಹೇಗೆ ಪ್ರವೇಶಿಸುತ್ತೇವೆ ಮತ್ತು ಮಾನವೀಯತೆಯ ದೊಡ್ಡ ಸವಾಲುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದನ್ನು ಇದು ಪರಿವರ್ತಿಸುತ್ತಿದೆ. ಭಾರತದಂತಹ ಯುವ ರಾಷ್ಟ್ರಕ್ಕೆ, ಎ.ಐ. ಕೇವಲ ತಂತ್ರಜ್ಞಾನವಲ್ಲ, ಅದು ಸಕಾರಾತ್ಮಕ ಬದಲಾವಣೆಗೆ ಒಂದು ಅದ್ಭುತ ಅವಕಾಶವಾಗಿದೆ ಎಂದರು.

ತಂತ್ರಜ್ಞಾನವು ಜನರನ್ನು ಸಬಲೀಕರಣಗೊಳಿಸಬೇಕು, ಒಳಗೊಳ್ಳುವಿಕೆಯನ್ನು/ಸೇರ್ಪಡೆಯನ್ನು ಉತ್ತೇಜಿಸಬೇಕು ಮತ್ತು ಎಲ್ಲರಿಗೂ ಅವಕಾಶಗಳನ್ನು ವಿಸ್ತರಿಸಬೇಕು ಎಂಬುದು ಭಾರತದ ಧೋರಣೆಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಎ.ಐ. ಬಳಕೆಯು ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಕಂದಕಗಳನ್ನು ನಿವಾರಿಸುವ ಗುರಿಯನ್ನು ಹೊಂದಿರಬೇಕು. ಅದರ ಪ್ರಯೋಜನಗಳು ಎಲ್ಲಾ ಹಿನ್ನೆಲೆ ಮತ್ತು ವಯಸ್ಸಿನ ಜನರನ್ನು, ವಿಶೇಷವಾಗಿ ಅಂಚಿನಲ್ಲಿರುವ ಸಮುದಾಯಗಳ ಜನರನ್ನು ತಲುಪುವಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದವರು ಪ್ರತಿಪಾದಿಸಿದರು.

ವಿದ್ಯಾರ್ಥಿಗಳು ಸಾಧ್ಯತೆಗಳು ಮತ್ತು ಅವಕಾಶಗಳಿಂದ ತುಂಬಿದ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ತಂತ್ರಜ್ಞಾನ, ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾಜಕ್ಕೆ ಸೇವೆ ಸಲ್ಲಿಸಲು, ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಇತರರನ್ನು ಸಬಲೀಕರಣಗೊಳಿಸಲು ಬಳಸಬೇಕು ಎಂಬುದನ್ನು ಅವರು ನೆನಪಿನಲ್ಲಿಡಬೇಕೆಂದು ರಾಷ್ಟ್ರಪತಿ ಆಗ್ರಹಿಸಿದರು. ಎ.ಐ. ಕಲಿಕಾ ಮಾಡ್ಯೂಲ್‌ಗಳನ್ನು ಪೂರ್ಣಗೊಳಿಸಿದ ಸಂಸತ್ ಸದಸ್ಯರನ್ನು ಅವರು ಶ್ಲಾಘಿಸಿದರು. ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಕಲಿಯುವ ಮೂಲಕ, ಅವರು ಕಲಿಕೆಯ ಮೂಲಕ ನಾಯಕತ್ವದ ಉದಾಹರಣೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಭಾರತದ ಆರ್ಥಿಕತೆಗೆ ಕೃತಕ ಬುದ್ಧಿಮತ್ತೆ ಬೆಳವಣಿಗೆಯ ಚಾಲಕಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಮುಂಬರುವ ದಶಕದಲ್ಲಿ, ದೇಶದ ಜಿ.ಡಿ.ಪಿ., ಉದ್ಯೋಗ ಮತ್ತು ಒಟ್ಟಾರೆ ಉತ್ಪಾದಕತೆಯಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸುತ್ತದೆ. ಡೇಟಾ ಸೈನ್ಸ್, ಎ.ಐ. ಎಂಜಿನಿಯರಿಂಗ್ ಮತ್ತು ಡೇಟಾ ವಿಶ್ಲೇಷಣೆಯಂತಹ ಕೌಶಲ್ಯಗಳು ದೇಶದ ಎ.ಐ. ಪ್ರತಿಭಾ ಪೂಲ್ ಅನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸರ್ಕಾರವು ವಿವಿಧ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಭಾರತವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಲ್ಲದೆ ಅದರ ಮೂಲಕ ಜವಾಬ್ದಾರಿಯುತ ಭವಿಷ್ಯವನ್ನು ರೂಪಿಸುತ್ತದೆ ಎಂಬುದನ್ನೂ ಖಚಿತಪಡಿಸುತ್ತಿದೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಎಲ್ಲರೂ ಬದ್ಧತೆಯೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಆಗ್ರಹಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಭಾರತವನ್ನು ಜ್ಞಾನದ ಸೂಪರ್ ಪವರ್ ಮಾಡಲು ಮತ್ತು ತಂತ್ರಜ್ಞಾನ ಆಧಾರಿತ, ಅಂತರ್ಗತ ಹಾಗು ಸಮೃದ್ಧ ಭಾರತವನ್ನು ನಿರ್ಮಿಸಲು ನಾವು ಕೊಡುಗೆ ನೀಡಬೇಕು ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಆಯೋಜಿಸುತ್ತಿರುವ ಈ ಕಾರ್ಯಕ್ರಮವು, ಎ.ಐ.-ಚಾಲಿತ ಭವಿಷ್ಯಕ್ಕಾಗಿ ಭಾರತದ ಕಾರ್ಯಪಡೆಯನ್ನು ಸಿದ್ಧಪಡಿಸುವ ಕಡೆಗೆ ಸರ್ಕಾರದ ನಿರಂತರ ಬದ್ಧತೆಯ ಭಾಗವಾಗಿದೆ.
ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-
*****
(रिलीज़ आईडी: 2210659)
आगंतुक पटल : 4