ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪಿಎಂ - ಯುವಾ 3.0 ರ ಫಲಿತಾಂಶ ಪ್ರಕಟ: 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ನ 43 ಯುವ ಲೇಖಕರ ಆಯ್ಕೆ

प्रविष्टि तिथि: 30 DEC 2025 3:10PM by PIB Bengaluru

ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಭಾರತದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ (ಎನ್‌ ಬಿ ಟಿ) ಜಾರಿಗೆ ತಂದಿರುವ ಪ್ರಧಾನಮಂತ್ರಿ ಯುವ ಲೇಖಕರ ಮಾರ್ಗದರ್ಶನ ಯೋಜನೆ (PM-YUVA 3.0)ಯ ಫಲಿತಾಂಶಗಳನ್ನು ಎನ್‌ ಬಿ ಟಿ – ಇಂಡಿಯಾ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿರುವ ಈ ಯೋಜನೆಯು ತಮ್ಮ ಬರವಣಿಗೆ ಮತ್ತು ಚಿಂತನೆಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಯುವ ಬರಹಗಾರರು ಕೊಡುಗೆ ನೀಡುವಂತೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ಆವೃತ್ತಿಯಲ್ಲಿ, ಅಖಿಲ ಭಾರತ ಸ್ಪರ್ಧೆಯ ಮೂಲಕ 30 ವರ್ಷಕ್ಕಿಂತ ಕಡಿಮೆ ವಯೋಮಾನದ 43 ಯುವ ಲೇಖಕರ ಪುಸ್ತಕ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಾಗಿದೆ. ಅಸ್ಸಾಮಿ, ಬೆಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ, ಮಣಿಪುರಿ, ಮರಾಠಿ, ಮೈಥಿಲಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು, ಉರ್ದು ಅಧಿಕೃತ  ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್ ಸೇರಿದಂತೆ 22  ಭಾಷೆಗಳಲ್ಲಿ ಸ್ಪರ್ಧೆ ಆಯೋಜನೆಯಾಗಿದ್ದು, ಈ ವಿಶಾಲ ಭಾಷಾ ಪಾಲ್ಗೊಳ್ಳುವಿಕೆಯು ಭಾರತದಾದ್ಯಂತ ಸಮಗ್ರ ಸಾಹಿತ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಯೋಜನೆಯ ಉದ್ದೇಶವನ್ನು ಬಲಪಡಿಸಲಿದೆ. 19 ಮಹಿಳೆಯರು ಮತ್ತು 24 ಪುರುಷರು ಸೇರಿ ಒಟ್ಟು 43 ಲೇಖಕರು ಆಯ್ಕೆಯಾಗಿದ್ದಾರೆ. 

ಈ ಆಯ್ದ ಪುಸ್ತಕ ಪ್ರಸ್ತಾವನೆಗಳು ಆರು ತಿಂಗಳ ಅವಧಿಯಲ್ಲಿ ಖ್ಯಾತ ವಿದ್ವಾಂಸರ ಮಾರ್ಗದರ್ಶನದಲ್ಲಿ ಪುಸ್ತಕಗಳಾಗಿ ಹೊರಬರಲಿವೆ. ಆಯ್ಕೆಯಾದ ಪ್ರತಿಯೊಬ್ಬ ಲೇಖಕರಿಗೆ ತಿಂಗಳಿಗೆ 50,000 ರೂಪಾಯಿ ವಿದ್ಯಾರ್ಥಿ ವೇತನ ಮತ್ತು ಅವರ ಪ್ರಕಟಿತ ಪುಸ್ತಕದ ಮೇಲೆ ಶೇ. 10 ರಷ್ಟು ಜೀವಮಾನದ ರಾಯಧನ ಸಿಗಲಿದೆ. 

ಪಿಎಂ - ಯುವಾ 3.0 ಯ ವಿಷಯಗಳು: ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ ಕೊಡುಗೆ, ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಆಧುನಿಕ ಭಾರತದ ನಿರ್ಮಾತೃಗಳು (1950–2025). ಆಯ್ದ ಹಸ್ತಪ್ರತಿಗಳು ಇತಿಹಾಸ, ಸಂಸ್ಕೃತಿ, ವಿಜ್ಞಾನ, ತತ್ವಶಾಸ್ತ್ರ, ಆಡಳಿತ, ಸಾಮಾಜಿಕ ಸುಧಾರಣೆ ಮತ್ತು ಭಾರತದ ಜಾಗತಿಕ ತೊಡಗಿಸಿಕೊಳ್ಳುವಿಕೆಯಂತಹ ವಿಷಯಗಳ ಮೂಲಕ ದೇಶದ ಭೂತಕಾಲ, ವರ್ತಮಾನ ಸ್ಥಿತಿ ಮತ್ತು ಭವಿಷ್ಯವನ್ನು ಪ್ರತಿಬಿಂಬಿಸುವ ಕಾಲ್ಪನಿಕವಲ್ಲದ ಕೃತಿಗಳಾಗಿವೆ.

ಆಯ್ಕೆಯಾದ ಲೇಖಕರ ರಾಷ್ಟ್ರೀಯ ಶಿಬಿರವನ್ನು ಮುಂಬರುವ ನವದೆಹಲಿ ವಿಶ್ವ ಪುಸ್ತಕ ಮೇಳದಲ್ಲಿ (ಜನವರಿ 10-18, 2026) ಆಯೋಜಿಸಲಾಗುವುದು. ಭಾರತ ಮತ್ತು ವಿದೇಶಗಳಲ್ಲಿ ಭಾರತೀಯ ಸಾಹಿತ್ಯ ಮತ್ತು ಚಿಂತನೆಯನ್ನು ಪ್ರತಿನಿಧಿಸಲು ಹೊಸ ಪೀಳಿಗೆಯ ಬರಹಗಾರರನ್ನು ಪೋಷಿಸುವ ಉದ್ದೇಶದೊಂದಿಗೆ PM-YUVA 3.0 ಅಡಿಯಲ್ಲಿ ಪುಸ್ತಕಗಳ ಮೊದಲ ಸೆಟ್ ಅನ್ನು ಮುಂದಿನ ವರ್ಷ ಪ್ರಕಟಿಸಲಾಗುವುದು.

 

*****


(रिलीज़ आईडी: 2209978) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Telugu