ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಉತ್ತರ ಪ್ರದೇಶದ ಲಕ್ನೋದಲ್ಲಿ 'ರಾಷ್ಟ್ರ ಪ್ರೇರಣಾ ಸ್ಥಳ' ಲೋಕಾರ್ಪಣೆ
ರಾಷ್ಟ್ರ ಪ್ರೇರಣಾ ಸ್ಥಳವು ಭಾರತವನ್ನು ಸ್ವಾಭಿಮಾನ, ಏಕತೆ ಮತ್ತು ಸೇವೆಯ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ದೂರದೃಷ್ಟಿಯ ಸಂಕೇತವಾಗಿದೆ - ಪ್ರಧಾನಮಂತ್ರಿ
'ಸಬ್ ಕಾ ಪ್ರಯಾಸ್' ಮೂಲಕ 'ವಿಕಸಿತ ಭಾರತ'ದ ಸಂಕಲ್ಪ ಸಾಕಾರಗೊಳ್ಳಲಿದೆ - ಪ್ರಧಾನಮಂತ್ರಿ
ನಾವು 'ಅಂತ್ಯೋದಯ' ಪರಿಕಲ್ಪನೆಗೆ ನೂರಕ್ಕೆ ನೂರರಷ್ಟು ಯೋಜನೆಗಳ ತಲುಪುವಿಕೆಯ ಹೊಸ ಆಯಾಮ ನೀಡುವ ಮೂಲಕ ಅಭಿವೃದ್ಧಿಯ ಗುರಿ ತಲುಪಿದ್ದೇವೆ" - ಪ್ರಧಾನಮಂತ್ರಿ
प्रविष्टि तिथि:
25 DEC 2025 5:23PM by PIB Bengaluru
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಗೌರವಿಸುವ ಸಲುವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ 'ರಾಷ್ಟ್ರ ಪ್ರೇರಣಾ ಸ್ಥಳ'ವನ್ನು ಉದ್ಘಾಟಿಸಿದರು. ಶ್ರೀ ವಾಜಪೇಯಿ ಅವರ 101ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಲಕ್ನೋ ಭೂಮಿಯು ಒಂದು ಹೊಸ ಪ್ರೇರಣೆಗೆ ಸಾಕ್ಷಿಯಾಗುತ್ತಿದೆ ಎಂದು ಬಣ್ಣಿಸಿದರು. ಇದೇ ವೇಳೆ ಅವರು ದೇಶದ ಜನತೆಗೆ ಮತ್ತು ವಿಶ್ವಕ್ಕೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಭಾರತದಲ್ಲಿಯೂ ಲಕ್ಷಾಂತರ ಕ್ರಿಶ್ಚಿಯನ್ ಕುಟುಂಬಗಳು ಇಂದು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿವೆ ಎಂದು ಉಲ್ಲೇಖಿಸಿದ ಶ್ರೀ ಮೋದಿ ಅವರು, ಈ ಕ್ರಿಸ್‌ಮಸ್ ಆಚರಣೆಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತರಲಿ ಎಂಬುದು ಎಲ್ಲರ ಸಾಮೂಹಿಕ ಆಶಯವಾಗಿದೆ ಎಂದು ತಿಳಿಸಿದರು.
ಡಿಸೆಂಬರ್ 25 ದೇಶದ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯ ವಿಶೇಷ ಸಂದರ್ಭವನ್ನು ಹೊತ್ತು ತರುತ್ತದೆ ಎಂದು ನೆನಪಿಸಿದ ಶ್ರೀ ಮೋದಿ ಅವರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಿ ಮತ್ತು ಭಾರತ ರತ್ನ ಮಹಾಮನಾ ಮದನ್ ಮೋಹನ್ ಮಾಳವೀಯ ಜಿ ಅವರು ಭಾರತದ ಅಸ್ಮಿತೆ, ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಹೇಳಿದರು. ಈ ಇಬ್ಬರೂ ದಿಗ್ಗಜರು ತಮ್ಮ ಅಪಾರ ಕೊಡುಗೆಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಇಂದು ಮಹಾರಾಜ ಬಿಜ್ಲಿ ಪಾಸಿ ಜಿ ಅವರ ಜನ್ಮದಿನವೂ ಆಗಿದೆ ಎಂದು ಸ್ಮರಿಸಿದ ಶ್ರೀ ಮೋದಿ ಅವರು, ಲಕ್ನೋದ ಪ್ರಸಿದ್ಧ ಬಿಜಲಿ ಪಾಸಿ ಕೋಟೆ ಇಲ್ಲಿಂದ ಹೆಚ್ಚು ದೂರವಿಲ್ಲ ಎಂದು ತಿಳಿಸಿದರು. ಮಹಾರಾಜ ಬಿಜ್ಲಿ ಪಾಸಿ ಅವರು ಶೌರ್ಯ, ಸುಶಾಸನ ಮತ್ತು ಒಳಗೊಳ್ಳುವಿಕೆಯ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ, ಇದನ್ನು ಪಾಸಿ ಸಮುದಾಯವು ಹೆಮ್ಮೆಯಿಂದ ಮುಂದುವರಿಸಿಕೊಂಡು ಬಂದಿದೆ ಎಂದು ಅವರು ಶ್ಲಾಘಿಸಿದರು. ವಿಶೇಷವೆಂದರೆ, 2000ನೇ ಇಸವಿಯಲ್ಲಿ ಮಹಾರಾಜ ಬಿಜ್ಲಿ ಪಾಸಿ ಅವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು ಅಟಲ್ ಜಿ ಅವರೇ ಎಂಬ ಕಾಕತಾಳೀಯವನ್ನು ಅವರು ನೆನಪಿಸಿಕೊಂಡರು. ಮಹಾಮನಾ ಮಾಳವೀಯ ಜಿ, ಅಟಲ್ ಜಿ ಮತ್ತು ಮಹಾರಾಜ ಬಿಜ್ಲಿ ಪಾಸಿ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ಶ್ರದ್ಧಾಂಜಲಿ ಅರ್ಪಿಸಿದರು.
ಭಾರತಕ್ಕೆ ಆತ್ಮಗೌರವ, ಏಕತೆ ಮತ್ತು ಸೇವೆಯ ಹಾದಿಯನ್ನು ತೋರಿಸಿದ ದೃಷ್ಟಿಕೋನದ ಸಂಕೇತವಾಗಿರುವ 'ರಾಷ್ಟ್ರ ಪ್ರೇರಣಾ ಸ್ಥಳ'ವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಲಭಿಸಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಭವ್ಯ ಪ್ರತಿಮೆಗಳು ಇಲ್ಲಿ ಮುಗಿಲೆತ್ತರಕ್ಕೆ ನಿಂತಿವೆ, ಆದರೆ ಅವುಗಳು ನೀಡುವ ಸ್ಫೂರ್ತಿ ಆ ಎತ್ತರಕ್ಕಿಂತಲೂ ಮಿಗಿಲಾದದ್ದು ಎಂದು ಅವರು ಬಣ್ಣಿಸಿದರು. ಅಟಲ್ ಜೀ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ನಮ್ಮ ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಪ್ರಯತ್ನವೂ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಿರಬೇಕು ಎಂಬ ಸಂದೇಶವನ್ನು ಈ ರಾಷ್ಟ್ರ ಪ್ರೇರಣಾ ಸ್ಥಳವು ನೀಡುತ್ತದೆ; ಸಾಮೂಹಿಕ ಪ್ರಯತ್ನದಿಂದ ಮಾತ್ರ 'ವಿಕಸಿತ ಭಾರತ'ದ ಸಂಕಲ್ಪವನ್ನು ಈಡೇರಿಸಲು ಸಾಧ್ಯ" ಎಂದು ಒತ್ತಿ ಹೇಳಿದರು. ಈ ಆಧುನಿಕ ಪ್ರೇರಣಾ ತಾಣದ ನಿರ್ಮಾಣಕ್ಕಾಗಿ ಅವರು ಲಕ್ನೋ, ಉತ್ತರ ಪ್ರದೇಶ ಮತ್ತು ಇಡೀ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಪ್ರೇರಣಾ ಸ್ಥಳವನ್ನು ನಿರ್ಮಿಸಿದ ಭೂಮಿಯು ದಶಕಗಳ ಕಾಲ ಸುಮಾರು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದ್ದ ಕಸದ ರಾಶಿಯಿಂದ ಕೂಡಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಅವರು ಗಮನಸೆಳೆದರು. ಈ ಯೋಜನೆಯಲ್ಲಿ ಶ್ರಮಿಸಿದ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ಯೋಜಕರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಅವರ ಇಡೀ ತಂಡವನ್ನು ವಿಶೇಷವಾಗಿ ಶ್ಲಾಘಿಸಿದರು.
ರಾಷ್ಟ್ರಕ್ಕೆ ಸರಿಯಾದ ದಿಕ್ಕು ನೀಡುವಲ್ಲಿ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದ ಮೋದಿ, "ಭಾರತದಲ್ಲಿ ಎರಡು ಸಂವಿಧಾನಗಳು, ಎರಡು ಲಾಂಛನಗಳು ಮತ್ತು ಇಬ್ಬರು ಪ್ರಧಾನಮಂತ್ರಿಗಳಿರುವ ವ್ಯವಸ್ಥೆಯನ್ನು ತಿರಸ್ಕರಿಸಿದವರು ಡಾ. ಮುಖರ್ಜಿ" ಎಂದು ಹೇಳಿದರು. ಸ್ವಾತಂತ್ರ್ಯದ ನಂತರವೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವು ಭಾರತದ ಸಮಗ್ರತೆಗೆ ದೊಡ್ಡ ಸವಾಲಾಗಿತ್ತು. ಆದರೆ, 370ನೇ ವಿಧಿಯ ಗೋಡೆಯನ್ನು ಕೆಡವುವ ಅವಕಾಶ ತಮ್ಮ ಸರ್ಕಾರಕ್ಕೆ ಸಿಕ್ಕಿತು ಮತ್ತು ಇಂದು ಭಾರತದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.
ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ಸಚಿವರಾಗಿ ಡಾ. ಮುಖರ್ಜಿಯವರು ಆರ್ಥಿಕ ಸ್ವಾವಲಂಬನೆಗೆ ಅಡಿಪಾಯ ಹಾಕಿಕೊಟ್ಟರು ಮತ್ತು ದೇಶದ ಮೊದಲ ಕೈಗಾರಿಕಾ ನೀತಿಯನ್ನು ನೀಡುವ ಮೂಲಕ ಭಾರತದಲ್ಲಿ ಕೈಗಾರಿಕೀಕರಣದ ಮೂಲಾಧಾರವನ್ನು ಸ್ಥಾಪಿಸಿದರು ಎಂದು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಇಂದು ಅದೇ ಸ್ವಾವಲಂಬನೆಯ ಮಂತ್ರವು ಹೊಸ ಎತ್ತರವನ್ನು ತಲುಪುತ್ತಿದ್ದು, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳು ವಿಶ್ವದಾದ್ಯಂತ ಪಸರಿಸುತ್ತಿವೆ ಎಂದು ಅವರು ತಿಳಿಸಿದರು. ಉತ್ತರ ಪ್ರದೇಶದಲ್ಲಿಯೇ 'ಒಂದು ಜಿಲ್ಲೆ ಒಂದು ಉತ್ಪನ್ನ' (ODOP) ಎಂಬ ಬೃಹತ್ ಅಭಿಯಾನವು ನಡೆಯುತ್ತಿದ್ದು, ಇದು ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಘಟಕಗಳನ್ನು ಬಲಪಡಿಸುತ್ತಿದೆ ಎಂದು ಶ್ರೀ ಮೋದಿ ಅವರು ಬೆಟ್ಟು ಮಾಡಿದರು. ಇದರ ಜೊತೆಗೆ ಉತ್ತರ ಪ್ರದೇಶದಲ್ಲಿ ಬೃಹತ್ ರಕ್ಷಣಾ ಕಾರಿಡಾರ್ ನಿರ್ಮಾಣವಾಗುತ್ತಿರುವುದನ್ನು ಅವರು ಎತ್ತಿ ತೋರಿಸಿದರು. 'ಆಪರೇಷನ್ ಸಿಂಧೂರ್' ಸಮಯದಲ್ಲಿ ವಿಶ್ವವೇ ಯಾವುದರ ಶಕ್ತಿಯನ್ನು ಕಂಡಿತ್ತೋ, ಅಂತಹ ಬ್ರಹ್ಮೋಸ್ ಕ್ಷಿಪಣಿಯನ್ನು ಈಗ ಲಕ್ನೋದಲ್ಲಿ ತಯಾರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ರಕ್ಷಣಾ ಉತ್ಪಾದನೆಗಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ದಿನ ದೂರವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ದಶಕಗಳ ಹಿಂದೆ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರು 'ಅಂತ್ಯೋದಯ'ದ ಕನಸು ಕಂಡಿದ್ದರು ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಾಲಿನ ಕೊನೆಯಲ್ಲಿ ನಿಂತಿರುವ ವ್ಯಕ್ತಿಯ ಮುಖದ ಮೇಲಿನ ನಗುವಿನ ಮೂಲಕವೇ ಭಾರತದ ಪ್ರಗತಿಯನ್ನು ಅಳೆಯಬೇಕು ಎಂಬುದು ದೀನ್‌ದಯಾಳ್ ಅವರ ನಂಬಿಕೆಯಾಗಿತ್ತು ಎಂದು ಸ್ಮರಿಸಿದರು. ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮ ಇವೆಲ್ಲವೂ ಒಟ್ಟಾಗಿ ಅಭಿವೃದ್ಧಿ ಹೊಂದುವ ಸಮಗ್ರ ಮಾನವತಾವಾದದ ಬಗ್ಗೆ ದೀನ್‌ದಯಾಳ್ ಅವರು ಮಾತನಾಡಿದ್ದರು ಎಂದು ಅವರು ಪ್ರತಿಪಾದಿಸಿದರು. ದೀನ್‌ದಯಾಳ್ ಅವರ ಕನಸನ್ನು ಇಂದು ತಮ್ಮದೇ ಸಂಕಲ್ಪವನ್ನಾಗಿ ಸ್ವೀಕರಿಸಲಾಗಿದೆ ಮತ್ತು ಅಂತ್ಯೋದಯಕ್ಕೆ ಈಗ 'ಸ್ಯಾಚುರೇಶನ್' (ಪರಿಪೂರ್ಣ ವ್ಯಾಪ್ತಿ) ಎಂಬ ಹೊಸ ಆಯಾಮವನ್ನು ನೀಡಲಾಗಿದೆ; ಅಂದರೆ ಪ್ರತಿಯೊಬ್ಬ ಅಗತ್ಯವಿರುವ ವ್ಯಕ್ತಿ ಮತ್ತು ಪ್ರತಿಯೊಬ್ಬ ಅರ್ಹ ಫಲಾನುಭವಿಯನ್ನು ಸರ್ಕಾರದ ಕಲ್ಯಾಣ ಯೋಜನೆಗಳ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಶ್ರೀ ಮೋದಿಯವರು ತಿಳಿಸಿದರು. ಇಂತಹ ಪರಿಪೂರ್ಣ ವ್ಯಾಪ್ತಿಯ ಭಾವನೆ ಇದ್ದಾಗ ಅಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿರುವುದಿಲ್ಲ; ಇದೇ ನಿಜವಾದ ಸುಶಾಸನ, ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ದೇಶದ ಕೋಟ್ಯಂತರ ನಾಗರಿಕರು ಇಂದು ಯಾವುದೇ ತಾರತಮ್ಯವಿಲ್ಲದೆ ಮೊದಲ ಬಾರಿಗೆ ಪಕ್ಕಾ ಮನೆಗಳು, ಶೌಚಾಲಯಗಳು, ನಲ್ಲಿ ನೀರು, ವಿದ್ಯುತ್ ಮತ್ತು ಗ್ಯಾಸ್ ಸಂಪರ್ಕಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಇದಲ್ಲದೆ, ಕೋಟ್ಯಂತರ ಜನರು ಮೊದಲ ಬಾರಿಗೆ ಉಚಿತ ಪಡಿತರ ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಸಾಲಿನಲ್ಲಿ ನಿಂತಿರುವ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಪ್ರಾಮಾಣಿಕ ಪ್ರಯತ್ನಗಳು ನಡೆದಾಗ ಮಾತ್ರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ದೂರದೃಷ್ಟಿಗೆ ನಿಜವಾದ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
"ಕಳೆದ ದಶಕದಲ್ಲಿ ಕೋಟ್ಯಂತರ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ" ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ಸಾಲಿನಲ್ಲಿ ಕೊನೆಯಲ್ಲಿ ನಿಂತಿರುವವರನ್ನು ಮತ್ತು ಈವರೆಗೆ ನಿರ್ಲಕ್ಷಿತರಾಗಿದ್ದವರನ್ನು ತಮ್ಮ ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಿದ್ದರಿಂದಲೇ ಇದು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು. 2014ಕ್ಕಿಂತ ಮೊದಲು ಸುಮಾರು 25 ಕೋಟಿ ನಾಗರಿಕರು ಮಾತ್ರ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯಲ್ಲಿದ್ದರು. ಆದರೆ ಇಂದು ಸುಮಾರು 95 ಕೋಟಿ ಭಾರತೀಯರು ಈ ರಕ್ಷಣಾ ಕವಚದ ಅಡಿಯಲ್ಲಿದ್ದಾರೆ; ಇದರಲ್ಲಿ ಉತ್ತರ ಪ್ರದೇಶದ ಫಲಾನುಭವಿಗಳ ಪಾಲೂ ದೊಡ್ಡದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಒಂದು ಕಾಲದಲ್ಲಿ ಬ್ಯಾಂಕ್ ಖಾತೆಗಳು ಕೆಲವೇ ಜನರಿಗೆ ಸೀಮಿತವಾಗಿದ್ದಂತೆಯೇ, ವಿಮೆಯೂ ಸಹ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವಂತಿತ್ತು ಎಂದು ಪ್ರಧಾನಮಂತ್ರಿಯವರು ಉದಾಹರಿಸಿದರು. ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ವಿಮಾ ಸುರಕ್ಷತೆಯನ್ನು ತಲುಪಿಸುವ ಜವಾಬ್ದಾರಿಯನ್ನು ತಮ್ಮ ಸರ್ಕಾರ ವಹಿಸಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿ 'ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ'ಯನ್ನು ಪ್ರಾರಂಭಿಸಲಾಯಿತು. ಇದು ಅತ್ಯಲ್ಪ ಪ್ರೀಮಿಯಂನಲ್ಲಿ ಎರಡು ಲಕ್ಷ ರೂಪಾಯಿಗಳ ವಿಮೆಯನ್ನು ಖಾತರಿಪಡಿಸುತ್ತದೆ ಮತ್ತು ಇಂದು 25 ಕೋಟಿಗೂ ಹೆಚ್ಚು ಬಡ ನಾಗರಿಕರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು. ಅದೇ ರೀತಿ, ಅಪಘಾತ ವಿಮೆಗಾಗಿ ತರಲಾದ 'ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ'ಯು ಸುಮಾರು 55 ಕೋಟಿ ಬಡ ನಾಗರಿಕರನ್ನು ತಲುಪಿದೆ. ಈ ಮೊದಲು ವಿಮೆಯ ಬಗ್ಗೆ ಯೋಚಿಸಲೂ ಸಾಧ್ಯವಾಗದಿದ್ದ ಜನರನ್ನು ಇದು ಒಳಗೊಂಡಿದೆ ಎಂದು ಅವರು ಗಮನಿಸಿದರು. ಈ ಯೋಜನೆಗಳು ಈಗಾಗಲೇ ಫಲಾನುಭವಿಗಳಿಗೆ ಸುಮಾರು 25,000 ಕೋಟಿ ರೂಪಾಯಿಗಳಷ್ಟು ವಿಮಾ ಮೊತ್ತವನ್ನು (claims) ಒದಗಿಸಿವೆ ಎಂಬುದು ಅನೇಕರಿಗೆ ಆಶ್ಚರ್ಯ ತರಬಹುದು; ಅಂದರೆ ಸಂಕಷ್ಟದ ಸಮಯದಲ್ಲಿ ಈ ಹಣವು ಬಡ ಕುಟುಂಬಗಳಿಗೆ ದೊಡ್ಡ ಆಸರೆಯಾಗಿ ನಿಂತಿದೆ ಎಂದು ಶ್ರೀ ಮೋದಿಯವರು ತಿಳಿಸಿದರು.
ಅಟಲ್ ಜೀ ಅವರ ಜನ್ಮದಿನವು ಸುಶಾಸನವನ್ನು (ಒಳ್ಳೆಯ ಆಡಳಿತ) ಆಚರಿಸುವ ದಿನವೂ ಆಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ದೀರ್ಘಕಾಲದವರೆಗೆ 'ಬಡತನ ನಿರ್ಮೂಲನೆ'ಯಂತಹ ಘೋಷಣೆಗಳನ್ನೇ ಆಡಳಿತ ಎಂದು ಪರಿಗಣಿಸಲಾಗಿತ್ತು, ಆದರೆ ಅಟಲ್ ಜೀ ಅವರು ನಿಜವಾದ ಸುಶಾಸನವನ್ನು ತಳಮಟ್ಟಕ್ಕೆ ತಂದರು ಎಂದು ಅವರು ಒತ್ತಿಹೇಳಿದರು. ಇಂದು ಡಿಜಿಟಲ್ ಗುರುತಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೆ ಅದರ ಅಡಿಪಾಯ ಹಾಕಿದ್ದು ಅಟಲ್ ಜೀ ಅವರ ಸರ್ಕಾರ ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ಆ ಸಮಯದಲ್ಲಿ ಪ್ರಾರಂಭವಾದ ವಿಶೇಷ ಕಾರ್ಡ್ ಉಪಕ್ರಮವು ಇಂದು 'ಆಧಾರ್' ಆಗಿ ವಿಶ್ವವಿಖ್ಯಾತವಾಗಿದೆ ಎಂದು ಅವರು ಗಮನಿಸಿದರು. ಭಾರತದಲ್ಲಿ ಟೆಲಿಕಾಂ ಕ್ರಾಂತಿಯನ್ನು ವೇಗಗೊಳಿಸಿದ ಕೀರ್ತಿಯೂ ಅಟಲ್ ಜೀ ಅವರಿಗೆ ಸಲ್ಲುತ್ತದೆ ಎಂದು ಪ್ರಧಾನ ಮಂತ್ರಿಗಳು ಮುಂದುವರಿಸುತ್ತಾ ಹೇಳಿದರು. ಅವರ ಸರ್ಕಾರ ರೂಪಿಸಿದ ಟೆಲಿಕಾಂ ನೀತಿಯು ಪ್ರತಿ ಮನೆಗೆ ಫೋನ್ ಮತ್ತು ಇಂಟರ್ನೆಟ್ ತಲುಪಿಸುವುದನ್ನು ಸುಲಭಗೊಳಿಸಿತು ಮತ್ತು ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ಅವರು ವಿವರಿಸಿದರು.
ಕಳೆದ 11 ವರ್ಷಗಳಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿ ಹೊರಹೊಮ್ಮಿರುವುದಕ್ಕೆ ಅಟಲ್ ಜೀ ಅವರು ಖಂಡಿತವಾಗಿಯೂ ಸಂತೋಷಪಡುತ್ತಾರೆ ಎಂದು ಶ್ರೀ ಮೋದಿಯವರು ತಿಳಿಸಿದರು. ಅಟಲ್ ಜೀ ಅವರು ಸಂಸದರಾಗಿ ಸೇವೆ ಸಲ್ಲಿಸಿದ ಉತ್ತರ ಪ್ರದೇಶ ರಾಜ್ಯವು ಇಂದು ಭಾರತದ ನಂಬರ್ ಒನ್ ಮೊಬೈಲ್ ಉತ್ಪಾದನಾ ರಾಜ್ಯವಾಗಿದೆ ಎಂದು ಅವರು ಒತ್ತಿಹೇಳಿದರು.
ಸಂಪರ್ಕದ (Connectivity) ಕುರಿತಾದ ಅಟಲ್ ಜೀ ಅವರ ದೂರದೃಷ್ಟಿಯು 21ನೇ ಶತಮಾನದ ಭಾರತಕ್ಕೆ ಆರಂಭಿಕ ಬಲವನ್ನು ನೀಡಿತು ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಗ್ರಾಮಗಳನ್ನು ರಸ್ತೆಗಳ ಮೂಲಕ ಸಂಪರ್ಕಿಸುವ ಅಭಿಯಾನ ಮತ್ತು 'ಸುವರ್ಣ ಚತುಷ್ಪಥ' ಹೆದ್ದಾರಿ ವಿಸ್ತರಣೆಯ ಕೆಲಸಗಳು ಅಟಲ್ ಜೀ ಅವರ ಸರ್ಕಾರದ ಅವಧಿಯಲ್ಲೇ ಆರಂಭವಾದವು ಎಂಬುದನ್ನು ಅವರು ಸ್ಮರಿಸಿದರು.
2000ನೇ ಇಸವಿಯಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 8 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಸುಮಾರು 4 ಲಕ್ಷ ಕಿಲೋಮೀಟರ್ ರಸ್ತೆಗಳನ್ನು ಕಳೆದ 10-11 ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ಶ್ರೀ ಮೋದಿಯವರು ಬೆಟ್ಟು ಮಾಡಿದರು. ಇಂದು ದೇಶಾದ್ಯಂತ ಅಭೂತಪೂರ್ವ ವೇಗದಲ್ಲಿ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಉತ್ತರ ಪ್ರದೇಶವು 'ಎಕ್ಸ್‌ಪ್ರೆಸ್‌ವೇ ರಾಜ್ಯ'ವಾಗಿ ತನ್ನ ಗುರುತನ್ನು ಸ್ಥಾಪಿಸುತ್ತಿದೆ ಎಂದು ಅವರು ಗಮನಿಸಿದರು. ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದು ಅಟಲ್ ಜೀ ಅವರೇ ಎಂಬುದನ್ನು ಹೈಲೈಟ್ ಮಾಡಿದ ಪ್ರಧಾನಮಂತ್ರಿಯವರು, ಇಂದು ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿನ ಮೆಟ್ರೋ ಜಾಲಗಳು ಲಕ್ಷಾಂತರ ಜನರ ಜೀವನವನ್ನು ಸುಲಭಗೊಳಿಸುತ್ತಿವೆ ಎಂದರು. ಅವರ ಸರ್ಕಾರವು ನಿರ್ಮಿಸಿದ ಸುಶಾಸನದ ಪರಂಪರೆಯನ್ನು ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿನ ನಮ್ಮ ಸರ್ಕಾರಗಳು ವಿಸ್ತರಿಸುತ್ತಿವೆ ಮತ್ತು ಹೊಸ ಆಯಾಮಗಳನ್ನು ನೀಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜೀ ಮತ್ತು ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಸ್ಫೂರ್ತಿ, ಅವರ ದೂರದೃಷ್ಟಿಯ ಕೆಲಸಗಳು ಮತ್ತು ಭವ್ಯ ಪ್ರತಿಮೆಗಳು 'ವಿಕಸಿತ ಭಾರತ'ಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿವೆ ಎಂದು ಹೈಲೈಟ್ ಮಾಡಿದ ಶ್ರೀ ಮೋದಿಯವರು, ಈ ಪ್ರತಿಮೆಗಳು ಇಂದು ರಾಷ್ಟ್ರದಲ್ಲಿ ಹೊಸ ಶಕ್ತಿಯನ್ನು ತುಂಬುತ್ತಿವೆ ಎಂದು ತಿಳಿಸಿದರು. ಸ್ವಾತಂತ್ರ್ಯದ ನಂತರ ಭಾರತದಲ್ಲಿನ ಪ್ರತಿಯೊಂದು ಒಳ್ಳೆಯ ಕೆಲಸವನ್ನೂ ಒಂದೇ ಕುಟುಂಬಕ್ಕೆ ಜೋಡಿಸುವ ಪ್ರವೃತ್ತಿ ಹೇಗೆ ಹುಟ್ಟಿಕೊಂಡಿತ್ತು ಎಂಬುದನ್ನು ಮರೆಯಬಾರದು ಎಂದು ಅವರು ಒತ್ತಿ ಹೇಳಿದರು. ಪುಸ್ತಕಗಳು, ಸರ್ಕಾರಿ ಯೋಜನೆಗಳು, ಸಂಸ್ಥೆಗಳು, ಬೀದಿಗಳು ಅಥವಾ ಚೌಕಗಳು ಹೀಗೆ ಎಲ್ಲವೂ ಕೇವಲ ಒಂದು ಕುಟುಂಬದ ಮಹಿಮೆ, ಅವರ ಹೆಸರುಗಳು ಮತ್ತು ಅವರ ಪ್ರತಿಮೆಗಳೊಂದಿಗೆ ಮಾತ್ರ ಸಂಬಂಧ ಹೊಂದಿದ್ದವು. ದೇಶವನ್ನು ಒಂದು ಕುಟುಂಬಕ್ಕೆ ಒತ್ತೆ ಇಟ್ಟಿದ್ದ ಈ ಹಳೆಯ ಪದ್ಧತಿಯಿಂದ ತಮ್ಮ ಪಕ್ಷವು ದೇಶವನ್ನು ಮುಕ್ತಿಗೊಳಿಸಿದೆ ಎಂದು ಅವರು ಹೇಳಿದರು. ಭಾರತ ಮಾತೆಯ ಪ್ರತಿಯೊಬ್ಬ ಅಮರ ಪುತ್ರನನ್ನು ಮತ್ತು ರಾಷ್ಟ್ರ ಸೇವೆಯಲ್ಲಿ ನೀಡಿದ ಪ್ರತಿಯೊಂದು ಕೊಡುಗೆಯನ್ನು ತಮ್ಮ ಸರ್ಕಾರ ಗೌರವಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇದಕ್ಕೆ ಉದಾಹರಣೆಗಳನ್ನು ನೀಡಿದ ಅವರು, ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಹೆಮ್ಮೆಯಿಂದ ನಿಂತಿದೆ ಮತ್ತು ನೇತಾಜಿಯವರು ತ್ರಿವರ್ಣ ಧ್ವಜ ಹಾರಿಸಿದ ಅಂಡಮಾನ್ ನ ದ್ವೀಪಕ್ಕೆ ಈಗ ಅವರ ಹೆಸರನ್ನೇ ಇಡಲಾಗಿದೆ ಎಂದು ಗಮನಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಹೇಗೆ ಪ್ರಯತ್ನಗಳು ನಡೆದವು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವಿರೋಧ ಪಕ್ಷಗಳು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಈ ಪಾಪವನ್ನು ಎಸಗಿವೆ ಎಂದು ತಿಳಿಸಿದರು. ಬಾಬಾಸಾಹೇಬರ ಪರಂಪರೆಯನ್ನು ಅಳಿಸಲು ಬಿಡುವುದಿಲ್ಲ ಎಂಬುದನ್ನು ತಮ್ಮ ಪಕ್ಷ ಖಚಿತಪಡಿಸಿದೆ ಎಂದು ಅವರು ಒತ್ತಿ ಹೇಳಿದರು. ಇಂದು ದೆಹಲಿಯಿಂದ ಲಂಡನ್‌ವರೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ 'ಪಂಚತೀರ್ಥ'ಗಳು ಅವರ ಪರಂಪರೆಯನ್ನು ಸಾರುತ್ತಿವೆ ಎಂದು ಅವರು ಹೈಲೈಟ್ ಮಾಡಿದರು.
ನೂರಾರು ಸಂಸ್ಥಾನಗಳಾಗಿ ಹಂಚಿಹೋಗಿದ್ದ ದೇಶವನ್ನು ಸರ್ದಾರ್ ಪಟೇಲ್ ಅವರು ಒಂದುಗೂಡಿಸಿದ್ದರು, ಆದರೆ ಸ್ವಾತಂತ್ರ್ಯದ ನಂತರ ಅವರ ಕೆಲಸ ಮತ್ತು ಘನತೆ ಎರಡನ್ನೂ ಕುಗ್ಗಿಸುವ ಪ್ರಯತ್ನಗಳು ನಡೆದವು ಎಂದು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಸರ್ದಾರ್ ಪಟೇಲ್ ಅವರಿಗೆ ಸಲ್ಲಬೇಕಾದ ನಿಜವಾದ ಗೌರವವನ್ನು ನೀಡಿದ್ದು ತಮ್ಮ ಪಕ್ಷ ಎಂದು ಅವರು ಒತ್ತಿ ಹೇಳಿದರು. ವಿಶ್ವದ ಅತ್ಯಂತ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಯನ್ನು ನಿರ್ಮಿಸಿದ್ದು ಮತ್ತು ಏಕತಾ ನಗರವನ್ನು ಸ್ಫೂರ್ತಿಯ ತಾಣವಾಗಿ ಅಭಿವೃದ್ಧಿಪಡಿಸಿದ್ದು ತಮ್ಮ ಸರ್ಕಾರ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನದ ಪ್ರಮುಖ ಆಚರಣೆಯನ್ನು ದೇಶವು ಈಗ ಇದೇ ಸ್ಥಳದಲ್ಲಿ ನಡೆಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
ದಶಕಗಳ ಕಾಲ ಬುಡಕಟ್ಟು ಸಮುದಾಯಗಳ ಕೊಡುಗೆಗಳಿಗೆ ಸರಿಯಾದ ಮನ್ನಣೆ ನೀಡಲಾಗಿಲ್ಲ ಎಂದು ಗಮನಿಸಿದ ಶ್ರೀ ಮೋದಿಯವರು, ಭಗವಾನ್ ಬಿರ್ಸಾ ಮುಂಡಾ ಅವರ ಭವ್ಯ ಸ್ಮಾರಕವನ್ನು ನಿರ್ಮಿಸಿದ್ದು ಮತ್ತು ಕೆಲವೇ ವಾರಗಳ ಹಿಂದೆ ಛತ್ತೀಸ್ ಗಢದಲ್ಲಿ 'ಶಹೀದ್ ವೀರ್ ನಾರಾಯಣ್ ಸಿಂಗ್ ಬುಡಕಟ್ಟು ವಸ್ತುಸಂಗ್ರಹಾಲಯ'ವನ್ನು ಉದ್ಘಾಟಿಸಿದ್ದು ತಮ್ಮ ಸರ್ಕಾರವೇ ಎಂದು ಹೈಲೈಟ್ ಮಾಡಿದರು. ದೇಶಾದ್ಯಂತ ಇಂತಹ ಹಲವಾರು ಉದಾಹರಣೆಗಳಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಉತ್ತರ ಪ್ರದೇಶದಲ್ಲಿ ಮಹಾರಾಜ ಸುಹೇಲ್ದೇವ್ ಅವರ ಸ್ಮಾರಕವನ್ನು ನಿರ್ಮಿಸಿದ್ದು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಎಂದು ಅವರು ಉಲ್ಲೇಖಿಸಿದರು. ನಿಷಾದರಾಜ ಮತ್ತು ಭಗವಾನ್ ಶ್ರೀರಾಮರು ಭೇಟಿಯಾದ ಸ್ಥಳಕ್ಕೆ ಈಗ ಅಂತಿಮವಾಗಿ ಸರಿಯಾದ ಗೌರವ ಸಿಕ್ಕಿದೆ ಎಂದು ಅವರು ತಿಳಿಸಿದರು. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರಿಂದ ಹಿಡಿದು ಚೌರಿ ಚೌರಾದ ಹುತಾತ್ಮರವರೆಗೆ, ಭಾರತ ಮಾತೆಯ ಪುತ್ರರ ಕೊಡುಗೆಗಳನ್ನು ತಮ್ಮ ಸರ್ಕಾರವು ಪೂರ್ಣ ಗೌರವ ಮತ್ತು ನಮ್ರತೆಯಿಂದ ಸ್ಮರಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಕುಟುಂಬ ಆಧಾರಿತ ರಾಜಕಾರಣವು ಅಸುರಕ್ಷಿತತೆಯಿಂದ ಕೂಡಿದ ಒಂದು ವಿಶಿಷ್ಟ ಗುರುತನ್ನು ಹೊಂದಿದೆ ಎಂದು ಒತ್ತಿಹೇಳುತ್ತಾ, ಅಂತಹ ನಾಯಕರು ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಕುಟುಂಬವನ್ನು ದೊಡ್ಡದಾಗಿ ತೋರಿಸಲು ಇತರರನ್ನು ಕುಗ್ಗಿಸುವಂತೆ ಈ ಮನಸ್ಥಿತಿ ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು. ಈ ಮನಸ್ಥಿತಿಯು ಭಾರತದಲ್ಲಿ 'ರಾಜಕೀಯ ಅಸ್ಪೃಶ್ಯತೆ'ಯನ್ನು ಪರಿಚಯಿಸಿತು ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಸ್ವತಂತ್ರ ಭಾರತದಲ್ಲಿ ಅನೇಕ ಪ್ರಧಾನ ಮಂತ್ರಿಗಳು ಸೇವೆ ಸಲ್ಲಿಸಿದ್ದರೂ, ದೆಹಲಿಯ ವಸ್ತುಸಂಗ್ರಹಾಲಯವು ಅವರಲ್ಲಿ ಹಲವರನ್ನು ನಿರ್ಲಕ್ಷಿಸಿತ್ತು ಎಂದು ಅವರು ಬೆಟ್ಟು ಮಾಡಿದರು. ತಮ್ಮ ಸರ್ಕಾರವು ಈ ಪರಿಸ್ಥಿತಿಯನ್ನು ಸರಿಪಡಿಸಿದೆ ಎಂದು ಅವರು ಒತ್ತಿ ಹೇಳಿದರು. ಇಂದು ದೆಹಲಿಗೆ ಭೇಟಿ ನೀಡಿದರೆ, ಭವ್ಯವಾದ 'ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ' (Pradhanmantri Sangrahalaya) ಎಲ್ಲರನ್ನೂ ಸ್ವಾಗತಿಸುತ್ತದೆ. ಅಲ್ಲಿ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಧಾನಮಂತ್ರಿಗೂ, ಅವರ ಅಧಿಕಾರಾವಧಿ ಎಷ್ಟೇ ಅಲ್ಪವಾಗಿದ್ದರೂ, ಸರಿಯಾದ ಗೌರವ ಮತ್ತು ಅರ್ಹವಾದ ಸ್ಥಾನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ವಿರೋಧ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಯಾವಾಗಲೂ ತಮ್ಮ ಪಕ್ಷವನ್ನು ರಾಜಕೀಯವಾಗಿ ಅಸ್ಪೃಶ್ಯವಾಗಿ ಇರಿಸಿದ್ದವು, ಆದರೆ ತಮ್ಮ ಪಕ್ಷದ ಮೌಲ್ಯಗಳು ಎಲ್ಲರನ್ನೂ ಗೌರವಿಸುವುದನ್ನು ಕಲಿಸುತ್ತವೆ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಕಳೆದ 11 ವರ್ಷಗಳ ತಮ್ಮ ಸರ್ಕಾರದ ಅವಧಿಯಲ್ಲಿ ಶ್ರೀ ನರಸಿಂಹ ರಾವ್ ಜಿ ಮತ್ತು ಶ್ರೀ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಶ್ರೀ ಮುಲಾಯಂ ಸಿಂಗ್ ಯಾದವ್ ಜಿ ಮತ್ತು ಶ್ರೀ ತರುಣ್ ಗೊಗೊಯ್ ಜಿ ಅವರಂತಹ ನಾಯಕರನ್ನು ರಾಷ್ಟ್ರ ಪ್ರಶಸ್ತಿಗಳೊಂದಿಗೆ ಗೌರವಿಸಿದ್ದು ತಮ್ಮ ಸರ್ಕಾರವೇ ಹೊರತು, ಇದನ್ನು ಎಂದಿಗೂ ವಿರೋಧ ಪಕ್ಷ ಮತ್ತು ಅವರ ಮಿತ್ರಪಕ್ಷಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ; ಅವರ ಆಡಳಿತದಲ್ಲಿ ಇತರ ಪಕ್ಷಗಳ ನಾಯಕರು ಕೇವಲ ಅವಮಾನವನ್ನಷ್ಟೇ ಎದುರಿಸುತ್ತಿದ್ದರು ಎಂದು ಪ್ರಧಾನಮಂತ್ರಿಯವರು ಹೇಳಿದರು.
21ನೇ ಶತಮಾನದ ಭಾರತದಲ್ಲಿ ಉತ್ತರ ಪ್ರದೇಶವು ತನ್ನದೇ ಆದ ವಿಶಿಷ್ಟ ಗುರುತನ್ನು ರೂಪಿಸಿಕೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಒತ್ತು ನೀಡಿದ ಪ್ರಧಾನಮಂತ್ರಿಯವರು, ಸ್ವತಃ ಉತ್ತರ ಪ್ರದೇಶದ ಸಂಸದರಾಗಿ ರಾಜ್ಯದ ಪರಿಶ್ರಮಿ ಜನರು ಹೊಸ ಭವಿಷ್ಯವನ್ನು ಬರೆಯುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ಒಂದು ಕಾಲದಲ್ಲಿ ಉತ್ತರ ಪ್ರದೇಶವು ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಚರ್ಚಿಸಲ್ಪಡುತ್ತಿತ್ತು, ಆದರೆ ಇಂದು ಅಭಿವೃದ್ಧಿಗಾಗಿ ಚರ್ಚಿಸಲ್ಪಡುತ್ತಿದೆ ಎಂದು ಅವರು ನೆನಪಿಸಿಕೊಂಡರು. ಅಯೋಧ್ಯೆಯ ಭವ್ಯ ರಾಮ ಮಂದಿರ ಮತ್ತು ಕಾಶಿ ವಿಶ್ವನಾಥ ಧಾಮವು ಜಗತ್ತಿನಲ್ಲಿ ರಾಜ್ಯದ ಹೊಸ ಗುರುತಿನ ಸಂಕೇತಗಳಾಗಿ ಹೊರಹೊಮ್ಮುತ್ತಿದ್ದು, ಉತ್ತರ ಪ್ರದೇಶವು ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೈಲೈಟ್ ಮಾಡಿದ ಪ್ರಧಾನಮಂತ್ರಿ, ರಾಷ್ಟ್ರ ಪ್ರೇರಣಾ ಸ್ಥಳದಂತಹ ಆಧುನಿಕ ನಿರ್ಮಾಣಗಳು ಉತ್ತರ ಪ್ರದೇಶದ ಹೊಸ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಉತ್ತಮ ಆಡಳಿತ, ಸಮೃದ್ಧಿ ಮತ್ತು ನಿಜವಾದ ಸಾಮಾಜಿಕ ನ್ಯಾಯದ ಮಾದರಿಯಾಗಿ ಉತ್ತರ ಪ್ರದೇಶವು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸಿದ ಪ್ರಧಾನಮಂತ್ರಿಯವರು, ರಾಷ್ಟ್ರ ಪ್ರೇರಣಾ ಸ್ಥಳದ ಕುರಿತು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಪಂಕಜ್ ಚೌಧರಿ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸ್ವತಂತ್ರ ಭಾರತದ ಮಹಾನ್ ನಾಯಕರ ಪರಂಪರೆಯನ್ನು ಗೌರವಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಿತವಾದ 'ರಾಷ್ಟ್ರ ಪ್ರೇರಣಾ ಸ್ಥಳ'ವು, ಭಾರತದ ಪ್ರಜಾಪ್ರಭುತ್ವ, ರಾಜಕೀಯ ಮತ್ತು ಅಭಿವೃದ್ಧಿಯ ಪಯಣದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ದೇಶದ ಅತ್ಯಂತ ಪೂಜ್ಯ ರಾಜತಾಂತ್ರಿಕರಲ್ಲಿ ಒಬ್ಬರ ಜೀವನ, ಆದರ್ಶಗಳು ಮತ್ತು ಶಾಶ್ವತ ಪರಂಪರೆಗೆ ಸಲ್ಲಿಸುವ ಗೌರವ ನಮನವಾಗಿದೆ.
ರಾಷ್ಟ್ರ ಪ್ರೇರಣಾ ಸ್ಥಳವನ್ನು ಐತಿಹಾಸಿಕ ರಾಷ್ಟ್ರೀಯ ಸ್ಮಾರಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಫೂರ್ತಿದಾಯಕ ಸಂಕೀರ್ಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಸುಮಾರು 230 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮತ್ತು 65 ಎಕರೆಗಳ ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಸಂಕೀರ್ಣವನ್ನು ನಾಯಕತ್ವದ ಮೌಲ್ಯಗಳು, ರಾಷ್ಟ್ರ ಸೇವೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸ್ಫೂರ್ತಿಯನ್ನು ಉತ್ತೇಜಿಸಲು ಮೀಸಲಾದ ಶಾಶ್ವತ ರಾಷ್ಟ್ರೀಯ ಆಸ್ತಿಯಾಗಿ ರೂಪಿಸಲಾಗಿದೆ.
ಈ ಸಂಕೀರ್ಣವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಹೊಂದಿದ್ದು, ಇದು ಭಾರತದ ರಾಜಕೀಯ ಚಿಂತನೆ, ರಾಷ್ಟ್ರ ನಿರ್ಮಾಣ ಮತ್ತು ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಸಂಕೇತಿಸುತ್ತದೆ. ಇಲ್ಲಿ ಸುಮಾರು 98,000 ಚದರ ಅಡಿ ವಿಸ್ತೀರ್ಣದಲ್ಲಿ ಕಮಲದ ಆಕಾರದ ವಿನ್ಯಾಸದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ವಸ್ತುಸಂಗ್ರಹಾಲಯವೂ ಇದೆ. ಈ ವಸ್ತುಸಂಗ್ರಹಾಲಯವು ಸುಧಾರಿತ ಡಿಜಿಟಲ್ ಮತ್ತು ತನ್ಮಯಗೊಳಿಸುವ ತಂತ್ರಜ್ಞಾನಗಳ ಮೂಲಕ ಭಾರತದ ರಾಷ್ಟ್ರೀಯ ಪಯಣ ಮತ್ತು ಈ ದಾರ್ಶನಿಕ ನಾಯಕರ ಕೊಡುಗೆಗಳನ್ನು ಪ್ರದರ್ಶಿಸುತ್ತದೆ, ಇದು ಸಂದರ್ಶಕರಿಗೆ ಆಕರ್ಷಕ ಮತ್ತು ಶೈಕ್ಷಣಿಕ ಅನುಭವವನ್ನು ನೀಡುತ್ತದೆ.
ರಾಷ್ಟ್ರ ಪ್ರೇರಣಾ ಸ್ಥಳದ ಉದ್ಘಾಟನೆಯು ನಿಸ್ವಾರ್ಥ ನಾಯಕತ್ವ ಮತ್ತು ಉತ್ತಮ ಆಡಳಿತದ ಆದರ್ಶಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಇದು ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
*****
(रिलीज़ आईडी: 2208812)
आगंतुक पटल : 2
इस विज्ञप्ति को इन भाषाओं में पढ़ें:
English
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam