ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಚೌಧರಿ ಚರಣ್ ಸಿಂಗ್ ಕಿಸಾನ್ ಸಮ್ಮಾನ್ ಸಮಾರಂಭದಲ್ಲಿ ಭಾಗವಹಿಸಿದರು  


ಚೌಧರಿ ಚರಣ್ ಸಿಂಗ್ ಅವರು ರೈತ ಕಲ್ಯಾಣ, ಸಮೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿಯ ಸಂಕೇತವಾಗಿದ್ದರು – ಶ್ರೀ ಶಿವರಾಜ್ ಸಿಂಗ್ ಚೌಹಾಣ್  
ವಿಕಸಿತ ಭಾರತ — ಜಿ ರಾಮ್ ಜಿ ಕಾನೂನು ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಗೆ ಹೊಸ ಹಾದಿಯನ್ನು ಸುಗಮಗೊಳಿಸಲಿದೆ – ಶ್ರೀ ಚೌಹಾಣ್   

ಹೊಸ ‘ವಿಕಸಿತ ಭಾರತ — ಜಿ ರಾಮ್ ಜಿ’ ಕಾನೂನು ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ – ಶ್ರೀ ಶಿವರಾಜ್ ಚೌಹಾಣ್  

ಉದ್ಯೋಗ ಖಾತರಿಯು ಕೇವಲ ಅಗೆಯುವ ಕೆಲಸದ ಮೂಲಕ ಅರ್ಥಪೂರ್ಣವಾಗಲು ಸಾಧ್ಯವಿಲ್ಲ – ಶ್ರೀ ಚೌಹಾಣ್   

ಹೊಸ ಕಾನೂನಿನ ಅಡಿಯಲ್ಲಿ ಶಾಲೆಗಳು, ಚರಂಡಿಗಳು, ರಸ್ತೆಗಳು, ಕಿರು ಸೇತುವೆಗಳು ಮತ್ತು ಹೊಲದ ರಸ್ತೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು – ಶ್ರೀ ಶಿವರಾಜ್ ಸಿಂಗ್ ಚೌಹಾಣ್   

ರೈತರೊಂದಿಗೆ ನೇರ ಸಂವಾದ ನಡೆಸಲು ವಿಜ್ಞಾನಿಗಳು ವರ್ಷಕ್ಕೊಮ್ಮೆ ಹೊಲಗಳಿಗೆ ಭೇಟಿ ನೀಡಲಿದ್ದಾರೆ – ಕೇಂದ್ರ ಕೃಷಿ ಸಚಿವರು  

ನಕಲಿ ರಸಗೊಬ್ಬರ ಮತ್ತು ಕೀಟನಾಶಕಗಳ ವಿರುದ್ಧ ಸರ್ಕಾರವು ಮುಂದಿನ ಸಂಸತ್ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ಮಂಡಿಸಲಿದೆ – ಶ್ರೀ ಶಿವರಾಜ್ ಸಿಂಗ್  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು ರೈತರ ಕಲ್ಯಾಣ ಮತ್ತು ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಮುಂದುವರಿಸಲಿದೆ – ಶ್ರೀ ಶಿವರಾಜ್ ಸಿಂಗ್ ಚೌಹಾಣ್

प्रविष्टि तिथि: 20 DEC 2025 8:40PM by PIB Bengaluru

ನವದೆಹಲಿಯ ಪಿ.ಹೆಚ್‌.ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ'ಕಿಸಾನ್ ಟ್ರಸ್ಟ್' ವತಿಯಿಂದ ಆಯೋಜಿಸಲಾಗಿದ್ದ 'ಚೌಧರಿ ಚರಣ್ ಸಿಂಗ್ ಕಿಸಾನ್ ಸಮ್ಮಾನ್' ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಲ್ಲದೆ, ಕೃಷಿ ಕ್ಷೇತ್ರದಲ್ಲಿನ ಅಭೂತಪೂರ್ವ ಕೊಡುಗೆಗಾಗಿ ಪ್ರಗತಿಪರ ರೈತರನ್ನು ಮತ್ತು ವಿವಿಧ ಸಂಸ್ಥೆಗಳನ್ನು ಸನ್ಮಾನಿಸಿ ಗೌರವಿಸಿದರು. ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು (ಸ್ವತಂತ್ರ ಹೊಣೆಗಾರಿಕೆ) ಆದ ಶ್ರೀ ಜಯಂತ್ ಚೌಧರಿ ಅವರು ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ಪ್ರಗತಿಪರ ರೈತ ಶ್ರೀ ಸತ್ಯವಾನ್ ಸೆಹ್ರಾವತ್ ಅವರನ್ನು ಗೌರವಿಸಿದರು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಉಪ ಮಹಾನಿರ್ದೇಶಕರಾದ ಡಾ. ದೇವೇಂದ್ರ ಕುಮಾರ್ ಯಾದವ್ ಅವರಿಗೆ 'ಕೃಷಿ ಪ್ರಗತಿ' ವಿಭಾಗದಡಿ 'ಕೃಷಿ ರತ್ನ ಪ್ರಶಸ್ತಿ 2025' ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ, 'ಕೃಷಿ ಉದ್ಯಮಶೀಲತೆ' (Agripreneurship) ವಿಭಾಗದಲ್ಲಿ 'ಫ್ರುವಾಟೆಕ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯನ್ನು ಗುರುತಿಸಿ ಗೌರವಿಸಲಾಯಿತು. 'ಕಿಸಾನ್ ಟ್ರಸ್ಟ್ ಸೇವಾ ರತ್ನ' ವಿಭಾಗದಲ್ಲಿ 'ಪ್ರಥಮ್ ಎಜುಕೇಶನ್ ಫೌಂಡೇಶನ್'ಗೆ ಪ್ರಶಸ್ತಿ ನೀಡಿದರೆ, ಶ್ರೀ ಹರ್ವೀರ್ ಸಿಂಗ್ ಅವರಿಗೆ 'ಕಿಸಾನ್ ಟ್ರಸ್ಟ್ ಕಲಾಂ ರತ್ನ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, "ಚೌಧರಿ ಚರಣ್ ಸಿಂಗ್ ಅವರು ತಮ್ಮ ಜೀವನದುದ್ದಕ್ಕೂ ಒಬ್ಬ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು. ಇಡೀ ದೇಶವು ಅವರನ್ನು ಅಪಾರ ಭರವಸೆ ಮತ್ತು ನಂಬಿಕೆಯಿಂದ ನೋಡುತ್ತಿತ್ತು," ಎಂದು ಹೇಳಿದರು. "ಅವರು ಸತ್ಯ, ನಮ್ರತೆ ಮತ್ತು ದೃಢಸಂಕಲ್ಪದ ಮೂರ್ತಿರೂಪವಾಗಿದ್ದರು. ಗ್ರಾಮಗಳು, ಬಡವರು ಮತ್ತು ರೈತರ ಅಭಿವೃದ್ಧಿಗೆ ಅವರು ಸಂಪೂರ್ಣವಾಗಿ ಬದ್ಧರಾಗಿದ್ದರು. 'ಭಾರತದ ಸಮೃದ್ಧಿಯ ಹಾದಿಯು ರೈತನ ಹೊಲದ ಬದುಗಳ ಮೂಲಕ ಹಾದುಹೋಗುತ್ತದೆ' ಎಂದು ಸಾರಿದವರು ಇದೇ ಚೌಧರಿ ಸಾಹೇಬರು," ಎಂದು ಶ್ರೀ ಚೌಹಾಣ್ ಈ ಸಂದರ್ಭದಲ್ಲಿ ಸ್ಮರಿಸಿದರು.

ಶ್ರೀ ಚೌಹಾಣ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಚೌಧರಿ ಚರಣ್ ಸಿಂಗ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು. ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಿತರಾದ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು ಮತ್ತು ಹಿಂಡನ್ ನದಿಯ ಬಳಿ ಉಪ್ಪು ತಯಾರಿಸುವ ಮೂಲಕ ಉಪ್ಪಿನ ಕಾನೂನನ್ನು ಮುರಿದರು. ಈ ಉದ್ದೇಶಕ್ಕಾಗಿ ಅವರು ಜೈಲಿಗೂ ತೆರಳಿದ್ದರು. ಸ್ವಾತಂತ್ರ್ಯದ ನಂತರವೂ ಅವರು ಅನ್ಯಾಯದ ವಿರುದ್ಧ ನಿರ್ಭಯವಾಗಿ ಧ್ವನಿ ಎತ್ತಿದರು. ಜಮೀನ್ದಾರಿ ಪದ್ಧತಿಯ ನಿರ್ಮೂಲನೆಗೆ ಚೌಧರಿ ಚರಣ್ ಸಿಂಗ್ ಅವರಷ್ಟು ಮಹತ್ವದ ಕೊಡುಗೆಯನ್ನು ಬೇರೆ ಯಾರೂ ನೀಡಿಲ್ಲ ಎಂದು ಶ್ರೀ ಚೌಹಾಣ್ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಕೇಂದ್ರ ಸಚಿವರು ಮುಂದುವರಿದು ಮಾತನಾಡಿ, "ಗೋದಾಮುಗಳಲ್ಲಿನ ಆಹಾರ ಧಾನ್ಯಗಳ ಸಂಗ್ರಹಣೆಯನ್ನು ಬಡವರ ಕಲ್ಯಾಣದೊಂದಿಗೆ ಜೋಡಿಸುವ ಗಮನಾರ್ಹ ಪ್ರಯತ್ನವನ್ನು ಮಾಡಿದವರು ಇದೇ ಚೌಧರಿ ಸಾಹೇಬರು. ಪ್ರತಿಯೊಂದು ಬಡ ಕುಟುಂಬಕ್ಕೆ ಗೌರವಾನ್ವಿತ ಆಹಾರ ಭದ್ರತೆಯನ್ನು ಖಚಿತಪಡಿಸುವ 'ಉದ್ಯೋಗಕ್ಕೆ ಬದಲಾಗಿ ಆಹಾರ' (Food in exchange of employment) ಎಂಬ ಪರಿಕಲ್ಪನೆಯು ಅವರ ದೂರದೃಷ್ಟಿಯ ಕೊಡುಗೆಯಾಗಿದೆ" ಎಂದು ತಿಳಿಸಿದರು.

ಶ್ರೀ ಚೌಹಾಣ್ ಅವರು ಇತ್ತೀಚೆಗೆ ಅಂಗೀಕರಿಸಲಾದ 'ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ)' — ಜನಪ್ರಿಯವಾಗಿ 'ಜಿ ರಾಮ್ ಜಿ ಕಾನೂನು' (G Ram G Law) ಎಂದು ಕರೆಯಲ್ಪಡುವ — ಹೊಸ ಕಾಯಿದೆಯ ಬಗ್ಗೆ ಚರ್ಚಿಸಿದರು. ಈ ಹೊಸ ಕಾನೂನಿನ ಮೂಲ ಸಾರವು ಬಡವರ ಕಲ್ಯಾಣದ ಆಶಯದಲ್ಲಿದೆ ಎಂದು ಅವರು ಹೇಳಿದರು. ಈ ಕಾನೂನಿನ ಅಡಿಯಲ್ಲಿ, ಖಾತರಿಪಡಿಸಿದ ಉದ್ಯೋಗದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ವರ್ಷ ಎಂಜಿನರೇಗಾ (MGNREGA) ಅಡಿಯಲ್ಲಿ ₹88,000 ಕೋಟಿ ಹಂಚಿಕೆ ಮಾಡಲಾಗಿತ್ತು, ನಂತರ ಅದನ್ನು ₹1 ಲಕ್ಷ ಕೋಟಿಗೆ ಮತ್ತು ಆನಂತರ ₹1.11 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. "ಇಂತಹ ದೊಡ್ಡ ಮೊತ್ತದ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಕೆಲಸಗಳಿಗೆ ಅರ್ಥಪೂರ್ಣವಾಗಿ ಬಳಸಬಾರದೇ?" ಎಂದು ಅವರು ಪ್ರಶ್ನಿಸಿದರು. ಉದ್ಯೋಗ ಖಾತರಿ ಯೋಜನೆಯು ಕೇವಲ ಗುಂಡಿ ತೋಡುವಂತಹ ಕೆಲಸಗಳಿಂದ ತನ್ನ ನೈಜ ಉದ್ದೇಶವನ್ನು ಸಾಧಿಸಲು ಸಾಧ್ಯವಿಲ್ಲ, ಅಂತಹ ಕೆಲಸಗಳು ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಹೊಸ ಕಾನೂನು ಕೇವಲ ಉದ್ಯೋಗ ಖಾತರಿಯನ್ನಷ್ಟೇ ಅಲ್ಲದೆ, ಗ್ರಾಮಗಳಲ್ಲಿ ಗೋಚರಿಸುವಂತಹ ರೂಪಾಂತರವನ್ನು (Visible transformation) ತರುವ ಮೂಲಕ ಪ್ರಮುಖ ಸುಧಾರಣೆಗಳನ್ನು ತರುತ್ತದೆ ಎಂದು ಅವರು ಹೇಳಿದರು. ಪ್ರತಿಯೊಂದು ಗ್ರಾಮವೂ ತನ್ನದೇ ಆದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ ಮತ್ತು ಅದರಂತೆ ಅವುಗಳನ್ನು ಜಾರಿಗೊಳಿಸಲಾಗುತ್ತದೆ. ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ಧಿ ಎರಡೂ ಜೊತೆ ಜೊತೆಯಾಗಿ ಸಾಗಲಿವೆ — ಈ ಯೋಜನೆಯಡಿ ಶಾಲೆಗಳು, ಚರಂಡಿಗಳು, ರಸ್ತೆಗಳು, ಕಿರು ಸೇತುವೆಗಳು (culverts) ಮತ್ತು ಹೊಲದ ರಸ್ತೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಹೊಸ ಕಾನೂನಿನ ಕುರಿತು ಮಾಹಿತಿ ನೀಡಿದ ಶ್ರೀ ಚೌಹಾಣ್ ಅವರು, ಈ ಕಾನೂನು ಪಂಚಾಯತ್‌ಗಳನ್ನು ಅವುಗಳ ಅಭಿವೃದ್ಧಿ ಮತ್ತು ಉದ್ಯೋಗದ ಅಗತ್ಯತೆಗಳಿಗೆ ಅನುಗುಣವಾಗಿ ವರ್ಗೀಕರಿಸುತ್ತದೆ ಮತ್ತು ಆ ಆಧಾರದ ಮೇಲೆಯೇ ಅನುದಾನವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಕಾನೂನು ಕೇವಲ ನಿರ್ಮಾಣ ಕೆಲಸಗಳಿಗಷ್ಟೇ ಸೀಮಿತವಾಗದೆ, ಬಿತ್ತನೆ, ಕೊಯ್ಲು ಮತ್ತು ಇತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಈ ಮೂಲಕ ರೈತರು ಮತ್ತು ಕೃಷಿ ಕಾರ್ಮಿಕರ ನಡುವೆ ಒಂದು ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳಲು ಬಲವಾದ ಪ್ರಯತ್ನವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ವಿಜ್ಞಾನಿಗಳು ಮತ್ತು ರೈತರ ನಡುವೆ ನೇರ ಸಂವಾದದ ಮಹತ್ವವನ್ನು ತಿಳಿಸಿದ ಅವರು, ಸಂಶೋಧನಾ ಫಲಿತಾಂಶಗಳನ್ನು ನೇರವಾಗಿ ಹೊಲಗದ್ದೆಗಳಿಗೆ ತಲುಪಿಸುವ 'ಲ್ಯಾಬ್-ಟು-ಲ್ಯಾಂಡ್' (ಪ್ರಯೋಗಾಲಯದಿಂದ ಭೂಮಿಗೆ) ಪರಿಕಲ್ಪನೆಯನ್ನು ಉತ್ತೇಜಿಸಿದರು. ರೈತರೊಂದಿಗೆ ನೇರ ಸಂವಾದ ನಡೆಸಲು ಮತ್ತು ಜ್ಞಾನ ವಿನಿಮಯಕ್ಕಾಗಿ ವಿಜ್ಞಾನಿಗಳು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೊಲಗಳಿಗೆ ಭೇಟಿ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಸಂಶೋಧಕರು ತಮ್ಮ ಅಧ್ಯಯನಗಳನ್ನು ರೈತರ ನೈಜ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ನಕಲಿ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ದಾರಿತಪ್ಪಿಸುವ ಹೆಸರಿನಲ್ಲಿ ಮಾರಾಟವಾಗುವ ಅನಧಿಕೃತ ಜೈವಿಕ ಉತ್ತೇಜಕಗಳ (biostimulants) ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಚೌಹಾಣ್ ಅವರು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಸರ್ಕಾರವು ಸಮಗ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಇವುಗಳನ್ನು ನಿಯಂತ್ರಿಸಲು ಮುಂಬರುವ ಸಂಸತ್ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗುವುದು. ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪ್ರಾಮಾಣಿಕ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಮುಂಬರುವ ಬಜೆಟ್ ಅಧಿವೇಶನ ಮತ್ತು ಕೃಷಿ ವಲಯದ ಪಂಚವಾರ್ಷಿಕ ಯೋಜನೆಗಳ ತಯಾರಿಯಲ್ಲಿ ತಮ್ಮ ಸಲಹೆಗಳನ್ನು ನೀಡುವಂತೆ ಅವರು ಕಿಸಾನ್ ಟ್ರಸ್ಟ್‌ಗೆ ಮನವಿ ಮಾಡಿದರು. ಅಲ್ಲದೆ, ಉದ್ದೇಶಿತ 'ಚಿಂತನ ಶಿಬಿರ'ಕ್ಕಾಗಿ ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲು ಆಹ್ವಾನ ನೀಡಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಚೌಧರಿ ಚರಣ್ ಸಿಂಗ್ ಅವರ ಮೌಲ್ಯಗಳು ಮತ್ತು ತತ್ವಗಳ ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಸರ್ಕಾರವು ರೈತರ ಕಲ್ಯಾಣ ಮತ್ತು ಗ್ರಾಮೀಣ ಪ್ರಗತಿಗಾಗಿ ಶಕ್ತಿಮೀರಿ ಶ್ರಮಿಸಲಿದೆ ಎಂದು ಪುನರುಚ್ಚರಿಸಿದರು.

 

*****


(रिलीज़ आईडी: 2207113) आगंतुक पटल : 8
इस विज्ञप्ति को इन भाषाओं में पढ़ें: English , हिन्दी , Marathi , Gujarati