ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಓಮನ್ ಭೇಟಿಯ ಸಂದರ್ಭದಲ್ಲಿ ಭಾರತ - ಓಮನ್ ಜಂಟಿ ಹೇಳಿಕೆ
प्रविष्टि तिथि:
18 DEC 2025 5:28PM by PIB Bengaluru
ಓಮನ್ ಸುಲ್ತಾನ್ ಗೌರವಾನ್ವಿತ ಹೈತಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 17-18 ರಂದು ಓಮನ್ ಸುಲ್ತಾನೇಟ್ ಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯವರನ್ನು ವಿಮಾನ ನಿಲ್ದಾಣದಲ್ಲಿ ರಕ್ಷಣಾ ವ್ಯವಹಾರಗಳ ಉಪಪ್ರಧಾನಮಂತ್ರಿ ಗೌರವಾನ್ವಿತ ಸೈಯದ್ ಶಿಹಾಬ್ ಬಿನ್ ತಾರಿಕ್ ಅವರು ಬರಮಾಡಿಕೊಂಡರು ಮತ್ತು ಅವರಿಗೆ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಡಿಸೆಂಬರ್ 18, 2025 ರಂದು ಅಲ್ ಬರಕಾ ಅರಮನೆಯಲ್ಲಿ ಗೌರವಾನ್ವಿತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರಧಾನಮಂತ್ರಿಯವರನ್ನು ಬರಮಾಡಿಕೊಂಡರು.
ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವದ ವರ್ಷದಲ್ಲಿ ಈ ಭೇಟಿ ನಡೆಯುತ್ತಿರುವುದರಿಂದ ಇದು ವಿಶೇಷ ಮಹತ್ವವನ್ನು ಹೊಂದಿದೆ. ಡಿಸೆಂಬರ್ 2023 ರಲ್ಲಿ ಗೌರವಾನ್ವಿತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಭಾರತಕ್ಕೆ ನೀಡಿದ್ದ ಅಧಿಕೃತ ಭೇಟಿಯ ಮುಂದುವರಿದ ಭಾಗವಾಗಿ ಪ್ರಧಾನಮಂತ್ರಿಯವರ ಈ ಭೇಟಿ ನಡೆದಿದೆ.
ಗೌರವಾನ್ವಿತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಾಲೋಚನೆ ನಡೆಸಿದರು ಮತ್ತು ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ತಂತ್ರಜ್ಞಾನ, ಶಿಕ್ಷಣ, ಇಂಧನ, ಬಾಹ್ಯಾಕಾಶ, ಕೃಷಿ, ಸಂಸ್ಕೃತಿ ಮತ್ತು ಜನರಿಂದ ಜನರ ನಡುವಿನ ಬಾಂಧವ್ಯವನ್ನು ಒಳಗೊಂಡಿರುವ ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಡಿಸೆಂಬರ್ 2023ರಲ್ಲಿ ಓಮನ್ ಸುಲ್ತಾನರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಗೀಕರಿಸಲಾದ 'ಜಂಟಿ ದೃಷ್ಟಿಕೋನ ದಾಖಲೆ'ಯಲ್ಲಿ ಗುರುತಿಸಲಾದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಕ್ರಮಗಳು ಮತ್ತು ಸಹಕಾರವನ್ನು ಉಭಯ ನಾಯಕರು ಪರಿಶೀಲಿಸಿದರು. ಸಮುದ್ರ ತೀರದ ನೆರೆಹೊರೆಯ ರಾಷ್ಟ್ರಗಳಾದ ಓಮನ್ ಮತ್ತು ಭಾರತದ ನಡುವಿನ ಸಂಬಂಧವು ಕಾಲದ ಪರೀಕ್ಷೆಯನ್ನು ಎದುರಿಸಿ ನಿಂತಿದೆ ಮತ್ತು ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯಾಗಿ ರೂಪಾಂತರಗೊಂಡಿದೆ ಎಂದು ಉಭಯ ಕಡೆಯವರು ಒಪ್ಪಿಕೊಂಡರು.
ವಿಷನ್ 2040 ಅಡಿಯಲ್ಲಿ ಓಮನ್ ಸಾಧಿಸಿರುವ ಆರ್ಥಿಕ ವೈವಿಧ್ಯೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಭಾರತೀಯ ಕಡೆಯವರು ಶ್ಲಾಘಿಸಿದರು. ಭಾರತದ ನಿರಂತರ ಆರ್ಥಿಕ ಬೆಳವಣಿಗೆ ಮತ್ತು 2047ರ ವೇಳೆಗೆ 'ವಿಕಸಿತ ಭಾರತ' ಗುರಿಯನ್ನು ಓಮನ್ ಕಡೆಯವರು ಶ್ಲಾಘಿಸಿದರು. ಉಭಯ ಕಡೆಯವರು ಎರಡೂ ದೇಶಗಳ ದೃಷ್ಟಿಕೋನಗಳಲ್ಲಿನ ಸಮನ್ವಯತೆಯನ್ನು ಗಮನಿಸಿದರು ಮತ್ತು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿ ವ್ಯಾಪಾರ ಮತ್ತು ವಾಣಿಜ್ಯವು ಪ್ರಮುಖ ಸ್ತಂಭವಾಗಿದೆ ಎಂದು ಉಭಯ ಕಡೆಯವರು ಗಮನಿಸಿದರು ಮತ್ತು ದ್ವಿಪಕ್ಷೀಯ ವ್ಯಾಪಾರದಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ವೈವಿಧ್ಯೀಕರಣದ ಸಂಭಾವ್ಯತೆಯನ್ನು ಒತ್ತಿಹೇಳಿದರು. ಜವಳಿ, ಆಟೋಮೊಬೈಲ್ಸ್, ರಾಸಾಯನಿಕಗಳು, ಉಪಕರಣಗಳು ಮತ್ತು ರಸಗೊಬ್ಬರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರವನ್ನು ಉತ್ತೇಜಿಸಲು ಇರುವ ಅಪಾರ ಸಾಮರ್ಥ್ಯವನ್ನು ಉಭಯ ಕಡೆಯವರು ಒಪ್ಪಿಕೊಂಡರು.
ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧದಲ್ಲಿ ಪ್ರಮುಖ ಮೈಲಿಗಲ್ಲಾಗಿರುವ 'ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ' (CEPA) ಸಹಿಗೆ ಉಭಯ ಕಡೆಯವರು ಹರ್ಷ ವ್ಯಕ್ತಪಡಿಸಿದರು. CEPA ಉಭಯ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗಲಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು ಮತ್ತು ಈ ಒಪ್ಪಂದದ ಪ್ರಯೋಜನವನ್ನು ಪಡೆಯಲು ಎರಡೂ ದೇಶಗಳ ಖಾಸಗಿ ವಲಯವನ್ನು ಪ್ರೋತ್ಸಾಹಿಸಿದರು. ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ಥಿರವಾದ ಚೌಕಟ್ಟನ್ನು ನಿರ್ಮಿಸುವ ಮೂಲಕ CEPA ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂದು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು. ಆರ್ಥಿಕತೆಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ CEPA ಹೊಸ ಅವಕಾಶಗಳನ್ನು ತೆರೆಯುತ್ತದೆ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಉಭಯ ದೇಶಗಳ ನಡುವೆ ಹೂಡಿಕೆಯ ಹರಿವನ್ನು ಉತ್ತೇಜಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬುದನ್ನು ಗುರುತಿಸುತ್ತಾ ಮತ್ತು ಆರ್ಥಿಕ ವೈವಿಧ್ಯೀಕರಣದಲ್ಲಿ ಓಮನ್ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸುತ್ತಾ, ಉಭಯ ಕಡೆಯವರು ಮೂಲಸೌಕರ್ಯ, ತಂತ್ರಜ್ಞಾನ, ಉತ್ಪಾದನೆ, ಆಹಾರ ಭದ್ರತೆ, ಲಾಜಿಸ್ಟಿಕ್ಸ್, ಆತಿಥ್ಯ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಆದ್ಯತೆಯ ಕ್ಷೇತ್ರಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಆಸಕ್ತಿ ವ್ಯಕ್ತಪಡಿಸಿದರು. ಓಮನ್-ಭಾರತ ಜಂಟಿ ಹೂಡಿಕೆ ನಿಧಿಯ (OIJIF) ಹಿಂದಿನ ಯಶಸ್ವಿ ಹಾದಿಯನ್ನು ಗಮನಿಸಿದ ಉಭಯ ಕಡೆಯವರು, ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು ಇದು ಬಲವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸುವ ಕಾರ್ಯವಿಧಾನಗಳನ್ನು ಅನ್ವೇಷಿಸುವ ಕುರಿತು ನಡೆದ ಚರ್ಚೆಗಳನ್ನು ಉಭಯ ನಾಯಕರು ಗಮನಿಸಿದರು. ಅಲ್ಲದೆ, ಆರ್ಥಿಕ ಸಹಕಾರ ಮತ್ತು ದೃಢವಾದ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಬೆಂಬಲಿಸುವಲ್ಲಿ 'ದ್ವಿಪಕ್ಷೀಯ ಹೂಡಿಕೆ ಒಪ್ಪಂದ'ದ ಮಹತ್ವವನ್ನು ಗುರುತಿಸಿದ ಅವರು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಸ್ವಾಗತಿಸಿದರು.
ಇಂಧನ ಕ್ಷೇತ್ರದಲ್ಲಿ ತಮ್ಮ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಉಭಯ ಕಡೆಯವರು ಚರ್ಚಿಸಿದರು. ದ್ವಿಪಕ್ಷೀಯ ಇಂಧನ ವ್ಯಾಪಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಇದನ್ನು ಮತ್ತಷ್ಟು ವಿಸ್ತರಿಸಲು ಅಪಾರ ಅವಕಾಶಗಳಿವೆ ಎಂದು ಒಪ್ಪಿಕೊಂಡರು. ಭಾರತೀಯ ಮತ್ತು ಜಾಗತಿಕ ಮಟ್ಟದ E&P ಅವಕಾಶಗಳಲ್ಲಿ ಸಹಯೋಗ, ಹಸಿರು ಅಮೋನಿಯಾ ಮತ್ತು ಹಸಿರು ಹೈಡ್ರೋಜನ್ ಕ್ಷೇತ್ರಗಳಲ್ಲಿ ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಹಕಾರ ಸೇರಿದಂತೆ ಇಂಧನ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಹೆಚ್ಚಿಸಲು ತಮ್ಮ ಕಂಪನಿಗಳಿಗೆ ಬೆಂಬಲ ನೀಡಲು ಉಭಯ ದೇಶಗಳು ಆಸಕ್ತಿ ತೋರಿಸಿದವು. ತಮ್ಮ ಸುಸ್ಥಿರ ಇಂಧನ ಗುರಿಗಳ ನಡುವಿನ ಸಾಮ್ಯತೆಯನ್ನು ಗುರುತಿಸಿದ ಅವರು, ಜಂಟಿ ಹೂಡಿಕೆ, ತಂತ್ರಜ್ಞಾನ ವರ್ಗಾವಣೆ ಮತ್ತು ದೀರ್ಘಕಾಲೀನ ಸಹಯೋಗವನ್ನು ಪ್ರಸ್ತಾಪಿಸಿದರು.
ರಕ್ಷಣಾ ಕ್ಷೇತ್ರದಲ್ಲಿ ಬಲಗೊಳ್ಳುತ್ತಿರುವ ಸಹಕಾರವನ್ನು ಉಭಯ ಕಡೆಯವರು ಶ್ಲಾಘಿಸಿದರು. ಹಂಚಿಕೆಯ ಗುರಿಗಳನ್ನು ಸಾಧಿಸಲು ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಜಂಟಿ ಸಮರಾಭ್ಯಾಸಗಳು, ತರಬೇತಿ ಮತ್ತು ಉನ್ನತ ಮಟ್ಟದ ಭೇಟಿಗಳು ಸೇರಿದಂತೆ ಈ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಿರ್ಧರಿಸಿದರು. ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸುವ ಮೂಲಕ ಮತ್ತು ನಿರಂತರ ಮಾಹಿತಿ ವಿನಿಮಯವನ್ನು ಸುಗಮಗೊಳಿಸುವ ಮೂಲಕ ಕಡಲ ಅಪರಾಧಗಳು ಹಾಗೂ ಕಡಲ್ಗಳ್ಳತನವನ್ನು ತಡೆಗಟ್ಟಲು ಜಂಟಿ ಉಪಕ್ರಮಗಳನ್ನು ಕೈಗೊಳ್ಳಲು ಅವರು ಸಹಮತ ವ್ಯಕ್ತಪಡಿಸಿದರು.
ಈ ಭೇಟಿಯ ಸಂದರ್ಭದಲ್ಲಿ, ಉಭಯ ದೇಶಗಳು 'ಕಡಲ ಸಹಕಾರದ ಕುರಿತಾದ ಜಂಟಿ ದೃಷ್ಟಿಕೋನ ದಾಖಲೆ'ಯನ್ನು (Joint Vision Document on Maritime Cooperation) ಅಂಗೀಕರಿಸಿದವು. ಇದು ಪ್ರಾದೇಶಿಕ ಕಡಲ ಭದ್ರತೆ, ನೀಲಿ ಆರ್ಥಿಕತೆ ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಕುರಿತು ಉಭಯ ದೇಶಗಳಿಗಿರುವ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಆರೋಗ್ಯ ಸಹಕಾರವನ್ನು ತಮ್ಮ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದೆಂದು ಗುರುತಿಸಿದ ಉಭಯ ಕಡೆಯವರು, ಈ ಕ್ಷೇತ್ರದಲ್ಲಿ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಆಸಕ್ತಿ ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರವನ್ನು ಸುಗಮಗೊಳಿಸಲು ಓಮನ್ ನ 'ನ್ಯಾಷನಲ್ ಯೂನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ'ಯಲ್ಲಿ ಆಯುಷ್ ಪೀಠ ಮತ್ತು ಮಾಹಿತಿ ಘಟಕವನ್ನು ಸ್ಥಾಪಿಸುವ ಪ್ರಸ್ತಾವನೆ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗಳು ಮತ್ತು ಉಪಕ್ರಮಗಳನ್ನು ಉಭಯ ಕಡೆಯವರು ಗಮನಿಸಿದರು.
ಉಭಯ ಕಡೆಯವರು ಕೃಷಿ ಸಹಕಾರಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಕೃಷಿ ವಿಜ್ಞಾನ, ಪಶುಸಂಗೋಪನೆ ಮತ್ತು ಜಲಚರ ಸಾಕಣೆ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಕೃಷಿ ಮತ್ತು ಸಂಬಂಧಿತ ವಲಯಗಳ ಕುರಿತಾದ ತಿಳುವಳಿಕಾ ಪತ್ರಕ್ಕೆ (MoU) ಸಹಿ ಹಾಕಿದ್ದನ್ನು ಸ್ವಾಗತಿಸಿದರು. ಅಲ್ಲದೆ, ತರಬೇತಿ ಮತ್ತು ವೈಜ್ಞಾನಿಕ ವಿನಿಮಯದ ಮೂಲಕ ಸಿರಿಧಾನ್ಯಗಳ ಕೃಷಿಯಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ಕಡೆಯವರು ಒಪ್ಪಿಕೊಂಡರು.
ಐಟಿ ಸೇವೆಗಳು, ಡಿಜಿಟಲ್ ಮೂಲಸೌಕರ್ಯ ಮತ್ತು ಬಾಹ್ಯಾಕಾಶ ಅನ್ವಯಿಕೆಗಳು ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಹಕಾರವನ್ನು ಉಭಯ ಕಡೆಯವರು ಗಮನಿಸಿದರು.
ಸಾಂಸ್ಕೃತಿಕ ಸಹಕಾರದ ಬಲವರ್ಧನೆ ಮತ್ತು ಜನರಿಂದ ಜನರ ನಡುವಿನ ಗಾಢ ಬಾಂಧವ್ಯದ ಬಗ್ಗೆ ಉಭಯ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. "Legacy of Indo-Oman Relations" (ಭಾರತ-ಓಮನ್ ಸಂಬಂಧಗಳ ಪರಂಪರೆ) ಎಂಬ ಜಂಟಿ ಪ್ರದರ್ಶನವನ್ನು ಅವರು ಸ್ವಾಗತಿಸಿದರು ಮತ್ತು ಸಾಂಸ್ಕೃತಿಕ ಡಿಜಿಟಲೀಕರಣದ ಉಪಕ್ರಮಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರು. ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸುವ ಸಲುವಾಗಿ, ಸೋಹರ್ ವಿಶ್ವವಿದ್ಯಾಲಯದಲ್ಲಿ 'ಇಂಡಿಯನ್ ಸ್ಟಡೀಸ್'ಗಾಗಿ ಐಸಿಸಿಆರ್ (ICCR) ಪೀಠವನ್ನು ಸ್ಥಾಪಿಸಲು ಸಹಕರಿಸುವ ಉಪಕ್ರಮವನ್ನು ಉಭಯ ಕಡೆಯವರು ಪ್ರಸ್ತಾಪಿಸಿದರು.
ಕಡಲ ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಕುರಿತಾದ ತಿಳುವಳಿಕಾ ಪತ್ರವನ್ನು (MoU) ಉಭಯ ಕಡೆಯವರು ಸ್ವಾಗತಿಸಿದರು. ಇದು ಜಂಟಿ ಪ್ರದರ್ಶನಗಳು ಮತ್ತು ಸಂಶೋಧನೆಗಳ ಮೂಲಕ ವಸ್ತುಸಂಗ್ರಹಾಲಯಗಳ ನಡುವೆ ಸಹಯೋಗಕ್ಕೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಉಭಯ ದೇಶಗಳ ಹಂಚಿಕೆಯ ಕಡಲ ಸಂಪ್ರದಾಯಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ INSV ಕೌಂಡಿನ್ಯ ಹಡಗು ಓಮನ್ಗೆ ಕೈಗೊಳ್ಳಲಿರುವ ಚೊಚ್ಚಲ ಪ್ರಯಾಣವನ್ನು ಅವರು ಗಮನಿಸಿದರು.
ಮುಂಬರುವ 'ಭಾರತ-ಓಮನ್ ಜ್ಞಾನ ಸಂವಾದ' (India Oman Knowledge Dialogue) ಸೇರಿದಂತೆ ಶಿಕ್ಷಣ ಮತ್ತು ವೈಜ್ಞಾನಿಕ ವಿನಿಮಯದಲ್ಲಿ ನಡೆಯುತ್ತಿರುವ ಸಹಕಾರವನ್ನು ಉಭಯ ಕಡೆಯವರು ಗುರುತಿಸಿದರು. ಉನ್ನತ ಶಿಕ್ಷಣದ ಕುರಿತಾದ ತಿಳುವಳಿಕಾ ಪತ್ರವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯ, ಸಾಂಸ್ಥಿಕ ಸಹಯೋಗ ಮತ್ತು ಜಂಟಿ ಸಂಶೋಧನೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಐಟೆಕ್ (ITEC) ಕಾರ್ಯಕ್ರಮದ ಅಡಿಯಲ್ಲಿ ನಡೆಯುತ್ತಿರುವ ಸಾಮರ್ಥ್ಯ ವೃದ್ಧಿ ಉಪಕ್ರಮಗಳನ್ನು ಸಹ ಉಭಯ ಕಡೆಯವರು ಗಮನಿಸಿದರು.
ಗಮ್ಯಸ್ಥಾನಗಳ ಸಂಖ್ಯೆ ಮತ್ತು ಕೋಡ್-ಶೇರಿಂಗ್ ಸೌಲಭ್ಯಗಳು ಸೇರಿದಂತೆ ವಿಮಾನ ಸೇವಾ ಸಂಚಾರ ಹಕ್ಕುಗಳ ಬಗ್ಗೆ ಚರ್ಚಿಸಲು ಓಮನ್ ಆಸಕ್ತಿ ವ್ಯಕ್ತಪಡಿಸಿತು. ಭಾರತವು ಈ ಮನವಿಯನ್ನು ಗಮನಿಸಿತು.
ಶತಮಾನಗಳಷ್ಟು ಹಳೆಯದಾದ ಜನರಿಂದ ಜನರ ನಡುವಿನ ಬಾಂಧವ್ಯವು ಓಮನ್-ಭಾರತದ ಸಂಬಂಧದ ಅಡಿಗಲ್ಲಾಗಿ ಉಳಿದಿದೆ ಎಂದು ಉಭಯ ಕಡೆಯವರು ಒಪ್ಪಿಕೊಂಡರು. ಓಮನ್ ನಲ್ಲಿ ನೆಲೆಸಿರುವ ಸುಮಾರು 6,75,000 ಜನರ ಸಂಖ್ಯೆಯ ಕ್ರಿಯಾಶೀಲ ಭಾರತೀಯ ಸಮುದಾಯದ ಕ್ಷೇಮ ಮತ್ತು ಕಲ್ಯಾಣವನ್ನು ಖಚಿತಪಡಿಸಿದ್ದಕ್ಕಾಗಿ ಓಮನ್ ನಾಯಕತ್ವಕ್ಕೆ ಭಾರತೀಯ ಕಡೆಯವರು ತಮ್ಮ ಆಳವಾದ ಕೃತಜ್ಞತೆಗಳನ್ನು ಸಲ್ಲಿಸಿದರು. ಓಮನ್ ನ ಅಭಿವೃದ್ಧಿಗೆ ಭಾರತೀಯ ಅನಿವಾಸಿಗಳ ಅಮೂಲ್ಯ ಕೊಡುಗೆಗಳನ್ನು ಓಮನ್ ಕಡೆಯವರು ಗುರುತಿಸಿದರು.
ಉಭಯ ಕಡೆಯವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಉಭಯ ನಾಯಕರು ಖಂಡಿಸಿದರು. ಇಂತಹ ಕೃತ್ಯಗಳಿಗೆ ಯಾವುದೇ ಸಮರ್ಥನೆಯನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು. ಅಲ್ಲದೆ, ಈ ಕ್ಷೇತ್ರದಲ್ಲಿ ನಿರಂತರ ಸಹಕಾರದ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.
ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಉಭಯ ಕಡೆಯವರು ಕಳವಳ ವ್ಯಕ್ತಪಡಿಸಿದರು ಮತ್ತು ನಾಗರಿಕರಿಗೆ ಮಾನವೀಯ ನೆರವನ್ನು ಸುರಕ್ಷಿತವಾಗಿ ಹಾಗೂ ಸಕಾಲಿಕವಾಗಿ ತಲುಪಿಸಲು ಕರೆ ನೀಡಿದರು. 'ಗಾಜಾ ಶಾಂತಿ ಯೋಜನೆ'ಯ ಮೊದಲ ಹಂತದ ಸಹಿಯನ್ನು ಅವರು ಸ್ವಾಗತಿಸಿದರು ಮತ್ತು ಈ ಯೋಜನೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ ಅವರು, ಸಾರ್ವಭೌಮ ಮತ್ತು ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದ ಸ್ಥಾಪನೆ ಸೇರಿದಂತೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ನ್ಯಾಯೋಚಿತ ಹಾಗೂ ಸುಸ್ಥಿರ ಪರಿಹಾರದ ಅಗತ್ಯವನ್ನು ಒತ್ತಿಹೇಳಿದರು.
ಭೇಟಿಯ ಸಂದರ್ಭದಲ್ಲಿ ಈ ಕೆಳಗಿನ ಒಪ್ಪಂದ ಮತ್ತು ತಿಳುವಳಿಕಾ ಪತ್ರಗಳಿಗೆ (MoU) ಸಹಿ ಹಾಕಲಾಯಿತು:
1. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA)
2. ಕಡಲ ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಕ್ಷೇತ್ರದಲ್ಲಿನ ತಿಳುವಳಿಕಾ ಪತ್ರ (MoU)
3. ಕೃಷಿ ಮತ್ತು ಸಂಬಂಧಿತ ವಲಯಗಳ ಕ್ಷೇತ್ರದಲ್ಲಿನ ತಿಳುವಳಿಕಾ ಪತ್ರ (MoU)
4. ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ತಿಳುವಳಿಕಾ ಪತ್ರ (MoU)
5. ಓಮನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ನಡುವಿನ ತಿಳುವಳಿಕಾ ಪತ್ರ (MoU)
6. ಕಡಲ ಸಹಕಾರದ ಕುರಿತಾದ ಜಂಟಿ ದೃಷ್ಟಿಕೋನ ದಾಖಲೆಯ ಅಂಗೀಕಾರ
7. ಸಿರಿಧಾನ್ಯಗಳ ಕೃಷಿ ಮತ್ತು ಕೃಷಿ-ಆಹಾರ ನಾವೀನ್ಯತೆಯಲ್ಲಿನ ಸಹಕಾರಕ್ಕಾಗಿ ಕಾರ್ಯಕಾರಿ ಕಾರ್ಯಕ್ರಮ
ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಹಾಗೂ ಉದಾರವಾದ ಆತಿಥ್ಯಕ್ಕಾಗಿ ಭಾರತದ ಪ್ರಧಾನಮಂತ್ರಿಯವರು ಗೌರವಾನ್ವಿತ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪರಸ್ಪರ ಅನುಕೂಲಕರವಾದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅವರು ಗೌರವಾನ್ವಿತ ಸುಲ್ತಾನರನ್ನು ಆಹ್ವಾನಿಸಿದರು.
*****
(रिलीज़ आईडी: 2206399)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam