ಭೂವಿಜ್ಞಾನ ಸಚಿವಾಲಯ
azadi ka amrit mahotsav

ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಚುರುಕುಗೊಳಿಸಲಿರುವ ಆರ್‌ ಡಿ ಐ  ನಿಧಿ: ಡಾ. ಜಿತೇಂದ್ರ ಸಿಂಗ್


ಮಾರುಕಟ್ಟೆಗೆ ಸಿದ್ಧವಿರುವ ತಂತ್ರಜ್ಞಾನಗಳಿಗೆ ಆರ್‌ ಡಿ ಐ ನಿಧಿಯ ಬೆಂಬಲ; ಎಐ (AI), ಬಯೋಟೆಕ್ ಮತ್ತು ಸ್ವಚ್ಛ ಇಂಧನ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು

ಬಹು-ಹಂತದ ಆರ್‌ ಡಿ ಐ ನಿಧಿ ರಚನೆಯ ಮೂಲಕ ಉದ್ಯಮ ವಲಯಕ್ಕೆ ನಾವೀನ್ಯತಾ ಹಣಕಾಸು ನೆರವು ಮುಕ್ತವಾಗಿಸಿದ ಕೇಂದ್ರ ಸರ್ಕಾರ

प्रविष्टि तिथि: 06 DEC 2025 6:35PM by PIB Bengaluru

ಪಂಚಕುಲದಲ್ಲಿ ನಡೆಯುತ್ತಿರುವ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮೇಳದ (IISF 2025) ಭಾಗವಾಗಿ ನಡೆದ ದುಂಡು ಮೇಜಿನ ಸಭೆಯಲ್ಲಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಶನಿವಾರ ಮಾತನಾಡಿದರು. ಸರ್ಕಾರವು 1 ಲಕ್ಷ ಕೋಟಿ ರೂ.ಗಳ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿಯನ್ನು ಜಾರಿಗೆ ತರುತ್ತಿರುವ ಈ ಸಮಯದಲ್ಲಿ, ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರವನ್ನು ರೂಪಿಸುವಲ್ಲಿ ಉದ್ಯಮ, ಹೂಡಿಕೆದಾರರು ಮತ್ತು ಸಂಶೋಧಕರು ಹೆಚ್ಚು ಸಕ್ರಿಯ ಪಾತ್ರ ವಹಿಸುವಂತೆ ಅವರು ಕರೆ ನೀಡಿದರು.

ಶೈಕ್ಷಣಿಕ ವಲಯ, ನವೋದ್ಯಮಗಳು ಮತ್ತು ಉದ್ಯಮ ಕ್ಷೇತ್ರದ ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "ವಿಜ್ಞಾನ ನೀತಿಯ ಯಶಸ್ಸನ್ನು ಕೇವಲ ಪ್ರಕಟಣೆಗಳಿಂದ ಅಳೆಯಬಾರದು. ಬದಲಿಗೆ ಸಂಶೋಧನೆಯನ್ನು ನೈಜ ಫಲಿತಾಂಶಗಳು, ಉದ್ಯೋಗಗಳು ಮತ್ತು ದೇಶದ ತಾಂತ್ರಿಕ ಸಾಮರ್ಥ್ಯವನ್ನಾಗಿ ಪರಿವರ್ತಿಸುವ ಅದರ ಸಾಮರ್ಥ್ಯದ ಮೂಲಕ ಅಳೆಯಬೇಕು," ಎಂದು ಹೇಳಿದರು. ನಾವೀನ್ಯತೆಯ ಹೊರೆಯನ್ನು ಸಾರ್ವಜನಿಕ ಸಂಸ್ಥೆಗಳೇ ಹೊರಲು ಸಾಧ್ಯವಿಲ್ಲ ಮತ್ತು ಮುಂಚೂಣಿ ತಂತ್ರಜ್ಞಾನಗಳಲ್ಲಿ ಭಾರತದ ಮಹತ್ವಾಕಾಂಕ್ಷೆಗಳಿಗೆ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಈಗ ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು.

ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಮತ್ತು ನವೆಂಬರ್‌ ನಲ್ಲಿ ಪ್ರಧಾನಮಂತ್ರಿಯವರು ಔಪಚಾರಿಕವಾಗಿ ಚಾಲನೆ ನೀಡಿದ ಆರ್‌ ಡಿ ಐ ನಿಧಿಯ ರೂಪರೇಷೆಗಳನ್ನು ಪಾಲುದಾರರಿಗೆ ಪರಿಚಯಿಸುವತ್ತ ಈ ಕಾರ್ಯಕ್ರಮ ಗಮನಹರಿಸಿತು. ಖಾಸಗಿ ವಲಯದ ನೇತೃತ್ವದ ಸಂಶೋಧನೆಗೆ ಉತ್ತೇಜನ ನೀಡಲು ವಿನ್ಯಾಸಗೊಳಿಸಲಾದ ಈ ನಿಧಿಯು, ಸ್ವಚ್ಛ ಇಂಧನ, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಡೀಪ್-ಟೆಕ್ ಉತ್ಪಾದನೆ, ಸೆಮಿಕಂಡಕ್ಟರ್‌ ಗಳು ಮತ್ತು ಡಿಜಿಟಲ್ ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣಾಮ ಬೀರುವ ಮತ್ತು ವಾಣಿಜ್ಯೀಕರಣಕ್ಕೆ ಸಿದ್ಧವಿರುವ ಯೋಜನೆಗಳಿಗೆ ಬೆಂಬಲ ನೀಡಲಿದೆ.

ಈ ನಿಧಿಯು ಕಂಪನಿಗಳಿಗೆ ನೇರ ಅನುದಾನ ನೀಡುವ ಬದಲಿಗೆ ವೃತ್ತಿಪರ ಮತ್ತು ಬಹು-ಹಂತದ ರಚನೆಯ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ವಿವರಿಸಿದರು. ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು (ANRF) ಮೊದಲ ಹಂತದ ಮೇಲ್ವಿಚಾರಕನಾಗಿ (Custodian) ಕಾರ್ಯನಿರ್ವಹಿಸಿದರೆ, ಆಯ್ದ ಎರಡನೇ ಹಂತದ ನಿಧಿ ನಿರ್ವಾಹಕರಾದ ಪರ್ಯಾಯ ಹೂಡಿಕೆ ನಿಧಿಗಳು, ಅಭಿವೃದ್ಧಿ ಹಣಕಾಸು ಸಂಸ್ಥೆಗಳು ಮತ್ತು TDB ಹಾಗೂ BIRAC ನಂತಹ ವಿಶೇಷ ಏಜೆನ್ಸಿಗಳ ಮೂಲಕ ಹಣಕಾಸು ವಿತರಣೆ ನಡೆಯಲಿದೆ. ಮಾರುಕಟ್ಟೆ ಸಿದ್ಧತೆಗೆ ಹತ್ತಿರವಿರುವ ಯೋಜನೆಗಳಿಗೆ ಒತ್ತು ನೀಡಿ, ದೀರ್ಘಾವಧಿಯ ಕಡಿಮೆ ಬಡ್ಡಿ ಸಾಲಗಳು ಅಥವಾ ಈಕ್ವಿಟಿ ಬೆಂಬಲದ ರೂಪದಲ್ಲಿ ಹಣಕಾಸು ಒದಗಿಸಲಾಗುವುದು.

ಇತ್ತೀಚಿನ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ವೈಜ್ಞಾನಿಕ ಸಂಶೋಧನೆ ಮತ್ತು ಪೇಟೆಂಟ್‌ ಗಳಿಗೆ ಅತಿ ಹೆಚ್ಚು ಕೊಡುಗೆ ನೀಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮಿದೆ ಮತ್ತು ಕಳೆದ ದಶಕದಲ್ಲಿ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ವೇಗವಾಗಿ ವಿಸ್ತರಿಸಿದೆ ಎಂದು ತಿಳಿಸಿದರು. ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ದೊಡ್ಡ ರಾಷ್ಟ್ರೀಯ ಪ್ರಯತ್ನಕ್ಕೆ ಈ ಲಾಭಗಳನ್ನು ಅವರು ಜೋಡಿಸಿದರು. ಪ್ರಯೋಗಾಲಯದ ಸಂಶೋಧನೆ ಮತ್ತು ವಾಣಿಜ್ಯ ಬಳಕೆಯ ನಡುವಿನ ದೀರ್ಘಕಾಲದ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಆರ್‌ ಡಿ ಐ ನಿಧಿ ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

ಮೂಲಭೂತ ಮತ್ತು ಮುಂಚೂಣಿ ಸಂಶೋಧನೆಯನ್ನು ಬೆಂಬಲಿಸುವುದು, ಯುವ ವಿಜ್ಞಾನಿಗಳನ್ನು ಪೋಷಿಸುವುದು ಮತ್ತು ವಿಶೇಷ ಅನುದಾನ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಕೇಂದ್ರಗಳ ಮೂಲಕ ಶೈಕ್ಷಣಿಕ-ಉದ್ಯಮ ಸಹಯೋಗವನ್ನು ಉತ್ತೇಜಿಸುವ ಎಎನ್‌ಆರ್‌ಎಫ್ ಕಾರ್ಯಕ್ಕೆ ಆರ್‌ಡಿಐ ನಿಧಿಯು ಹೇಗೆ ಪೂರಕವಾಗಿರಲಿದೆ ಎಂಬುದರ ಕುರಿತು ಪಾಲ್ಗೊಳ್ಳುವವರಿಗೆ ವಿವರಿಸಲಾಯಿತು.

ಯೋಜನೆಯ ವಿನ್ಯಾಸ ಮತ್ತು ಅನುಷ್ಠಾನದ ಕುರಿತು ಪಾಲುದಾರರಿಂದ ಪ್ರತಿಕ್ರಿಯೆಯನ್ನು ಸಚಿವರು ಆಹ್ವಾನಿಸಿದರು. ನಿಧಿ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧವಿರುವುದಾಗಿ ಸೂಚಿಸಿದರು. "ಇದೊಂದು ಹಂಚಿಕೆಯಾದ ರಾಷ್ಟ್ರೀಯ ಯೋಜನೆಯಾಗಿದೆ" ಎಂದ ಅವರು, ದೀರ್ಘಾವಧಿಯ ಸಂಶೋಧನಾ ಹೂಡಿಕೆಗಳಿಗೆ ಮಹತ್ವಾಕಾಂಕ್ಷೆ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಮುಂದೆ ಬರುವಂತೆ ಉದ್ಯಮ ಮತ್ತು ಹೂಡಿಕೆದಾರರನ್ನು ಒತ್ತಾಯಿಸಿದರು.

ಭಾರತವು ತನ್ನ 'ವಿಕಸಿತ ಭಾರತ@2047' ಗುರಿಗಳತ್ತ ಕೆಲಸ ಮಾಡುತ್ತಿರುವಾಗ, ಬೇರೆಡೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಕೇವಲ ಉತ್ಪಾದಿಸುವ ಹಂತದಿಂದ, ತಾವೇ ಆವಿಷ್ಕರಿಸಿ ಜಾಗತಿಕವಾಗಿ ರಫ್ತು ಮಾಡುವ ಹಂತಕ್ಕೆ ಭಾರತೀಯ ಕಂಪನಿಗಳನ್ನು ಕೊಂಡೊಯ್ಯುವಲ್ಲಿ ಆರ್‌ ಡಿ ಐ ನಿಧಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದು ದೇಶವು ನಾವೀನ್ಯತೆಗೆ ಹಣಕಾಸು ಒದಗಿಸುವ ಮತ್ತು ನಿರ್ವಹಿಸುವ ರೀತಿಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ.

 

*****


(रिलीज़ आईडी: 2199962) आगंतुक पटल : 35
इस विज्ञप्ति को इन भाषाओं में पढ़ें: English , Punjabi , Urdu , Marathi , हिन्दी , Tamil