ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
प्रविष्टि तिथि:
05 DEC 2025 3:33PM by PIB Bengaluru
ಗೌರವಾನ್ವಿತ, ನನ್ನ ಸ್ನೇಹಿತ, ಅಧ್ಯಕ್ಷ ಪುಟಿನ್,
ಎರಡೂ ದೇಶಗಳ ಪ್ರತಿನಿಧಿಗಳೇ
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಡೋಬ್ರಿ ಡೆನ್! (ರಶ್ಯನ್ ಭಾಷೆಯಲ್ಲಿ ಶುಭ ಮಧ್ಯಾಹ್ನ)
ಇಂದು 23 ನೇ ಭಾರತ-ರಷ್ಯಾ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧವು ಹಲವಾರು ಐತಿಹಾಸಿಕ ಮೈಲಿಗಲ್ಲುಗಳ ಮೂಲಕ ಸಾಗುತ್ತಿರುವ ಸಮಯದಲ್ಲಿ ಅವರ ಭೇಟಿ ಬಂದಿದೆ. ನಿಖರವಾಗಿ 25 ವರ್ಷಗಳ ಹಿಂದೆ, ಅಧ್ಯಕ್ಷ ಪುಟಿನ್ ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಅಡಿಪಾಯ ಹಾಕಿದರು. ಹದಿನೈದು ವರ್ಷಗಳ ಹಿಂದೆ, 2010 ರಲ್ಲಿ, ನಮ್ಮ ಪಾಲುದಾರಿಕೆಯನ್ನು "ವಿಶೇಷ ಮತ್ತು ಸವಲತ್ತು ಪಡೆದ/ಆದ್ಯತೆಯ ಕಾರ್ಯತಂತ್ರದ ಪಾಲುದಾರಿಕೆ" ಮಟ್ಟಕ್ಕೆ ಏರಿಸಲಾಯಿತು.
ಕಳೆದ ಎರಡೂವರೆ ದಶಕಗಳಲ್ಲಿ, ಅವರು ತಮ್ಮ ನಾಯಕತ್ವ ಮತ್ತು ಚಿಂತನಾ ದೃಷ್ಟಿಕೋನದಿಂದ ಈ ಸಂಬಂಧವನ್ನು ನಿರಂತರವಾಗಿ ಪೋಷಿಸಿದ್ದಾರೆ. ಅವರ ನಾಯಕತ್ವವು ಪ್ರತಿಯೊಂದು ಸಂದರ್ಭದಲ್ಲೂ ನಮ್ಮ ಪರಸ್ಪರ ಸಂಬಂಧಗಳನ್ನು ಹೊಸ ಎತ್ತರಕ್ಕೆ ಏರಿಸಿದೆ. ಭಾರತದೊಂದಿಗಿನ ಅವರ ಆಳವಾದ ಸ್ನೇಹ ಮತ್ತು ಅವರ ಅಚಲ ಬದ್ಧತೆಗಾಗಿ ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೇ,
ಕಳೆದ ಎಂಟು ದಶಕಗಳಲ್ಲಿ, ಜಗತ್ತು ಅನೇಕ ಏರಿಳಿತಗಳನ್ನು ಕಂಡಿದೆ. ಮಾನವೀಯತೆಯು ಹಲವಾರು ಸವಾಲುಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಿದೆ. ಆದರೂ, ಇದೆಲ್ಲದರ ಮೂಲಕ, ಭಾರತ-ರಷ್ಯಾ ಸ್ನೇಹವು ಮಾರ್ಗದರ್ಶಕ ನಕ್ಷತ್ರದಂತೆ ಸ್ಥಿರವಾಗಿದೆ. ಪರಸ್ಪರ ಗೌರವ ಮತ್ತು ಆಳವಾದ ನಂಬಿಕೆಯ ಮೇಲೆ ನಿರ್ಮಿಸಲಾದ ನಮ್ಮ ಸಂಬಂಧವು ಕಾಲದ ಪರೀಕ್ಷೆಯನ್ನು ಎದುರಿಸಿದೆ.
ಇಂದು, ಈ ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ನಮ್ಮ ಸಹಕಾರದ ಎಲ್ಲಾ ಅಂಶಗಳನ್ನು ನಾವು ಚರ್ಚಿಸಿದ್ದೇವೆ. ನಮ್ಮ ಆರ್ಥಿಕ ಸಹಕಾರವನ್ನು ಹೊಸ ಎತ್ತರಕ್ಕೆ ಏರಿಸುವುದು ಪರಸ್ಪರ ಹಂಚಿಕೆಯ ಆದ್ಯತೆಯಾಗಿದೆ. ಇದನ್ನು ಸಾಕಾರಗೊಳಿಸಲು, ನಾವು 2030 ರವರೆಗೆ ಆರ್ಥಿಕ ಸಹಕಾರ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದೇವೆ. ಇದು ನಮ್ಮ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚು ವೈವಿಧ್ಯಮಯ, ಸಮತೋಲಿತ ಮತ್ತು ಸುಸ್ಥಿರವಾಗಿಸುತ್ತದೆ; ಮತ್ತು ನಮ್ಮ ಸಹಕಾರದ ಕ್ಷೇತ್ರಗಳಿಗೆ ಹೊಸ ಆಯಾಮಗಳನ್ನು ಸೇರಿಸುತ್ತದೆ.
ಇಂದು, ಅಧ್ಯಕ್ಷ ಪುಟಿನ್ ಮತ್ತು ನಾನು ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಿದ್ದೇವೆ. ಈ ವೇದಿಕೆಯು ನಮ್ಮ ವ್ಯಾಪಾರ ಸಂಬಂಧಗಳಿಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ. ಇದು ರಫ್ತು, ಸಹ-ಉತ್ಪಾದನೆ ಮತ್ತು ಸಹ-ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತದೆ.
ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ತೀರ್ಮಾನಕ್ಕೆ ಎರಡೂ ಕಡೆಯವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಆಹಾರ ಭದ್ರತೆ ಮತ್ತು ರೈತರ ಕಲ್ಯಾಣಕ್ಕೆ ಕೃಷಿ ಮತ್ತು ರಸಗೊಬ್ಬರ ಕ್ಷೇತ್ರಗಳಲ್ಲಿ ನಮ್ಮ ನಿಕಟ ಸಹಕಾರವು ಅತ್ಯಗತ್ಯ. ಈ ಸಹಕಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದರಿಂದ, ಎರಡೂ ಕಡೆಯವರು ಈಗ ಯೂರಿಯಾ ಉತ್ಪಾದನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಸಂತೋಷ ತಂದಿದೆ.
ಸ್ನೇಹಿತರೇ,
ನಮ್ಮ ಎರಡೂ ದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು ನಮಗೆ ಪ್ರಮುಖ ಆದ್ಯತೆಯಾಗಿದೆ. ಐ.ಎನ್.ಎಸ್.ಟಿ.ಸಿ. (INSTC) , ಉತ್ತರ ಸಮುದ್ರ ಮಾರ್ಗ ಮತ್ತು ಚೆನ್ನೈ-ವ್ಲಾಡಿವೋಸ್ಟಾಕ್ ಕಾರಿಡಾರ್‌ಗಳಲ್ಲಿ ನವೀಕರಿಸಿದ ಶಕ್ತಿಯೊಂದಿಗೆ ನಾವು ಮುಂದುವರಿಯುತ್ತೇವೆ. ಧ್ರುವೀಯ (ಧ್ರುವ ಪ್ರದೇಶದ) ನೀರಿನಲ್ಲಿ ಕಾರ್ಯಾಚರಣೆಗಾಗಿ ಭಾರತದ ನಾವಿಕರ ತರಬೇತಿಯಲ್ಲಿ ನಾವು ಈಗ ಸಹಕಾರ ಮಾಡುತ್ತಿದ್ದೇವೆ ಎಂದು ನನಗೆ ಸಂತೋಷವಾಗಿದೆ. ಇದು ಆರ್ಕ್ಟಿಕ್‌ನಲ್ಲಿ ನಮ್ಮ ಸಹಯೋಗವನ್ನು ಬಲಪಡಿಸುವುದಲ್ಲದೆ, ಭಾರತದ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಅದೇ ರೀತಿ, ಹಡಗು ನಿರ್ಮಾಣದಲ್ಲಿ ನಮ್ಮ ಬಲವಾದ ಸಹಕಾರವು ಮೇಕ್ ಇನ್ ಇಂಡಿಯಾವನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನಮ್ಮ ಪರಸ್ಪರ ಗೆಲುವು-ಗೆಲುವಿನ ಪಾಲುದಾರಿಕೆಯ ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ, ಇದು ಉದ್ಯೋಗಗಳು, ಕೌಶಲ್ಯಗಳು ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ.
ಇಂಧನ ಭದ್ರತೆಯು ಭಾರತ-ರಷ್ಯಾ ಪಾಲುದಾರಿಕೆಯ ಬಲವಾದ ಮತ್ತು ಪ್ರಮುಖ ಆಧಾರಸ್ತಂಭವಾಗಿದೆ. ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ ನಮ್ಮ ದಶಕಗಳಷ್ಟು ಹಳೆಯದಾದ ಸಹಕಾರವು ನಮ್ಮ ಹಂಚಿಕೆಯ ಶುದ್ಧ-ಇಂಧನ ಆದ್ಯತೆಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾವು ಈ ಗೆಲುವು-ಗೆಲುವಿನ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುತ್ತೇವೆ.
ಕ್ರಿಟಿಕಲ್ ಮಿನರಲ್ಸ್‌ನಲ್ಲಿನ (ನಿರ್ಣಾಯಕ ಖನಿಜಗಳು) ನಮ್ಮ ಸಹಕಾರವು ಪ್ರಪಂಚದಾದ್ಯಂತ ಸುರಕ್ಷಿತ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯ. ಇದು ಶುದ್ಧ ಇಂಧನ, ಹೈಟೆಕ್ ಉತ್ಪಾದನೆ ಮತ್ತು ಹೊಸ ಯುಗದ ಕೈಗಾರಿಕೆಗಳಲ್ಲಿ ನಮ್ಮ ಪಾಲುದಾರಿಕೆಗೆ ಬಲವಾದ ಬೆಂಬಲವನ್ನು ನೀಡುತ್ತದೆ.
ಸ್ನೇಹಿತರೇ,
ಭಾರತ-ರಷ್ಯಾ ಸಂಬಂಧಗಳಲ್ಲಿ ಸಾಂಸ್ಕೃತಿಕ ಸಹಕಾರ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ವಿಶೇಷ ಸ್ಥಾನವನ್ನು ಪಡೆದಿವೆ. ದಶಕಗಳಿಂದ, ಎರಡೂ ದೇಶಗಳ ಜನರು ಪರಸ್ಪರ ಆಳವಾದ ಪ್ರೀತಿ, ಗೌರವ ಮತ್ತು ಹೃದಯಸ್ಪರ್ಶೀ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ. ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾವು ಹಲವಾರು ಹೊಸ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಇತ್ತೀಚೆಗೆ, ರಷ್ಯಾದಲ್ಲಿ ಎರಡು ಹೊಸ ಭಾರತೀಯ ದೂತಾವಾಸಗಳನ್ನು ತೆರೆಯಲಾಗಿದೆ. ಇದು ನಮ್ಮ ನಾಗರಿಕರ ನಡುವಿನ ಸಂಬಂಧವನ್ನು ಮತ್ತಷ್ಟು ಸುಗಮಗೊಳಿಸುತ್ತದೆ ಮತ್ತು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಈ ವರ್ಷ ಅಕ್ಟೋಬರ್‌ನಲ್ಲಿ, ಲಕ್ಷಾಂತರ ಭಕ್ತರು 'ಕಲ್ಮಿಕಿಯಾ'ದಲ್ಲಿರುವ ಅಂತರರಾಷ್ಟ್ರೀಯ ಬೌದ್ಧ ವೇದಿಕೆಯಲ್ಲಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಆಶೀರ್ವಾದವನ್ನು ಪಡೆದರು.
ರಷ್ಯಾದ ನಾಗರಿಕರಿಗೆ ನಾವು ಶೀಘ್ರದಲ್ಲೇ ಉಚಿತ 30 ದಿನಗಳ ಇ-ಪ್ರವಾಸಿ ವೀಸಾ ಮತ್ತು 30 ದಿನಗಳ ಗುಂಪು ಪ್ರವಾಸಿ ವೀಸಾವನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.
ಮಾನವಶಕ್ತಿ ಚಲನಶೀಲತೆಯು ನಮ್ಮ ಜನರನ್ನು ಜೋಡಿಸುವುದಲ್ಲದೆ, ಎರಡೂ ದೇಶಗಳಿಗೆ ಹೊಸ ಶಕ್ತಿ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸಹಕಾರವನ್ನು ಉತ್ತೇಜಿಸಲು ಇಂದು ಎರಡು ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ವೃತ್ತಿಪರ ಶಿಕ್ಷಣ, ಕೌಶಲ್ಯ ಮತ್ತು ತರಬೇತಿಯ ಕುರಿತು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಕ್ರೀಡಾಪಟುಗಳ ನಡುವಿನ ವಿನಿಮಯವನ್ನು ಸಹ ನಾವು ಹೆಚ್ಚಿಸುತ್ತೇವೆ.
ಸ್ನೇಹಿತರೇ,
ಇಂದು ನಾವು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಆರಂಭದಿಂದಲೂ, ಉಕ್ರೇನ್‌ನ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತ ನಿರಂತರವಾಗಿ ಶಾಂತಿಗಾಗಿ ಪ್ರತಿಪಾದಿಸುತ್ತಿದೆ. ಈ ವಿಷಯದಲ್ಲಿ ಶಾಂತಿಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಮಾಡಲಾಗುತ್ತಿರುವ ಎಲ್ಲಾ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಭಾರತ ಸದಾ ಈ ನಿಟ್ಟಿನಲ್ಲಿ ಕೊಡುಗೆ ನೀಡಿದೆ ಮತ್ತು ಸದಾ ಕೊಡುಗೆ ನೀಡಲು ಸಿದ್ಧವಾಗಿರುತ್ತದೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಬಹಳ ಹಿಂದಿನಿಂದಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ಅದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಾಗಿರಲಿ ಅಥವಾ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಹೇಡಿತನದ ದಾಳಿಯಾಗಿರಲಿ, ಅಂತಹ ಎಲ್ಲಾ ಘಟನೆಗಳ ಮೂಲ ಒಂದೇ ಆಗಿರುತ್ತದೆ. ಭಯೋತ್ಪಾದನೆ ಮಾನವೀಯತೆಯ ಮೌಲ್ಯಗಳ ಮೇಲಿನ ನೇರ ದಾಳಿ ಮತ್ತು ಅದರ ವಿರುದ್ಧದ ಜಾಗತಿಕ ಏಕತೆ ನಮ್ಮ ದೊಡ್ಡ ಶಕ್ತಿ ಎಂದು ಭಾರತ ದೃಢವಾಗಿ ನಂಬುತ್ತದೆ.
ಭಾರತ ಮತ್ತು ರಷ್ಯಾಗಳು ವಿಶ್ವಸಂಸ್ಥೆ, ಜಿ20, ಬ್ರಿಕ್ಸ್, ಎಸ್‌ಸಿಒ ಮತ್ತು ಇತರ ವೇದಿಕೆಗಳಲ್ಲಿ ನಿಕಟ ಸಹಕಾರವನ್ನು ಉಳಿಸಿಕೊಂಡಿವೆ. ಅದೇ ನಿಕಟ ಸಮನ್ವಯದೊಂದಿಗೆ ಮುಂದುವರಿಯುತ್ತಾ, ಈ ಎಲ್ಲಾ ವೇದಿಕೆಗಳಲ್ಲಿ ನಾವು ನಮ್ಮ ಸಂವಾದ ಮತ್ತು ಸಹಕಾರವನ್ನು ಮುಂದುವರಿಸುತ್ತೇವೆ.
ಘನತೆವೇತ್ತರೇ,
ಮುಂದಿನ ದಿನಗಳಲ್ಲಿ, ನಮ್ಮ ಸ್ನೇಹವು ಜಾಗತಿಕ ಸವಾಲುಗಳನ್ನು ಎದುರಿಸಲು ನಮಗೆ ಶಕ್ತಿ ನೀಡುತ್ತದೆ ಮತ್ತು ಈ ವಿಶ್ವಾಸವು ನಮ್ಮ ಹಂಚಿಕೆಯ ಭವಿಷ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ.
ಭಾರತಕ್ಕೆ ಭೇಟಿ ನೀಡಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ಇಡೀ ನಿಯೋಗಕ್ಕೆ ಮತ್ತೊಮ್ಮೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.
ಸ್ಪಸಿಬಾ (ರಶ್ಯನ್ ಭಾಷೆಯಲ್ಲಿ ಧನ್ಯವಾದಗಳು ಎಂದು ಅರ್ಥ)
ಘೋಷಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.
****
(रिलीज़ आईडी: 2199643)
आगंतुक पटल : 4