ಕೃಷಿ ಸಚಿವಾಲಯ
azadi ka amrit mahotsav

ಕೃಷಿ ಕ್ಷೇತ್ರದಲ್ಲಿ ಭಾರತ-ರಷ್ಯಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕೃಷಿ ಸಚಿವರು ರಷ್ಯಾದ ತಮ್ಮ ಸಹವರ್ತಿಯೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು


ದ್ವಿಪಕ್ಷೀಯ ಕೃಷಿ ವ್ಯಾಪಾರವನ್ನು ಹೆಚ್ಚಿಸಲು ಹಾಗೂ ಆಹಾರ ಧಾನ್ಯಗಳು ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿನಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ಭಾರತ ಮತ್ತು ರಷ್ಯಾ ಒಪ್ಪಿಗೆ ಸೂಚಿಸಿದವು

ಕೃಷಿ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿನ ಸಹಯೋಗವನ್ನು ಬಲಪಡಿಸಲು ಐ.ಸಿ.ಎ.ಆರ್ ಮತ್ತು ರಷ್ಯಾದ 'ಫೆಡರಲ್ ಸೆಂಟರ್ ಫಾರ್ ಅನಿಮಲ್ ಹೆಲ್ತ್' ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು

ಬ್ರಿಕ್ಸ್ (BRICS) ಕೃಷಿ ಸಚಿವರ ಸಭೆಗೆ ರಷ್ಯಾವನ್ನು ಆಹ್ವಾನಿಸಿದ ಭಾರತ; ರಸಗೊಬ್ಬರ, ಬೀಜಗಳು, ಮಾರುಕಟ್ಟೆ ಪ್ರವೇಶ ಮತ್ತು ಜಂಟಿ ಸಂಶೋಧನೆಯಲ್ಲಿ ಸಹಕಾರ ಹೆಚ್ಚಿಸಲು ಉಭಯ ಕಡೆಯಿಂದ ಬದ್ಧತೆ ಪುನರುಚ್ಚಾರ

प्रविष्टि तिथि: 05 DEC 2025 3:55PM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ರಷ್ಯಾ ಒಕ್ಕೂಟದ ಕೃಷಿ ಸಚಿವರಾದ ಗೌರವಾನ್ವಿತ ಶ್ರೀಮತಿ ಒಕ್ಸಾನಾ ಲುಟ್ ಅವರೊಂದಿಗೆ 2025ರ ಡಿಸೆಂಬರ್ 4 ರಂದು ಕೃಷಿ ಭವನದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಭೆಯಲ್ಲಿ ಉಭಯ ನಾಯಕರು ಪ್ರಸ್ತುತ ನಡೆಯುತ್ತಿರುವ ಸಹಕಾರದ ಕುರಿತು ಚರ್ಚಿಸಿದರು ಮತ್ತು ಭವಿಷ್ಯದ ಸಹಯೋಗದ ಕ್ಷೇತ್ರಗಳನ್ನು ಗುರುತಿಸಿದರು.

ಭಾರತ ಮತ್ತು ರಷ್ಯಾ ಸಂಬಂಧಗಳು ವಿಶ್ವಾಸ, ಸ್ನೇಹ ಮತ್ತು ಪರಸ್ಪರ ಸಹಕಾರದ ತಳಹದಿಯ ಮೇಲೆ ನಿರ್ಮಿತವಾಗಿವೆ ಎಂದು ಸಚಿವರು ಅಭಿಪ್ರಾಯಪಟ್ಟರು. ಪ್ರಸ್ತುತ ಸುಮಾರು 3.5 ಶತಕೋಟಿ ಡಾಲರ್ ನಷ್ಟಿರುವ ದ್ವಿಪಕ್ಷೀಯ ಕೃಷಿ ವ್ಯಾಪಾರದ ಪ್ರಗತಿಯನ್ನು ಶ್ರೀ ಚೌಹಾಣ್ ಅವರು ಪ್ರಸ್ತಾಪಿಸಿದರು. ಇದೇ ವೇಳೆ, ಅವರು ಹೆಚ್ಚು ಸಮತೋಲಿತ ವ್ಯಾಪಾರದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಭಾರತದ ಆಲೂಗಡ್ಡೆ, ದಾಳಿಂಬೆ ಹಾಗೂ ಬೀಜಗಳ ರಫ್ತಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದಕ್ಕಾಗಿ ರಷ್ಯಾಗೆ ಧನ್ಯವಾದಗಳನ್ನು ಅರ್ಪಿಸಿದರು.

ಕೃಷಿ ಸರಕುಗಳ ವ್ಯಾಪಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಭಾರತದಿಂದ ಆಹಾರ ಧಾನ್ಯಗಳು ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಸಾಧ್ಯತೆಗಳನ್ನು ಉಭಯ ಕಡೆಯವರು ಪರಿಶೀಲಿಸಿದರು.

ಸಭೆಯ ಸಂದರ್ಭದಲ್ಲಿ, ಕೃಷಿ ಸಂಶೋಧನೆ, ನಾವೀನ್ಯತೆ ಮತ್ತು ಸಾಮರ್ಥ್ಯ ವರ್ಧನೆಯಲ್ಲಿನ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ, ಐ.ಸಿ.ಎ.ಆರ್ ಮತ್ತು ರಷ್ಯಾದ 'ಫೆಡರಲ್ ಸೆಂಟರ್ ಫಾರ್ ಅನಿಮಲ್ ಹೆಲ್ತ್' ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಮುಂದಿನ ವರ್ಷ ಭಾರತವು ಆಯೋಜಿಸಲಿರುವ 'ಬ್ರಿಕ್ಸ್ (BRICS) ಕೃಷಿ ಸಚಿವರ ಸಭೆ'ಯಲ್ಲಿ ಭಾಗವಹಿಸುವಂತೆ ಶ್ರೀ ಚೌಹಾಣ್ ಅವರು ರಷ್ಯಾದ ನಿಯೋಗವನ್ನು ಆಹ್ವಾನಿಸಿದರು.

ಕೃಷಿ ವ್ಯಾಪಾರ, ರಸಗೊಬ್ಬರ, ಬೀಜಗಳು, ಮಾರುಕಟ್ಟೆ ಪ್ರವೇಶ ಮತ್ತು ಜಂಟಿ ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಆಳವಾಗಿಸಲು ಉಭಯ ದೇಶಗಳು ಒಪ್ಪಿಕೊಂಡವು. ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಎರಡೂ ರಾಷ್ಟ್ರಗಳ ರೈತರಿಗೆ ಪ್ರಯೋಜನ ಕಲ್ಪಿಸುವ ತಮ್ಮ ಬದ್ಧತೆಯನ್ನು ಈ ವೇಳೆ ಪುನರುಚ್ಚರಿಸಲಾಯಿತು. ವ್ಯಾಪಾರ ವೃದ್ಧಿ ಮತ್ತು ಕೃಷಿ ವಲಯದಲ್ಲಿನ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರೀಮತಿ ಲುಟ್ ಅವರು ತೀವ್ರ ಆಸಕ್ತಿ ವ್ಯಕ್ತಪಡಿಸಿದರು.

ರಷ್ಯಾದ ನಿಯೋಗದಲ್ಲಿ ಕೃಷಿ ಸಚಿವರಲ್ಲದೆ, ಉಪ ಸಚಿವರಾದ ಶ್ರೀ ಮ್ಯಾಕ್ಸಿಮ್ ಮಾರ್ಕೋವಿಚ್ ಮತ್ತು ಶ್ರೀಮತಿ ಮರಿನಾ ಅಫೋನಿನಾ, ಎಫ್‌.ಎಸ್‌.ವಿ.ಪಿ.ಎಸ್ ಮುಖ್ಯಸ್ಥರಾದ ಶ್ರೀ ಸೆರ್ಗೆ ಡ್ಯಾಂಕ್ವರ್ಟ್, ಏಷ್ಯಾ ವಿಭಾಗದ ನಿರ್ದೇಶಕಿ ಶ್ರೀಮತಿ ದಾರಿಯಾ ಕೊರೊಲೆವಾ ಹಾಗೂ ನಿಯೋಗದ ಇತರೆ ಸದಸ್ಯರು ಉಪಸ್ಥಿತರಿದ್ದರು.

ಭಾರತದ ಪರವಾಗಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ದೇವೇಶ್ ಚತುರ್ವೇದಿ, 'ಡೇರ್' (DARE) ಕಾರ್ಯದರ್ಶಿ ಶ್ರೀ ಎಂ.ಎಲ್. ಜಾಟ್, ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

*****


(रिलीज़ आईडी: 2199481) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati