ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ದೆಹಲಿ-ಎನ್ ಸಿ ಆರ್ ನಲ್ಲಿ ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಿದ ಕೇಂದ್ರ ಪರಿಸರ ಸಚಿವ ಶ್ರೀ ಭೂಪೇಂದರ್ ಯಾದವ್; ವಾಯು ಮಾಲಿನ್ಯ ನಿರ್ವಹಣೆ ಕುರಿತು ವಾರ್ಷಿಕ ಕ್ರಿಯಾ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಎನ್ ಸಿ ಆರ್ ರಾಜ್ಯಗಳ ಅಧಿಕಾರಿಗಳಿಗೆ ನಿರ್ದೇಶನ

प्रविष्टि तिथि: 03 DEC 2025 1:51PM by PIB Bengaluru

ದೆಹಲಿ-ಎನ್ ಸಿ ಆರ್ ನಲ್ಲಿನ ವಾಯು ಮಾಲಿನ್ಯದ ಕುರಿತು ಇಂದು ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಹಿಂದಿನ ಐದು ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಕ್ಷೇತ್ರಮಟ್ಟದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಭೆಯಲ್ಲಿ ದೆಹಲಿ ಸರ್ಕಾರದ ಪರಿಸರ, ಅರಣ್ಯ ಮತ್ತು ವನ್ಯಜೀವಿ ಸಚಿವ ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ ಅವರು ಉಪಸ್ಥಿತರಿದ್ದರು.

ಪ್ರತಿಯೊಂದು ಕಾರ್ಯಸೂಚಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಶ್ರೀ ಯಾದವ್, ದೆಹಲಿ-ಎನ್ ಸಿ ಆರ್ ನಲ್ಲಿ ಗುರುತಿಸಲಾದ ಎಲ್ಲಾ ವಿಭಾಗಗಳಲ್ಲಿ ಕ್ರಿಯಾ ಯೋಜನೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಅನುಷ್ಠಾನಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ರಸ್ತೆ ಅಭಿವೃದ್ಧಿ ಮತ್ತು ದುರಸ್ತಿ ಕಾರ್ಯಗಳನ್ನು ಚುರುಕುಗೊಳಿಸುವುದು, ರಸ್ತೆ ಬದಿಗಳಲ್ಲಿ  ಕಾಲುದಾರಿ ನಿರ್ಮಿಸುವ ಮೂಲಕ ಧೂಳು ನಿಯಂತ್ರಣ, ಕಟ್ಟಡ ನಿರ್ಮಾಣ ಮತ್ತು ತ್ಯಾಜ್ಯ ನಿರ್ವಹಣೆ, ಕೈಗಾರಿಕೆಗಳು ಹೊರಸೂಸುವಿಕೆ ಮಾನದಂಡಗಳನ್ನು ಪಾಲಿಸುವುದು, ಸ್ಮಾರ್ಟ್ ಸಂಚಾರ ನಿರ್ವಹಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು, ಹಳೆಯ ಘನತ್ಯಾಜ್ಯ  ನಿರ್ವಹಣೆ ಮತ್ತು ತೆರೆದ ಜಾಗಗಳಲ್ಲಿ ಹಸಿರೀಕರಣದಂತಹ ಪ್ರಮುಖ ವಿಷಯಗಳು ಇದರಲ್ಲಿ ಸೇರಿವೆ.

ಮಾಲಿನ್ಯವನ್ನು ಮೂಲದಲ್ಲೇ ತಡೆಗಟ್ಟುವ ನಿಟ್ಟಿನಲ್ಲಿ, ಮುಂದಿನ ವರ್ಷಕ್ಕೆ ಸಂಬಂಧಿಸಿದಂತೆ ವಿವರವಾದ ‘ವಾರ್ಷಿಕ ಕ್ರಿಯಾ ಯೋಜನೆ’ಗಳನ್ನು ಸಿದ್ಧಪಡಿಸುವಂತೆ ಸಚಿವರು ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಕೇವಲ ಯೋಜನೆ ರೂಪಿಸುವುದಷ್ಟೇ ಅಲ್ಲ, ವಾರ ಮತ್ತು ತಿಂಗಳ ಟಾರ್ಗೆಟ್ ಗಳನ್ನು ಇಟ್ಟುಕೊಂಡು, ನಿಗದಿತ ಸಮಯದಲ್ಲಿ ಈ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಎನ್ ಸಿ ಆರ್ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ವರ್ಷವಿಡೀ ನಡೆಸುವ ಈ ಪೂರ್ವಭಾವಿ ತಯಾರಿಗಳು ಸಹಕಾರಿಯಾಗಲಿವೆ ಎಂಬುದು ಅವರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೆ, ಈ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಸ್ಥಳದಲ್ಲೇ ಪರಿಶೀಲನೆ ನಡೆಸುವ ‘ಆನ್-ಗ್ರೌಂಡ್ ರಿವ್ಯೂ ಮೀಟಿಂಗ್’ಗಳನ್ನು ನಡೆಸಲಾಗುವುದು ಎಂದು ಶ್ರೀ ಯಾದವ್ ಅವರು ನಿರ್ದೇಶನ ನೀಡಿದ್ದಾರೆ. CAQM (ವಾಯು ಗುಣಮಟ್ಟ ನಿರ್ವಹಣಾ ಆಯೋಗ) ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗಳಲ್ಲಿ ಪಂಜಾಬ್ ಮತ್ತು ಹರಿಯಾಣದ ಕೃಷಿ ಇಲಾಖೆಗಳೊಂದಿಗೆ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯುವ ಬಗ್ಗೆ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯದೊಂದಿಗೆ ಯೋಜಿತ ನಗರ ಅಭಿವೃದ್ಧಿಯ ಬಗ್ಗೆ ಹಾಗೂ ಎನ್ ಸಿ ಆರ್ ನಗರಗಳ ಸ್ಥಳೀಯ ಸಂಸ್ಥೆಗಳೊಂದಿಗೆ ಸ್ಥಳೀಯ ಮಾಲಿನ್ಯ ಸಮಸ್ಯೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ.

ಸಭೆಯಲ್ಲಿ ಒಂದೊಂದೇ ವಿಷಯವನ್ನು ಪ್ರಸ್ತಾಪಿಸಿ, ಆಗಿರುವ ಪ್ರಗತಿಯನ್ನು ಪರಿಶೀಲಿಸಲಾಯಿತು. ದೆಹಲಿ-ಎನ್ ಸಿ ಆರ್ ವ್ಯಾಪ್ತಿಯ ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪಾಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಯಿತು. ನಿಯಮ ಪಾಲಿಸದ ಘಟಕಗಳಿಗೆ, ತಾವಾಗಿಯೇ ಮುಂದೆ ಬಂದು 'ಆನ್ಲೈನ್ ಕಂಟಿನ್ಯೂಯಸ್ ಎಮಿಷನ್ ಮಾನಿಟರಿಂಗ್ ಸಿಸ್ಟಮ್ಸ್' (OCEMS) ಮತ್ತು 'ವಾಯು ಮಾಲಿನ್ಯ ನಿಯಂತ್ರಣ ಸಾಧನ'ಗಳನ್ನು (APCD) ತ್ವರಿತವಾಗಿ ಅಳವಡಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಹಾಗೂ ಉತ್ತೇಜನ ನೀಡಲು ತೀರ್ಮಾನಿಸಲಾಯಿತು. ಆದರೆ, 31.12.2025ರ ಒಳಗೆ ಈ ನಿಯಮಗಳನ್ನು ಪಾಲಿಸಲು ವಿಫಲವಾಗುವ ಘಟಕಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು, ಅಷ್ಟೇ ಅಲ್ಲದೆ ಅಂತಹ ಘಟಕಗಳನ್ನು ಮುಚ್ಚುವಂತೆ ಆದೇಶವನ್ನೂ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ, ಈ ಸಾಧನಗಳ ಬೆಲೆ ಏರಿಕೆಯಿಂದಾಗಿ ಕೈಗಾರಿಕೆಗಳು ಅಳವಡಿಕೆಗೆ ಹಿಂದೇಟು ಹಾಕಬಾರದು ಅಥವಾ ವಿಳಂಬ ಮಾಡಬಾರದು ಎಂಬ ಕಾರಣಕ್ಕೆ, ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಏರಿಕೆಯ ಮೇಲೂ ತೀವ್ರ ನಿಗಾ ಇಡಲಾಗಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.

ಲೋಹ, ಜವಳಿ, ಆಹಾರ ಸಂಸ್ಕರಣೆ ಮತ್ತು ಇತರೆ 'ರೆಡ್-ಕ್ಯಾಟಗರಿ'ಯ ಉದ್ಯಮಗಳು ಸೇರಿದಂತೆ, ಹೆಚ್ಚು ಮಾಲಿನ್ಯ ಉಂಟುಮಾಡುವ ಸುಮಾರು 2,254ಕೈಗಾರಿಕಾ ಘಟಕಗಳಿಗೆ ಕಡಕ್ ಆದೇಶ ನೀಡಲಾಗಿದೆ. ಈ ಘಟಕಗಳು 31.12.2025ರ ಒಳಗೆ ಸರಿಯಾಗಿ ಪರೀಕ್ಷಿಸಿ ದೃಢೀಕರಿಸಲ್ಪಟ್ಟ 'ಒಸಿಇಎಂಎಸ್' (OCEMS) ಮತ್ತು 'ಎಪಿಸಿಡಿ' (APCD) ಸಾಧನಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಅಳವಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಸ್ಪಷ್ಟವಾದ ಮಾರ್ಗಸೂಚಿಯನ್ನು (SOP) ಕೂಡ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಕೆಲಸ ಆದಷ್ಟು ಬೇಗ ಆಗುವಂತೆ ನೋಡಿಕೊಳ್ಳಲು ಎನ್ ಸಿ ಆರ್ ವ್ಯಾಪ್ತಿಯ ಎಲ್ಲ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ (SPCBs/PCCs) ಸೂಚನೆ ನೀಡಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.

ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಎನ್ ಸಿ ಆರ್ ರಾಜ್ಯಗಳು ಕಾಲಮಿತಿಯ ಮಾರ್ಗಸೂಚಿಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರು ಆ್ಯಪ್ ಮೂಲಕ ನೀಡುವ ದೂರುಗಳಿಗೆ ಅಥವಾ ಪ್ರತಿಕ್ರಿಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಮಾಡಲು, 'ಆ್ಯಪ್ ಆಧಾರಿತ ಮಾನಿಟರಿಂಗ್' ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಯಿತು. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಶ್ರೀ ಯಾದವ್ ಪ್ರತಿಪಾದಿಸಿದರು. CAQM ವಿನ್ಯಾಸದ ಪ್ರಕಾರ ರಸ್ತೆಯುದ್ದಕ್ಕೂ ಕಾಲುದಾರಿಗಳು ಮತ್ತು ಸರಿಯಾದ ಚರಂಡಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮೇಲೆ ಸ್ಥಳದಲ್ಲೇ ಹೋಗಿ ತೀವ್ರ ನಿಗಾ ಇಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ರಸ್ತೆ ಸ್ವಚ್ಛಗೊಳಿಸಲು ಬಳಸುವ 'ಮೆಕ್ಯಾನಿಕಲ್ ರೋಡ್ ಸ್ವೀಪರ್ ಮಷಿನ್'ಗಳನ್ನು (MRSMs) ಆದಷ್ಟು ಬೇಗ ಮತ್ತು ಹೆಚ್ಚಾಗಿ ಬಳಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸಚಿವರು ಇದೇ ವೇಳೆ ನಿರ್ದೇಶನ ನೀಡಿದರು.

ಸಂಚಾರ ದಟ್ಟಣೆಯ ವಿಚಾರಕ್ಕೆ ಬಂದರೆ, ದೆಹಲಿಯಲ್ಲಿ ಗುರುತಿಸಲಾದ ೬೨ 'ಹಾಟ್ ಸ್ಪಾಟ್'ಗಳಲ್ಲಿ ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ಮೂಲಕ ದೆಹಲಿ ಪೊಲೀಸರು ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಲಾಯಿತು. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು, ತಕ್ಷಣಕ್ಕೆ ಅಲ್ಪಕಾಲೀನ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಲಾಯಿತು. ಇದಲ್ಲದೆ, ರಸ್ತೆ ಒತ್ತುವರಿ ತೆರವು ಮತ್ತು ಅಕ್ರಮ ಪಾರ್ಕಿಂಗ್ ತಡೆಯುವುದು, ಪೀಕ್ ಅವರ್ಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವುದು ಹಾಗೂ ಪಾದಚಾರಿ ಮೇಲ್ಸೇತುವೆಗಳಿಗೆ ಟೆಂಡರ್ ಕರೆಯುವಂತಹ ಕೆಲಸಗಳನ್ನು ಆದಷ್ಟು ಬೇಗ ಚುರುಕುಗೊಳಿಸುವಂತೆ ನಿರ್ದೇಶನ ನೀಡಲಾಯಿತು. ಇದೇ ಮಾದರಿಯ ಕ್ರಮಗಳನ್ನು ಇತರ NCR ನಗರಗಳಲ್ಲೂ ಕೈಗೊಳ್ಳಲು ಪ್ರೋತ್ಸಾಹಿಸಲಾಯಿತು. ಅಂತಿಮವಾಗಿ, ಕೇವಲ ಪ್ಲಾನ್ ಮಾಡುವುದಲ್ಲ, ಸ್ಥಳದಲ್ಲಿ ಜನರಿಗೆ ಕಣ್ಣಿಗೆ ಕಾಣುವಂತಹ ಸುಧಾರಣೆಗಳು ಆಗಬೇಕು ಎಂದು ಸಚಿವರು ಇದೇ ವೇಳೆ ತಾಕೀತು ಮಾಡಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಪ್ರಕ್ರಿಯೆಯ ಬಗ್ಗೆ ಪರಿಶೀಲನಾ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಸ್ತುತ ಸುಮಾರು 3,400 ಎಲೆಕ್ಟ್ರಿಕ್ ಬಸ್ ಗಳು ಸಂಚರಿಸುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಈ ಸಂಖ್ಯೆ 5,000 ಕ್ಕೂ ಹೆಚ್ಚಾಗುವ ನಿರೀಕ್ಷೆಯಿದೆ. ದೆಹಲಿ-ಎನ್ ಸಿ ಆರ್ ನ ಅತಿ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೊನೆಯ ಹಂತದವರೆಗೂ ಸಂಪರ್ಕ (ಎಂಡ್-ಟು-ಎಂಡ್ ಕನೆಕ್ಟಿವಿಟಿ) ಕಲ್ಪಿಸುವ ಬಗ್ಗೆ ಒತ್ತು ನೀಡಲಾಯಿತು. BS-IV ಗಿಂತ ಹಳೆಯದಾದ ವಾಣಿಜ್ಯ ವಾಹನಗಳ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆಯೂ ಸಚಿವರು ಇದೇ ವೇಳೆ ಸೂಚನೆ ನೀಡಿದರು. ಈಗಾಗಲೇ 01.11.2025 ರಿಂದ ಜಾರಿಗೆ ಬರುವಂತೆ BS-III ಮತ್ತು ಅದಕ್ಕಿಂತ ಹಳೆಯ ವಾಹನಗಳು ದೆಹಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ತಿಳಿಸಲಾಯಿತು.

ಎನ್ ಸಿ ಆರ್ ವ್ಯಾಪ್ತಿಯಲ್ಲಿ ಗಿಡ ನೆಡಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ, ಅದರ ಮ್ಯಾಪಿಂಗ್ ಮತ್ತು ಅನುಷ್ಠಾನದಲ್ಲಿ ಸಾರ್ವಜನಿಕರನ್ನು ಪಾಲ್ಗೊಳ್ಳುವಂತೆ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಳಾದ ಅರಣ್ಯ ಭೂಮಿಯಲ್ಲಿ ಸಸಿ ನೆಡುವುದು, ಖಾಲಿ ಜಾಗಗಳನ್ನು ಹಸಿರುಗೊಳಿಸುವುದು ಹಾಗೂ ನಗರದ ಪಾರ್ಕ್ ಗಳು, ಕೆರೆಗಳು ಮತ್ತು ಜಲಮೂಲಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸುವುದಕ್ಕೆ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಯಿತು. ಹಸಿರೀಕರಣ ಮತ್ತು ಸಮುದಾಯ ಸಂರಕ್ಷಣೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳಲು, NCR ರಾಜ್ಯಗಳ ಶಿಕ್ಷಣ ಇಲಾಖೆಗಳು 'ಇಕೋ-ಕ್ಲಬ್' ಗಳು ಮತ್ತು 'ಗ್ರೀನ್-ವಾರಿಯರ್' ಗುಂಪುಗಳಿಗೆ ಮರುಜೀವ ನೀಡಬೇಕು ಎಂದು ತಿಳಿಸಲಾಯಿತು. ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವದೊಂದಿಗೆ, ಸಂಬಂಧಪಟ್ಟ ಇಲಾಖೆಗಳು ಸೇರಿ 'ಮೈಕ್ರೋ ಪ್ಲಾನ್' ಗಳನ್ನು ಸಿದ್ಧಪಡಿಸಬೇಕು. ಈ ಚಳಿಗಾಲದಲ್ಲೇ ಇದನ್ನು ಜಾರಿಗೊಳಿಸಿ, ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಬೇಕು ಎಂದು ಶ್ರೀ ಯಾದವ್ ಆಶಯ ವ್ಯಕ್ತಪಡಿಸಿದರು.

'ಇಡೀ ಸರ್ಕಾರ ಮತ್ತು ಇಡೀ ಸಮಾಜ' ಒಗ್ಗೂಡಿ ಕೆಲಸ ಮಾಡುವ ದೃಷ್ಟಿಕೋನದಡಿ ಕಳೆದ ಐದು ಸಭೆಗಳಲ್ಲಿ ಆಗಿರುವ ಪ್ರಗತಿಯನ್ನು ಸಚಿವರು ಇದೇ ವೇಳೆ ಪರಿಶೀಲಿಸಿದರು. ಈ ಮಹತ್ವದ ಸಭೆಯಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು, ಸಿಎಕ್ಯೂಎಂ (CAQM), ಸಿಪಿಸಿಬಿ (CPCB), ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಪ್ರತಿನಿಧಿಗಳು, ಎನ್ ಸಿ ಆರ್ ನಗರಗಳ ಪಾಲಿಕೆ ಆಯುಕ್ತರು ಹಾಗೂ ಇತರೆ ಸಂಬಂಧಪಟ್ಟ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

 

*****


(रिलीज़ आईडी: 2198280) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Tamil