ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ನವೆಂಬರ್ ನಲ್ಲಿ 231 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳನ್ನು ದಾಖಲಿಸಿದ UIDAI, ನವೆಂಬರ್ 2024ಕ್ಕೆ ಹೋಲಿಸಿದರೆ ಶೇ. 8.47 ರಷ್ಟು ಬೆಳವಣಿಗೆ


ಫೇಸ್ ಅಥೆಂಟಿಕೇಷನ್ ಗೆ ಉತ್ತಮ ಸ್ಪಂದನೆ ಮುಂದುವರಿದಿದೆ; ನವೆಂಬರ್ ನಲ್ಲಿ ಪಿಂಚಣಿದಾರರು ಪಡೆದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಗಳಲ್ಲಿ ಸುಮಾರು ಶೇ. 60 ರಷ್ಟು ಫೇಸ್ ಅಥೆಂಟಿಕೇಷನ್ ಮೂಲಕವೇ ಪಡೆಯಲಾಗಿದೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನವೆಂಬರ್ ನಲ್ಲಿ ಇ-ಕೆವೈಸಿ (e-KYC) ವಹಿವಾಟಿನಲ್ಲಿ ಶೇ. 24ಕ್ಕೂ ಅಧಿಕ ಏರಿಕೆ

प्रविष्टि तिथि: 02 DEC 2025 4:35PM by PIB Bengaluru

ನವೆಂಬರ್ 2025ರಲ್ಲಿ ಆಧಾರ್ ಬಳಕೆದಾರರು ಬರೋಬ್ಬರಿ 231 ಕೋಟಿ ದೃಢೀಕರಣ ವಹಿವಾಟುಗಳನ್ನು ನಡೆಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಸುಮಾರು ಶೇ. 8.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ದೇಶದಲ್ಲಿ ಆಧಾರ್ ನ ಹೆಚ್ಚುತ್ತಿರುವ ಬಳಕೆ ಹಾಗೂ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಆರ್ಥಿಕ ವರ್ಷದ ಹಿಂದಿನ ಯಾವುದೇ ತಿಂಗಳುಗಳಿಗೆ ಹೋಲಿಸಿದರೆ, ನವೆಂಬರ್ 2025ರ ದೃಢೀಕರಣ ವಹಿವಾಟುಗಳು ಇಲ್ಲಿಯವರೆಗಿನ ಅತ್ಯಧಿಕವಾಗಿವೆ. ಇದಕ್ಕೂ ಮುನ್ನ ಅಕ್ಟೋಬರ್ ನಲ್ಲಿ ಈ ಸಂಖ್ಯೆ 219.51 ಕೋಟಿಯಷ್ಟಿತ್ತು. ಪರಿಣಾಮಕಾರಿಯಾಗಿ ಕಲ್ಯಾಣ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ಸೇವಾ ಪೂರೈಕೆದಾರರು ನೀಡುವ ಸೇವೆಗಳನ್ನು ಸ್ವಯಂಪ್ರೇರಿತವಾಗಿ ಪಡೆಯುವಲ್ಲಿ, ಆಧಾರ್ ಹೇಗೆ ಸಹಾಯಕ ಪಾತ್ರ ವಹಿಸುತ್ತಿದೆ ಎಂಬುದನ್ನು ಈ ಹೆಚ್ಚುತ್ತಿರುವ ಬಳಕೆಯು ತೋರಿಸುತ್ತದೆ.

ಆಧಾರ್ ಫೇಸ್ ಅಥೆಂಟಿಕೇಷನ್ (ಮುಖ ಚಹರೆ ದೃಢೀಕರಣ) ಪರಿಹಾರಗಳು ಕೂಡ ನಿರಂತರವಾಗಿ ಜನಪ್ರಿಯವಾಗುತ್ತಿವೆ. ನವೆಂಬರ್ ತಿಂಗಳಲ್ಲಿ ಪಿಂಚಣಿದಾರರು ಸಲ್ಲಿಸಿದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಗಳ (ಜೀವನ್ ಪ್ರಮಾಣ ಪತ್ರ) ಪೈಕಿ ಸುಮಾರು ಶೇ. 60 ರಷ್ಟು ಪ್ರಮಾಣ ಪತ್ರಗಳನ್ನು ಆಧಾರ್ ಫೇಸ್ ಅಥೆಂಟಿಕೇಷನ್ ಬಳಸಿಯೇ ಪಡೆದಿದ್ದಾರೆ. ಯು.ಐ.ಡಿ.ಎ.ಐ ನ (UIDAI) ಈ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವು ಆಂಡ್ರಾಯ್ಡ್ ಮತ್ತು iOS ಎರಡೂ ಪ್ಲಾಟ್ ಫಾರ್ಮ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕಠಿಣ ಭದ್ರತಾ ಮಾನದಂಡಗಳನ್ನು ಕಾಯ್ದುಕೊಳ್ಳುವ ಜೊತೆಗೆ, ಕೇವಲ ಮುಖದ ಸ್ಕ್ಯಾನ್ ಮೂಲಕ ಬಳಕೆದಾರರು ತಮ್ಮ ಗುರುತನ್ನು ಸುಲಭವಾಗಿ ದೃಢೀಕರಿಸಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ, ನವೆಂಬರ್ 2025ರಲ್ಲಿ 28.29 ಕೋಟಿ ಫೇಸ್ ಅಥೆಂಟಿಕೇಷನ್ ವಹಿವಾಟುಗಳು ನಡೆದಿವೆ. 2024ರ ಇದೇ ಅವಧಿಯಲ್ಲಿ ಈ ಸಂಖ್ಯೆ ಕೇವಲ 12.04 ಕೋಟಿಯಷ್ಟಿತ್ತು.

ಅದೇ ರೀತಿ, ಇ-ಕೆವೈಸಿ (e-KYC) ವಹಿವಾಟುಗಳಲ್ಲಿಯೂ ನವೆಂಬರ್ ತಿಂಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಂದೇ ತಿಂಗಳಲ್ಲಿ ಬರೋಬ್ಬರಿ 47.19 ಕೋಟಿ ವಹಿವಾಟುಗಳು ದಾಖಲಾಗಿದ್ದು, ನವೆಂಬರ್ 2024ಕ್ಕೆ ಹೋಲಿಸಿದರೆ ಇದು ಶೇ. 24 ಕ್ಕಿಂತಲೂ ಹೆಚ್ಚಿನ ಹೆಚ್ಚಳವಾಗಿದೆ. ಬ್ಯಾಂಕಿಂಗ್ ಮತ್ತು ಬ್ಯಾಂಕ್ ಹೊರತಾದ ಸಂಸ್ಥೆಗಳ ಹಣಕಾಸು ಸೇವೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಗ್ರಾಹಕರ ಅನುಭವವನ್ನು ಸುಧಾರಿಸಲು ಮತ್ತು ವ್ಯವಹಾರ ಪ್ರಕ್ರಿಯೆಯನ್ನು ಸರಳಗೊಳಿಸಲು ಆಧಾರ್ ಇ-ಕೆವೈಸಿ ಸೇವೆಯು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ.

****
 


(रिलीज़ आईडी: 2197733) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Bengali