ಧೈರ್ಯ ಮತ್ತು ಅಂತಃಕರಣದ ಪಯಣ: ಐ.ಎಫ್.ಎಫ್.ಐ ಯಲ್ಲಿ ಪ್ರೇಕ್ಷಕರ ಮನಗೆದ್ದ 'ತನ್ವಿ ದ ಗ್ರೇಟ್'
'ಸಾಮಾನ್ಯ'ದ ವಿರುದ್ಧ ಪದ 'ಅಸಹಜ'ವಲ್ಲ, ಅದು 'ಅಸಾಧಾರಣ': ಅನುಪಮ್ ಖೇರ್
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಒಂದು ಹೃದಯಸ್ಪರ್ಶಿ ಸಿನಿಮಾ ಮತ್ತು ಸ್ಫೂರ್ತಿದಾಯಕ ಕಥಾಹಂದರದ ಸಂಜೆಗೆ ಸಾಕ್ಷಿಯಾಯಿತು. ಖ್ಯಾತ ನಟ ಹಾಗೂ ನಿರ್ದೇಶಕ ಅನುಪಮ್ ಖೇರ್ ಅವರು ತಮ್ಮ ನಿರ್ದೇಶನದ ಇತ್ತೀಚಿನ ಚಿತ್ರ 'ತನ್ವಿ ದ ಗ್ರೇಟ್' ಅನ್ನು ಇಲ್ಲಿ ಪ್ರಸ್ತುತಪಡಿಸಿದರು. ಇದು ಆಟಿಸಂ (ಸ್ವಲೀನತೆ) ಹೊಂದಿರುವ ಒಬ್ಬ ಅಸಾಧಾರಣ ಹುಡುಗಿಯ ಕಥೆಯಾಗಿದೆ. ಆಟಿಸಂ ಕಾರಣದಿಂದ ಸಮಾಜ ಆಕೆಯನ್ನು ತಪ್ಪಾಗಿ ಅರ್ಥೈಸಿಕೊಂಡರೂ, ಅದೆಲ್ಲವನ್ನೂ ಮೆಟ್ಟಿನಿಂತು, ತನ್ನ ತಂದೆಯಂತೆ ಸೇನೆಗೆ ಸೇರುವ ಛಲ ಆಕೆಯದ್ದು. "ನಿಜವಾದ ವೀರತ್ವ ಅಡಗಿರುವುದು ಹೃದಯದಲ್ಲಿಯೇ ಹೊರತು ದೈಹಿಕ ಸಾಮರ್ಥ್ಯದಲ್ಲಿ ಮಾತ್ರವಲ್ಲ" ಎಂಬುದನ್ನು ಈ ಚಿತ್ರ ಜಗತ್ತಿಗೆ ಸಾರುತ್ತದೆ. ಚಿತ್ರ ಪ್ರದರ್ಶನದ ನಂತರ, ನಟಿ ತನ್ವಿ ಅವರೊಂದಿಗೆ ಅನುಪಮ್ ಖೇರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ಪ್ರತಿನಿಧಿಗಳಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಯಿತು.

ಮಾಧ್ಯಮಗಳೊಂದಿಗಿನ ಸಂವಾದದಲ್ಲಿ, ಅನುಪಮ್ ಖೇರ್ ಅವರು ಈ ಚಿತ್ರದ ವೈಯಕ್ತಿಕ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದರು. "ಈ ಕಥೆಯು ನನ್ನ ವೈಯಕ್ತಿಕ ಮತ್ತು ಕೌಟುಂಬಿಕ ಜೀವನದ ಕ್ಷಣಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಹಾಗಾಗಿ, ಒಬ್ಬ ಫಿಲ್ಮ್ ಮೇಕರ್ ಆಗಿ ಈ ಪ್ರಾಜೆಕ್ಟ್ ನನಗೆ ಭಾವನಾತ್ಮಕವಾಗಿ ಬಹಳ ಮಹತ್ವದ್ದಾಗಿದೆ," ಎಂದು ಅವರು ಹೇಳಿದರು. ಆಟಿಸಂ ವಿಷಯದ ಕುರಿತು ಮಾತನಾಡಿದ ಅವರು, "ನಾವು ಸಾಮಾನ್ಯವಾಗಿ 'ನಾರ್ಮಲ್' (ಸಾಮಾನ್ಯ) ಎಂಬುದರ ವಿರುದ್ಧ ಪದವನ್ನು 'ಅಬ್ನಾರ್ಮಲ್' (ಅಸಹಜ) ಎಂದು ಪರಿಗಣಿಸುತ್ತೇವೆ. ಆದರೆ, ಸಾಮಾನ್ಯದ ವಿರುದ್ಧ ಪದವನ್ನು 'ಎಕ್ಸ್‌ಟ್ರಾ ಆರ್ಡಿನರಿ' (ಅಸಾಧಾರಣ) ಎಂದೂ ನೋಡಬಹುದು," ಎಂದು ಮಾರ್ಮಿಕವಾಗಿ ಹೇಳಿದರು. ಮಾನವೀಯ ಅಂತಃಶಕ್ತಿ, ಸಹಾನುಭೂತಿ ಮತ್ತು ಪರಿವರ್ತನೆಯನ್ನು ಉಲ್ಲೇಖಿಸುವ ಕಥೆಗಳತ್ತ ತಾನು ಹೆಚ್ಚು ಆಕರ್ಷಿತನಾಗುತ್ತಿರುವುದಾಗಿ ಖೇರ್ ಒತ್ತಿ ಹೇಳಿದರು. ಇದೇ ವೇಳೆ, "ಮಾನವ ಭಾವನೆಗಳ ಆಳವನ್ನು ಮುಟ್ಟುವ ಮತ್ತು ಜನರ ಜೀವನದಲ್ಲಿ ಧನಾತ್ಮಕ ಹಾಗೂ ಅರ್ಥಪೂರ್ಣ ಬದಲಾವಣೆಗಳನ್ನು ತರಲು ಪ್ರೇರೇಪಿಸುವಂತಹ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ" ಎಂದು ಅವರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

'ತನ್ವಿ ದ ಗ್ರೇಟ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಚಿತ್ರದ ನಾಯಕಿ ಶುಭಾಂಗಿ ದತ್ ಅವರ ಉಪಸ್ಥಿತಿ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿತ್ತು. ಕ್ಯಾಮೆರಾ ಮುಂದೆ ತಮ್ಮ ಮೊದಲ ಅನುಭವದ ಬಗ್ಗೆ ಮಾತನಾಡಿದ ಶುಭಾಂಗಿ, ಅನುಪಮ್ ಖೇರ್ ಅವರ ಶಿಸ್ತುಬದ್ಧ ಮತ್ತು ಒಳನೋಟವುಳ್ಳ ನಿರ್ದೇಶನದ ವಿಧಾನಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅನುಪಮ್ ಅವರನ್ನು "ಕಟ್ಟುನಿಟ್ಟಾದ ಗುರು" ಎಂದು ಬಣ್ಣಿಸಿದ ಅವರು, ಖೇರ್ ಅವರ ಮಾರ್ಗದರ್ಶನವು ತಮ್ಮ ನಟನೆಯನ್ನು ಸುಧಾರಿಸಿದ್ದು ಮಾತ್ರವಲ್ಲದೆ, ತಮ್ಮಲ್ಲಿರುವ ಕಲಾತ್ಮಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಿತು ಎಂದು ಹೇಳಿದರು. ಭವಿಷ್ಯದಲ್ಲಿ ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ವ್ಯಕ್ತಪಡಿಸಿದ ಶುಭಾಂಗಿ, ತಮ್ಮ ಕೌಶಲ್ಯಕ್ಕೆ ಸವಾಲಾಗುವ ಮತ್ತು ಅರ್ಥಪೂರ್ಣ ಕಥೆಗಳನ್ನು ಹೇಳುವಂತಹ ಪಾತ್ರಗಳನ್ನು ನಿರ್ವಹಿಸುವ ಭರವಸೆ ವ್ಯಕ್ತಪಡಿಸಿದರು.

ತನ್ನ ಸ್ಪೂರ್ತಿದಾಯಕ ಸಂದೇಶ, ಅಚ್ಚುಕಟ್ಟಾಗಿ ರೂಪಿಸಲಾದ ಪಾತ್ರಗಳು ಮತ್ತು ಪ್ರೇಕ್ಷಕರಿಗೆ ತಮ್ಮದೇ ಎನಿಸುವಂತಹ (Relatable) ಭಾವನಾತ್ಮಕ ಪಯಣದಿಂದಾಗಿ 'ತನ್ವಿ ದ ಗ್ರೇಟ್' ಚಿತ್ರವು ನಿರಂತರವಾಗಿ ಮೆಚ್ಚುಗೆ ಗಳಿಸುತ್ತಿದೆ. ಐ.ಎಫ್.ಎಫ್.ಐ ನಲ್ಲಿ ಈ ಚಿತ್ರಕ್ಕೆ ದೊರೆತ ಅದ್ಭುತ ಸ್ವಾಗತವು, ಚಿತ್ರದ ಯಶಸ್ಸಿನ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಎಲ್ಲಾ ವಯೋಮಾನದ ಮತ್ತು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ ಎಂಬುದನ್ನು ಇದು ಒತ್ತಿಹೇಳುತ್ತದೆ.
ಪತ್ರಿಕಾಗೋಷ್ಠಿಯ ಲಿಂಕ್:
https://x.com/PIB_Panaji/status/1992161286780829855?s=20
“ತನ್ವಿ ದಿ ಗ್ರೇಟ್” ಚಿತ್ರದ ಟ್ರೇಲರ್ ಲಿಂಕ್:
ಐಎಫ್‌ಎಫ್‌ಐ ಬಗ್ಗೆ
1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ) ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ಇ.ಎಸ್.ಜಿ) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐ.ಎಫ್.ಎಫ್.ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ಮತ್ತು ಸಿನಿಮಾದ ದಿಟ್ಟ ಪ್ರಯೋಗಗಳು ಒಂದೇ ವೇದಿಕೆಯಲ್ಲಿ ಮೇಳೈಸುತ್ತವೆ. ಅಷ್ಟೇ ಅಲ್ಲ, ಸಿನಿಮಾ ರಂಗದ ದಿಗ್ಗಜರೊಂದಿಗೆ ನಿರ್ಭೀತ ಹೊಸ ಪ್ರತಿಭೆಗಳು ಇಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್‌ಗಳು, ಗೌರವ ಸಲ್ಲಿಕೆಗಳು ಮತ್ತು ಹೊಸ ಆಲೋಚನೆಗಳು ಹಾಗೂ ಒಪ್ಪಂದಗಳಿಗೆ ರೆಕ್ಕೆ ನೀಡುವ ಅತ್ಯುತ್ಸಾಹದ 'ವೇವ್ಸ್ ಫಿಲ್ಮ್ ಬಜಾರ್' (WAVES Film Bazaar) ಐ.ಎಫ್.ಎಫ್.ಐ ಯ ಮೆರುಗು ಹೆಚ್ಚಿಸಿವೆ. ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192964
| Visitor Counter:
3