ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಸರ್ದಾರ್@150 ಏಕತಾ ನಡಿಗೆಯು ಒಗ್ಗೂಡಿದ ರಾಷ್ಟ್ರದ ಹೃದಯ ಬಡಿತ: ಡಾ. ಮನ್ಸುಖ್ ಮಾಂಡವಿಯಾ
ಸ್ವಚ್ಛತೆ, ಸ್ವದೇಶಿ ಮತ್ತು ಆತ್ಮನಿರ್ಭರತೆ ಪಾದಯಾತ್ರೆಯ ಪ್ರಧಾನ ಸಂದೇಶ - ಡಾ. ಮಾಂಡವಿಯಾ ಪ್ರತಿಪಾದನೆ
'ಏಕತಾ ಮೆರವಣಿಗೆ' ಸರ್ದಾರ್ ಪಟೇಲ್ ಅವರ ಕೊಡುಗೆಯ ಆಚರಣೆ ಮತ್ತು ಯುವ ಶಕ್ತಿಯ ರಾಷ್ಟ್ರೀಯ ಚಳುವಳಿ: ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ
ರಾಷ್ಟ್ರೀಯ ಮೆರವಣಿಗೆಗೆ ಪೂರ್ವಭಾವಿಯಾಗಿ ಭಾರತದಾದ್ಯಂತ 842 ಪಾದಯಾತ್ರೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗಿ
ರಾಷ್ಟ್ರ ಮಟ್ಟದ ಪಾದಯಾತ್ರೆಯು ನವೆಂಬರ್ 26 ರಿಂದ ಪ್ರಾರಂಭವಾಗಿ ಡಿಸೆಂಬರ್ 6 ರಂದು ಮುಕ್ತಾಯಗೊಳ್ಳಲಿದೆ - ಡಾ. ಮನ್ಸುಖ್ ಮಾಂಡವಿಯಾ ಘೋಷಣೆ
Posted On:
18 NOV 2025 4:58PM by PIB Bengaluru
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ರಾಷ್ಟ್ರೀಯ ಹೆಮ್ಮೆ, ನಾಗರಿಕರ ಭಾಗವಹಿಸುವಿಕೆ ಮತ್ತು ಯುವಜನತೆಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು, MY Bharat ಮೂಲಕ ದೇಶವ್ಯಾಪಿ Sardar@150 ಏಕತಾ ನಡಿಗೆ ಪಾದಯಾತ್ರೆಯನ್ನು ಆಯೋಜಿಸಿದೆ. ಸರ್ದಾರ್ ಪಟೇಲ್ ಅವರ ವಿಚಾರಗಳು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಕಸಿತ ಭಾರತ ಮುನ್ನೋಟದೊಂದಿಗೆ ಪ್ರೇರಿತವಾದ ಈ ಅಭಿಯಾನವು, "ಏಕ್ ಭಾರತ, ಆತ್ಮನಿರ್ಭರ ಭಾರತ" ಎಂಬ ಸಮಗ್ರ ಧ್ಯೇಯವಾಕ್ಯದ ಮಾರ್ಗದರ್ಶನದಲ್ಲಿ ಹಲವು ಚಟುವಟಿಕೆಗಳನ್ನು ಒಳಗೊಂಡಿದೆ.
ಭಾರತ ಸರ್ಕಾರದ ಎರಡು ವರ್ಷಗಳ (2024–2026) ಆಚರಣೆಯ ಭಾಗವಾಗಿ, ಭಾರತದ ಉಕ್ಕಿನ ಮನುಷ್ಯನ ಸ್ಮರಣೀಯ ಕೊಡುಗೆಗಳು ಮತ್ತು ನಿರಂತರ ಪರಂಪರೆಯನ್ನು ಗೌರವಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಹಾಗೂ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ ಅವರು 2025ರ ಅಕ್ಟೋಬರ್ 6 ರಂದು ಈ ಉಪಕ್ರಮಕ್ಕೆ ಚಾಲನೆ ನೀಡಿದರು.
ಈ ಅಭಿಯಾನವು ರೀಲ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಸರ್ದಾರ್@150 ಯುವ ನಾಯಕರ ರಸಪ್ರಶ್ನೆ ಮೊದಲಾದ ಡಿಜಿಟಲ್ ಚಟುವಟಿಕೆಗಳೊಂದಿಗೆ ಪ್ರಾರಂಭವಾಯಿತು. ವಾಸ್ತವ ಉಪಕ್ರಮದ ಭಾಗವಾಗಿ, ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಮತ್ತು ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಪಾದಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಪಾದಯಾತ್ರೆಗೆ ಪೂರಕವಾಗಿ ಗುಜರಾತಿನ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾ ಪ್ರತಿನಿಧಿಗಳ ಯಾತ್ರೆಯೂ ಪ್ರಗತಿಯಲ್ಲಿದ್ದು, ಎರಡು ತಿಂಗಳ ಅಭಿಯಾನವು 2025ರ ಡಿಸೆಂಬರ್ 6 ರಂದು ಸಂಪನ್ನಗೊಳ್ಳಲಿದೆ.
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ನವದೆಹಲಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತದ ಜಿಲ್ಲಾ ಮಟ್ಟದ ಪಾದಯಾತ್ರೆಗಳ ಪ್ರಗತಿ ಮತ್ತು ರಾಷ್ಟ್ರೀಯ ಪಾದಯಾತ್ರೆಯ ಪ್ರಮುಖ ಮುಖ್ಯಾಂಶಗಳನ್ನು ಮಾಧ್ಯಮಗಳಿಗೆ ವಿವರಿಸಿದರು. "ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕೊಹಿಮಾದವರೆಗೆ, ಲಕ್ಷಾಂತರ ಜನರು ರಾಷ್ಟ್ರೀಯ ಏಕತೆಗಾಗಿ ಒಟ್ಟಾಗಿ ನಡಿಗೆಯಲ್ಲಿ ಸಾಗಿದ್ದಾರೆ. ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳ ಆಚರಣೆಯಾಗಿದೆ ಮತ್ತು ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಶಕ್ತಿಯನ್ನು ರಾಷ್ಟ್ರ ನಿರ್ಮಾಣದತ್ತ ಕರೆತರುವ ರಾಷ್ಟ್ರೀಯ ಚಳುವಳಿಯಾಗಿದೆ" ಎಂದು ಅವರು ಹೇಳಿದರು.

"ಕಳೆದ ಕೆಲವು ತಿಂಗಳುಗಳಿಂದ, ಇಡೀ ರಾಷ್ಟ್ರವು ಒಂದೇ ಚೈತನ್ಯದೊಂದಿಗೆ ಮುನ್ನಡೆಯುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಒಟ್ಟು 842 ಪಾದಯಾತ್ರೆಗಳನ್ನು ಆಯೋಜಿಸಲಾಗಿದೆ. ಈ ಸಂಖ್ಯೆ ಕೇವಲ ಅಂಕಿಅಂಶವಲ್ಲ; ಇದು ಒಗ್ಗೂಡಿದ ರಾಷ್ಟ್ರದ ಹೃದಯ ಬಡಿತ. ಸ್ವಚ್ಛತೆ, ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂದೇಶವು ಪಾದಯಾತ್ರೆಯ ಪ್ರಮುಖ ಧ್ಯೇಯವಾಗಿದೆ" ಎಂದು ಸಚಿವರು ಪ್ರತಿಪಾದಿಸಿದರು.


ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ ಅವರು ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಯುವಜನ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್ ಅವರು ಡಿಜಿಟಲ್ ಹಂತದ ಪ್ರಮುಖ ಮುಖ್ಯಾಂಶಗಳು, ಜಿಲ್ಲಾ ಮಟ್ಟದ ಪಾದಯಾತ್ರೆಗಳಲ್ಲಿ ತಳಮಟ್ಟದಲ್ಲಿ ವ್ಯಾಪಕವಾಗಿ ಜನರ ಒಗ್ಗೂಡಿಸುವಿಕೆ ಮತ್ತು ಜಿಲ್ಲಾ ಪ್ರತಿನಿಧಿಗಳ ಮುಂಬರುವ ಯಾತ್ರೆ ಹಾಗೂ ರಾಷ್ಟ್ರೀಯ ಪಾದಯಾತ್ರೆಗೆ ಮಾರ್ಗಸೂಚಿಯ ಪ್ರಸ್ತುತಿ ನೀಡಿದರು.
ಈವರೆಗಿನ ಜಿಲ್ಲಾ ಮಟ್ಟದ ಪಾದಯಾತ್ರೆಗಳ ಪ್ರಮುಖಾಂಶಗಳು:
2025ರ ಅಕ್ಟೋಬರ್ 31 ರಂದು ಪ್ರಾರಂಭವಾದ ಜಿಲ್ಲಾ ಮಟ್ಟದ ಪಾದಯಾತ್ರೆಗಳು ದೇಶಾದ್ಯಂತ ಪ್ರಗತಿಯಲ್ಲಿದ್ದು, ಅಗಾಧವಾದ ಸಾರ್ವಜನಿಕ ಪ್ರತಿಕ್ರಿಯೆಯನ್ನು ಪಡೆದಿವೆ. ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದ ಪಾದಯಾತ್ರೆಗಳನ್ನು ಸಕ್ರಿಯವಾಗಿ ನಡೆಸಲಾಗುತ್ತಿದ್ದು, 471 ಜಿಲ್ಲೆಗಳ 349 ಲೋಕಸಭಾ ಮತ್ತು 329 ವಿಧಾನಸಭಾ ಕ್ಷೇತ್ರಗಳಲ್ಲಿ 842 ಪಾದಯಾತ್ರೆಗಳು (ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟ) ನಡೆದಿವೆ. 10 ಲಕ್ಷಕ್ಕೂ ಹೆಚ್ಚು ಜನರೊಂದಿಗೆ 11,000ಕ್ಕೂ ಹೆಚ್ಚು ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಎನ್.ಜಿ.ಒ ಗಳು ಮತ್ತು ಯುವ ಸಂಘಟನೆಗಳು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿವೆ.
ಈಶಾನ್ಯ ವಲಯದಲ್ಲಿ, 96 ಪಾದಯಾತ್ರೆಗಳು ಪೂರ್ಣಗೊಂಡಿದ್ದು, 70,000ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, 17,000ಕ್ಕೂ ಹೆಚ್ಚು ಜನರ ಒಗ್ಗೂಡುವಿಕೆಯೊಂದಿಗೆ 14 ಪಾದಯಾತ್ರೆಗಳನ್ನು ನಡೆಸಲಾಗಿದ್ದು, ಲಡಾಖ್‌ನಲ್ಲಿ 2,000ಕ್ಕೂ ಹೆಚ್ಚು ಜನರ ಒಗ್ಗೂಡುವಿಕೆಯೊಂದಿಗೆ 3 ಪಾದಯಾತ್ರೆಗಳನ್ನು ನಡೆಸಲಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಕ್ರಮವಾಗಿ 30 ಮತ್ತು 11 ಪಾದಯಾತ್ರೆಗಳನ್ನು ನಡೆಸಲಾಗಿದೆ.
ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ಉತ್ತರಾಖಂಡ ಮತ್ತು ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ದೆಹಲಿ ಮತ್ತು ಜುನಾಗಢ್ (ಗುಜರಾತ್), ಕಿಯೋಂಜಾರ್ (ಒಡಿಶಾ), ಜೈಪುರ (ರಾಜಸ್ಥಾನ)ಗಳಲ್ಲಿ ಕ್ರಮವಾಗಿ ಸುಮಾರು 15,000, 12,000 ಮತ್ತು 10,000 ಜನರು ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ, ಜಿಲ್ಲಾ ಮಟ್ಟದ ಪಾದಯಾತ್ರೆಯ ಜೊತೆಗೆ, ಗರಿಷ್ಠ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ತಳಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ವಿಧಾನಸಭಾ ಕ್ಷೇತ್ರ ಮಟ್ಟದ ಪಾದಯಾತ್ರೆಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಆತ್ಮನಿರ್ಭರ ಭಾರತ ಮತ್ತು ನಶೆ ಮುಕ್ತ ಭಾರತ ಪ್ರತಿಜ್ಞೆ ಬೋಧಿಸುವರು. ಪಾದಯಾತ್ರೆಯ ಮಾರ್ಗಗಳಲ್ಲಿ ಸ್ವದೇಶಿ ಉತ್ಪನ್ನ ಮಳಿಗೆಗಳಿದ್ದು ಈ ಮೂಲಕ ಆತ್ಮನಿರ್ಭರ ಭಾರತದ ಸಂದೇಶ ಸಾರುತ್ತಾ ಸ್ಥಳೀಯ ಉದ್ಯಮಶೀಲತೆಗೆ ಉತ್ತೇಜನ ನೀಡಿದರು. ಮೈ ಭಾರತ್ ಘಟಕಗಳ ಜೊತೆಗೆ, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ಇತರ ಸ್ಥಳೀಯ ಸಂಸ್ಥೆಗಳು ಸಾಂಸ್ಥಿಕ ಮಟ್ಟದಲ್ಲಿ ಪೂರ್ವಭಾವಿ ಚಟುವಟಿಕೆಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಗುಜರಾತ್ ಗೆ ಜಿಲ್ಲಾ ಪ್ರತಿನಿಧಿಗಳ ಯಾತ್ರೆ:
ಜಿಲ್ಲಾ ಮಟ್ಟದ ಪಾದಯಾತ್ರೆಗಳ ಮುಕ್ತಾಯದ ನಂತರ, ದೆಹಲಿ, ಜೈಪುರ, ನಾಗ್ಪುರ ಮತ್ತು ಮುಂಬೈಗಳಿಂದ ಕ್ರಮವಾಗಿ ಪ್ರಾರಂಭಿಸಲಾಗುವ ಗಂಗಾ, ಯಮುನಾ, ನರ್ಮದಾ ಮತ್ತು ಗೋದಾವರಿ ಎಂಬ ನಾಲ್ಕು ನಿರ್ಧರಿತ ಪ್ರವಾಹ ಮಾರ್ಗಗಳಲ್ಲಿ ಯಾತ್ರೆಯ ಅಂಗವಾಗಿ ಪ್ರತಿ ಜಿಲ್ಲೆಯ ಜಿಲ್ಲಾ ಪ್ರತಿನಿಧಿಗಳು ರಾಷ್ಟ್ರೀಯ ಪಾದಯಾತ್ರೆಗಾಗಿ ಗುಜರಾತ್ ನತ್ತ ತೆರಳಲಿದ್ದಾರೆ. ಆಯಾ ಪ್ರವಾಹ್ ಅಡಿಯಲ್ಲಿ ಬರುವ ಪ್ರತಿ ಜಿಲ್ಲೆಗಳ ಇಬ್ಬರು ಪ್ರತಿನಿಧಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಎಲ್ಲಾ ನಾಲ್ಕು ಪ್ರವಾಹ್ ಯಾತ್ರೆಯು ವಿಭಿನ್ನ ದಿನಗಳಲ್ಲಿ ರಾಷ್ಟ್ರೀಯ ಪಾದಯಾತ್ರೆಯ ಭಾಗವಾಗಲಿದೆ. ಈ ಹಂತದಲ್ಲಿ ಯುವ ಸಂವಾದ, ತರಬೇತಿ ಸಂಸ್ಥೆಗಳೊಂದಿಗೆ ಸಂಪರ್ಕ, ಮಾರುಕಟ್ಟೆ ಸಂಪರ್ಕ, ಯೋಗಾಭ್ಯಾಸ, ಸಸಿ ನೆಡುವ ಅಭಿಯಾನ ಮತ್ತು ಸ್ವಚ್ಛತಾ ಉಪಕ್ರಮಗಳಂತಹ ಸಂಪರ್ಕ ಚಟುವಟಿಕೆಗಳ ಸರಣಿ ಇರಲಿದೆ.
ರಾಷ್ಟ್ರೀಯ ಪಾದಯಾತ್ರೆ: 26 ನವೆಂಬರ್ - 6 ಡಿಸೆಂಬರ್ 2025:
ರಾಷ್ಟ್ರೀಯ ಪಾದಯಾತ್ರೆಯು ನವೆಂಬರ್ 26 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುಟುಂಬದ ನಿವಾಸವಿರುವ ಕರಮ್ಸದ್ ನಿಂದ ಪ್ರಾರಂಭವಾಗಿ ಡಿಸೆಂಬರ್ 6 ರಂದು ಏಕತಾ ಪ್ರತಿಮೆ ಇರುವ ಸ್ಥಳದಲ್ಲಿ ಸಂಪನ್ನಗೊಳ್ಳಲಿದ್ದು 11 ದಿನಗಳಲ್ಲಿ ಸುಮಾರು 190 ಕಿ.ಮೀ. ಕ್ರಮಿಸಲಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಕೇಂದ್ರ ಖಾತೆಗಳ ರಾಜ್ಯ ಸಚಿವರು, ರಾಜ್ಯಪಾಲರು, ರಾಜ್ಯ ಸಚಿವರು ಮತ್ತು ಸಂಸದರು ಪ್ರತಿದಿನ ಪಾದಯಾತ್ರೆಯ ನೇತೃತ್ವ ವಹಿಸಲಿದ್ದು, ವಿವಿಧ ವಲಯಗಳು ಮತ್ತು ಕ್ಷೇತ್ರಗಳ ಖ್ಯಾತರು ಈ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗುವಂತೆ ಆಹ್ವಾನಿಸಲಾಗಿದೆ.
ಸರ್ದಾರ್ ಸಭೆಗಳ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಕೊಡುಗೆಗಳಿಂದ ಪ್ರೇರಿತವಾದ ಹತ್ತು ವಿಷಯಗಳನ್ನು ತಿಳಿಸಲು ಕ್ಯಾಬಿನೆಟ್ ಸಚಿವರು, ಗಣ್ಯರು ಮತ್ತು ರಾಷ್ಟ್ರೀಯ ನಾಯಕರು ಪ್ರತಿದಿನ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸಂಜೆ ಗ್ರಾಮ ಸಭೆಗಳನ್ನು ನಡೆಸಲಾಗುವುದು. ಈ ಸಮಯದಲ್ಲಿ ಗ್ರಾಮ ಸಂಪರ್ಕ ಚಟುವಟಿಕೆಗಳು ನಡೆಯಲಿವೆ ಮತ್ತು ಏಕ ಭಾರತ ಶ್ರೇಷ್ಠ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಾಗುವುದು. ಏಕ ಭಾರತ, ಆತ್ಮನಿರ್ಭರ ಭಾರತದ ಕೇಂದ್ರ ಸಂದೇಶವನ್ನು ಸಾರುತ್ತಾ ಈ ಪಾದಯಾತ್ರೆಯು ಸಂಪೂರ್ಣವಾಗಿ ಸ್ವದೇಶಿಯಾಗಿರಲಿದೆ.
ಈ ಮಾರ್ಗವು ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ 150 ವಿಷಯಾಧಾರಿತ ಪ್ರದರ್ಶನಗಳು, ಸಾಂಸ್ಕೃತಿಕ ಪ್ರಸ್ತುತಿಗಳು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಳಗೊಂಡಿದೆ. ಸಹಕಾರಿಗಳು, ಬಾರ್ಡೋಲಿ ಸತ್ಯಾಗ್ರಹ, ಆಡಳಿತಾತ್ಮಕ ನಾಯಕತ್ವ, ಸಾಂವಿಧಾನಿಕ ಮುನ್ನೋಟ ಮತ್ತು ರಾಜಪ್ರಭುತ್ವ ರಾಜ್ಯಗಳ ಏಕೀಕರಣದಂತಹ ವಿಷಯಗಳ ಬಗ್ಗೆ 10 ಪ್ರಮುಖ ಸರ್ದಾರ್ ಸಭೆಗಳಲ್ಲಿ ಚರ್ಚಿಸಲಾಗುವುದು.
ಪಾದಯಾತ್ರೆ ಮಾಡುವವರು ಪ್ರತಿದಿನ 15-18 ಕಿ.ಮೀ ನಡಿಗೆಯಲ್ಲಿ ಕ್ರಮಿಸುತ್ತಾ, ಪ್ರಮುಖ ಸರ್ಕಾರಿ ಯೋಜನೆಗಳ ಪ್ರದರ್ಶನಗಳನ್ನು ನೋಡುತ್ತಾ ಶಾಸ್ತ್ರೀಯ ಮತ್ತು ಜಾನಪದ ಪ್ರದರ್ಶನಗಳು, ವಿಶಿಷ್ಟ ಕಲೆ, ಸಾಂಪ್ರದಾಯಿಕ ಕ್ರೀಡೆಗಳ ಅನುಭೂತಿ ಪಡೆಯಬಹುದು. ಇದರೊಂದಿಗೆ ಸಮಾನಾಂತರವಾಗಿ ಎನ್ಎಸ್ಎಸ್ ಘಟಕಗಳು ಪಾದಯಾತ್ರೆ ಸಾಗುವ ಮಾರ್ಗದ ಸಮೀಪದ ಹಳ್ಳಿಗಳಲ್ಲಿ ಸಾಮಾಜಿಕ ಅಭಿವೃದ್ಧಿ ಮತ್ತು ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಿವೆ.
MY Bharat ಪೋರ್ಟಲ್ (Sardar@150 Unity March) ನಲ್ಲಿ ನೋಂದಣಿ ವಿವರಗಳು ಮತ್ತು ಎಲ್ಲಾ ಚಟುವಟಿಕೆಗಳ ಮಾಹಿತಿ ಇದೆ. ಏಕ ಭಾರತ, ಆತ್ಮನಿರ್ಭರ ಭಾರತದ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ನಾಗರಿಕ ಜವಾಬ್ದಾರಿಯೊಂದಿಗೆ ದೇಶಾದ್ಯಂತದ ಯುವಕರು ಈ ಐತಿಹಾಸಿಕ ಅಭಿಯಾನದಲ್ಲಿ ನೋಂದಾಯಿಸಿಕೊಳ್ಳಲು ಮತ್ತು ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.
****
(Release ID: 2191398)
Visitor Counter : 5