ಪ್ರಧಾನ ಮಂತ್ರಿಯವರ ಕಛೇರಿ
ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಭಾರತ ಅಭಿವೃದ್ಧಿ ಹೊಂದಲು ಉತ್ಸುಕವಾಗಿದೆ, ಭಾರತ ಸ್ವಾವಲಂಬಿಯಾಗಲು ಉತ್ಸುಕವಾಗಿದೆ: ಪ್ರಧಾನಮಂತ್ರಿ
ಭಾರತ ಕೇವಲ ಉದಯೋನ್ಮುಖ ಮಾರುಕಟ್ಟೆಯಲ್ಲ, ಭಾರತವು ಉದಯೋನ್ಮುಖ ಮಾದರಿಯೂ ಆಗಿದೆ: ಪ್ರಧಾನಮಂತ್ರಿ
ಇಂದು, ಜಗತ್ತು ಭಾರತೀಯ ಬೆಳವಣಿಗೆಯ ಮಾದರಿಯನ್ನು ಭರವಸೆಯ ಮಾದರಿಯಾಗಿ ನೋಡುತ್ತಿದೆ: ಪ್ರಧಾನಮಂತ್ರಿ
ನಾವು ನಿರಂತರವಾಗಿ ಸ್ಯಾಚುರೇಶನ್ ಧ್ಯೇಯದಲ್ಲಿ ಕೆಲಸ ಮಾಡುತ್ತಿದ್ದೇವೆ; ಯಾವುದೇ ಯೋಜನೆಯ ಪ್ರಯೋಜನಗಳಿಂದ ಒಬ್ಬ ಫಲಾನುಭವಿಯೂ ಹೊರಗುಳಿಯಬಾರದು: ಪ್ರಧಾನಮಂತ್ರಿ
ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ನಾವು ವಿಶೇಷ ಒತ್ತು ನೀಡಿದ್ದೇವೆ: ಪ್ರಧಾನಮಂತ್ರಿ
Posted On:
17 NOV 2025 9:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ, ಪತ್ರಿಕೋದ್ಯಮ, ಅಭಿವ್ಯಕ್ತಿ ಮತ್ತು ಸಾರ್ವಜನಿಕ ಚಳುವಳಿಗಳ ಶಕ್ತಿಯನ್ನು ಉನ್ನತೀಕರಿಸಿದ ವಿಶಿಷ್ಟ ವ್ಯಕ್ತಿತ್ವವನ್ನು ಗೌರವಿಸಲು ನಾವು ಇಂದು ಒಟ್ಟುಗೂಡಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ರಾಮನಾಥ್ ಗೋಯೆಂಕಾ ಅವರು ದಾರ್ಶನಿಕರಾಗಿ, ಸಂಸ್ಥೆ ನಿರ್ಮಾತೃರಾಗಿ, ರಾಷ್ಟ್ರೀಯತಾವಾದಿಯಾಗಿ ಮತ್ತು ಮಾಧ್ಯಮ ನಾಯಕರಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಅನ್ನು ಕೇವಲ ಪತ್ರಿಕೆಯಾಗಿ ಮಾತ್ರವಲ್ಲದೆ ಭಾರತದ ಜನರಲ್ಲಿ ಒಂದು ಧ್ಯೇಯವಾಗಿ ಸ್ಥಾಪಿಸಿದರು ಎಂಬುದನ್ನು ಅವರು ಎತ್ತಿ ತೋರಿಸಿದರು. ಅವರ ನಾಯಕತ್ವದಲ್ಲಿ, ಈ ಗುಂಪು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧ್ವನಿಯಾಯಿತು ಎಂಬುದರತ್ತ ಪ್ರಧಾನಿ ಗಮನ ಸೆಳೆದರು. 21ನೇ ಶತಮಾನದ ಈ ಯುಗದಲ್ಲಿ, ಭಾರತವು ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, ಶ್ರೀ ರಾಮನಾಥ್ ಗೋಯೆಂಕಾ ಅವರ ಬದ್ಧತೆ, ಪ್ರಯತ್ನಗಳು ಮತ್ತು ದೃಷ್ಟಿಕೋನವು ಸ್ಫೂರ್ತಿಯ ದೊಡ್ಡ ಮೂಲವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಉಪನ್ಯಾಸ ನೀಡಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು ಮತ್ತು ಹಾಜರಿದ್ದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಶ್ರೀ ರಾಮನಾಥ್ ಗೋಯೆಂಕಾ ಅವರು ಭಗವದ್ಗೀತೆಯ ಶ್ಲೋಕದಿಂದ ಆಳವಾದ ಸ್ಫೂರ್ತಿಯನ್ನು ಪಡೆದರು ಎಂಬುದನ್ನು ಎತ್ತಿ ತೋರಿಸುತ್ತಾ, ಸುಖ-ದುಃಖ, ಲಾಭ-ನಷ್ಟ, ಗೆಲುವು ಮತ್ತು ಸೋಲಿನ ಕಡೆಗೆ ಸಮಚಿತ್ತದಿಂದ ಕರ್ತವ್ಯವನ್ನು ನಿರ್ವಹಿಸುವ ಈ ಬೋಧನೆಯು ರಾಮನಾಥ್ ಅವರ ಜೀವನ ಮತ್ತು ಕೆಲಸದಲ್ಲಿ ಆಳವಾಗಿ ಹುದುಗಿದೆ ಎಂದು ವಿವರಿಸಿದರು. ಶ್ರೀ ರಾಮನಾಥ್ ಗೋಯೆಂಕಾ ಅವರು ತಮ್ಮ ಜೀವನದುದ್ದಕ್ಕೂ ಈ ತತ್ವವನ್ನು ಎತ್ತಿಹಿಡಿದರು, ಕರ್ತವ್ಯವನ್ನು ಎಲ್ಲಕ್ಕಿಂತ ಮೇಲಿನದು ಎಂದು ಭಾವಿಸಿದರು ಎಂದೂ ಶ್ರೀ ಮೋದಿ ನುಡಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ರಾಮನಾಥ್ ಜೀ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಬೆಂಬಲಿಸಿದರು, ನಂತರ ಜನತಾ ಪಕ್ಷವನ್ನು ಬೆಂಬಲಿಸಿದರು ಮತ್ತು ಜನಸಂಘದ ಟಿಕೆಟ್‌ನಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದರು ಎಂದೂ ಅವರು ಉಲ್ಲೇಖಿಸಿದರು. ಸಿದ್ಧಾಂತದ ಹೊರತಾಗಿಯೂ, ಅವರು ಸದಾ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದರು. ವರ್ಷಗಳ ಕಾಲ ರಾಮನಾಥ್ ಜೀ ಅವರೊಂದಿಗೆ ಕೆಲಸ ಮಾಡಿದವರು ಅವರ ಹಲವಾರು ಉಪಾಖ್ಯಾನಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ನಂತರ, ಹೈದರಾಬಾದ್‌ನಲ್ಲಿ ರಜಾಕಾರರಿಂದ ದೌರ್ಜನ್ಯದ ವಿಷಯ ಉದ್ಭವಿಸಿದಾಗ, ರಾಮನಾಥ್ ಜೀ ಅವರು ಸರ್ದಾರ್ ಪಟೇಲ್‌ಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ನೆನಪಿಸಿಕೊಂಡರು. 1970ರ ದಶಕದಲ್ಲಿ, ಬಿಹಾರದಲ್ಲಿ ವಿದ್ಯಾರ್ಥಿ ಚಳವಳಿಗೆ ನಾಯಕತ್ವದ ಅಗತ್ಯವಿದ್ದಾಗ, ರಾಮನಾಥ್ ಜೀ, ನಾನಾಜಿ ದೇಶಮುಖ್ ಅವರೊಂದಿಗೆ ಶ್ರೀ ಜಯಪ್ರಕಾಶ್ ನಾರಾಯಣ್ ಅವರನ್ನು ಚಳುವಳಿಯನ್ನು ಮುನ್ನಡೆಸಲು ಮನವೊಲಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಆಗಿನ ಪ್ರಧಾನಮಂತ್ರಿ ಅವರ ಆಪ್ತ ಸಚಿವರೊಬ್ಬರು ರಾಮನಾಥ್ ಅವರನ್ನು ಕರೆಸಿ ಜೈಲು ಶಿಕ್ಷೆ ವಿಧಿಸುವುದಾಗಿ ಬೆದರಿಕೆ ಹಾಕಿದಾಗ, ಅವರ ದಿಟ್ಟ ಪ್ರತಿಕ್ರಿಯೆ ಇತಿಹಾಸದ ಗುಪ್ತ ದಾಖಲೆಗಳಲ್ಲಿ ಒಂದಾಯಿತು. ಈ ಖಾತೆಗಳಲ್ಲಿ ಕೆಲವು ಸಾರ್ವಜನಿಕವಾಗಿದ್ದರೆ, ಇನ್ನು ಕೆಲವು ಬಹಿರಂಗಪಡಿಸದಿದ್ದರೂ, ಅವೆಲ್ಲವೂ ರಾಮನಾಥ್ ಜೀ ಅವರ ಸತ್ಯಕ್ಕೆ ಅಚಲವಾದ ನಿಷ್ಠೆ ಮತ್ತು ಅವರು ಅಧಿಕಾರವನ್ನು ಲೆಕ್ಕಿಸದೆ ಕರ್ತವ್ಯಕ್ಕೆ ತೋರಿದ ಅವರ ದೃಢವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ಹೇಳಿದರು.
ಶ್ರೀ ರಾಮನಾಥ್ ಗೋಯೆಂಕಾ ಅವರನ್ನು ಸಾಮಾನ್ಯವಾಗಿ ಅಸಹನೆಯಿಂದ ಕೂಡಿದ ವ್ಯಕ್ತಿ ಎಂದು ಬಣ್ಣಿಸಲಾಗುತ್ತದೆ – ಅದು ನಕಾರಾತ್ಮಕ ಅರ್ಥದಲ್ಲಿ ಅಲ್ಲ, ಬದಲಾಗಿ ಸಕಾರಾತ್ಮಕ ಅರ್ಥದಲ್ಲಿ. ಬದಲಾವಣೆಗಾಗಿ ಅತ್ಯುನ್ನತ ಮಟ್ಟದ ಪ್ರಯತ್ನಗಳನ್ನು ನಡೆಸುವ ಅಸಹನೆ, ಅದು ನಿಂತ ನೀರಿನಲ್ಲಿಯೂ ಚಲನೆಯನ್ನು ಪ್ರಚೋದಿಸುವ ರೀತಿಯ ಅಸಹನೆ ಎಂದು ಅವರು ಎತ್ತಿ ತೋರಿಸಿದರು. "ಇಂದಿನ ಭಾರತವೂ ಸಹ ಅಸಹನೆಯಿಂದ ಕೂಡಿದೆ - ಅಭಿವೃದ್ಧಿ ಹೊಂದುವುದಕ್ಕಾಗಿ ಅಸಹನೆ, ಸ್ವಾವಲಂಬಿಯಾಗಲು ಅಸಹನೆ" ಎಂದು ಹೇಳುವ ಮೂಲಕ ಪ್ರಧಾನಿ ಇದಕ್ಕೆ ಸಮಾನಾಂತರವಾದ ಉದಾಹರಣೆಯನ್ನು ನೀಡಿದರು. 21 ನೇ ಶತಮಾನದ ಮೊದಲ ಇಪ್ಪತ್ತೈದು ವರ್ಷಗಳು ವೇಗವಾಗಿ ಕಳೆದಿವೆ, ಒಂದರ ನಂತರ ಒಂದರಂತೆ ಸವಾಲುಗಳನ್ನು ತಂದಿವೆ, ಆದರೆ ಭಾರತದ ವೇಗವನ್ನು ತಡೆಯಲು ಯಾವುದಕ್ಕೂ ಸಾಧ್ಯವಿಲ್ಲ ಎಂದು ಅವರು ನುಡಿದರು.
ಕಳೆದ ನಾಲ್ಕೈದು ವರ್ಷಗಳು ಜಾಗತಿಕ ಸವಾಲುಗಳಿಂದ ತುಂಬಿದ್ದವು ಎಂಬುದರತ್ತ ಗಮನ ಸೆಳೆದ ಪ್ರಧಾನಮಂತ್ರಿ, 2020ರಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿತು, ವ್ಯಾಪಕ ಅನಿಶ್ಚಿತತೆಯನ್ನು ಸೃಷ್ಟಿಸಿತು ಎಂದು ಹೇಳಿದರು. ಜಾಗತಿಕ ಪೂರೈಕೆ ಸರಪಳಿಯ ಮೇಲೆ ತೀವ್ರವಾಗಿ ಪರಿಣಾಮ ಬೀರಿತು ಮತ್ತು ಜಗತ್ತು ಹತಾಶೆಯತ್ತ ಸಾಗಲು ಪ್ರಾರಂಭಿಸಿತು. ಪರಿಸ್ಥಿತಿಗಳು ಸ್ಥಿರವಾಗಲು ಪ್ರಾರಂಭಿಸಿದಾಗ, ನೆರೆಯ ದೇಶಗಳಲ್ಲಿ ಪ್ರಕ್ಷುಬ್ಧತೆ ಹೊರಹೊಮ್ಮಿತು. ಈ ಬಿಕ್ಕಟ್ಟುಗಳ ನಡುವೆ, ಭಾರತದ ಆರ್ಥಿಕತೆಯು ಹೆಚ್ಚಿನ ಬೆಳವಣಿಗೆಯ ದರವನ್ನು ಸಾಧಿಸುವ ಮೂಲಕ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿತು. 2022ರಲ್ಲಿ ಯುರೋಪಿಯನ್ ಬಿಕ್ಕಟ್ಟು ಜಾಗತಿಕ ಪೂರೈಕೆ ಸರಪಳಿಗಳು ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿತು, ಇದು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿತು ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಇದರ ಹೊರತಾಗಿಯೂ, 2022–23 ರವರೆಗೆ ಭಾರತದ ಆರ್ಥಿಕ ಬೆಳವಣಿಗೆ ಬಲವಾಗಿ ಮುಂದುವರೆಯಿತು. 2023ರಲ್ಲಿ, ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿಗಳು ಹದಗೆಟ್ಟಿದ್ದರೂ ಸಹ, ಭಾರತದ ಬೆಳವಣಿಗೆಯ ದರವು ದೃಢವಾಗಿಯೇ ಇತ್ತು. ಜಾಗತಿಕ ಅಸ್ಥಿರತೆಯ ನಡುವೆಯೂ, ಈ ವರ್ಷವೂ ಭಾರತದ ಬೆಳವಣಿಗೆಯ ದರವು ಏಳು ಪ್ರತಿಶತದ ಆಸುಪಾಸಿನಲ್ಲಿದೆ ಎಂದು ಅವರು ಒತ್ತಿ ಹೇಳಿದರು.
"ಜಗತ್ತು ಅಸ್ತವ್ಯಸ್ತತೆಯ ಭಯದಲ್ಲಿರುವ ಸಮಯದಲ್ಲಿ, ಭಾರತವು ಉಜ್ವಲ ಭವಿಷ್ಯದತ್ತ ಆತ್ಮವಿಶ್ವಾಸದಿಂದ ಸಾಗುತ್ತಿದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು, "ಭಾರತವು ಕೇವಲ ಉದಯೋನ್ಮುಖ ಮಾರುಕಟ್ಟೆಯಲ್ಲ, ಬದಲಾಗಿ ಉದಯೋನ್ಮುಖ ಮಾದರಿಯೂ ಆಗಿದೆ" ಎಂದು ಪ್ರತಿಪಾದಿಸಿದರು. ಇಂದು ಜಗತ್ತು ಭಾರತೀಯ ಬೆಳವಣಿಗೆಯ ಮಾದರಿಯನ್ನು ಭರವಸೆಯ ಮಾದರಿಯಾಗಿ ನೋಡುತ್ತದೆ ಎಂದು ಅವರು ಎತ್ತಿ ತೋರಿಸಿದರು.
ಬಲವಾದ ಪ್ರಜಾಪ್ರಭುತ್ವವನ್ನು ಅನೇಕ ನಿಯತಾಂಕಗಳಲ್ಲಿ ಪರೀಕ್ಷಿಸಲಾಗುತ್ತದೆ, ಅದರಲ್ಲಿ ಅತ್ಯಂತ ಮಹತ್ವದ್ದಾಗಿರುವುದು ಸಾರ್ವಜನಿಕ ಭಾಗವಹಿಸುವಿಕೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವದಲ್ಲಿ ಜನರ ವಿಶ್ವಾಸ ಮತ್ತು ಆಶಾವಾದದ ಮಟ್ಟವು ಹೆಚ್ಚು ಗೋಚರಿಸುತ್ತದೆ ಎಂದು ಗಮನಿಸಿದರು. ನವೆಂಬರ್ 14 ರಂದು ಘೋಷಿಸಲಾದ ಫಲಿತಾಂಶಗಳನ್ನು ಉಲ್ಲೇಖಿಸಿ, ಅವು ಐತಿಹಾಸಿಕವಾಗಿವೆ ಮತ್ತು ಅವುಗಳ ಜೊತೆಗೆ, ಒಂದು ನಿರ್ಣಾಯಕ ಅಂಶವು ಎದ್ದು ಕಾಣುತ್ತದೆ - ಯಾವುದೇ ಪ್ರಜಾಪ್ರಭುತ್ವವು ತನ್ನ ನಾಗರಿಕರ ಭಾಗವಹಿಸುವಿಕೆ ಹೆಚ್ಚುತ್ತಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಬಾರಿ ಬಿಹಾರವು ತನ್ನ ಇತಿಹಾಸದಲ್ಲಿ ಅತ್ಯಧಿಕ ಮತದಾನವನ್ನು ದಾಖಲಿಸಿದೆ, ಮಹಿಳೆಯರ ಮತದಾನವು ಪುರುಷರಿಗಿಂತ ಸುಮಾರು ಒಂಬತ್ತು ಪ್ರತಿಶತ ಹೆಚ್ಚಾಗಿದೆ ಎಂಬುದರತ್ತ ಅವರು ಗಮನಸೆಳೆದರು. ಇದು ಕೂಡ ಪ್ರಜಾಪ್ರಭುತ್ವದ ವಿಜಯ ಎಂದು ಅವರು ದೃಢಪಡಿಸಿದರು.
ಬಿಹಾರದ ಫಲಿತಾಂಶಗಳು ಭಾರತದ ಜನರ ಉನ್ನತ ಆಕಾಂಕ್ಷೆಗಳನ್ನು ಮತ್ತೊಮ್ಮೆ ಪ್ರದರ್ಶಿಸುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಇಂದು ನಾಗರಿಕರು ಆ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡುವ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಡುತ್ತಾರೆ ಎಂದು ಅವರು ಹೇಳಿದರು. ಎಡ, ಬಲ ಅಥವಾ ಕೇಂದ್ರ ಯಾವುದೇ ಸಿದ್ಧಾಂತವನ್ನು ಲೆಕ್ಕಿಸದೆ, ಪ್ರತಿಯೊಂದು ರಾಜ್ಯ ಸರ್ಕಾರವು ಬಿಹಾರದ ಫಲಿತಾಂಶಗಳಿಂದ ಪಾಠವನ್ನು ಕಲಿಯಬೇಕೆಂದು ಪ್ರಧಾನಿ ಗೌರವಯುತವಾಗಿ ಒತ್ತಾಯಿಸಿದರು: ಇಂದು ನೀಡುವ ಆಡಳಿತವು ಮುಂದಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ವಿರೋಧ ಪಕ್ಷಗಳಿಗೆ ಬಿಹಾರದ ಜನರು 15 ವರ್ಷಗಳನ್ನು ನೀಡಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡುವ ಅವಕಾಶವನ್ನು ಹೊಂದಿದ್ದರೂ, ಅವರು ಜಂಗಲ್ ರಾಜ್ ಮಾರ್ಗವನ್ನು ಆರಿಸಿಕೊಂಡರು ಎಂಬ ಅಂಶದತ್ತ ಪ್ರಧಾನಿ ಗಮನಸೆಳೆದರು. ಬಿಹಾರದ ಜನರು ಈ ದ್ರೋಹವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯಗಳಲ್ಲಿನ ವಿವಿಧ ಪಕ್ಷಗಳ ನೇತೃತ್ವದ ಸರ್ಕಾರಗಳಾಗಲಿ, ಅವುಗಳಿಗೆ ಪ್ರಥಮಾದ್ಯತೆಯು ಅಭಿವೃದ್ಧಿಯಾಗಿರಬೇಕು - ಅಭಿವೃದ್ಧಿ ಮತ್ತು ಅಭಿವೃದ್ಧಿ ಮಾತ್ರ ಎಂದು ಅವರು ಒತ್ತಿ ಹೇಳಿದರು. ಉತ್ತಮ ಹೂಡಿಕೆ ವಾತಾವರಣವನ್ನು ಸೃಷ್ಟಿಸುವಲ್ಲಿ ಸ್ಪರ್ಧಿಸಲು, ವ್ಯವಹಾರ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ, ಮತ್ತು ಅಭಿವೃದ್ಧಿ ನಿಯತಾಂಕಗಳನ್ನು ಸುಧಾರಿಸುವಲ್ಲಿ ಸ್ಪರ್ಧಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಶ್ರೀ ಮೋದಿ ಕರೆ ನೀಡಿದರು. ಅಂತಹ ಪ್ರಯತ್ನಗಳು ಜನರ ವಿಶ್ವಾಸವನ್ನು ಗಳಿಸುತ್ತವೆ ಎಂದು ಅವರು ಹೇಳಿದರು.
ಬಿಹಾರ ಚುನಾವಣಾ ಗೆಲುವಿನ ನಂತರ, ತಮ್ಮ ಬಗ್ಗೆ ಸಹಾನುಭೂತಿ ಹೊಂದಿರುವ ಕೆಲವು ಮಾಧ್ಯಮ ವ್ಯಕ್ತಿಗಳು ಸೇರಿದಂತೆ ಕೆಲವು ವ್ಯಕ್ತಿಗಳು ತಮ್ಮ ಪಕ್ಷ ಮತ್ತು ತಾವು ನಿರಂತರ 24x7 ಚುನಾವಣಾ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದಾಗಿ ಹೇಳುತ್ತಿದ್ದಾರೆ ಎಂದೂ ಶ್ರೀ ಮೋದಿ ಹೇಳಿದರು. ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಮೋಡ್‌ನಲ್ಲಿರುವುದು ಅಗತ್ಯವಿಲ್ಲ, ಬದಲಿಗೆ 24 ಗಂಟೆಗಳ ಕಾಲ ಭಾವನಾತ್ಮಕ ಮೋಡ್‌ನಲ್ಲಿರುವುದು ಅಗತ್ಯ ಎಂದು ಹೇಳುವ ಮೂಲಕ ಅವರು ಇದಕ್ಕೆ ಪ್ರತಿ ನುಡಿದರು. ಬಡವರ ಕಷ್ಟಗಳನ್ನು ಕಡಿಮೆ ಮಾಡಲು, ಉದ್ಯೋಗ ಒದಗಿಸಲು, ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಪೂರೈಸಲು ಒಂದು ನಿಮಿಷವೂ ವ್ಯರ್ಥ ಮಾಡದಿರಲು ಆಂತರಿಕ ಚಡಪಡಿಕೆ ಇದ್ದಾಗ, ನಿರಂತರ ಕಠಿಣ ಪರಿಶ್ರಮವು ಪ್ರೇರಕ ಶಕ್ತಿಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಭಾವನೆ ಮತ್ತು ಬದ್ಧತೆಯೊಂದಿಗೆ ಆಡಳಿತ ನಡೆಸಿದಾಗ, ಫಲಿತಾಂಶಗಳು ಚುನಾವಣಾ ದಿನದಂದು ಗೋಚರಿಸುತ್ತವೆ - ಇತ್ತೀಚೆಗೆ ಬಿಹಾರದಲ್ಲಿ ಕಂಡುಬಂದಂತೆ ಎಂದವರು ಅಭಿಪ್ರಾಯಪಟ್ಟರು.
ಶ್ರೀ ರಾಮನಾಥ್ ಗೋಯೆಂಕಾ ಅವರಿಗೆ ವಿದಿಶಾದಿಂದ ಜನಸಂಘ ಟಿಕೆಟ್ ದೊರೆತ ಬಗ್ಗೆ ಒಂದು ಉಪಾಖ್ಯಾನವನ್ನು ಹಂಚಿಕೊಂಡ ಶ್ರೀ ಮೋದಿ, ಆ ಸಮಯದಲ್ಲಿ ರಾಮನಾಥ್ ಜೀ ಮತ್ತು ನಾನಾಜಿ ದೇಶಮುಖ್ ನಡುವೆ ಸಂಘಟನೆ ಮುಖ್ಯವೇ ಅಥವಾ ಮುಖ ಹೆಚ್ಚು ಮುಖ್ಯವೇ ಎಂಬ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಿದರು. ನಾನಾಜಿ ದೇಶಮುಖ್ ಅವರು ರಾಮನಾಥ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಲು ಬಂದು ನಂತರ ತಮ್ಮ ವಿಜಯ ಪ್ರಮಾಣಪತ್ರವನ್ನು ಪಡೆಯಬೇಕೆಂದು ಹೇಳಿದರು. ನಂತರ ನಾನಾಜಿ ಪಕ್ಷದ ಕಾರ್ಯಕರ್ತರ ಮೂಲಕ ಅಭಿಯಾನವನ್ನು ಮುನ್ನಡೆಸಿದರು ಮತ್ತು ರಾಮನಾಥ್ ಜೀ ಅವರ ಗೆಲುವನ್ನು ಖಚಿತಪಡಿಸಿದರು. ಈ ಕಥೆಯನ್ನು ಹಂಚಿಕೊಳ್ಳುವ ತಮ್ಮ ಉದ್ದೇಶ ಅಭ್ಯರ್ಥಿಗಳು ನಾಮಪತ್ರಗಳನ್ನು ಮಾತ್ರ ಸಲ್ಲಿಸಬೇಕು ಎಂದು ಸೂಚಿಸುವುದಲ್ಲ, ಬದಲಾಗಿ ತಮ್ಮ ಪಕ್ಷದ ಅಸಂಖ್ಯಾತ ಕಾರ್ಯಕರ್ತರ ಸಮರ್ಪಣೆಯನ್ನು ಎತ್ತಿ ತೋರಿಸುವುದಾಗಿದೆ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಲಕ್ಷಾಂತರ ಕಾರ್ಯಕರ್ತರು ತಮ್ಮ ಬೆವರಿನಿಂದ ತಮ್ಮ ಪಕ್ಷದ ಬೇರುಗಳನ್ನು ಪೋಷಿಸಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಕೇರಳ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ, ನೂರಾರು ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ರಕ್ತವನ್ನು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. ಅಂತಹ ಬದ್ಧ ಕಾರ್ಯಕರ್ತರನ್ನು ಹೊಂದಿರುವ ಪಕ್ಷಕ್ಕೆ, ಕೇವಲ ಚುನಾವಣೆಗಳನ್ನು ಗೆಲ್ಲುವುದು ಗುರಿಯಲ್ಲ, ಬದಲು ನಿರಂತರ ಸೇವೆಯ ಮೂಲಕ ಜನರ ಹೃದಯಗಳನ್ನು ಗೆಲ್ಲುವುದು ಮುಖ್ಯವಾಗಿದೆ ಎಂದು ಶ್ರೀ ಮೋದಿ ಹೇಳಿದರು.
ರಾಷ್ಟ್ರೀಯ ಅಭಿವೃದ್ಧಿಗಾಗಿ, ಅದರ ಪ್ರಯೋಜನಗಳು ಎಲ್ಲರಿಗೂ ತಲುಪುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸರ್ಕಾರದ ಯೋಜನೆಗಳು ದಲಿತರು, ತುಳಿತಕ್ಕೊಳಗಾದವರು, ಶೋಷಿತರು ಮತ್ತು ಅವಕಾಶ ವಂಚಿತರನ್ನು ತಲುಪಿದಾಗ, ನಿಜವಾದ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲಾಗುತ್ತದೆ ಎಂದು ಹೇಳಿದರು. ಕಳೆದ ದಶಕಗಳಲ್ಲಿ, ಸಾಮಾಜಿಕ ನ್ಯಾಯದ ಸೋಗಿನಲ್ಲಿ, ಕೆಲವು ಪಕ್ಷಗಳು ಮತ್ತು ಕುಟುಂಬಗಳು ತಮ್ಮದೇ ಆದ ಹಿತಾಸಕ್ತಿಗಳನ್ನು ಅನುಸರಿಸುತ್ತಿದ್ದವು ಎಂಬುದರತ್ತ ಅವರು ಗಮನ ಸೆಳೆದರು.
ಇಂದು, ದೇಶವು ಸಾಮಾಜಿಕ ನ್ಯಾಯವನ್ನು ವಾಸ್ತವಕ್ಕೆ ತರುತ್ತಿರುವುದನ್ನು ನೋಡುತ್ತಿದೆ ಎಂದು ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು. ನಿಜವಾದ ಸಾಮಾಜಿಕ ನ್ಯಾಯ ಎಂದರೆ ಏನು ಎಂದು ಅವರು ವಿವರಿಸಿದರು, 12 ಕೋಟಿ ಶೌಚಾಲಯಗಳ ನಿರ್ಮಾಣವು ಬಯಲಿನಲ್ಲಿ ಮಲವಿಸರ್ಜನೆ ಮಾಡಲು ಅನಿವಾರ್ಯತೆಯನ್ನು ಸೃಷ್ಟಿಸಿದವರಿಗೆ ಘನತೆಯನ್ನು ತಂದುಕೊಟ್ಟಿತು. ಹಿಂದಿನ ಸರ್ಕಾರಗಳು ಬ್ಯಾಂಕ್ ಖಾತೆಗೆ ಅರ್ಹರೆಂದು ಪರಿಗಣಿಸದವರಿಗೆ 57 ಕೋಟಿ ಜನ ಧನ್ ಬ್ಯಾಂಕ್ ಖಾತೆಗಳು ಆರ್ಥಿಕ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟಿವೆ ಎಂದು ಅವರು ಎತ್ತಿ ತೋರಿಸಿದರು. 4 ಕೋಟಿ ಪಕ್ಕಾ ಮನೆಗಳು ಬಡವರಿಗೆ ಹೊಸ ಕನಸುಗಳನ್ನು ಕಾಣಲು ಅಧಿಕಾರ ನೀಡಿವೆ ಮತ್ತು ಅಪಾಯಗಳನ್ನು ಎದುರಿಸುವ/ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು.
ಕಳೆದ 11 ವರ್ಷಗಳಲ್ಲಿ ಸಾಮಾಜಿಕ ಭದ್ರತೆಯ ಕುರಿತು ಮಾಡಿದ ಕೆಲಸ ಗಮನಾರ್ಹವಾಗಿದ್ದು, ಇಂದು ಸುಮಾರು 94 ಕೋಟಿ ಭಾರತೀಯರು ಸಾಮಾಜಿಕ ಭದ್ರತಾ ಜಾಲದ ವ್ಯಾಪ್ತಿಗೆ ಬರುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು, ಒಂದು ದಶಕದ ಹಿಂದೆ ಕೇವಲ 25 ಕೋಟಿ ಭಾರತೀಯರು ಈ ಜಾಲದ ವ್ಯಾಪ್ತಿಗೆ ಬಂದಿದ್ದರು. ಮೊದಲು, ಕೇವಲ 25 ಕೋಟಿ ಜನರು ಸರ್ಕಾರಿ ಸಾಮಾಜಿಕ ಭದ್ರತಾ ಯೋಜನೆಗಳಿಂದ ಪ್ರಯೋಜನ ಪಡೆದಿದ್ದರು, ಆದರೆ ಈಗ ಆ ಸಂಖ್ಯೆ 94 ಕೋಟಿಗೆ ಏರಿದೆ - ಇದು ನಿಜವಾದ ಸಾಮಾಜಿಕ ನ್ಯಾಯ ಎಂದು ಅವರು ಹೇಳಿದರು. ಸರ್ಕಾರವು ಸಾಮಾಜಿಕ ಭದ್ರತಾ ಜಾಲವನ್ನು ವಿಸ್ತರಿಸುವುದಲ್ಲದೆ, ಯಾವುದೇ ಅರ್ಹ ಫಲಾನುಭವಿಯು ಹೊರಗುಳಿಯದಂತೆ ನೋಡಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯ ತಲುಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸಿದಾಗ, ಅದು ಯಾವುದೇ ತಾರತಮ್ಯಕ್ಕೆ ಅವಕಾಶವನ್ನು ನಿವಾರಿಸುತ್ತದೆ ಎಂದು ಅವರು ಗಮನಿಸಿದರು. ಅಂತಹ ಪ್ರಯತ್ನಗಳ ಪರಿಣಾಮವಾಗಿ, ಕಳೆದ 11 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಅದಕ್ಕಾಗಿಯೇ ಇಂದು ಜಗತ್ತು 'ಪ್ರಜಾಪ್ರಭುತ್ವವು ನೀಡುತ್ತದೆ' (ಪ್ರಜಾಪ್ರಭುತ್ವವು ಉದ್ದೇಶವನ್ನು ಈಡೇರಿಸುತ್ತದೆ) ಎಂಬುದನ್ನು ಒಪ್ಪಿಕೊಳ್ಳುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. .
ಮಹತ್ವದ ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ಮತ್ತೊಂದು ಉದಾಹರಣೆಯಾಗಿ ಪ್ರಧಾನಮಂತ್ರಿ ಉಲ್ಲೇಖಿಸಿದರು. ದೇಶದ 100 ಕ್ಕೂ ಹೆಚ್ಚು ಜಿಲ್ಲೆಗಳನ್ನು ಹಿಂದೆ ಹಿಂದುಳಿದ ಜಿಲ್ಲೆಗಳೆಂದು ಹಣೆಪಟ್ಟಿ ಕಟ್ಟಲಾಗಿತ್ತು ಮತ್ತು ನಂತರ ಹಿಂದಿನ ಸರ್ಕಾರಗಳು ಅವುಗಳನ್ನು ನಿರ್ಲಕ್ಷಿಸಿದ್ದವು ಎಂದು ಹೇಳಿದ ಅವರು, ಈ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವುದು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿತ್ತು ಮತ್ತು ಅಲ್ಲಿ ನಿಯೋಜಿಸಲಾದ ಅಧಿಕಾರಿಗಳನ್ನು ಹೆಚ್ಚಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು ಎಂದರು. 25 ಕೋಟಿಗೂ ಹೆಚ್ಚು ನಾಗರಿಕರು ಈ ಹಿಂದುಳಿದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದರು, ಇದು ಸಮಗ್ರ ಅಭಿವೃದ್ಧಿಯ ಪ್ರಮಾಣ ಮತ್ತು ಮಹತ್ವವನ್ನು ಒತ್ತಿಹೇಳುತ್ತದೆ ಎಂದರು.
ಈ ಹಿಂದುಳಿದ ಜಿಲ್ಲೆಗಳು ಅಭಿವೃದ್ಧಿಯಾಗದೇ ಉಳಿದಿದ್ದರೆ, ಮುಂದಿನ ನೂರು ವರ್ಷಗಳಾದರೂ ಭಾರತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಅದಕ್ಕಾಗಿಯೇ ಸರ್ಕಾರವು ಹೊಸ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ, ರಾಜ್ಯ ಸರ್ಕಾರಗಳನ್ನು ಮಂಡಳಿಯಲ್ಲಿ ಸೇರಿಸಿಕೊಂಡು, ಪ್ರತಿ ಜಿಲ್ಲೆಯು ನಿರ್ದಿಷ್ಟ ಅಭಿವೃದ್ಧಿ ನಿಯತಾಂಕಗಳಲ್ಲಿ ಹೇಗೆ ಹಿಂದುಳಿದಿದೆ ಎಂಬುದನ್ನು ಗುರುತಿಸಲು ವಿವರವಾದ ಅಧ್ಯಯನಗಳನ್ನು ನಡೆಸಿದೆ ಎಂದು ಅವರು ಹೇಳಿದರು. ಈ ಒಳನೋಟಗಳ ಆಧಾರದ ಮೇಲೆ, ಪ್ರತಿ ಜಿಲ್ಲೆಗೆ ಸೂಕ್ತವಾದ ಕಾರ್ಯತಂತ್ರಗಳನ್ನು ರೂಪಿಸಲಾಯಿತು. ದೇಶದ ಅತ್ಯುತ್ತಮ ಅಧಿಕಾರಿಗಳನ್ನು - ಪ್ರಕಾಶಮಾನವಾದ ಮತ್ತು ನವೀನ ಮನಸ್ಸುಗಳನ್ನು - ಈ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಈ ಜಿಲ್ಲೆಗಳನ್ನು ಇನ್ನು ಮುಂದೆ ಹಿಂದುಳಿದ ಜಿಲ್ಲೆಗಳೆಂದು ಪರಿಗಣಿಸಲಾಗುವುದಿಲ್ಲ, ಆದರೆ ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಮರು ವ್ಯಾಖ್ಯಾನಿಸಲಾಗಿದೆ. ಇಂದು, ಇಂತಹ ಹಲವು ಜಿಲ್ಲೆಗಳು ಆಯಾ ರಾಜ್ಯಗಳ ಇತರ ಜಿಲ್ಲೆಗಳನ್ನು ಹಲವಾರು ಅಭಿವೃದ್ಧಿ ನಿಯತಾಂಕಗಳಲ್ಲಿ ಮೀರಿಸಿವೆ.
ಛತ್ತೀಸ್‌ಗಢದ ಬಸ್ತಾರ್ ಅನ್ನು ಗಮನಾರ್ಹ ಉದಾಹರಣೆ ಎಂದು ಉಲ್ಲೇಖಿಸಿದ ಶ್ರೀ ಮೋದಿ, ಈ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೆ ಪತ್ರಕರ್ತರು ಒಂದು ಕಾಲದಲ್ಲಿ ಆಡಳಿತಕ್ಕಿಂತ ಹೆಚ್ಚಾಗಿ ಸರ್ಕಾರೇತರ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಾಗಿತ್ತು ಎಂಬುದನ್ನು ನೆನಪಿಸಿಕೊಂಡರು. ಇಂದು, ಅದೇ ಬಸ್ತಾರ್ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಬಸ್ತಾರ್ ಒಲಿಂಪಿಕ್ಸ್‌ಗೆ ಸಂಬಂಧಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಎಷ್ಟು ಪ್ರಮಾಣದಲ್ಲಿ ವರದಿ ಮಾಡಿದೆ ಎಂಬುದು ತಮಗೆ ಖಚಿತವಿಲ್ಲ ಎಂದು ಪ್ರಧಾನಿ ಹೇಳಿದರು, ಆದರೆ ಬಸ್ತಾರ್‌ನ ಯುವಜನರು ಈಗ ಬಸ್ತಾರ್ ಒಲಿಂಪಿಕ್ಸ್‌ನಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ನೋಡಿ ಶ್ರೀ ರಾಮನಾಥ್ ಗೋಯೆಂಕಾ ಇದ್ದಿದ್ದರೆ, ಅವರಿಗೆ ತುಂಬಾ ಸಂತೋಷವಾಗುತ್ತಿತ್ತು ಎಂದರು.
ಬಸ್ತಾರ್ ಬಗ್ಗೆ ಚರ್ಚಿಸುವಾಗ, ನಕ್ಸಲಿಸಂ ಅಥವಾ ಮಾವೋವಾದಿ ಭಯೋತ್ಪಾದನೆಯ ವಿಷಯವನ್ನು ಸಹ ತಿಳಿಸುವುದು ಅತ್ಯಗತ್ಯ ಎಂದು ಶ್ರೀ ಮೋದಿ ಹೇಳಿದರು, ದೇಶಾದ್ಯಂತ ನಕ್ಸಲಿಸಂನ ಪ್ರಭಾವ ಕುಗ್ಗುತ್ತಿದ್ದರೂ, ವಿರೋಧ ಪಕ್ಷದೊಳಗೆ ಅದು ಹೆಚ್ಚು ಸಕ್ರಿಯವಾಗಿದೆ ಎಂದು ಹೇಳಿದರು. ಕಳೆದ ಐದು ದಶಕಗಳಿಂದ, ಭಾರತದ ಬಹುತೇಕ ಪ್ರತಿಯೊಂದು ಪ್ರಮುಖ ರಾಜ್ಯವು ಮಾವೋವಾದಿ ಉಗ್ರವಾದದಿಂದ ಪ್ರಭಾವಿತವಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ವಿರೋಧ ಪಕ್ಷಗಳು ಭಾರತೀಯ ಸಂವಿಧಾನವನ್ನು ತಿರಸ್ಕರಿಸುವ ಮಾವೋವಾದಿ ಭಯೋತ್ಪಾದನೆಯನ್ನು ಪೋಷಿಸುವುದನ್ನು ಮುಂದುವರೆಸಿದ್ದಕ್ಕಾಗಿ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಅವರು ದೂರದ ಅರಣ್ಯ ಪ್ರದೇಶಗಳಲ್ಲಿ ನಕ್ಸಲಿಸಂ ಅನ್ನು ಬೆಂಬಲಿಸಿದ್ದಲ್ಲದೆ, ನಗರ ಕೇಂದ್ರಗಳಲ್ಲಿ, ಪ್ರಮುಖ ಸಂಸ್ಥೆಗಳಲ್ಲಿಯೂ ಸಹ ಅದು ಬೇರೂರಲು ಸಹಾಯ ಮಾಡಿದರು ಎಂದು ಪ್ರಧಾನಿ ಹೇಳಿದರು.
10-15 ವರ್ಷಗಳ ಹಿಂದೆ, ನಗರ ನಕ್ಸಲರು ಈಗಾಗಲೇ ವಿರೋಧ ಪಕ್ಷದೊಳಗೆ ತಮ್ಮನ್ನು ತಾವು ನೆಲೆಗೊಳಿಸಿಕೊಂಡಿದ್ದರು ಮತ್ತು ಇಂದು, ಅವರು ಪಕ್ಷವನ್ನು "ಮುಸ್ಲಿಂ ಲೀಗ್-ಮಾವೋವಾದಿ ಕಾಂಗ್ರೆಸ್" (ಎಂ.ಎಂ.ಸಿ-MMC) ಎಂದು ಕರೆದಿದ್ದಾರೆ ಎಂದು ಅವರು ಹೇಳಿದರು. ಈ ಎಂ.ಎಂ.ಸಿ. ತನ್ನ ಸ್ವಾರ್ಥ ಉದ್ದೇಶಗಳಿಗಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ತ್ಯಜಿಸಿದೆ ಮತ್ತು ದೇಶದ ಏಕತೆಗೆ ಸಂಬಂಧಿಸಿ ಹೆಚ್ಚುತ್ತಿರುವ ಬೆದರಿಕೆಯಾಗುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತ ಹೊಸ ಪಯಣ ಆರಂಭಿಸುತ್ತಿರುವಾಗ, ಶ್ರೀ ರಾಮನಾಥ್ ಗೋಯೆಂಕಾ ಅವರ ಪರಂಪರೆ ಇನ್ನಷ್ಟು ಪ್ರಸ್ತುತವಾಗುತ್ತದೆ ಎಂದು ಪ್ರಧಾನಿ ಹೇಳಿದರು. "ಬ್ರಿಟಿಷ್ ಆದೇಶಗಳನ್ನು ಪಾಲಿಸುವುದಕ್ಕಿಂತ ಪತ್ರಿಕೆಯನ್ನು ಮುಚ್ಚುವುದೇ ಉತ್ತಮ" ಎಂಬ ಸಂಪಾದಕೀಯ ಘೋಷಣೆಯನ್ನು ಉಲ್ಲೇಖಿಸಿ ರಾಮನಾಥ್ ಜೀ ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ಹೇಗೆ ತೀವ್ರವಾಗಿ ವಿರೋಧಿಸಿದರು ಎಂಬುದನ್ನು ಅವರು ನೆನಪಿಸಿಕೊಂಡರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ರಾಷ್ಟ್ರದ ಜನರನ್ನು ಗುಲಾಮರನ್ನಾಗಿ ಮಾಡಲು ಮತ್ತೊಂದು ಪ್ರಯತ್ನ ನಡೆದಾಗ, ರಾಮನಾಥ್ ಜೀ ಮತ್ತೊಮ್ಮೆ ದೃಢವಾಗಿ ನಿಂತರು ಎಂದು ಶ್ರೀ ಮೋದಿ ನುಡಿದರು. ತುರ್ತು ಪರಿಸ್ಥಿತಿಗೆ ಈ ವರ್ಷ ಐವತ್ತು ವರ್ಷಗಳು ತುಂಬುತ್ತಿವೆ ಎಂದು ಅವರು ಎತ್ತಿ ತೋರಿಸಿದರು ಮತ್ತು ಖಾಲಿ ಸಂಪಾದಕೀಯಗಳು ಸಹ ಜನರನ್ನು ಗುಲಾಮರನ್ನಾಗಿ ಮಾಡಲು ಪ್ರಯತ್ನಿಸಿದ ಮನಸ್ಥಿತಿಯನ್ನು ಪ್ರಶ್ನಿಸಬಹುದು ಎಂಬುದನ್ನೂ ಇಂಡಿಯನ್ ಎಕ್ಸ್‌ಪ್ರೆಸ್ ಆಗ ಪ್ರದರ್ಶಿಸಿತ್ತು ಎಂದರು.
ಭಾರತವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸುವ ವಿಷಯದ ಬಗ್ಗೆ ವಿವರವಾಗಿ ಮಾತನಾಡುವುದಾಗಿ ಪ್ರಧಾನಿ ಹೇಳಿದರು. ಇದಕ್ಕಾಗಿ 190 ವರ್ಷಗಳ ಹಿಂದೆ, 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುಂಚೆಯೇ, ಬ್ರಿಟಿಷ್ ಸಂಸದ ಥಾಮಸ್ ಬಾಬಿಂಗ್ಟನ್ ಮೆಕಾಲೆ ಭಾರತವನ್ನು ಅದರ ಸಾಂಸ್ಕೃತಿಕ ಅಡಿಪಾಯದಿಂದ ಕಿತ್ತುಹಾಕಲು ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದ 1835 ರವರೆಗೆ ಹೋಗಬೇಕಾಗಿದೆ ಎಂದು ಅವರು ಹೇಳಿದರು. ಭಾರತೀಯರಾಗಿ ಕಾಣುವ ಆದರೆ ಬ್ರಿಟಿಷರಂತೆ ಯೋಚಿಸುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶವನ್ನು ಮೆಕಾಲೆ ಘೋಷಿಸಿದ್ದರು. ಇದನ್ನು ಸಾಧಿಸಲು ಅವರು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದಷ್ಟೇ ಅಲ್ಲ, ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು. ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಯು ಬೇರು ಸಹಿತ ಕಿತ್ತು ನಾಶವಾದ ಸುಂದರ ಮರ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದ ಮಾತುಗಳನ್ನು ಪ್ರಧಾನಿ ಉಲ್ಲೇಖಿಸಿದರು.
ಭಾರತದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ತುಂಬಿತ್ತು ಮತ್ತು ಕಲಿಕೆ ಹಾಗು ಕೌಶಲ್ಯ ಅಭಿವೃದ್ಧಿ ಎರಡಕ್ಕೂ ಸಮಾನ ಒತ್ತು ನೀಡಿತ್ತು ಎಂದು ಹೇಳಿದ ಶ್ರೀ ಮೋದಿ, ಮೆಕಾಲೆ ಅದನ್ನು ಕೆಡವಲು ನಿಖರವಾಗಿ ಇದೇ ಕಾರಣಕ್ಕೆ ಪ್ರಯತ್ನಿಸಿದರು - ಮತ್ತು ಅವರು ಯಶಸ್ವಿಯಾದರು ಎಂದು ಹೇಳಿದರು. ಆ ಯುಗದಲ್ಲಿ ಬ್ರಿಟಿಷ್ ಭಾಷೆ ಮತ್ತು ಚಿಂತನೆಗೆ ಹೆಚ್ಚಿನ ಮನ್ನಣೆ ಸಿಗುವಂತೆ ಮೆಕಾಲೆ ಖಚಿತಪಡಿಸಿಕೊಂಡರು ಮತ್ತು ನಂತರದ ಶತಮಾನಗಳಲ್ಲಿ ಭಾರತ ಇದಕ್ಕೆ ಬೆಲೆ ತೆತ್ತಿತು. ಮೆಕಾಲೆ ಭಾರತದ ಆತ್ಮವಿಶ್ವಾಸವನ್ನು ಮುರಿದು ಕೀಳರಿಮೆಯನ್ನು ಹುಟ್ಟುಹಾಕಿದರು ಎಂದು ಪ್ರಧಾನಿ ಗಮನಿಸಿದರು. ಒಂದೇ ಏಟಿನಲ್ಲಿ, ಅವರು ಸಾವಿರಾರು ವರ್ಷಗಳ ಭಾರತದ ಜ್ಞಾನ, ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಸಂಪೂರ್ಣ ಜೀವನ ವಿಧಾನವನ್ನು ತ್ಯಜಿಸುವಂತೆ ಮಾಡಿದರು ಎಂದರು.
ವಿದೇಶಿ ವಿಧಾನಗಳ ಮೂಲಕ ಮಾತ್ರ ಪ್ರಗತಿ ಮತ್ತು ಶ್ರೇಷ್ಠತೆಯನ್ನು ಸಾಧಿಸಬಹುದು ಎಂಬ ನಂಬಿಕೆಗೆ ಬೀಜಗಳನ್ನು ಬಿತ್ತಿದ ಕ್ಷಣ ಇದಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸ್ವಾತಂತ್ರ್ಯದ ನಂತರ ಈ ಮನಸ್ಥಿತಿ ಇನ್ನಷ್ಟು ಬೇರೂರಿದೆ ಎಂದು ಹೇಳಿದರು. ಭಾರತದ ಶಿಕ್ಷಣ, ಆರ್ಥಿಕತೆ ಮತ್ತು ಸಾಮಾಜಿಕ ಆಕಾಂಕ್ಷೆಗಳು ವಿದೇಶಿ ಮಾದರಿಗಳೊಂದಿಗೆ ಹೆಚ್ಚು ಹೊಂದಿಕೊಂಡವು. ಸ್ಥಳೀಯ ವ್ಯವಸ್ಥೆಗಳ ಬಗ್ಗೆ ಹೆಮ್ಮೆ ಕಡಿಮೆಯಾಯಿತು ಮತ್ತು ಮಹಾತ್ಮ ಗಾಂಧಿಯವರು ಹಾಕಿದ ಸ್ವದೇಶಿ ಅಡಿಪಾಯವು ಹೆಚ್ಚಾಗಿ ಮರೆತುಹೋಗಿದೆ ಎಂದು ಪ್ರಧಾನಿ ಗಮನಿಸಿದರು. ಆಡಳಿತ ಮಾದರಿಗಳನ್ನು ವಿದೇಶಗಳಲ್ಲಿ ಹುಡುಕಲು ಪ್ರಾರಂಭಿಸಲಾಯಿತು ಮತ್ತು ವಿದೇಶಿ ದೇಶಗಳಲ್ಲಿ ನಾವೀನ್ಯತೆಯನ್ನು ಹುಡುಕಲಾಯಿತು. ಈ ಮನಸ್ಥಿತಿಯು, ಆಮದು ಮಾಡಿಕೊಂಡ ವಿಚಾರಗಳು, ಸರಕುಗಳು ಮತ್ತು ಸೇವೆಗಳನ್ನು ಶ್ರೇಷ್ಠವೆಂದು ಪರಿಗಣಿಸುವ ಸಾಮಾಜಿಕ ಪ್ರವೃತ್ತಿಗೆ ಕಾರಣವಾಯಿತು ಎಂದು ಅವರು ಹೇಳಿದರು.
ಒಂದು ರಾಷ್ಟ್ರವು ತನ್ನನ್ನು ತಾನು ಗೌರವಿಸಿಕೊಳ್ಳಲು ವಿಫಲವಾದಾಗ, ಅದು ಮೇಡ್ ಇನ್ ಇಂಡಿಯಾ ಉತ್ಪಾದನಾ ಚೌಕಟ್ಟು ಸೇರಿದಂತೆ ತನ್ನ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬಂದಿರುವ ಪ್ರತಿಯೊಂದು ದೇಶದಲ್ಲಿಯೂ ಜನರು ತಮ್ಮ ಐತಿಹಾಸಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಅವರು ಪ್ರವಾಸೋದ್ಯಮವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಸ್ವಾತಂತ್ರ್ಯಾನಂತರದ ಭಾರತವು ತನ್ನದೇ ಆದ ಪರಂಪರೆಯನ್ನು ನಿರ್ಲಕ್ಷಿಸುವ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಗಮನಿಸಿದರು. ಪರಂಪರೆಯ ಬಗ್ಗೆ ಹೆಮ್ಮೆಯಿಲ್ಲದೆ, ಅದರ ಸಂರಕ್ಷಣೆಗೆ ಯಾವುದೇ ಪ್ರೇರಣೆ ಇಲ್ಲದೆ, ಮತ್ತು ಸಂರಕ್ಷಣೆಯಿಲ್ಲದೆ ಇದ್ದರೆ, ಅಂತಹ ಪರಂಪರೆಯು ಕೇವಲ ಇಟ್ಟಿಗೆ ಮತ್ತು ಕಲ್ಲಿನ ಅವಶೇಷಗಳಾಗಿ ಉಳಿಯುತ್ತದೆ. ಪ್ರವಾಸೋದ್ಯಮದ ಬೆಳವಣಿಗೆಗೆ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು ಪೂರ್ವಾಪೇಕ್ಷಿತವಾಗಿದೆ ಎಂದು ಅವರು ಒತ್ತಿ ಹೇಳಿದರು.
ಸ್ಥಳೀಯ ಭಾಷೆಗಳ ಸಮಸ್ಯೆಯನ್ನು ಮತ್ತಷ್ಟು ಉಲ್ಲೇಖಿಸುತ್ತಾ, ಬೇರೆ ಯಾವ ದೇಶವು ತನ್ನದೇ ಆದ ಭಾಷೆಗಳನ್ನು ಅಗೌರವಿಸುತ್ತದೆಯೇ ಎಂದು ಪ್ರಶ್ನಿಸುತ್ತಾ, ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ಅನೇಕ ಪಾಶ್ಚಿಮಾತ್ಯ ಪದ್ಧತಿಗಳನ್ನು ಅಳವಡಿಸಿಕೊಂಡವು ಆದರೆ ಅವರ ಸ್ಥಳೀಯ ಭಾಷೆಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಪ್ರಧಾನಿ ಗಮನಸೆಳೆದರು. ಅದಕ್ಕಾಗಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ಸರ್ಕಾರ ಇಂಗ್ಲಿಷ್ ಭಾಷೆಯನ್ನು ವಿರೋಧಿಸುವುದಿಲ್ಲ, ಆದರೆ ಭಾರತೀಯ ಭಾಷೆಗಳನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಭಾರತದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಡಿಪಾಯಗಳ ವಿರುದ್ಧ ಮೆಕಾಲೆ ಮಾಡಿದ ಅಪರಾಧವು 2035ರಲ್ಲಿ 200 ವರ್ಷಗಳನ್ನು ಪೂರೈಸುತ್ತದೆ ಎಂದು ಹೇಳಿದ ಶ್ರೀ ಮೋದಿ, ಮುಂದಿನ ಹತ್ತು ವರ್ಷಗಳಲ್ಲಿ ಮೆಕಾಲೆ ಹುಟ್ಟುಹಾಕಿದ ಗುಲಾಮಗಿರಿಯ ಮನಸ್ಥಿತಿಯಿಂದ ತಮ್ಮನ್ನು ಮುಕ್ತಗೊಳಿಸಲು ಪ್ರತಿಜ್ಞೆ ತೆಗೆದುಕೊಳ್ಳುವಂತೆ ನಾಗರಿಕರನ್ನು ಆಗ್ರಹಿಸಿದರಲ್ಲದೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ರಾಷ್ಟ್ರಕ್ಕೆ ಕರೆ ನೀಡಿದರು. ಮೆಕಾಲೆ ಪರಿಚಯಿಸಿದ ದುಷ್ಟತನ/ಕೆಡುಕು ಮತ್ತು ಸಾಮಾಜಿಕ ಪಿಡುಗುಗಳನ್ನು ಮುಂಬರುವ ದಶಕದಲ್ಲಿ ನಿರ್ಮೂಲನೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗಿದೆ ಎಂಬುದರತ್ತ ಗಮನ ಸೆಳೆದ ಪ್ರಧಾನಮಂತ್ರಿ, ತಾವು ಪ್ರೇಕ್ಷಕರ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ದೇಶದ ಪ್ರತಿಯೊಂದು ಪರಿವರ್ತನೆ ಮತ್ತು ಬೆಳವಣಿಗೆಯ ಕಥೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಸಾಕ್ಷಿಯಾಗಿದೆ ಎಂದು ಅವರು ನುಡಿದರು. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯತ್ತ ಸಾಗುತ್ತಿರುವಾಗ, ಈ ಪ್ರಯಾಣದಲ್ಲಿ ಗುಂಪಿನ ನಿರಂತರ ಭಾಗವಹಿಸುವಿಕೆಯನ್ನು ಅವರು ಗುರುತಿಸಿದರು. ಶ್ರೀ ರಾಮನಾಥ್ ಗೋಯೆಂಕಾ ಅವರ ಆದರ್ಶಗಳನ್ನು ಸಂರಕ್ಷಿಸುವಲ್ಲಿ ಸಮರ್ಪಿತ ಪ್ರಯತ್ನಗಳಿಗಾಗಿ ಅವರು ಇಂಡಿಯನ್ ಎಕ್ಸ್‌ಪ್ರೆಸ್ ತಂಡವನ್ನು ಅಭಿನಂದಿಸಿದರು ಮತ್ತು ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ಮಾತುಗಳನ್ನು ಮುಕ್ತಾಯಗೊಳಿಸಿದರು.
*****
(Release ID: 2191166)
Visitor Counter : 6