ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಅಮೃತ್ ಔಷಧಾಲಯದ 10ನೇ ವಾರ್ಷಿಕೋತ್ಸವವನ್ನು ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರು ಉದ್ಘಾಟಿಸಿದರು, ಹಾಗೂ ರಾಷ್ಟ್ರವ್ಯಾಪಿ ವಿಸ್ತರಣೆಯನ್ನು ಘೋಷಿಸಿದರು


ಭಾರತದ ಪ್ರತಿಯೊಂದು ವೈದ್ಯಕೀಯ ಕಾಲೇಜು ಮತ್ತು ಪ್ರತಿಯೊಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಅಮೃತ್ ಫಾರ್ಮಸಿ ಪೂರ್ಣಪ್ರಮಾಣದಲ್ಲಿ ಲಭ್ಯವಾಗುವಂತೆ ಸಜ್ಜುಗೊಳ್ಳಬೇಕು: ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ 

ಮುಂದಿನ ದಿನಗಳಲ್ಲಿ ಅಮೃತ್ ಫಾರ್ಮಸಿ ಮಳಿಗೆಗಳ ಸಂಖ್ಯೆಯನ್ನು 500ಕ್ಕೇರಿಸಿ,  ದ್ವಿಗುಣಗೊಳಿಸಲು ಹೆಚ್.ಎಲ್.ಎಲ್. ಪ್ರತಿಜ್ಞೆ ಮಾಡಿದೆ

ಅಮೃತ್ ಫಾರ್ಮಸಿ 10 ವರ್ಷಗಳನ್ನು ಪೂರೈಸುತ್ತದೆ: 255ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಕೈಗೆಟುಕುವ ಆರೋಗ್ಯ ಸೇವೆಯ ಒಂದು ದಶಕವನ್ನು ಈ ಮೂಲಕ ಗುರುತಿಸಿದೆ

ಅಮೃತ್ ಫಾರ್ಮಸಿಗಳು 6.85 ಕೋಟಿಗೂ ಹೆಚ್ಚು ರೋಗಿಗಳಿಗೆ ಪ್ರಯೋಜನವನ್ನು ನೀಡಿವೆ ಮತ್ತು ಔಷಧಿಗಳು ಮತ್ತು ಇಂಪ್ಲಾಂಟ್‌ ಗಳ ಮೇಲೆ 50%-90% ವರೆಗೆ ರಿಯಾಯಿತಿಯನ್ನು ನೀಡುತ್ತಿವೆ

Rs. 17,000 ಕೋಟಿಗೂ ಹೆಚ್ಚು ಮೌಲ್ಯದ ಉತ್ತಮ ಗುಣಮಟ್ಟದ ಔಷಧಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ, ಇದು ರೋಗಿಗಳಿಗೆ ಒಟ್ಟಾರೆ ₹8,500 ಕೋಟಿಗಿಂತ ಹೆಚ್ಚು ಉಳಿತಾಯವನ್ನು ನೀಡಿವೆ

ಅಮೃತ್ ಫಾರ್ಮಸಿ ಜಾಲವು ಶಕ್ತಿ, ಉತ್ಸಾಹ ಮತ್ತು ಚೈತನ್ಯದೊಂದಿಗೆ ಜಾಲವನ್ನು ವಿಸ್ತರಿಸಲು, ಸುಧಾರಿಸಲು ಮತ್ತು ಬಲಪಡಿಸಲು ಮುಂದುವರಿಯುತ್ತದೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ

Posted On: 15 NOV 2025 3:32PM by PIB Bengaluru

ನವದೆಹಲಿಯ ಭಾರತ್ ಮಂಟಪದಲ್ಲಿ ಅಮೃತ್ (ಚಿಕಿತ್ಸೆಗಾಗಿ ಕೈಗೆಟುಕುವ ಔಷಧಗಳು ಮತ್ತು ವಿಶ್ವಾಸಾರ್ಹ ಇಂಪ್ಲಾಂಟ್‌ಗಳು) ಔಷಧಾಲಯದ (ಫಾರ್ಮಸಿ) 10ನೇ ವಾರ್ಷಿಕೋತ್ಸವ ಆಚರಣೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರು ಇಂದು ಉದ್ಘಾಟಿಸಿದರು. ಈ ಕಾರ್ಯಕ್ರಮವು ಕೈಗೆಟುಕುವ ಬೆಲೆಯಲ್ಲಿ ಔಷಧ ಲಭ್ಯತೆಯ ಪ್ರವೇಶದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸಾರ್ವಜನಿಕ ವಲಯದ ನಿರಂತರ ಬದ್ಧತೆಯನ್ನು ಗುರುತಿಸಿತು.

2015ರಲ್ಲಿ ಪ್ರಾರಂಭವಾದಾಗಿನಿಂದ, ಅಮೃತ್ ಔಷಧಾಲಯಗಳು ಜೀವ ಉಳಿಸುವ ಮತ್ತು ಅಗತ್ಯ ಔಷಧಿಗಳನ್ನು 50% ರಿಂದ 90% ವರೆಗಿನ ರಿಯಾಯಿತಿಯಲ್ಲಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ, ರೋಗಿಗಳಿಗೆ, ವಿಶೇಷವಾಗಿ ಕಡಿಮೆ ಆದಾಯದ ಹಿನ್ನೆಲೆಯಿಂದ ಬಂದವರಿಗೆ ಚಿಕಿತ್ಸಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ನಡ್ಡಾ ಅವರು, ಅಮೃತ್ ಅನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಿರ ಮತ್ತು ಉತ್ತಮ ಗುಣಮಟ್ಟದ ಪ್ರಯತ್ನಗಳಿಗಾಗಿ ಹೆಚ್.ಎಲ್.ಎಲ್. ಲೈಫ್‌ಕೇರ್ ಲಿಮಿಟೆಡ್ ಅನ್ನು ಅಭಿನಂದಿಸಿದರು. 2014ರಲ್ಲಿ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರವು ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಸಮಾನವಾಗಿಸಲು ನಿರ್ಧರಿಸಿತು ಎಂದು ಅವರು ನೆನಪಿಸಿಕೊಂಡರು. ಈ ದೃಷ್ಟಿಕೋನದಿಂದಲೇ ಜನೌಷಧಿ ಮತ್ತು ಅಮೃತ್ ಅನ್ನು ಕಲ್ಪಿಸಲಾಗಿದೆ - ಎರಡೂ ಕೈಗೆಟುಕುವ ದರದಲ್ಲಿ ಔಷಧಿಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ.

ಅಮೃತ್ ಒಂದು ಬಲಿಷ್ಠ ರಾಷ್ಟ್ರೀಯ ಜಾಲವಾಗಿ ಬೆಳೆದಿದೆ, ಪ್ರಸ್ತುತ 255 ಕ್ಕೂ ಹೆಚ್ಚು ಔಷಧಾಲಯಗಳು ಕಾರ್ಯನಿರ್ವಹಿಸುತ್ತಿವೆ, ಈ ಜಾಲವನ್ನು ದೇಶಾದ್ಯಂತ 500 ಮಳಿಗೆಗಳಿಗೆ ವಿಸ್ತರಿಸುವ ದೃಷ್ಟಿಕೋನವನ್ನು ಹೊಂದಿದೆ ಎಂದು ಕೇಂದ್ರ ಸಚಿವರಾದ ಶ್ರೀ ನಡ್ಡಾ ಅವರು ಹೇಳಿದರು. ಇಂದು ದೇಶದಲ್ಲಿರುವ ಪ್ರತಿಯೊಂದು ಎಐಐಎಂಎಸ್  ಅಮೃತ್ ಔಷಧಾಲಯವನ್ನು ಹೊಂದಿದ್ದರೂ, ಮುಂದಿನ ಸವಾಲು ಎಂದರೆ ಭಾರತದ ಪ್ರತಿಯೊಂದು ವೈದ್ಯಕೀಯ ಕಾಲೇಜು ಮತ್ತು ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯು ಅಮೃತ್ ಔಷಧಾಲಯವನ್ನು ಹೊಂದಿರಬೇಕು, ಇದರಿಂದ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಆರೋಗ್ಯ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ನಾಗರಿಕರನ್ನು ತಲುಪುತ್ತವೆ ಎಂದು ಸಚಿವರು ಹೇಳಿದರು.

ಅಮೃತ್ ಔಷಧಾಲಯದ ಸಾಧನೆಗಳನ್ನು ಎತ್ತಿ ತೋರಿಸಿದ ಅವರು, ಬ್ರಾಂಡೆಡ್ ಔಷಧಿಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿವೆ ಹಾಗೂ 6.85 ಕೋಟಿಗೂ ಹೆಚ್ಚು ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತಿವೆ ಮತ್ತು ಎಂ.ಆರ್.ಪಿ.ಯಲ್ಲಿ ₹17,000 ಕ್ಕಿಂತ ಹೆಚ್ಚು ಮೌಲ್ಯದ ಔಷಧಿಗಳನ್ನು ಇಲ್ಲಿಯವರೆಗೆ ವಿತರಿಸಲಾಗಿದೆ ಎಂದು ಸಚಿವರು ಪುನರುಚ್ಚರಿಸಿದರು, ಇದರ ಪರಿಣಾಮವಾಗಿ ರೋಗಿಗಳಿಗೆ ಸುಮಾರು ₹8,500 ಕೋಟಿಗಳಷ್ಟು ಸಂಚಿತ ಉಳಿತಾಯವಾಗಿದೆ ಎಂದು ಅವರು ಹೇಳಿದರು.

ಅಮೃತ್ ಔಷಧಾಲಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಹೆಚ್ಚಿನ ನಾಗರಿಕರಿಗೆ ಅಮೃತ್ ಮಳಿಗೆಗಳ ಪ್ರಯೋಜನಗಳು ಮತ್ತು ಲಭ್ಯತೆಯ ಬಗ್ಗೆ ತಿಳಿಸಬೇಕು, ಇದರಿಂದ ನೀಡಲಾಗುವ ಕೈಗೆಟುಕುವ ಬೆಲೆಯ ಸೇವೆಗಳನ್ನು ಅವರು ಸಕ್ರಿಯವಾಗಿ ಪಡೆಯಬಹುದು ಮತ್ತು ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಡಿಯಲ್ಲಿ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಸುಲಭವಾಗಿ ಮತ್ತು ಸಮಾನ ಪ್ರವೇಶ ಅವಕಾಶ ಮೂಲಕ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಉದ್ದೇಶದೊಂದಿಗೆ ಅಮೃತ್  ಉಪಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

ಹೆಚ್.ಎಲ್.ಎಲ್. ಲೈಫ್‌ಕೇರ್ ಲಿಮಿಟೆಡ್ ಮತ್ತು ಅಮೃತ್ ಫಾರ್ಮಸಿ ನೆಟ್‌ವರ್ಕ್‌ನ ಬದ್ಧತೆಯನ್ನು ಶ್ಲಾಘಿಸಿದ ಅವರು, "ಹೆಚ್.ಎಲ್.ಎಲ್. ಕುಟುಂಬ ಮತ್ತು ಅಮೃತ್ ಫಾರ್ಮಸಿ ನೆಟ್‌ವರ್ಕ್ ಜೋಶ್, ಜುನೂನ್ ಮತ್ತು ಜಜ್‌ಬಾತ್‌ ನೊಂದಿಗೆ - ಶಕ್ತಿ, ಉತ್ಸಾಹ ಮತ್ತು ಚೈತನ್ಯದೊಂದಿಗೆ - ಜಾಲವನ್ನು ವಿಸ್ತರಿಸಲು, ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಲು ಕಾರ್ಯಯೋಜನೆ ಮುಂದುವರಿಯುತ್ತದೆ ಎಂದು ಈಗಾಗಲೇ ಭರವಸೆ ನೀಡಿದೆ" ಎಂದು ಹೇಳಿದರು.

ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ, ಶ್ರೀಮತಿ ಅನಿತಾ ಥಂಪಿ ಅವರು, ಅಮೃತ್ ಉಪಕ್ರಮಕ್ಕೆ ಆ ವ್ಯವಸ್ಥೆಯ ದೂರದೃಷ್ಟಿಯ ನಾಯಕತ್ವ ಮತ್ತು ದೃಢ ಬೆಂಬಲಕ್ಕಾಗಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಕಳೆದ ದಶಕದಲ್ಲಿ ಅಮೃತ್ ನ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಅವರ ಸಹಯೋಗವು ಪ್ರಮುಖ ಪಾತ್ರವಹಿಸಿದೆ ಎಂದು ಅವರು ಹೇಳಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳ ನಿರಂತರ ಮಾರ್ಗದರ್ಶನವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.  ಎಲ್ಲಾ ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಖಾತ್ರಿಪಡಿಸಲು ಕಾರಣವಾಗಿರುವ ಹೆಚ್.ಎಲ್.ಎಲ್. ಮತ್ತು ಅಮೃತ್ ತಂಡಗಳ ದಣಿವರಿಯದ ಸಮರ್ಪಣೆಯನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಕಾರ್ಯಕ್ರಮದ ಅಂಗವಾಗಿ, ಈ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಭಾರತದಾದ್ಯಂತ 10 ಹೊಸ ಅಮೃತ್ ಮಳಿಗೆಗಳನ್ನು ಉದ್ಘಾಟಿಸಿದರು, ಇದು ದೇಶಾದ್ಯಂತ ರೋಗಿಗಳಿಗೆ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಸರಬರಾಜುಗಳಿಗೆ ಕೈಗೆಟುಕುವ ಪ್ರವೇಶವನ್ನು ಹೆಚ್ಚಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಅವರು ಅಮೃತ್ ಐಟಿಗಳು - ಆಟೊ ಗ್ರೀನ್ ಆವೃತ್ತಿ 2.0 ಅನ್ನು ಸಹ ಈ ಸಂದರ್ಭದಲ್ಲಿ ಪ್ರಾರಂಭಿಸಿದರು, ಇದು ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ, ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೃತ್ ನೆಟ್‌ವರ್ಕ್‌ನಾದ್ಯಂತ ದಕ್ಷತೆಯನ್ನು ಸುಧಾರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾರತದ ಅಂಚೆ ಇಲಾಖೆ ಸಹಯೋಗದೊಂದಿಗೆ ಕಸ್ಟಮೈಸ್ಡ್ ಮೈ ಸ್ಟಾಂಪ್ ಅನ್ನು ಕೂಡ ಬಿಡುಗಡೆ ಮಾಡಲಾಯಿತು. ಇದು  ನವೀಕರಿಸಿದ ಮತ್ತು ಪರಿಸರ ಸ್ನೇಹಿ ಡಿಜಿಟಲ್ ವೇದಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ಕಸ್ಟಮೈಸ್ಡ್ ಮೈ ಸ್ಟಾಂಪ್ ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಮೃತ್ ನ ದಶಕದ ಮೈಲಿಗಲ್ಲುಗಳು, ಯಶಸ್ಸಿನ ಕಥೆಗಳು ಮತ್ತು ಆರೋಗ್ಯ ರಕ್ಷಣೆಯ ಪ್ರವೇಶದ ಮೇಲಿನ ಪ್ರಭಾವವನ್ನು ಸೆರೆಹಿಡಿಯುವ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದರ ಜೊತೆಗೆ, ಎನ್.ಸಿ.ಆರ್. ಪ್ರದೇಶದಲ್ಲಿ ಗ್ರಾಮೀಣ ಸಂಪರ್ಕಕ್ಕಾಗಿ ಸಂಚಾರಿ ಔಷಧಾಲಯ ವಾಹನ ( ಮೊಬೈಲ್ ಫಾರ್ಮಸಿ ವ್ಯಾನ್ ) ವನ್ನು ಹಸಿರು ನಿಶಾನೆ ತೋರಿಸಿ ಚಾಲನೆ ಮಾಡಲಾಯಿತು, ಇದು ಸೇವೆಯಿಂದ ವಂಚಿತ ಮತ್ತು ದೂರದ ಸಮುದಾಯಗಳಿಗೆ ಕೈಗೆಟುಕುವ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ನಾಗರಿಕ ಸಂಪರ್ಕವನ್ನು ಬಲಪಡಿಸಲು, ಔಷಧ ಲಭ್ಯತೆ, ಬೆಲೆ ನಿಗದಿ ಮತ್ತು ಹತ್ತಿರದ ಅಮೃತ್ ಫಾರ್ಮಸಿ ಸ್ಥಳಗಳ ಕುರಿತು ನೈಜ-ಸಮಯದ ಸಹಾಯವನ್ನು ನೀಡಲು 24x7 ರಾಷ್ಟ್ರೀಯ ಸಂಪರ್ಕ ಕೇಂದ್ರವನ್ನು ಕೂಡ ಉದ್ಘಾಟಿಸಲಾಯಿತು.

ಅಮೃತ್ ಔಷಧಾಲಯದ ಹಿನ್ನೆಲೆ

ಅಮೃತ್ ಅನುಷ್ಠಾನ ಸಂಸ್ಥೆಯಾದ ಹೆಚ್.ಎಲ್.ಎಲ್. ಲೈಫ್‌ಕೇರ್ ಲಿಮಿಟೆಡ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಮಿನಿ ರತ್ನ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಗರ್ಭನಿರೋಧಕಗಳು, ಆಸ್ಪತ್ರೆ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಹಿಂದ್‌ಲ್ಯಾಬ್ಸ್ ಬ್ರಾಂಡ್ ಅಡಿಯಲ್ಲಿ ರೋಗನಿರ್ಣಯ ಸೇವೆಗಳು, ಅಮೃತ್ ಅಡಿಯಲ್ಲಿ ಚಿಲ್ಲರೆ ವ್ಯಾಪಾರ, ಹೆಚ್.ಎಲ್.ಎಲ್. ಫಾರ್ಮಸಿ, ಹೆಚ್.ಎಲ್.ಎಲ್. ಆಪ್ಟಿಕಲ್, ಮೂಲಸೌಕರ್ಯ ಅಭಿವೃದ್ಧಿ, ಖರೀದಿ ಸೇವೆಗಳು ಮತ್ತು ಸಲಹಾ ಸೇರಿದಂತೆ ಸೇವೆಗಳನ್ನು ಒಳಗೊಂಡ ವೈವಿಧ್ಯಮಯ ಪೋರ್ಟ್‌ಫೋಲಿಯೊ ಮೂಲಕ, ಹೆಚ್.ಎಲ್.ಎಲ್. ಸಮಗ್ರ ಆರೋಗ್ಯ ಪರಿಹಾರ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆಯು 7 ಅತ್ಯಾಧುನಿಕ ಕಾರ್ಖಾನೆಗಳು, 5 ಅಂಗಸಂಸ್ಥೆಗಳು ಮತ್ತು ಕಾರ್ಪೊರೇಟ್ ಆರ್&ಡಿ ಕೇಂದ್ರವನ್ನು ಕೂಡ ನಿರ್ವಹಿಸುತ್ತದೆ. ಇದು ಭಾರತದ ಆರೋಗ್ಯ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಚಾಲನೆ ಮಾಡುತ್ತದೆ.

 

****


(Release ID: 2190395) Visitor Counter : 5