ರೈಲ್ವೇ ಸಚಿವಾಲಯ
azadi ka amrit mahotsav

ಮಹಿಳಾ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್‌ ಗಳಾದ ಪ್ರತೀಕಾ ರಾವಲ್, ರೇಣುಕಾ ಸಿಂಗ್ ಠಾಕೂರ್ ಮತ್ತು ಸ್ನೇಹ್ ರಾಣಾ ಅವರು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ರೈಲ್ ಭವನದಲ್ಲಿ ಭೇಟಿಯಾದರು


ಭಾರತೀಯ ರೈಲ್ವೆಯ ತಾರಾ ಕ್ರಿಕೆಟಿಗರ ಸ್ಪೂರ್ತಿದಾಯಕ ಪ್ರಯಾಣ ಮತ್ತು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಕೇಂದ್ರ ಸಚಿವರು ಅವರನ್ನು ಶ್ಲಾಘಿಸಿದರು

ಭಾರತೀಯ ರೈಲ್ವೆಯು ಸಾಮಾನ್ಯ ಕುಟುಂಬಗಳ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವುದು ಮತ್ತು ಜಾಗತಿಕ ವೇದಿಕೆಯಲ್ಲಿ ಮಿಂಚಲು ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವುದನ್ನು ಮುಂದುವರಿಸಿದೆ

Posted On: 13 NOV 2025 5:25PM by PIB Bengaluru

ಇತ್ತೀಚೆಗೆ ಮುಕ್ತಾಯಗೊಂಡ ಐ.ಸಿ.ಸಿ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತದ ವಿಜಯಶಾಲಿ ತಂಡದ ಮೂವರು ತಾರೆಗಳಾದ ಬ್ಯಾಟರ್ ಪ್ರತೀಕ್ ರಾವಲ್, ಬೌಲರ್ ರೇಣುಕಾ ಸಿಂಗ್ ಠಾಕೂರ್ ಮತ್ತು ಆಲ್ ರೌಂಡರ್ ಸ್ನೇಹ್ ರಾಣಾ ದೇಶಕ್ಕೆ ಕೀರ್ತಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಇಂದು ನವದೆಹಲಿಯ ರೈಲ್ವೇ ಭವನದಲ್ಲಿ ಕೇಂದ್ರ ರೈಲ್ವೇ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದರು. ಆಟದ ಪ್ರತಿಯೊಂದು ಅಂಶವನ್ನು ಪ್ರತಿನಿಧಿಸುವ ಈ ಮೂವರು ಆಟಗಾರ್ತಿಯರು ಭಾರತೀಯ ರೈಲ್ವೇಯ ಹೆಮ್ಮೆಯ ಉದ್ಯೋಗಿಗಳು. ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿಗೆ ಅವರ ಅತ್ಯುತ್ತಮ ಕೊಡುಗೆಗಾಗಿ ಕೇಂದ್ರ ಸಚಿವರು ಅವರನ್ನು ಅಭಿನಂದಿಸಿದರು.

ವಿಶ್ವಕಪ್ ವಿಜೇತ ಚಾಂಪಿಯನ್‌ ಗಳನ್ನು ಭೇಟಿಯಾಗಿದ್ದು ಸಂತೋಷ ನೀಡಿತು ಎಂದು ಕೇಂದ್ರ ಸಚಿವರು ಹೇಳಿದರು. ಭಾರತೀಯ ಮಹಿಳಾ ತಾರೆಯರು ತಮ್ಮ ಪ್ರಯಾಣ ಮತ್ತು ಮೈದಾನದಲ್ಲಿನ ಅನುಭವಗಳ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು ಎಂದು ಅವರು ಹೇಳಿದರು.

ಉತ್ತರ ರೈಲ್ವೆಯ ದೆಹಲಿ ವಿಭಾಗವನ್ನು ಪ್ರತಿನಿಧಿಸುವ ದೆಹಲಿಯ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್, ಏಪ್ರಿಲ್ 2023ರಲ್ಲಿ ಭಾರತೀಯ ರೈಲ್ವೆಗೆ ಸೇರಿದರು ಮತ್ತು ಇತ್ತೀಚೆಗೆ ಹಿರಿಯ ಕ್ಲರ್ಕ್‌ ಹುದ್ದೆಗೆ ಬಡ್ತಿ ಪಡೆದರು. ವಿಶ್ವಕಪ್‌ ನ ಆರಂಭದಲ್ಲಿ ಗಾಯದಿಂದ ಬಳಲುತ್ತಿದ್ದರೂ, ಅವರು ಪಂದ್ಯಾವಳಿಯಾದ್ಯಂತ ತಮ್ಮ ತಂಡದ ಆಟಗಾರರಿಗೆ ಸ್ಫೂರ್ತಿ ಮತ್ತು ಬೆಂಬಲದ ಮೂಲವಾಗಿದ್ದರು. ತಮ್ಮ ಸುಂದರ ಬ್ಯಾಟಿಂಗ್ ಮತ್ತು ನಿಖರವಾದ ಇನ್ನಿಂಗ್ಸ್ ನಿರ್ಮಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಪ್ರತೀಕಾ ರಾವಲ್ ಅದನ್ನು ಆಟದ ಆಳವಾದ ತಿಳುವಳಿಕೆಯೊಂದಿಗೆ ಸಂಯೋಜಿಸುತ್ತಾರೆ. ಕಳೆದ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ, ಅವರು ಈ ಸ್ವರೂಪದಲ್ಲಿ ಭಾರತದ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದಾರೆ.

ಉತ್ತರ ರೈಲ್ವೆಯ ಅಂಬಾಲ ವಿಭಾಗವನ್ನು ಪ್ರತಿನಿಧಿಸುವ ಹಿಮಾಚಲ ಪ್ರದೇಶದ ಬಲಗೈ ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್, ಡಿಸೆಂಬರ್ 2020ರಲ್ಲಿ ಭಾರತೀಯ ರೈಲ್ವೆಗೆ ಸೇರಿದರು ಮತ್ತು ಅಂದಿನಿಂದ ಸ್ಥಿರವಾದ ಪಂದ್ಯ ವಿಜೇತೆಯಾಗಿದ್ದು, ಭಾರತದ ಅನೇಕ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತೀಚಿನ ವಿಶ್ವಕಪ್‌ ನಲ್ಲಿ, ಅವರು ಮೂರು ನಿರ್ಣಾಯಕ ವಿಕೆಟ್‌ ಗಳನ್ನು ಪಡೆಯುವ ಮೂಲಕ ಭಾರತದ ಯಶಸ್ವಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡದ ಐತಿಹಾಸಿಕ ವಿಜಯದ ನಂತರ, ಭಾರತದ ಚೊಚ್ಚಲ ಮಹಿಳಾ ವಿಶ್ವಕಪ್ ಗೆಲುವಿಗೆ ರೇಣುಕಾ ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಸಮಾರಂಭದಲ್ಲಿ ಅವರ ಗ್ರಾಮಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಅವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಿದರು.

ಉತ್ತರಾಖಂಡದ ಆಲ್‌ರೌಂಡರ್ ಸ್ನೇಹ್ ರಾಣಾ, ಉತ್ತರ ರೈಲ್ವೆಯ ಮೊರಾದಾಬಾದ್ ವಿಭಾಗವನ್ನು ಪ್ರತಿನಿಧಿಸುತ್ತಿದ್ದು, 2018 ರಿಂದ ಭಾರತೀಯ ರೈಲ್ವೆಯಲ್ಲಿದ್ದಾರೆ. ಬಲಗೈ ಆಫ್-ಸ್ಪಿನ್ ಮತ್ತು ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಗೆ ಹೆಸರುವಾಸಿಯಾದ ಸ್ನೇಹ್, ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಭಾರತ ಪರ ಪ್ರಮುಖ ಪಾತ್ರ ವಹಿಸಿದರು. ಸ್ನೇಹಾ ಆರು ಪಂದ್ಯಗಳಲ್ಲಿ ಏಳು ವಿಕೆಟ್‌ ಗಳೊಂದಿಗೆ ತಮ್ಮ ವಿಶ್ವಕಪ್ ಅಭಿಯಾನವನ್ನು ಮುಗಿಸಿದರು, ಇದರಲ್ಲಿ 2/32ರ ಅತ್ಯುತ್ತಮ ಪ್ರದರ್ಶನವೂ ಸೇರಿದೆ ಮತ್ತು ಬ್ಯಾಟಿಂಗ್‌ ನಲ್ಲಿಯೂ ಅಮೂಲ್ಯ ಕೊಡುಗೆಗಳನ್ನು ನೀಡಿದರು, 49.50 ಸರಾಸರಿಯಲ್ಲಿ 99 ರನ್ ಗಳಿಸಿದರು.

ಭಾರತೀಯ ರೈಲ್ವೆ ಬಹಳ ಹಿಂದಿನಿಂದಲೂ ಭಾರತದ ಕ್ರೀಡಾ ಪ್ರತಿಭೆಯನ್ನು ಪೋಷಿಸುವ ಪ್ರಮುಖ ಕೇಂದ್ರವಾಗಿದೆ, ಅದರ ಕ್ರೀಡಾಪಟುಗಳು ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್‌ ಗಳು, ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ರೈಲ್ವೆ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಸಾಧನೆಗಳಿಗಾಗಿ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಸೇರಿದಂತೆ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಗೌರವಗಳನ್ನು ಗಳಿಸಿದ್ದಾರೆ.

ರೈಲ್ವೆ ಕ್ರೀಡಾ ಉತ್ತೇಜನಾ ಮಂಡಳಿಯ ಮೂಲಕ, ಭಾರತೀಯ ರೈಲ್ವೆ ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳು, ಉದ್ಯೋಗ ಭದ್ರತೆ ಮತ್ತು ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತದೆ. ಇದು ಸಾಮಾನ್ಯ ಹಿನ್ನೆಲೆಯಿಂದ ಬಂದ ಪ್ರತಿಭೆಗಳನ್ನು ಗುರುತಿಸಿ ಪೋಷಿಸುತ್ತದೆ, ಅರ್ಹ ವ್ಯಕ್ತಿಗಳಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವನ್ನು ಒದಗಿಸುತ್ತದೆ. ಸ್ಥಿರ ಉದ್ಯೋಗ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಮತ್ತು ನಿರಂತರ ಉತ್ತೇಜನದೊಂದಿಗೆ, ಭಾರತೀಯ ರೈಲ್ವೆ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವುದನ್ನು ಮುಂದುವರೆಸಿದೆ.

****


(Release ID: 2189811) Visitor Counter : 4