ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದ ಕುರಿತ 5ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಭಾಷಣ


"ವಿಪತ್ತಿಗೆ ನಮ್ಮ ಪ್ರತಿಕ್ರಿಯೆಯು ಪ್ರತ್ಯೇಕವಾಗಿರದೆ, ಸಮಗ್ರವಾಗಿರಬೇಕು"

"ಮೂಲಸೌಕರ್ಯವು ಕೇವಲ ಲಾಭದ ಬಗ್ಗೆ ಮಾತ್ರವಲ್ಲ, ಅದು ತಲುಪುವಿಕೆ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆಯೂ ಆಗಿದೆ"

"ಮೂಲಸೌಕರ್ಯವು ಯಾರನ್ನೂ ಹಿಂದೆ ಬಿಡಬಾರದು"

"ಒಂದು ವಿಪತ್ತು ಮತ್ತು ಇನ್ನೊಂದು ವಿಪತ್ತಿನ ಮಧ್ಯದ ಸಮಯದಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲಾಗುತ್ತದೆ"

"ಆಧುನಿಕ ತಂತ್ರಜ್ಞಾನ ಮತ್ತು ಸ್ಥಳೀಯ ಒಳನೋಟಗಳ ಸಂಯೋಜನೆಯು ಸ್ಥಿತಿಸ್ಥಾಪಕತ್ವಕ್ಕೆ ಉತ್ತಮ ಕೊಡುಗೆ ನೀಡಬಲ್ಲದು"

"ಹಣಕಾಸಿನ ಸಂಪನ್ಮೂಲಗಳ ಬದ್ಧತೆಯು ವಿಪತ್ತು ಸ್ಥಿತಿಸ್ಥಾಪಕ ಉಪಕ್ರಮಗಳ ಯಶಸ್ಸಿಗೆ ಪ್ರಮುಖವಾಗಿದೆ"

Posted On: 04 APR 2023 10:39AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದ 2023ರ 5ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದರು.

ನಿಕಟವಾಗಿ ಸಂಪರ್ಕಗೊಂಡಿರುವ ಜಗತ್ತಿನಲ್ಲಿ, ವಿಪತ್ತುಗಳ ಪರಿಣಾಮವು ಕೇವಲ ಸ್ಥಳೀಯವಾಗಿರುವುದಿಲ್ಲ ಎಂಬ ಜಾಗತಿಕ ದೃಷ್ಟಿಕೋನದಿಂದ ಸಿಡಿಆರ್‌ಐ ಉದ್ಭವಿಸಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಆದ್ದರಿಂದ, "ನಮ್ಮ ಪ್ರತಿಕ್ರಿಯೆಯು ಪ್ರತ್ಯೇಕವಾಗಿರದೆ, ಸಮಗ್ರವಾಗಿರಬೇಕು" ಎಂದು ಅವರು ಹೇಳಿದರು. ಕೇವಲ ಕೆಲವೇ ವರ್ಷಗಳಲ್ಲಿ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು, ದೊಡ್ಡ ಅಥವಾ ಸಣ್ಣ, ಅಥವಾ ಜಾಗತಿಕ ದಕ್ಷಿಣ ಅಥವಾ ಜಾಗತಿಕ ಉತ್ತರದ 40ಕ್ಕೂ ಹೆಚ್ಚು ದೇಶಗಳು ಸಿಡಿಆರ್‌ಐನ ಭಾಗವಾಗಿವೆ ಎಂದು ಅವರು ಗಮನಿಸಿದರು. ಸರ್ಕಾರಗಳ ಹೊರತಾಗಿ, ಜಾಗತಿಕ ಸಂಸ್ಥೆಗಳು, ಖಾಸಗಿ ವಲಯಗಳು ಮತ್ತು ಡೊಮೇನ್ ತಜ್ಞರು ಸಹ ಇದರಲ್ಲಿ ಭಾಗಿಯಾಗಿರುವುದು ಉತ್ತೇಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವರ್ಷದ 'ಸ್ಥಿತಿಸ್ಥಾಪಕ ಮತ್ತು ಅಂತರ್ಗತ ಮೂಲಸೌಕರ್ಯವನ್ನು ನೀಡುವುದು' ಎಂಬ ವಿಷಯದ ಸಂದರ್ಭದಲ್ಲಿ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಕೆಲವು ಆದ್ಯತೆಗಳನ್ನು ಪ್ರಧಾನಮಂತ್ರಿ ಅವರು ವಿವರಿಸಿದರು. ಪ್ರಧಾನಮಂತ್ರಿ ಅವರು, "ಮೂಲಸೌಕರ್ಯವು ಕೇವಲ ಲಾಭದ ಬಗ್ಗೆ ಮಾತ್ರವಲ್ಲ, ಅದು ತಲುಪುವಿಕೆ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆಯೂ ಆಗಿದೆ. ಮೂಲಸೌಕರ್ಯವು ಯಾರನ್ನೂ ಹಿಂದೆ ಬಿಡಬಾರದು ಮತ್ತು ಬಿಕ್ಕಟ್ಟಿನ ಸಮಯದಲ್ಲೂ ಜನರಿಗೆ ಸೇವೆ ಸಲ್ಲಿಸಬೇಕು" ಎಂದು ಹೇಳಿದರು. ಸಾರಿಗೆ ಮೂಲಸೌಕರ್ಯದಷ್ಟೇ ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯವೂ ಮುಖ್ಯವಾಗಿರುವುದರಿಂದ ಮೂಲಸೌಕರ್ಯದ ಬಗ್ಗೆ ಸಮಗ್ರ ದೃಷ್ಟಿಕೋನ ಇರಬೇಕು ಎಂದು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.

ತ್ವರಿತ ಪರಿಹಾರದ ಜೊತೆಗೆ, ಸಹಜ ಸ್ಥಿತಿಯ ಶೀಘ್ರ ಮರುಸ್ಥಾಪನೆಯ ಮೇಲೂ ಗಮನ ಹರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಒಂದು ವಿಪತ್ತು ಮತ್ತು ಇನ್ನೊಂದು ವಿಪತ್ತಿನ ಮಧ್ಯದ ಸಮಯದಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲಾಗುತ್ತದೆ. ಹಿಂದಿನ ವಿಪತ್ತುಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳಿಂದ ಪಾಠಗಳನ್ನು ಕಲಿಯುವುದೇ ಇದಕ್ಕೆ ದಾರಿ," ಎಂದು ಅವರು ಹೇಳಿದರು.

ವಿಪತ್ತುಗಳನ್ನು ತಡೆದುಕೊಳ್ಳಬಲ್ಲ ಮೂಲಸೌಕರ್ಯಗಳನ್ನು ನಿರ್ಮಿಸಲು ಸ್ಥಳೀಯ ಜ್ಞಾನದ ಬುದ್ಧಿವಂತ ಬಳಕೆಯನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು. ಸ್ಥಳೀಯ ಒಳನೋಟಗಳೊಂದಿಗೆ ಆಧುನಿಕ ತಂತ್ರಜ್ಞಾನವು ಸ್ಥಿತಿಸ್ಥಾಪಕತ್ವಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಜೊತೆಗೆ, ಸರಿಯಾಗಿ ದಾಖಲಿಸಿದರೆ, ಸ್ಥಳೀಯ ಜ್ಞಾನವು ಜಾಗತಿಕ ಉತ್ತಮ ಅಭ್ಯಾಸವಾಗಬಹುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೆಲವು ಸಿಡಿಆರ್‌ಐ ಉಪಕ್ರಮಗಳ ಅಂತರ್ಗತ ಉದ್ದೇಶವನ್ನು ಪ್ರಧಾನಮಂತ್ರಿ ಅವರು ಗಮನಿಸಿದರು. ಅವರು ಅನೇಕ ದ್ವೀಪ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುವ ರೆಸಿಲಿಯಂಟ್ ಐಲ್ಯಾಂಡ್ ಸ್ಟೇಟ್ಸ್ ಇನಿಶಿಯೇಟಿವ್ ಬಗ್ಗೆ ಉಲ್ಲೇಖಿಸಿದರು. ಕಳೆದ ವರ್ಷ ಘೋಷಿಸಲಾದ ಇನ್‌ಫ್ರಾಸ್ಟ್ರಕ್ಚರ್ ರೆಸಿಲಿಯನ್ಸ್ ಆಕ್ಸಿಲರೇಟರ್ ಫಂಡ್ ಬಗ್ಗೆಯೂ ಅವರು ಮಾತನಾಡಿದರು. ಈ 50 ಮಿಲಿಯನ್ ಡಾಲರ್ ನಿಧಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಪಾರ ಆಸಕ್ತಿಯನ್ನು ಹುಟ್ಟುಹಾಕಿದೆ. "ಹಣಕಾಸಿನ ಸಂಪನ್ಮೂಲಗಳ ಬದ್ಧತೆಯು ಉಪಕ್ರಮಗಳ ಯಶಸ್ಸಿಗೆ ಪ್ರಮುಖವಾಗಿದೆ" ಎಂದು ಪ್ರಧಾನಮಂತ್ರಿಗಳು ಹೇಳಿದರು.

ಭಾರತದ ಜಿ20 ಅಧ್ಯಕ್ಷತೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಅನೇಕ ಕಾರ್ಯನಿರತ ಗುಂಪುಗಳಲ್ಲಿ ಸಿಡಿಆರ್‌ಐ ಅನ್ನು ಸೇರಿಸುವ ಬಗ್ಗೆ ಮಾಹಿತಿ ನೀಡಿದರು. 'ನೀವು ಇಲ್ಲಿ ಕಂಡುಕೊಳ್ಳುವ ಪರಿಹಾರಗಳು ಜಾಗತಿಕ ನೀತಿ-ರೂಪಿಸುವಿಕೆಯ ಅತ್ಯುನ್ನತ ಮಟ್ಟದಲ್ಲಿ ಗಮನವನ್ನು ಪಡೆಯುತ್ತವೆ,' ಎಂದು ಅವರು ಹೇಳಿದರು.

ಟರ್ಕಿಯೆ ಮತ್ತು ಸಿರಿಯಾದಲ್ಲಿನ ಭೂಕಂಪಗಳಂತಹ ಇತ್ತೀಚಿನ ವಿಪತ್ತುಗಳ ಪ್ರಮಾಣ ಮತ್ತು ತೀವ್ರತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸಿಡಿಆರ್‌ಐ ಕಾರ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****


(Release ID: 2188229) Visitor Counter : 7