ಕೃಷಿ ಸಚಿವಾಲಯ
ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕೃಷಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಭಾಗವಹಿಸಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕೃಷಿ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಉತ್ತಮ ಕೃಷಿ ಶಿಕ್ಷಣಕ್ಕಾಗಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ನಿರ್ದೇಶನ
ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಕಳುಹಿಸಲಿದ್ದಾರೆ ಕೇಂದ್ರ ಸಚಿವರು
"ಯಾವುದೇ ಬೆಲೆ ತೆತ್ತಾದರೂ ಸರಿ, ಕೃಷಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಿ ಮಾಡಿಕೊಳ್ಳಬಾರದು": ಶ್ರೀ ಶಿವರಾಜ್ ಸಿಂಗ್
"ದೇಶದಲ್ಲಿ ಕೃಷಿಗೆ ಸಂಬಂಧಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಬಹಳ ಅವಶ್ಯಕ": ಶ್ರೀ ಶಿವರಾಜ್ ಸಿಂಗ್
ನ್ಯೂನತೆಗಳನ್ನು ಸರಿಪಡಿಸಲು, ಕೃಷಿ ವಿದ್ಯಾರ್ಥಿಗಳ ತಂಡವನ್ನು ರಚಿಸಿ ಸೃಜನಾತ್ಮಕ ಸಲಹೆಗಳನ್ನು ಸಂಗ್ರಹಿಸಲು ಐ.ಸಿ.ಎ.ಆರ್ ಗೆ ಶ್ರೀ ಶಿವರಾಜ್ ಸಿಂಗ್ ನಿರ್ದೇಶನ
"ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಶ್ರೇಣೀಕರಣದ ಮೂಲಕ ಆರೋಗ್ಯಕರ ಸ್ಪರ್ಧೆ ಇರಬೇಕು": ಶ್ರೀ ಚೌಹಾಣ್
"ಐ.ಸಿ.ಎ.ಆರ್ ಅತ್ಯುತ್ತಮ ಜಾಗತಿಕ ಅಭ್ಯಾಸಗಳನ್ನು ಅಧ್ಯಯನ ಮಾಡಬೇಕು ಮತ್ತು ದೇಶದಲ್ಲಿ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕು": ಶ್ರೀ ಶಿವರಾಜ್ ಸಿಂಗ್ ಚೌಹಾಣ್
Posted On:
27 OCT 2025 4:02PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಪುಸಾದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕೃಷಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಭಾಗವಹಿಸಿದರು. ಈ ಸಮ್ಮೇಳನದಲ್ಲಿ ದೇಶಾದ್ಯಂತದ ಕೃಷಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಸಾವಿರಾರು ಜನರು ವರ್ಚುವಲ್ ಮೂಲಕ ಸೇರಿದ್ದರು. ಕೃಷಿ ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್) ಹಾಗು ಕೃಷಿ ವಿಶ್ವವಿದ್ಯಾಲಯಗಳ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಭಾಗೀರಥ ಚೌಧರಿ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆ, ಸಂಶೋಧನೆ, ಆಧುನಿಕ ತಂತ್ರಜ್ಞಾನಗಳು ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ. ಕೃಷಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ಯುವ ಪ್ರತಿಭೆಗಳನ್ನು ಪ್ರೇರೇಪಿಸಲು ಮತ್ತು ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಶೋಧನಾ ಉಪಕ್ರಮಗಳನ್ನು ಬಲಪಡಿಸಲು ಇದು ಪ್ರಯತ್ನಿಸಿತು.

ಕೃಷಿ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿರುವ ಬಗ್ಗೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದರು. ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಈ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಐ.ಸಿ.ಎ.ಆರ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದರು. ಆಯಾ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯನ್ನು ತ್ವರಿತಗೊಳಿಸುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಮತ್ತು ಸಂಬಂಧಪಟ್ಟ ಕೃಷಿ ಸಚಿವರೊಂದಿಗೆ ಈ ವಿಷಯವನ್ನು ಚರ್ಚಿಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು.

ಕೃಷಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳಬಾರದು ಎಂದು ಶ್ರೀ ಚೌಹಾಣ್ ಪ್ರತಿಪಾದಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ದೇಶದಲ್ಲಿ ಉತ್ತಮ ಗುಣಮಟ್ಟದ ಕೃಷಿ ಶಿಕ್ಷಣವನ್ನು ಒದಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅಸ್ತಿತ್ವದಲ್ಲಿರುವ ಸವಾಲುಗಳನ್ನು ಎದುರಿಸಲು, ಶಿಕ್ಷಣ ಮತ್ತು ಸಾಂಸ್ಥಿಕ ವ್ಯವಸ್ಥೆಗಳನ್ನು ಸುಧಾರಿಸಲು ಕೃಷಿ ವಿದ್ಯಾರ್ಥಿಗಳಿಂದ ಸೃಜನಶೀಲ ಸಲಹೆಗಳನ್ನು ಸಂಗ್ರಹಿಸಲು ವಿದ್ಯಾರ್ಥಿ ತಂಡವನ್ನು ರಚಿಸುವಂತೆ ಶ್ರೀ ಚೌಹಾಣ್ ಐ.ಸಿ.ಎ.ಆರ್‌ಗೆ ಸೂಚಿಸಿದರು.

ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಲು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಶ್ರೇಣೀಕರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಜಾಗತಿಕ ಅತ್ಯುತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಲು ಹಾಗು ಅವುಗಳನ್ನು ಭಾರತೀಯ ಸಂದರ್ಭಕ್ಕೆ ಹೊಂದಿಸಿಕೊಳ್ಳುವಂತೆ ಐ.ಸಿ.ಎ.ಆರ್ ಅನ್ನು ಅವರು ಒತ್ತಾಯಿಸಿದರು. "ನಾವು ಕೃಷಿ ಮತ್ತು ಹಳ್ಳಿಗಳನ್ನು ಒಟ್ಟಿಗೆ ಅಭಿವೃದ್ಧಿಪಡಿಸಿದರೆ, ವಲಸೆ ನಿಲ್ಲುತ್ತದೆ - ಇದು ಕೂಡ ರಾಷ್ಟ್ರ ನಿರ್ಮಾಣದ ಕೆಲಸ" ಎಂದು ಅವರು ಹೇಳಿದರು. "ಭಾರತದ ಪ್ರಗತಿಯು ಬೇರೆ ಯಾವುದೇ ರಾಷ್ಟ್ರದ ಮೇಲೆ ಅವಲಂಬಿತವಾಗದಂತೆ ನಾವು ಸ್ವಾವಲಂಬನೆಗಾಗಿ ಶ್ರಮಿಸಬೇಕು. ಕೃಷಿಯ ಬೆಳವಣಿಗೆಯಿಲ್ಲದೆ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ಸಾಧಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಪ್ರಾಯೋಗಿಕ ಅನುಭವದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಚೌಹಾಣ್, ಪ್ರತಿಯೊಬ್ಬ ಕೃಷಿ ವಿದ್ಯಾರ್ಥಿಯು ವರ್ಷಕ್ಕೊಮ್ಮೆಯಾದರೂ ಕೃಷಿ ಭೂಮಿಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವವನ್ನು ಪಡೆಯಬೇಕು ಮತ್ತು ರೈತರ ಸವಾಲುಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರೈತರ ಸಮಸ್ಯೆಗಳಿಗೆ ಪರಿಹಾರಗಳ ಬಗ್ಗೆ ಯೋಚಿಸಲು ಮತ್ತು ದೇಶದ ಒಟ್ಟಾರೆ ಕೃಷಿ ಭೂದೃಶ್ಯವನ್ನು ಪರಿವರ್ತಿಸಲು ಕೊಡುಗೆ ನೀಡುವಂತೆ ಅವರು ವಿದ್ಯಾರ್ಥಿಗಳನ್ನು ಆಗ್ರಹಿಸಿದರು.
ವಿದ್ಯಾರ್ಥಿಗಳು ಉದ್ದೇಶವನ್ನು ಒಳಗೊಂಡ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತಾ, ಕೇಂದ್ರ ಸಚಿವರು, "ಕೃಷಿ ವಿದ್ಯಾರ್ಥಿಗಳು ಸಾಮಾನ್ಯ ಜೀವನವನ್ನು ನಡೆಸಬಾರದು. ಅವರು ಒಂದು ಗುರಿಯನ್ನು ಹೊಂದಿಸಿಕೊಂಡು ಅರ್ಥಪೂರ್ಣವಾಗಿ ಬದುಕಬೇಕು. ನಿಜವಾದ ಜೀವನ ಎಂದರೆ ಇತರರಿಗೆ ಜೀವನವನ್ನು ನೀಡುವುದು" ಎಂದು ಹೇಳಿದರು.
ಐ.ಸಿ.ಎ.ಆರ್‌ನ ಶಿಕ್ಷಣ ವಿಭಾಗ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐ.ಎ.ಆರ್.ಐ) ಜಂಟಿಯಾಗಿ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಮತ್ತು ಕೇಂದ್ರ ಕೃಷಿ ಸಚಿವರು ಸಕ್ರಿಯ ಭಾಗವಹಿಸಿದರು ಮತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು, ಹೊಸ ತಂತ್ರಜ್ಞಾನಗಳನ್ನು ಚರ್ಚಿಸಿದರು ಮತ್ತು ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಕೃಷಿಯನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಶ್ರೀ ಚೌಹಾಣ್ ಅವರ ಕಾಳಜಿಗಳನ್ನು ಗಮನವಿಟ್ಟು ಆಲಿಸಿದರು ಮತ್ತು ಸೂಕ್ತ ಪರಿಹಾರಗಳ ಭರವಸೆ ನೀಡಿದರು, ಅವರ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.
****
(Release ID: 2183092)
Visitor Counter : 8