ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ ನವದೆಹಲಿಯಲ್ಲಿ ‘ಪರಾರಿಯಾದವರ ಹಸ್ತಾಂತರ-ಸವಾಲುಗಳು ಮತ್ತು ಕಾರ್ಯತಂತ್ರಗಳು’ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಅಂತರಾಷ್ಟ್ರೀಯ ತನಿಖೆಗಳ ಕ್ಷೇತ್ರದಲ್ಲಿ ಭಾರತವು ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ
ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಪರಿಣಾಮಕಾರಿ ಬಳಕೆ, ಪರಾರಿಯಾದ ಅಪರಾಧಿಗಳನ್ನು ಪತ್ತೆಹಚ್ಚಲು ತಂತ್ರಜ್ಞಾನದ ಬಳಕೆ, ಪರಾರಿಯಾದವರ ಹಸ್ತಾಂತರಕ್ಕಾಗಿ ಕಾರ್ಯತಂತ್ರದ ವಿಧಾನ ಮತ್ತು ಬೇಕಾದ ಪರಾರಿಗಳ ಆರ್ಥಿಕ ಹೆಜ್ಜೆಗುರುತುಗಳ ವಿಶ್ಲೇಷಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು
ಮಾದಕವಸ್ತು ಸಾಗಾಟ, ಭಯೋತ್ಪಾದನೆ, ಸೈಬರ್‌ಕ್ರೈಮ್, ಸಂಘಟಿತ ಅಪರಾಧ ಮತ್ತು ಆರ್ಥಿಕ ಅಪರಾಧಿಗಳ ಮೇಲೆ ವಿಶೇಷ ಗಮನ ಹರಿಸಲಾಗುವುದು
Posted On:
15 OCT 2025 5:58PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಅಕ್ಟೋಬರ್ 16, ಗುರುವಾರದಂದು ನವದೆಹಲಿಯಲ್ಲಿ 'ಪರಾರಿಯಾದವರ ಹಸ್ತಾಂತರ-ಸವಾಲುಗಳು ಮತ್ತು ಕಾರ್ಯತಂತ್ರಗಳು' ಕುರಿತ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಎರಡು ದಿನಗಳ ಸಮ್ಮೇಳನವನ್ನು ಕೇಂದ್ರ ತನಿಖಾ ದಳ (ಸಿ.ಬಿ.ಐ) ಆಯೋಜಿಸಿದೆ.
ಸಮ್ಮೇಳನದಲ್ಲಿ ವಿವಿಧ ಕೇಂದ್ರ ಮತ್ತು ರಾಜ್ಯ ಪೊಲೀಸ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಪರಾರಿಯಾದ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತಂದು ಕಾನೂನು ಕ್ರಮ ಜರುಗಿಸಲು ಅಂತಾರಾಷ್ಟ್ರೀಯ ಪೊಲೀಸ್ ಸಹಕಾರದ ಕುರಿತು ಚರ್ಚಿಸಲಿದ್ದಾರೆ. ಈ ಸಮ್ಮೇಳನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (MHA) ಸೇರಿದಂತೆ ಇತರ ಪ್ರಮುಖ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.
ಈ ಎರಡು ದಿನಗಳಲ್ಲಿ, ವಿದೇಶಗಳಿಂದ ಸಹಕಾರ ಪಡೆಯಲು ಲಭ್ಯವಿರುವ ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಪರಿಣಾಮಕಾರಿ ಬಳಕೆ, ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ತಂತ್ರಜ್ಞಾನದ ಬಳಕೆ, ಹಸ್ತಾಂತರಕ್ಕಾಗಿ ಅನುಸರಿಸಬೇಕಾದ ಕಾರ್ಯತಂತ್ರದ ವಿಧಾನ ಮತ್ತು ಅಪರಾಧಿಗಳ ಆರ್ಥಿಕ ಹೆಜ್ಜೆಗುರುತುಗಳನ್ನು ವಿಶ್ಲೇಷಿಸುವಂತಹ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದಲ್ಲದೆ, ಮಾದಕವಸ್ತು ಸಾಗಾಟ, ಭಯೋತ್ಪಾದನೆ, ಸೈಬರ್ ಕ್ರೈಮ್, ಸಂಘಟಿತ ಅಪರಾಧ ಮತ್ತು ಆರ್ಥಿಕ ಅಪರಾಧಿಗಳ ಮೇಲೆ ವಿಶೇಷ ಗಮನ ಹರಿಸಲಾಗುವುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಅಂತಾರಾಷ್ಟ್ರೀಯ ತನಿಖೆಗಳಲ್ಲಿ ಹೊಸ ಯುಗಕ್ಕೆ ಪ್ರವೇಶಿಸುತ್ತಿದೆ. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಇದೇ ವರ್ಷದ ಜುಲೈನಲ್ಲಿ, ವಿದೇಶಗಳಲ್ಲಿರುವ ಬೇಕಾದ ಪರಾರಿಗಳನ್ನು ಮರಳಿ ಕರೆತರಲು ಸಮನ್ವಯದ ವಿಧಾನದ ಅಗತ್ಯವನ್ನು ಒತ್ತಿ ಹೇಳಿದ್ದರು. ಇದೇ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು, ಸಿ.ಬಿ.ಐಯು ಸೂಕ್ತ ಕಾನೂನು ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ, ನಿಗದಿತ ಕಾಲಮಿತಿಯಲ್ಲಿ ಪರಾರಿಗಳನ್ನು ಮರಳಿ ಕರೆತರುವ ಬಗ್ಗೆ ಚರ್ಚಿಸಲು ಈ ಸಮ್ಮೇಳನವನ್ನು ಆಯೋಜಿಸಿದೆ.
ಭಾರತಕ್ಕೆ ಬೇಕಾಗಿರುವ ಪರಾರಿ ಅಪರಾಧಿಗಳಿಗೆ ಸಂಬಂಧಿಸಿದಂತೆ, 300ಕ್ಕೂ ಹೆಚ್ಚು ಹಸ್ತಾಂತರ ಮನವಿಗಳು ವಿವಿಧ ವಿದೇಶಗಳಲ್ಲಿ ಬಾಕಿ ಉಳಿದಿವೆ. ಈ ವಿಷಯಗಳಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಕಳವಳವಿದ್ದು, ಪರಾರಿಯಾದವರು ತಮ್ಮನ್ನು ಹಸ್ತಾಂತರಿಸುವ ಪ್ರಯತ್ನಗಳಿಗೆ ಅಡ್ಡಿಪಡಿಸಲು ಆಗಾಗ್ಗೆ ಬೇರೆ ಬೇರೆ ಮಾರ್ಗಗಳನ್ನು ಆಶ್ರಯಿಸುತ್ತಾರೆ. ಸಂಘಟಿತ ಅಪರಾಧ ತಂಡಗಳಿಗೆ ಸೇರಿದ ಅನೇಕ ಅಪರಾಧಿಗಳು ಭಾರತದಿಂದ ಪಲಾಯನ ಮಾಡಿ, ವಿದೇಶಗಳಲ್ಲಿ ವಾಸಿಸುತ್ತಾ ತಮ್ಮ ಅಪರಾಧ ಚಟುವಟಿಕೆಗಳನ್ನು ಮುಂದುವರಿಸುತ್ತಿರುವ ಉದಾಹರಣೆಗಳಿವೆ. ಈ ಪರಾರಿ ಅಪರಾಧಿಗಳನ್ನು ಶೀಘ್ರವಾಗಿ ಹಸ್ತಾಂತರಿಸಿಕೊಳ್ಳಲು ಒಂದು ಮಾರ್ಗಸೂಚಿಯನ್ನು ಕಂಡುಕೊಳ್ಳುವ ಸಲುವಾಗಿ, ಕಾನೂನು ಜಾರಿ ಸಂಸ್ಥೆಗಳು ಮತ್ತು ತಜ್ಞರು ಈ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸಿ.ಬಿ.ಐ ಅಭಿವೃದ್ಧಿಪಡಿಸಿದ 'ಭಾರತ್ ಪೋಲ್' (BHARATPOL) ಪೋರ್ಟಲ್ ಗೆ ಚಾಲನೆ ನೀಡಿದ್ದರು. ಈ ಪೋರ್ಟಲ್ ಜಿಲ್ಲಾ ಪೊಲೀಸ್ ಘಟಕಗಳು, ರಾಜ್ಯ ಪೊಲೀಸ್, ಕೇಂದ್ರ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಿ.ಬಿ.ಐ ಅನ್ನು ಒಂದೇ ವೇದಿಕೆಯಡಿ ತಂದಿದ್ದು, ಮಾಹಿತಿಯ ಸುಗಮ ಹರಿವಿಗೆ ಅನುವು ಮಾಡಿಕೊಟ್ಟಿದೆ. ಸಮ್ಮೇಳನದ ಸಂದರ್ಭದಲ್ಲಿ ನಡೆಯುವ ಚರ್ಚೆಗಳು ಮತ್ತು ವಿಚಾರ ವಿನಿಮಯವು ಹೊಸ ಒಳನೋಟಗಳನ್ನು ಮತ್ತು ದೃಷ್ಟಿಕೋನಗಳನ್ನು ನೀಡುವ ನಿರೀಕ್ಷೆಯಿದೆ. ಇದು ಈ ದಿಕ್ಕಿನಲ್ಲಿ ಮುಂದಿನ ಪ್ರಯತ್ನಗಳಿಗೆ ಕಾರ್ಯತಂತ್ರ ರೂಪಿಸಲು ಸಹಾಯ ಮಾಡುತ್ತದೆ.
*****
(Release ID: 2179678)
Visitor Counter : 6